ಪದ್ಯ ೪೪: ಸಂಜಯನು ಯಾರನ್ನು ನೆನೆಯುತ್ತಾ ಹಿಂದಿರುಗಿದನು?

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ (ಗದಾ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಕೌರವನನ್ನು ಬೀಳ್ಕೊಂಡು, ಹಿಂದೆ ಯುದ್ಧಭೂಮಿಯಲ್ಲಿ ತನಗೊದಗಿದ್ದ ಅಪಾಯವನ್ನು ನೆನೆದು ಹೆಜ್ಜೆಹೆಜ್ಜೆಗೂ ನಡುಗುತ್ತಾ ಯುದ್ಧರಂಗದಲ್ಲಿ ಭೂತಗಳನ್ನು ನೋಡುತ್ತಾ ಏಕಾಂಗಿಯಾಗಿ ಗುರುಸ್ಮರಣೆ ಮಾಡುತ್ತಾ ಬಂದನು.

ಅರ್ಥ:
ಬೀಳ್ಕೊಂಡು: ತೆರಳು; ಮರಳು: ಹಿಂದಿರುಗು; ಹಿಂದಣ: ಹಿಂದೆ, ಭೂತ; ಪರಿಭವ: ಅನಾದರ, ತಿರಸ್ಕಾರ, ಸೋಲು; ನೆನೆದು: ಜ್ಞಾಪಿಸು; ಅಡಿಗಡಿ: ಹೆಜ್ಜೆ ಹೆಜ್ಜೆ; ಕಂಪಿಸು: ನಡುಗು; ಮನ: ಮನಸ್ಸು; ಧುರ: ಯುದ್ಧ, ಕಾಳಗ; ಮಧ್ಯ: ನಡುವೆ; ನಡೆ: ಚಲಿಸು; ಭೂತಾವಳಿ: ಭೂತ, ಪಿಶಾಚಿ; ಈಕ್ಷಿಸು: ನೋಡು; ಗುರು: ಆಚಾರ್ಯ; ನೆನೆ: ಜ್ಞಾಪಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಕುರುಪತಿಯ +ಬೀಳ್ಕೊಂಡು +ಸಂಜಯ
ಮರಳಿದನು +ತನಗಾದ +ಹಿಂದಣ
ಪರಿಭವವ +ನೆನೆದ್+ಅಡಿಗಡಿಗೆ +ಕಂಪಿಸುತ +ಮನದೊಳಗೆ
ಧುರದ +ಮಧ್ಯದೊಳ್+ಒಬ್ಬನೇ +ನಡೆ
ತರುತ+ ಭೂತಾವಳಿಯನ್+ಈಕ್ಷಿಸಿ
ಗುರುವ +ನೆನೆದನು +ಕೇಳು+ ಜನಮೇಜಯ +ಮಹೀಪಾಲ

ಅಚ್ಚರಿ:
(೧) ಪರಿಭವವ ನೆನೆದಡಿಗಡಿಗೆ, ಗುರುವ ನೆನೆದನು – ನೆನೆದ ಪದದ ಬಳಕೆ

ಪದ್ಯ ೪೨: ಕೌರವನಿಗೆ ಸಾರ್ಥಕವೆನಿಸುವಂತ ಯಾವ ಕಾರ್ಯವನ್ನು ಕರ್ಣನು ಮಾಡಲು ಇಚ್ಛಿಸುತ್ತಾನೆ?

