ಪದ್ಯ ೧೩: ಭೀಮನು ಯಾರ ಮಕುಟವನ್ನು ಒದೆದನು?

ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯಲಿ ಮಕುಟವನು
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ (ಗದಾ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಾಡಿನಲ್ಲಿ ನಮ್ಮನ್ನು ಹಲವು ರೀತಿಯಿಂದ ದುಃಖಪಡಿಸಿದ ಫಲವನ್ನು ತಲೆಯಲ್ಲಿಯೇ ಧರಿಸು ಎನ್ನುತ್ತಾ ಎಡಗಾಲಿನಿಂದ ಮಕುಟವನ್ನು ಕೆಳಕ್ಕೊದೆದು, ನಮ್ಮನ್ನು ನೋಡಿ ಗೌರ್ಗೌ ಎಂದು ಕೂಗಿದೆಯಲ್ಲಾ ಎನ್ನುತ್ತಾ ಮಕುಟವನ್ನು ಒದೆಯಲು ಅದರಲ್ಲಿ ಜೋಡಿಸಿದ್ದ ಮಣಿಗಳು ಸುತ್ತಲೂ ಹಾರಿದವು.

ಅರ್ಥ:
ಹಳುವ: ಕಾಡು; ನಾನಾ: ಹಲವಾರು; ಪ್ರಕಾರ: ರೀತಿ; ಅಳಲು: ದುಃಖಿಸು; ಫಲ: ಪರಿಣಾಮ; ಭೋಗ: ಸುಖವನ್ನು ಅನುಭವಿಸುವುದು; ತಲೆ: ಶಿರ; ಧರಿಸು: ಹಿಡಿ, ತೆಗೆದುಕೊಳ್ಳು; ವಾಮ: ಎಡಭಾಗ; ಅಂಘ್ರಿ: ಪಾದ; ಮಕುಟ: ಕಿರೀಟ; ಇಳುಹು: ಕೆಳಗೆ ಜಾರು; ಗೌರ್ಗೌ: ಶಬ್ದವನ್ನು ವರ್ಣಿಸುವ ಪರಿ; ಬಿಡು: ತೊರೆ; ಉಲಿ: ಕೂಗು; ಒದೆ:ತುಳಿ, ಮೆಟ್ಟು; ಕಳಚು: ಬೇರ್ಪಡಿಸು, ಬೇರೆಮಾಡು; ಕೀಲು: ಅಗುಳಿ, ಬೆಣೆ; ಮಣಿ: ಬೆಲೆಬಾಳುವ ಹರಳು; ಕೆದರು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಹಳುವದಲಿ +ನಾನಾ +ಪ್ರಕಾರದಲ್
ಅಳಲಿಸಿದ +ಫಲಭೋಗವನು +ನೀ
ತಲೆಯಲೇ +ಧರಿಸೆನುತ +ವಾಮಾಂಘ್ರಿಯಲಿ +ಮಕುಟವನು
ಇಳುಹಿದನು +ಗೌರ್ಗೌವೆನುತ +ಬಿಡದ್
ಉಲಿದೆಲಾ +ಎನುತೊದೆದು+ ಮಕುಟವ
ಕಳಚಿದನು +ಕೀಲಣದ +ಮಣಿಗಳು +ಕೆದರೆ+ ದೆಸೆದೆಸೆಗೆ

ಅಚ್ಚರಿ:
(೧) ಶಬ್ದವನ್ನು ವರ್ಣಿಸುವ ಪರಿ – ಗೌರ್ಗೌ

ಪದ್ಯ ೩೦: ವಂದಿ ಮಾಗಧರು ಏನೆಂದು ಹೊಗಳಿದರು?

ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಮ್ದುದು ವಂದಿಜನಜಲಧಿ (ಶಲ್ಯ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಂದಿಗಳು ನುಡಿಯುತ್ತಾ ಜೀಯಾ, ಬುಧ, ಪುರೂರವ ಅವನ ಮಗ ಆಯು, ನಹುಷ, ಯಯಾತಿಗಳು ಅನುಭವಿಸಿದ ರಾಜ್ಯಭೋಗವನ್ನು ಅನುಭವಿಸಲು ನೀನು ಭೂಮಿಯಲ್ಲಿ ಅವತರಿಸಿರುವೆ. ಜೂಜಿನಲ್ಲಿ ಸೋತೆ, ಯುದ್ಧದಲ್ಲಿ ಕೌರವನು ಸೋಲುತ್ತಾನೆ, ನಿನ್ನ ಘನತೆಯನ್ನು ಯುದ್ಧದಲ್ಲಿ ತೋರಿಸು ಎಂದು ವಂದಿ ಮಾಗಧರು ಹೊಗಳಿದರು.

ಅರ್ಥ:
ಜೀಯ: ಒಡೆಯ; ಸುತ: ಮಗ; ಭೋಗ: ಸುಖವನ್ನು ಅನುಭವಿಸುವುದು; ನಿಧಿ: ಐಶ್ವರ್ಯ; ಅವತರಿಸು: ಕಾಣಿಸು; ಧರೆ: ಭೂಮಿ; ಜೀಯ: ಒಡೆಯ; ಜೂಜು: ಜುಗಾರಿ, ಸಟ್ಟ; ರಣ: ಯುದ್ಧ; ಆಯತಿ: ವಿಸ್ತಾರ; ಸಂಭಾಸಿವು: ಯೋಚಿಸು, ಯೋಚಿಸು; ವಂದಿ: ಹೊಗಳುಭಟ್ಟ; ಜಲಧಿ: ಸಾಗರ; ಜನ: ಮನುಷ್ಯ; ಜೇಯ: ಗೆಲುವು;

ಪದವಿಂಗಡಣೆ:
ಜೀಯ +ಬುಧನ +ಪುರೂರವನ+ ಸುತನ್
ಆಯುವಿನ +ನಹುಷನ+ ಯಯಾತಿಯದ್
ಆಯಭಾಗದ+ ಭೋಗ+ನಿಧಿ+ಅವತರಿಸಿದೈ+ ಧರೆಗೆ
ಜೇಯನ್+ಎನಿಸಿದೆ +ಜೂಜಿನಲಿ +ರಣ
ಜೇಯನಹನ್+ಈ +ಕೌರವನು+ ನಿನ್ನ್
ಆಯತಿಯ +ಸಂಭಾವಿಸೆಂದುದು +ವಂದಿ+ಜನಜಲಧಿ

ಅಚ್ಚರಿ:
(೧) ಜೇಯ ಪದದ ಬಳಕೆ – ೪, ೫ ಸಾಲು
(೨) ಬಹಳ ಹೊಗಳುಭಟರು ಎಂದು ಹೇಳಲು – ವಂದಿಜನಜಲಧಿ ಪದದ ಬಳಕೆ

ಪದ್ಯ ೧೯: ಕರ್ಣ ಶಕುನಿಗಳ ಉಪಾಯವೇನು?

ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ (ಅರಣ್ಯ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳಿಗೆ ಮರುಳಾದ ಧೃತರಾಷ್ಟ್ರನು, ಪಾಂಡವರ ಚಿಂತೆಯನ್ನು ನಾನೀಗ ಬಿಟ್ಟೆ, ನೀವೀಗ ಏನು ಮಾಡಬೇಕೆಂದಿರುವಿರಿ ಎಂದು ಕೇಳಲು, ನಮ್ಮ ವೈಭವ, ಸಂಭ್ರಮ, ಭೋಗಗಳನ್ನು ನಮ್ಮ ಬಾಹುಬಲದ ದರ್ಪದೊಂದಿಗೆ ಪಾಂಡವರಿರುವ ವನಕ್ಕೇ ಹೋಗಿ ತೋರಿಸಬೇಕು ಎಂದು ಕರ್ಣ ಶುಕುನಿಗಳು ಉತ್ತರಿಸಿದರು.

ಅರ್ಥ:
ಹೋಗು: ತೆರಳು; ಚಿಂತೆ: ಯೋಚನೆ; ನೀಗು: ನಿವಾರಿಸು; ನೆನೆ: ಸ್ಮರಿಸು; ಉದ್ಯೋಗ: ಕೆಲಸ; ನಗು: ಸಂತಸ; ನುಡಿ: ಮಾತಾಡು; ವಿಭವ: ಸಿರಿ, ಸಂಪತ್ತು; ವಿಲಾಸ: ಕ್ರೀಡೆ, ವಿಹಾರ; ಭೋಗ: ಸುಖವನ್ನು ಅನುಭವಿಸುವುದು; ಅಗ್ಗಳಿಕೆ: ಸಾಮರ್ಥ್ಯ; ಭುಜ: ತೋಳು, ಬಾಹು; ದರ್ಪ: ಠೀವಿ, ಗತ್ತು; ವನ: ಕಾಡು; ತೋರು: ಪ್ರದರ್ಶಿಸು;

