ಪದ್ಯ ೪೮: ಭೀಮನು ಯಕ್ಷರಿಗೆ ಏನು ಹೇಳಿದನು?

ನಾವಲೇ ಕುಂತೀಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನಬಂಟರೆಂಬುದನರಿಯೆ ನಾನೆಂದ (ಅರಣ್ಯ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಕುಂತೀಕುಮಾರರು, ಭೂಮಿಯ ಒಡೆಯರು, ನಮ್ಮ ದೇವಿಯು ಸೌಗಂಧಿಕ ಪುಷ್ಪವನ್ನು ಬಯಸಿದಳು, ಈ ಕಮಲ ಪುಷ್ಪವನ್ನು ತೆಗೆದುಕೊಂಡು ಬಾ ಎಂದು ಆಕೆ ಕೋರಿದುದರಿಂದ ನಾವಿಲ್ಲಿಗೆ ಬಂದೆವು, ಈ ಸರೋವರವನ್ನು ಕಾಯಲು ನೀವಿಷ್ಟು ಜನರಿದ್ದೀರಿ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ಭೀಮನು ನುಡಿದನು.

ಅರ್ಥ:
ಕುಮಾರ: ಮಕ್ಕಳು; ಭೂ: ಭೂಮಿ; ವಧು: ಹೆಣ್ಣು; ವಲ್ಲಭ: ಒಡೆಯ, ಪ್ರಭು; ಭೂವಧೂವಲ್ಲಭ: ರಾಜ; ದೇವಿ: ಸ್ತ್ರಿ, ಹೆಣ್ಣು; ಬಯಕೆ: ಆಸೆ; ಸರೋರುಹ: ಕಮಲ; ಠಾವು: ಸ್ಥಳ, ಜಾಗ; ಕಾಣಿಸು: ತೋರು; ಬಹುದಾ: ತೆಗೆದುಕೊಂಡು ಬಾ; ತಾವರೆ: ಕಮಲ; ಬಂದೆ: ಆಗಮಿಸು; ಕಾಹಿನ: ಕಾವಲು, ರಕ್ಷಣೆ; ಬಂಟ: ಸೇವಕ; ಅರಿ: ತಿಳಿ;

ಪದವಿಂಗಡಣೆ:
ನಾವಲೇ+ ಕುಂತೀ+ಕುಮಾರರು
ಭೂವಧೂವಲ್ಲಭರು+ ನಮ್ಮಯ
ದೇವಿಗಾದುದು +ಬಯಕೆ +ಸೌಗಂಧಿಕ+ ಸರೋರುಹದ
ಠಾವು +ಕಾಣಿಸಿಕೊಂಡು +ಬಹುದಾ
ತಾವರೆಯನೆನೆ+ ಬಂದೆವಿಲ್ಲಿಗೆ
ನೀವು +ಕಾಹಿನ+ಬಂಟರೆಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧) ರಾಜ ಎನ್ನಲು ಭೂವಧೂವಲ್ಲಭ ಪದದ ಬಳಕೆ
(೨) ಸರೋರುಹ, ತಾವರೆ – ಸಮನಾರ್ಥಕ ಪದ