ನರನ ರಕುತದ ಮದ್ಯಪಾನವ
ನೆರೆದು ಶಾಕಿನಿಯರಿಗೆ ಪಾರ್ಥನ
ಕರುಳ ದೊಂಡೆಯ ಕೂಳ ಮುದ್ದೆಯ ಬಡಿಸಿ ದೈತ್ಯರಿಗೆ
ಅರಿಯ ಖಂಡದಿ ಹಸಿಯ ಸುಂಟಿಗೆ
ವೆರಸಿ ಭೂತಾವಳಿಯ ದಣಿಸಿದ
ಡರಸು ಕೌರವನೆನ್ನ ಸಾಕಿತಕಿಂದು ಫಲವೆಂದ (ಕರ್ಣ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನನ ರಕ್ತವನ್ನು ಮದ್ಯವನ್ನಾಗಿ ಸೇವಿಸಲು ಶಾಕಿನಿಯರಿಗೆ ನೀಡುತ್ತೇನೆ, ಅವನ ಕರುಳಿನ ಮಾಲೆಯ ಕೂಳಿನಮುದ್ದೆಯನ್ನು ರಾಕ್ಷಸರಿಗೆ ಬಡಿಸುತ್ತೇನೆ, ಅರ್ಜುನನ ಹೃದ್ಯ, ಮಾಂಸಖಂಡಗಳನ್ನು ಭೂತಗಳಿಗೆ ಬಡಿಸಿ ತೃಪ್ತಿಪಡಿಸಿದರೆ, ಕೌರವನು ನನ್ನನ್ನು ಸಾಕಿ ಸಲಹಿದುದಕ್ಕೂ ಸಾರ್ಥಕವಾಗುತ್ತದೆ ಎಂದು ಕರ್ಣನು ಹೇಳಿದನು.

ಅರ್ಥ:
ನರ: ಅರ್ಜುನ; ರಕುತ: ನೆತ್ತರು; ಮದ್ಯ: ಅಮಲೇರಿಸುವ ಪಾನೀಯ; ಪಾನ: ಕುಡಿ; ನೆರೆ: ಗುಂಪು; ಎರೆ: ಸುರಿ, ಹೊಯ್ಯು; ಶಾಕಿನಿ: ಕ್ಷುದ್ರದೇವತೆ; ಪಾರ್ಥ: ಅರ್ಜುನ; ಕರುಳ: ಪಚನಾಂಗ; ದೊಂಡೆ:ಸಿಕ್ಕುಸಿಕ್ಕಾಗಿರುವುದು; ಕೂಳು: ಆಹಾರ, ಊಟ; ಮುದ್ದೆ:ಕಲಸಿದ ಆಹಾರ; ಬಡಿಸು: ನೀದು; ದೈತ್ಯ: ರಾಕ್ಷಸ; ಅರಿ: ವೈರಿ; ಖಂಡ:ಮೂಳೆಯಿಲ್ಲದ ಮಾಂಸ; ಹಸಿ: ಹೊಸದು, ತಾಜಾ; ಸುಂಟಿಗೆ: ಹೃದಯದ ಮಾಂಸ; ವೆರಸಿ: ಬೆರಸಿ; ಭೂತಾವಳಿ: ಭೂತ, ದೆವ್ವಗಳ ಗುಂಪು; ದಣಿ: ತೃಪ್ತಿಹೊಂದು; ಅರಸು: ರಾಜ; ಸಾಕು: ಸಲಹು; ಫಲ: ಉಪಯೋಗ;

ಪದವಿಂಗಡಣೆ:
ನರನ +ರಕುತದ +ಮದ್ಯಪಾನವನ್
ಎರೆದು +ಶಾಕಿನಿಯರಿಗೆ +ಪಾರ್ಥನ
ಕರುಳ +ದೊಂಡೆಯ +ಕೂಳ +ಮುದ್ದೆಯ+ ಬಡಿಸಿ +ದೈತ್ಯರಿಗೆ
ಅರಿಯ +ಖಂಡದಿ +ಹಸಿಯ +ಸುಂಟಿಗೆ
ವೆರಸಿ+ ಭೂತಾವಳಿಯ +ದಣಿಸಿದಡ್
ಅರಸು +ಕೌರವನೆನ್ನ +ಸಾಕಿತಕಿಂದು +ಫಲವೆಂದ

ಅಚ್ಚರಿ:
(೧)ನರ, ಪಾರ್ಥ, ಅರಿ – ಅರ್ಜುನನನ್ನು ಕರೆದಿರುವ ಬಗೆ
(೨) ಶಾಕಿನಿ, ದೈತ್ಯ, ಭೂತಾವಳಿ – ಅರ್ಜುನನ ರಕ್ತ ಮಾಂಸವನ್ನು ಪಡೆಯುವ ಗುಂಪು