ಪದವಿಂಗಡಣೆ:
ಹೋಗಲ್+ಆ+ ಪಾಂಡವರ+ ಚಿಂತೆಯ
ನೀಗಿದೆನು +ನೀವಿನ್ನು +ನೆನೆವ್
ಉದ್ಯೋಗವೇನ್+ಎನೆ+ ನಗುತ+ ನುಡಿದರು +ಕರ್ಣ +ಶಕುನಿಗಳು
ಈಗಳ್+ಈ+ ವಿಭವದ +ವಿಲಾಸದ
ಭೋಗದ್+ಅಗ್ಗಳಿಕೆಗಳ+ ಭುಜ+ದ
ರ್ಪಾಗಮವನ್+ಅವರಿದ್ದ +ವನದಲಿ +ತೋರಬೇಕೆಂದ

ಅಚ್ಚರಿ:
(೧) ನ ಕಾರದ ಸಾಲು ಪದ – ನೀಗಿದೆನು ನೀವಿನ್ನು ನೆನೆವುದ್ಯೋಗವೇನೆನೆ ನಗುತ ನುಡಿದರು

ಪದ್ಯ ೧೪: ಯಾವ ಮಾರ್ಗದಲ್ಲಿ ನಡೆವುದು ಶ್ರೇಯಸ್ಸು?

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದಲವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬಹಳ ಪುಣ್ಯಕಾರ್ಯಗಳನ್ನು ಮಾಡಿ, ಸ್ವರ್ಗವೇ ಮೊದಲಾದ ಉನ್ನತ ಭೋಗಗಳನ್ನು ಭೋಗಿಸಿದ ಮೇಲೆ ಭೂಮಿಗೆ ಬೀಳುವುದು ತಪ್ಪುವುದಿಲ್ಲ. ಆದುದರಿಂದ ಮರಲಿ ಹುಟ್ಟದ ದಾರಿ ಯಾವುದೆಂಬುದನ್ನು ಅರಿತುಕೊಂಡು ಮಹಾನುಭಾವರಾದ ಗುರುಗಳು ತೋರಿಸಿದ ಮಾರ್ಗದಲ್ಲಿ ನಡೆವುಯು ಉಚಿತ.

ಅರ್ಥ:
ಅತಿಶಯ: ಹೆಚ್ಚು, ಅಧಿಕ; ಸುಕೃತ: ಒಳ್ಳೆಯ ಕೆಲಸ; ವಿರಚಿಸಿ: ನಿರ್ಮಿಸಿ; ಗತಿ: ನಡಿಗೆ; ಗತಿವಡೆ: ಸದ್ಗತಿ ಪಡೆ; ಸ್ವರ್ಗ: ನಾಕ; ಭೋಗ: ಸುಖವನ್ನು ಅನುಭವಿಸುವುದು; ಉನ್ನತಿ: ಮೇಲ್ಮೆ, ಹಿರಿಮೆ; ಸಮನಂತರ: ಆದಮೇಲೆ; ಅವನಿ: ಭೂಮಿ; ಪತನ: ಬೀಳು; ತಪ್ಪದು: ಮರಳಿ: ಮತ್ತೆ; ಬಾರದ: ಹಿಂದಿರುಗದ; ಅರಿ: ತಿಳಿ; ಮಹಾನುಭವರು: ಶ್ರೇಷ್ಠರು; ಮತ: ಅಭಿಪ್ರಾಯ, ಉದ್ದೇಶ; ನಡೆ: ಹೆಜ್ಜೆ ಹಾಕು; ನಯ:ಸೊಗಸು, ಸೌಜನ್ಯ; ಕೇಳು: ಆಲಿಸು;

ಪದವಿಂಗಡಣೆ:
ಅತಿಶಯದ +ಸುಕೃತವನು +ವಿರಚಿಸಿ
ಗತಿವಡೆದು +ಸ್ವರ್ಗಾದಿ +ಭೋಗ
ಉನ್ನತಿಕೆಯನು +ಭೋಗಿಸಿದ +ಸಮನಂತರದಲ್+ಅವನಿಯಲಿ
ಪತನ +ತಪ್ಪದು +ಮರಳಿ +ಬಾರದ
ಗತಿಯನರಿದು +ಮಹಾನುಭಾವರ
ಮತವಿಡಿದು+ ನಡೆವುದು +ನಯವು +ಕೇಳೆಂದನಾ +ಮುನಿಪ

ಅಚ್ಚರಿ:
(೧) ಅತಿ, ಗತಿ; ಪತ, ಮತ – ಪ್ರಾಸ ಪದಗಳು

ಪದ್ಯ ೧೧೦: ರಾಜರು ಸ್ವರ್ಗಭೋಗದ ಆರರಷ್ಟು ಹೇಗೆ ಪಡೆಯುತ್ತಾರೆ?

