ಪದ್ಯ ೪೩: ಯಕ್ಷ ಧರ್ಮಜನ ಸಂವಾದ – ೭

ನರಕಿಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಯಕ್ಷನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಯಾರು ನರಕಕ್ಕೆ ಹೋಗುತ್ತಾನೆ, ಸಜ್ಜನರಲ್ಲಿ ಯಾರು ಬಾಹಿರರು? ಜೀವವಿದ್ದರೂ ಯಾವ ರಾಜನು ಸತ್ತವನಾಗುತ್ತಾನೆ? ಯಾರು ಮರುಳ? ಯಾರು ಅಭಿಮಾನವನ್ನು ಕಳೆದುಕೊಂಡವನು? ಉತ್ತರವನ್ನು ಹೇಳಿ ಆನಂತರ ನೀರನ್ನು ಕುಡಿ ಎಂದು ಯಕ್ಷನು ಹೇಳಿದನು.

ಅರ್ಥ:
ನರಕಿ: ನರಕವಾಸಿ; ನರಕ: ಅಧೋ ಲೋಕ; ಸುಜನ: ಸಜ್ಜನ; ಬಾಹಿರ: ಹೊರಗಿನವ; ಲೋಕ: ಜಗತ್ತು; ಅರಿ: ತಿಳಿ; ಹರಣ: ಜೀವ, ಪ್ರಾಣ; ಭೂಮಿಪಾಲ; ರಾಜ; ಮರುಳ: ತಿಳಿಗೇಡಿ, ದಡ್ಡ; ಭಂಗ: ನಾಶ; ಮಾನ: ಗೌರವ, ಮರ್ಯಾದೆ; ಭರಿತ: ಕೂಡಿದ; ಹೇಳು: ತಿಳಿಸು; ಸರಸಿ: ಸರೋವರ; ಬಳಿಕ: ನಂತರ; ಉದಕ: ನೀರು; ಕುಡಿ: ಪಾನಮಾಡು; ಖಚರ: ಗಂಧರ್ವ, ಯಕ್ಷ;

ಪದವಿಂಗಡಣೆ:
ನರಕಿ+ಆವನು +ಸುಜನರಲಿ +ಬಾ
ಹಿರನದ್+ಆವನು +ಲೋಕವ್+ಅರಿಯಲು
ಹರಣವಿರೆ+ ಹೊಂದಿದನದ್+ಆವನು+ ಭೂಮಿಪಾಲರಲಿ
ಮರುಳದ್+ಆವನು+ ಮಾನ+ಭಂಗದಿ
ಭರಿತನ್+ಆವನು +ಹೇಳು +ಧರ್ಮಜ
ಸರಸಿಯಲಿ +ಬಳಿಕ್+ಉದಕವನು +ಕುಡಿ+ಎಂದನಾ +ಖಚರ

ಅಚ್ಚರಿ:
(೧) ಆವನು – ೫ ಬಾರಿ ಪ್ರಯೋಗ

ಪದ್ಯ ೫: ರಾಜನೀತಿಯಲ್ಲಿ ಯಾವುದು ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ?

ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದೊಳು ಸಾಮಾನ್ಯ ತರವೆಂದ (ಉದ್ಯೋಗ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಒಡಂಬಡಿಕೆಯ ಕ್ರಮವು ರಾಜನೀತಿಯಲ್ಲಿ ಬಹು ಸುಂದರವಾದ ಉಪಾಯ. ವೈಭವದಿಂದ ಬದುಕಲಿಚ್ಛಿಸುವ ರಾಜರೆಲ್ಲರೂ ಇದು ಬೀಜ ಮಂತ್ರ. ಸಾಮವು ತಪ್ಪಿದರೆ ನೀತಿಯು ನೆಲೆಯಿಲ್ಲದಂತಾಗುತ್ತದೆ. ದಂಡವು ಉಪಾಯಗಳಲ್ಲಿ ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ ಎಂದು ಕೃಷ್ಣನು ಹೇಳಿದನು.

ಅರ್ಥ:
ಸಾಮ: ಶಾಂತಗೊಳಿಸುವಿಕೆ, ಒಡಂಬಡಿಕೆ; ರಾಜನೀತಿ: ರಾಜಕಾರಣ; ಮನೋಹರ: ಸುಂದರವಾದ; ರೂಪು:ಆಕಾರ; ಬದುಕು: ಜೀವಿಸುವ; ಭೂಮಿಪಾಲ: ರಾಜ; ವಿನುತ: ಹೊಗಳಲ್ಪಟ್ಟ; ವಿಭವ: ಸಿರಿ, ಸಂಪತ್ತು; ಬೀಜ:ಮೂಲ ಕಾರಣ; ಮಂತ್ರ: ವಿಚಾರ; ತಪ್ಪು: ಸುಳ್ಳಾಗು; ಬಳಿಕ: ನಂತರ; ವಿರಾಮ: ಬಿಡುವು, ವಿಶ್ರಾಂತಿ; ಬಿಡದು: ಬಿಡು ಗಡೆ; ದಂಡ: ಕೋಲು; ಸೀಮೆ:ಎಲ್ಲೆ, ಗಡಿ; ಉಪಾಯ: ಯುಕ್ತಿ; ಸಾಮಾನ್ಯ: ಕೇವಲ; ತರ:ಕ್ರಮ;

ಪದವಿಂಗಡಣೆ:
ಸಾಮವೆಂಬುದು+ ರಾಜನೀತಿಗೆ
ತಾ +ಮನೋಹರ +ರೂಪು +ಬದುಕುವ
ಭೂಮಿಪಾಲರ+ ವಿನುತ +ವಿಭವಕೆ +ಬೀಜ +ಮಂತ್ರವಿದು
ಸಾಮ +ತಪ್ಪಿದ +ಬಳಿಕ +ನೀತಿ +ವಿ
ರಾಮವಾಗದೆ+ ಬಿಡದು +ದಂಡದ
ಸೀಮೆಯೆಂಬುದ್+ಉಪಾಯದೊಳು +ಸಾಮಾನ್ಯ +ತರವೆಂದ

ಅಚ್ಚರಿ:
(೧) ಚತುರೋಪಾಯದ ವಿವರ ನೀಡುವ ಪದ್ಯ – ಸಾಮ, ದಾನ, ಭೇದ, ದಂಡ
(೨) ಸಾಮದ ಗುಣಗಾನ – ಸಾಮವೆಂಬುದು ರಾಜನೀತಿಗೆ ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು