ಪದ್ಯ ೧೫: ಸಂಜಯನು ಯಾರ ನಡಿಗೆಯನ್ನು ನೋಡಿದನು – ೮?

ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ (ಗದಾ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂತಗಳ ಕೂಗು, ಬೇತಾಳಗಳ ಜಗಳ, ನರಿ ಗೂಬೆ ಕಾಗೆಗಳ ರಭಸಕ್ಕೆ ಪಾಂಡವರ ಸೇನೆ ಎಲ್ಲಿ ಬಂದಿತೋ ಎಂದು ಬೆಚ್ಚುತಿದ್ದನು. ಆಗಾಗ ಏನನ್ನಾದರೂ ಹಿಡಿದು ಹಿಂದಕ್ಕೆ ನೋಡುತ್ತಾ ವೈಭವವು ನಾಶವಾಯಿತಲ್ಲಾ ಎಂದು ಛಲದಿಂದ ಉಗ್ರ ಭಾವವನ್ನು ತಾಳುತ್ತಿದ್ದನು.

ಅರ್ಥ:
ಭೂತ: ದೆವ್ವ, ಪಿಶಾಚಿ; ರವ: ಶಬ್ದ; ಭೇತಾಳ: ದೆವ್ವ; ಕಲಹ: ಜಗಳ; ವಿಧೂತ: ಅಲುಗಾಡುವ; ಜಂಬುಕ: ನರಿ; ಘೂಕ: ಗೂಬೆ; ಕಾಕ: ಕಾಗೆ; ವ್ರಾತ: ಗುಂಪು; ರಭಸ: ವೇಗ; ಬೆಚ್ಚು: ಭಯ, ಹೆದರಿಕೆ; ಬಲ: ಶಕ್ತಿ, ಸೈನ್ಯ; ಆತು: ಮುಗಿದ; ಮರಳು: ಹಿಂದಿರುಗು; ಹಿಂದ: ಭೂತ, ನಡೆದ; ನೋಡು: ವೀಕ್ಷಿಸು; ಪರೇತ: ಹೆಣ, ಶವ; ವಿಭವ: ಸಿರಿ, ಸಂಪತ್ತು; ಛಲ: ದೃಢ ನಿಶ್ಚಯ; ಚೇತನ: ಮನಸ್ಸು, ಬುದ್ಧಿ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಚಂಡಿ: ಹಟಮಾರಿತನ, ಛಲ; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಭೂತ+ರವ +ಭೇತಾಳ +ಕಲಹ +ವಿ
ಧೂತ +ಜಂಬುಕ +ಘೂಕ +ಕಾಕ
ವ್ರಾತ +ರಭಸಕೆ +ಬೆಚ್ಚುವನು +ಪಾಂಡವರ +ಬಲವೆಂದು
ಆತು +ಮರಳಿದು+ ಹಿಂದ + ನೋಡಿ+ ಪ
ರೇತ +ವಿಭವವಲಾ +ಎನುತ +ಛಲ
ಚೇತನನು +ಸಲೆ +ಚಂಡಿಯಾದನು +ಕಳನ +ಚೌಕದಲಿ

ಅಚ್ಚರಿ:
(೧) ದುರ್ಯೋಧನನು ಹೆದರುವ ಪರಿ – ಭೂತರವ ಭೇತಾಳ ಕಲಹ ವಿಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು
(೨) ದುರ್ಯೋಧನನನ್ನು ಕರೆದ ಪರಿ – ಛಲಚೇತನನು ಸಲೆ ಚಂಡಿಯಾದನು

ಪದ್ಯ ೧೧: ದ್ರೋಣರು ಏನು ಹೇಳಿ ಮುನ್ನುಗ್ಗುತ್ತಿದ್ದರು?