ಮೂರು ಕೋಟಿಯ ಕೋಟಿಯರ್ಧವ
ಮೀರದಿಹ ರೋಮಾಳಿ ಸಂಖ್ಯೆಯೊ
ಳಾರೆನೆನ್ನದೆ ನಿಜಪತಿಯ ಸಹಗಮನದೊಳ ತನುವ
ಮಾರಿದಬಲೆಯರುಗಳ ದೆಸೆಯಿಂ
ದಾರುಮಡಿ ಸ್ವರ್ಗಾದಿ ಭೋಗವ
ಸೂರೆಗೊಂಬರು ತಪ್ಪದವನೀಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೧೦ ಪದ್ಯ)

ತಾತ್ಪರ್ಯ:
ಮೂರುವರೆ ಕೋಟಿ ರೋಮಗಳು ದೇಹದಲ್ಲಿ. ಬರಿಯ ಮನಸ್ಸಿನಿಂದಲೇ ಅಲ್ಲ ಆ ಒಂದೊಂದು ಕೂದಲೂ ಈ ಕೆಲಸ ಬೇಡವೆನ್ನದೆ, ಸಹಗಮನದಲ್ಲಿ ಪತಿಯೊಡನೆ ಸೇರಿದ ಪತಿವ್ರತೆಯರ ದೆಸೆಯಿಂದ , ರಾಜರು ತಮ್ಮದಾದ ಸ್ವರ್ಗ ಭೋಗದ ಆರರಷ್ಟು ಭೋಗವನ್ನು ಪಡೆಯುತ್ತಾರೆ.

ಅರ್ಥ:
ಮೂರು: ತ್ರಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಮೀರು:ದಾಟು, ಹಾದುಹೋಗು, ಹೆಚ್ಚಾಗು; ರೋಮ: ಕೂದಲು; ಆವಳಿ: ಗುಂಪು; ಸಂಖ್ಯೆ: ಗಣನೆ, ಅಂಕಿ; ಆರು: ಯಾರು, ಘರ್ಷಿಸು; ನಿಜ: ನೈಜ, ಸತ್ಯ; ಪತಿ: ಗಂಡ; ಸಹಗಮನ: ಒಂದಾಗು; ತನು: ದೇಹ; ಮಾರಿ: ಕೊಡು; ಅಬಲೆ: ಹೆಣ್ಣು; ಯುಗಳ: ಜೋಡಿ; ದೆಸೆ: ಕಾರಣ, ನಿಮಿತ್ತ; ಆರುಮಡಿ: ಆರು ಪಟ್ಟು; ಸ್ವರ್ಗ: ನಾಕ; ಭೋಗ: ಅನುಭವಿಸು, ಸಂತಸ; ಸೂರೆ:ಸುಲಿಗೆ, ಲೂಟಿ; ತಪ್ಪದು: ಬಿಡದು; ಅವನೀಪಾಲ: ರಾಜ;

ಪದವಿಂಗಡಣೆ:
ಮೂರು +ಕೋಟಿಯ +ಕೋಟಿ+ಯರ್ಧವ
ಮೀರದಿಹ+ ರೋಮಾಳಿ +ಸಂಖ್ಯೆಯೊಳ್
ಆರೆನ್+ಎನ್ನದೆ +ನಿಜಪತಿಯ +ಸಹಗಮನದೊಳ +ತನುವ
ಮಾರಿದ್+ಅಬಲೆ+ಯರುಗಳ +ದೆಸೆಯಿಂದ್
ಆರುಮಡಿ +ಸ್ವರ್ಗಾದಿ +ಭೋಗವ
ಸೂರೆಗೊಂಬರು +ತಪ್ಪದ್+ಅವನೀಪಾಲ ಕೇಳೆಂದ

ಅಚ್ಚರಿ:
(೧) ಮೂರುವರೆಕೋಟಿ ಎಂದು ಹೇಳಲು ಮೂರು ಕೊಟಿಯ ಕೋಟಿಯರ್ಧವ ಎಂದು ಮೊದಲನೆ ಸಾಲಿನಲ್ಲಿ ಹೇಳಿರುವುದು

ಪದ್ಯ ೩೩: ಯಾವದಕ್ಕೆ ಸರಿಸಾಟಿಯಾದ ಉದಾಹರಣೆ ಸಿಗುವುದಿಲ್ಲ?

