ಪದ್ಯ ೧೬: ಯಾವ ಪಾಪವು ಕೌಶಿಕನ ತಲೆಗೆ ಬಂದಿತು?

ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿಪಾತಕದ ಫಲವೆಂದ (ಕರ್ಣ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಹಾಗೆಯೇ ಕಾಲ ಕಳೆಯಲು ಯಮದೂತರು ಕೌಶಿಕನನ್ನು ನರಕಕ್ಕೊಯ್ದರು. ಅವನು ಮಾಡಿದ ಪುಣ್ಯಪಾಪಕರ್ಮಗಳ ವಿಚಾರಣೆ ನಡೆಯಿತು. ಪರಿಣಾಮವನ್ನು ಲೆಕ್ಕಹಾಕದೆ ಸತ್ಯವನ್ನು ಹೇಳಿದುದರಿಂದ ಬ್ರಹ್ಮಹತ್ಯಾಪಾತಕವು ಅವನ ತಲೆಗೆ ಬಂದಿತು. ಬ್ರಹ್ಮಹತ್ಯೆಯು ಮಹಾಪಾಪದ ಕೃತ್ಯ.

ಅರ್ಥ:
ಕಾಲ: ಸಮಯ; ವಶ: ಅಧೀನ, ಅಂಕೆ, ಹತೋಟಿ; ಕಾಲದೂತ: ಯಮನ ಸೇವಕರು; ತಂದರು: ಬರಮಾಡು; ಪೋಗು: ಮಾಡಿದ, ಹೋಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ್ಯ: ಕೆಟ್ಟ ಕೆಲಸ; ವಿಚಾರ: ಪರ್ಯಾಲೋಚನೆ; ಮೇಲನರಿಯದೆ: ಪೂರ್ಣವನ್ನು ತಿಳಿಯದೆ; ಸತ್ಯ: ದಿಟ; ವಿಪ್ರಾಳಿ: ಬ್ರಾಹ್ಮಣರ ಗುಂಪು; ವಧೆ: ಸಾಯಿಸು, ನಾಶ; ಬಂದು: ಆಗಮಿಸು; ಹೇಳು: ತಿಳಿಸು; ಭೋಕ್ತ: ಅನುಭವಿಸು; ಪಾತಕ: ಪಾಪ; ಫಲ: ಫಲಿತಾಂಶ;

ಪದವಿಂಗಡಣೆ:
ಕಾಲ+ವಶದಲಿ +ಕೌಶಿಕನನ್+ಆ
ಕಾಲ+ದೂತರು +ತಂದರ್+ಆತನ
ಮೇಲುಪೋಗಿನ+ ಸುಕೃತ +ದುಷ್ಕೃತವನು +ವಿಚಾರಿಸಲು
ಮೇಲನರಿಯದೆ +ಸತ್ಯದಲಿ +ವಿ
ಪ್ರಾಳಿ +ವಧೆ+ಆತಂಗೆ+ ಬಂದುದು
ಹೇಳಲದು+ ಭೋಕ್ತವ್ಯವ್+ಅತಿಪಾತಕದ+ ಫಲವೆಂದ

ಅಚ್ಚರಿ:
(೧) ಕಾಲ, ಮೇಲು – ೧-೨, ೩-೪ ಸಾಲಿನ ಮೊದಲ ಪದ
(೨) ಸುಕೃತ, ದುಷ್ಕೃತ – ವಿರುದ್ಧ ಪದಗಳು

ಪದ್ಯ ೨೬: ಶಿವನು ಯಾರನ್ನು ಪಶುಗಳೆಂದು ಕರೆದನು?

ಕರ್ಮಕಿಂಕರರಾಗಿ ಕೃತದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ (ಕರ್ಣ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೇವತೆಗಳು ದುಃಖತಪ್ತರಾಗಿರುವುದನ್ನು ಕಂಡು ಶಿವನು ಪಶುಗಳಾರು ಎಂದು ಉತ್ತರಿಸಿದನು. ಕರ್ಮಕ್ಕೆ ಸೇವಕರಾಗಿ ಮಾಡಿದ ಪಾಪಕರ್ಮಗಳ ವಾಸನೆಯಿಂದ ನಾನೇ ಕರ್ಮವನ್ನು ಮಾಡಿದವನು, ನಾನೇ ಫಲವನ್ನನುಭವಿಸುವವನು, ನಾನೇ ಸುಖಿ, ನಾನೇ ದುಃಖಿ ಎಂದು ತಿಳಿದು, ನಿರ್ಮಲನಾದ ಆತ್ಮನಲ್ಲಿ ಅಹಂಕಾರವನಾರೋಪಿಸಿ ದುಃಖಿಸುವವರನ್ನು ಪಶುಗಳೆಂದರೆ ನೀವೇಕೆ ದುಃಖ ಪಡುವಿರಿ ಎಂದು ದೇವತೆಗಳಿಗೆ ಶಿವನು ಪ್ರಶ್ನಿಸಿದನು.

ಅರ್ಥ:
ಕರ್ಮ: ಕೆಲಸ; ಕಿಂಕರ: ಆಳು, ಸೇವಕ; ಕೃತ: ಮಾಡಿದ, ಮುಗಿಸಿದ; ದುಷ್ಕರ್ಮ: ಕೆಟ್ಟ ಕೆಲಸ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಹಿಡಿ: ಬಂಧನ, ಸೆರೆ; ಕರ್ತ: ಮಾದುವವ; ಭೋಗಿ: ಅನುಭವಿಸುವವ; ದುಃಖ: ಖೇದ, ಅಳಲು; ಸುಖಿ: ಆನಂದಿಸು; ನಿರ್ಮಳ: ಶುದ್ಧ; ಆತ್ಮ: ಪರಬ್ರಹ್ಮ; ಅಹಂಕೃತಿ: ಅಹಂಕಾರ, ಗರ್ವ; ಧರ್ಮ: ಧಾರಣ ಮಾಡಿದುದು; ನೇವರಿಸು: ಮೃದುವಾಗಿ – ಸವರು; ಮರುಗು: ತಳಮಳ, ಸಂಕಟ; ದುರ್ಮತಿ: ಕೆಟ್ಟಬುದ್ಧಿ; ಪಶು: ಮೃಗ; ಖೇದ: ದುಃಖ;

ಪದವಿಂಗಡಣೆ:
ಕರ್ಮಕಿಂಕರರಾಗಿ+ ಕೃತ+ದು
ಷ್ಕರ್ಮ+ವಾಸನೆವಿಡಿದು +ತಾನೇ
ಕರ್ಮಕರ್ತನು+ ಭೋಗಿ +ತಾನೇ +ದುಃಖಿ+ಸುಖಿಯೆಂದು
ನಿರ್ಮಳ+ಆತ್ಮನೊಳ್+ಈ+ಅಹಂಕೃತಿ
ಧರ್ಮವನೆ+ ನೇವರಿಸಿ+ ಮರುಗುವ
ದುರ್ಮತಿಗಳನು+ ಪಶುಗಳೆಂದರೆ+ ಖೇದವೇಕೆಂದ

ಅಚ್ಚರಿ:
(೧) ಕೃತ, ಕರ್ಮ, ದುಷ್ಕರ್ಮ, ಕರ್ತ, ಧರ್ಮ, ದುರ್ಮತಿ, ಭೋಕ್ತ – ಪದಗಳ ಬಳಕೆ
(೨) ಪಶುಯಾರೆಂದು/ಲಕ್ಷಣವನ್ನು ತಿಳಿಸುವ ಪದ್ಯ