ಮಿಗೆ ವಿರೋಧಿಯ ಬಸುರನುಗಿ ಕು
ನ್ನಿಗಳ ಕೆಡೆ ಬಡಿ ಸೀಳು ಹೆಣನುಂ
ಗಿಗಳ ಹೊಯ್ ಹೊಯ್ ರಣಕೆ ಹೆದರುವ ಕೌರವಾನುಜರ
ಹಗೆಯ ಶೋಣಿತಪಾನದರವ
ಟ್ಟಿಗೆಗೆ ಕರೆ ಭೇತಾಳ ಭೂತಾ
ಳಿಗಳನೆನುತ ಸುಧೈರ್ಯ ನಡೆದನು ಗರುಡಿಯಾಚಾರ್ಯ (ದ್ರೋಣ ಪರ್ವ, ೧೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ವಿರೋಧಿಯ ಹೊಟ್ಟೆಯನ್ನು ಬಗಿಯಿರಿ, ಬೆದರುವ ನಾಯಿಗಳನ್ನು ಕೆಡವಿ ಸೀಳಿರಿ, ಯುದ್ಧಕ್ಕೆ ಹೆದರುವ ಕೌರವನ ತಮ್ಮಂದಿರನ್ನು ಹೊಯ್ಯಿರಿ, ಶತ್ರುವಿನ ರಕ್ತದ ಅರವಟ್ಟಿಗೆಗೆ ಭೂತ ಬೇತಾಳಗಳನ್ನು ಕರೆಯಿರಿ ಎಂದು ಗರ್ಜಿಸುತ್ತಾ ಮುನ್ನುಗ್ಗಿದರು.

ಅರ್ಥ:
ಮಿಗೆ: ಹೆಚ್ಚು; ವಿರೋಧಿ: ಶತ್ರು; ಬಸುರು: ಹೊಟ್ಟೆ; ಉಗಿ: ಹೊರಹಾಕು; ಕುನ್ನಿ: ನಾಯಿ; ಕೆಡೆ: ಬೀಳು, ಕುಸಿ; ಸೀಳು: ಕತ್ತರಿಸು; ಹೆಣ: ಜೀವವಿಲ್ಲದ ಶರೀರ; ನುಂಗು: ಕಬಳಿಸು, ಸ್ವಾಹಮಾಡು; ಹೆಣನುಂಗಿ: ಪಿಶಾಚಿ; ಹೊಯ್: ಹೊಡೆ; ರಣ: ಯುದ್ಧ; ಹೆದರು: ಅಂಜು; ಅನುಜ: ತಮ್ಮ; ಹಗೆ: ವೈರಿ; ಶೋಣಿತ: ರಕ್ತ; ಪಾನ: ಕುಡಿ; ಅರವಟ್ಟಿಗೆ: ಬಾಯಾರಿದವರಿಗೆ ಧರ್ಮಾರ್ಥವಾಗಿ ನೀರು ಕೊಡುವ ಜಾಗ; ಕರೆ: ಬರೆಮಾಡು; ಭೇತಾಳ: ಭೂತ; ಆಳಿ: ಸಾಲು, ಗುಂಪು; ನಡೆ: ಚಲಿಸು; ಗರುಡಿ: ವ್ಯಾಯಾಮ ಶಾಲೆ; ಆಚಾರ್ಯ: ಗುರು;

ಪದವಿಂಗಡಣೆ:
ಮಿಗೆ +ವಿರೋಧಿಯ +ಬಸುರನ್+ಉಗಿ +ಕು
ನ್ನಿಗಳ +ಕೆಡೆ +ಬಡಿ+ ಸೀಳು +ಹೆಣನುಂ
ಗಿಗಳ+ ಹೊಯ್ +ಹೊಯ್ +ರಣಕೆ +ಹೆದರುವ +ಕೌರವ+ಅನುಜರ
ಹಗೆಯ +ಶೋಣಿತ+ಪಾನದ್+ಅರವ
ಟ್ಟಿಗೆಗೆ +ಕರೆ +ಭೇತಾಳ +ಭೂತಾ
ಳಿಗಳನ್+ಎನುತ +ಸುಧೈರ್ಯ +ನಡೆದನು+ ಗರುಡಿಯಾಚಾರ್ಯ

ಅಚ್ಚರಿ:
(೧) ರಕ್ತದ ಹರಿವನ್ನು ವಿವರಿಸುವ ಪರಿ – ಹಗೆಯ ಶೋಣಿತಪಾನದರವಟ್ಟಿಗೆಗೆ ಕರೆ ಭೇತಾಳ ಭೂತಾ
ಳಿಗಳ

ಪದ್ಯ ೭೨: ಕೊಂಗ, ನೇಪಾಳದ ರಾವುತರು ಹೇಗೆ ಯುದ್ಧ ಮಾಡಿದರು?