ನಿವಡಿಸಿದ ವಿದ್ಯಕ್ಕೆ ಸಮ ಬಂ
ಧುವನು ರೋಗಾವಳಿಗೆ ಸಮಶ
ತ್ರುವನು ಸಂತಾನಕ್ಕೆ ಸಮ ಸಂತೋಷದುದಯವನು
ರವಿಗೆ ಸಮವಹ ತೇಜವನು ವಾ
ಸವನ ಸಮಭೋಗವನು ಬಲದಲಿ
ಶಿವನ ಬಲದಿಂದಧಿಕ ಬಲವನು ಕಾಣೆ ನಾನೆಂದ (ಉದ್ಯೋಗ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ನಾವು ಆರ್ಜಿಸಿದ ವಿದ್ಯೆಗೆ ಸಮವೆನಿಸುವ ಬಂಧು, ರೋಗಕ್ಕೆ ಸಮನಾದ ಶತ್ರು, ಮಕ್ಕಳಿಗೆ ಸಮನಾದ ಸಂತೋಷವನ್ನು ಕೊಡುವಂಥವರು, ಸೂರ್ಯನಿಗೆ ಸಮನಾದ ತೇಜಸ್ಸು, ಇಂದ್ರನಿಗೆ ಸಮನಾದ ಭೋಗ, ಶಿವನಿಗೆ ಸಮನಾದ ಬಲವಂಥನನ್ನು ನಾನು ಕಾಣೆ ಎಂದು ವಿದುರ ಹೇಳಿದ.

ಅರ್ಥ:
ನಿವಡ: ಆಯ್ಕೆ, ಆರಿಸುವಿಕೆ; ವಿದ್ಯ: ಜ್ಞಾನ; ಸಮ: ಸರಿಸಾಟಿ; ಬಂಧು: ಸಂಬಂಧಿಕರು; ರೋಗ: ಬೇನೆ, ಕಾಯಿಲೆ; ಆವಳಿ: ಸಾಲು, ಗುಂಪು; ಶತ್ರು: ವೈರಿ; ಸಂತಾನ: ಮಕ್ಕಳು; ಸಂತೋಷ: ಹರ್ಷ; ಉದಯ: ಹುಟ್ಟು; ರವಿ: ಸೂರ್ಯ; ತೇಜ: ಕಾಂತಿ, ತೇಜಸ್ಸು; ವಾಸವ:ಇಂದ್ರ; ಭೋಗ:ಸುಖವನ್ನು ಅನುಭವಿಸುವುದು; ಬಲ: ಶಕ್ತಿ; ಅಧಿಕ: ಹೆಚ್ಚು; ಕಾಣೆ: ಸಿಗದು;

ಪದವಿಂಗಡಣೆ:
ನಿವಡಿಸಿದ +ವಿದ್ಯಕ್ಕೆ +ಸಮ +ಬಂ
ಧುವನು +ರೋಗಾವಳಿಗೆ +ಸಮಶ
ತ್ರುವನು +ಸಂತಾನಕ್ಕೆ +ಸಮ +ಸಂತೋಷದ್+ಉದಯವನು
ರವಿಗೆ+ ಸಮವಹ+ ತೇಜವನು +ವಾ
ಸವನ +ಸಮ+ಭೋಗವನು +ಬಲದಲಿ
ಶಿವನ +ಬಲದಿಂದ್+ಅಧಿಕ +ಬಲವನು +ಕಾಣೆ +ನಾನೆಂದ

ಅಚ್ಚರಿ:
(೧) ವಿದ್ಯೆ, ರೋಗ, ಸಂತಾನ, ತೇಜಸ್ಸು, ಭೋಗ, ಬಲ – ಇವುಗಳ ಮಹತ್ವವನ್ನು ತಿಳಿಸುವ ಪದ್ಯ
(೨) ಬಲದಲಿ ಶಿವನ ಬಲದಿಂದಧಿಕ ಬಲ – ಬಲ ಪದದ ಪ್ರಯೋಗ