ಲಾಳ ಕೊಂಗ ಕಳಿಂಗ ವರನೇ
ಪಾಳಕದ ರಾವುತರು ರಣಭೇ
ತಾಳರಣಲೊಳಗಡಗಿದದು ಕುರುಪಾಂಡುಸೈನ್ಯದೊಳು
ಹೇಳಲಳವಲ್ಲುಭಯದಲಿ ಹೇ
ರಾಳ ಕಾಳೆಗ ಹಿರಿದು ಕಿರಿದೆನೆ
ಹೇಳುವೆನು ಬವರಕ್ಕೆ ಬಂದುದು ಮತ್ತಗಜಸೇನೆ (ಭೀಷ್ಮ ಪರ್ವ, ೪ ಸಂಧಿ, ೭೨ ಪದ್ಯ)

ತಾತ್ಪರ್ಯ:
ಲಾಳ, ಕೊಂಗ, ಕಳಿಂಗ, ನೇಪಾಳದ ರಾವುತರು ಭೇತಾಳಗಳಂತೆ ಯುದ್ಧಮಾಡಿ ಸತ್ತು ಹೆಣದ ರಾಶಿಗಳಲ್ಲಿ ಅಡಗಿದರು. ಯುದ್ಧ ಹೇಗಿತ್ತು, ಎಷ್ಟು ಜನರು ಸತ್ತರು ಎಂದು ಹೇಳಲಾಗುವುದಿಲ್ಲ. ಇಂತಹ ಘೋರವಾದ ಮಹಾಕಾಲಗವೇ ಚಿಕ್ಕದನ್ನಿಸುವ ಹಾಗೆ ಕುದುರೆಗಾಳಗದ ಹಿಂದೆ ಆನೆಗಳ ದಂಡು ಬಂದಿತು.

ಅರ್ಥ:
ಲಾಳ: ಕುದುರೆ, ಎತ್ತುಗಳ ಪಾದಗಳಿಗೆ ರಕ್ಷಣೆ ಗಾಗಿ ಹಾಕುವ ಕಬ್ಬಿಣದ ಸಾಧನ; ಪಾಲಕ: ರಕ್ಷಕ; ವರ: ಶ್ರೇಷ್ಠ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಭೇತಾಳ: ಭೂತ; ರಣ: ಯುದ್ಧ; ಅಡಗು: ಅವಿತುಕೊಳ್ಳು; ಉಭಯ: ಇಬ್ಬರು; ಹೇರಾಳ: ದೊಡ್ಡ, ವಿಶೇಷ; ಕಾಳೆಗ: ಯುದ್ಧ; ಹಿರಿ: ದೊಡ್ಡ; ಕಿರಿದು: ಚಿಕ್ಕ; ಬವರ: ಕಾಳಗ, ಯುದ್ಧ; ಬಂದು: ಆಗಮಿಸು; ಗಜ: ಕರಿ, ಆನೆ; ಸೇನೆ: ಸೈನ್ಯ;

ಪದವಿಂಗಡಣೆ:
ಲಾಳ +ಕೊಂಗ +ಕಳಿಂಗ +ವರ+ನೇ
ಪಾಳಕದ +ರಾವುತರು +ರಣ+ಭೇ
ತಾಳ+ರಣಲೊಳಗ್ +ಅಡಗಿದದು +ಕುರು+ಪಾಂಡು+ಸೈನ್ಯದೊಳು
ಹೇಳಲ್+ಅಳವಲ್+ಉಭಯದಲಿ +ಹೇ
ರಾಳ +ಕಾಳೆಗ +ಹಿರಿದು+ ಕಿರಿದೆನೆ
ಹೇಳುವೆನು +ಬವರಕ್ಕೆ +ಬಂದುದು +ಮತ್ತ+ಗಜಸೇನೆ

ಅಚ್ಚರಿ:
(೧) ೪ ಪ್ರದೇಶ ಹೆಸರನ್ನು ಹೇಳುವ ಪರಿ – ಲಾಳ ಕೊಂಗ ಕಳಿಂಗ ವರನೇಪಾಳಕದ
(೨) ಉಪಮಾನದ ಪ್ರಯೋಗ – ರಾವುತರು ರಣಭೇತಾಳರಣಲೊಳಗಡಗಿದದು ಕುರುಪಾಂಡುಸೈನ್ಯದೊಳು