ಪದ್ಯ ೧೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೪?

ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೫ ಪದ್ಯ)

ತಾತ್ಪರ್ಯ:
ಅಯ್ಯೋ ಕೃಷ್ಣ, ಹಂಸದ ಮರಿಯನ್ನು ಕುಕ್ಕುವ ಕೊಕ್ಕರೆಯನ್ನು ತೊಲಗಿಸು, ಗಿಡುಗನಿಂದ ಗಿಳಿಯನ್ನು ಸಂರಕ್ಷಿಸು, ಭಕ್ತರನ್ನು ಕಾಪಾಡುವೆ ಎಂದು ನೀನು ನುಡಿದಿಲ್ಲವೇ ಅದು ನಿನ್ನ ಕರ್ತವ್ಯ ವಲ್ಲವೇ, ಭೂತವು ಹಿಡಿದು ಬಾಧಿಸುತ್ತಿರುವುದರಿಂದ ನಿನ್ನ ಬಿರುದನ್ನು ನಿನಗೇ ತಿಳಿಸುತ್ತಿದ್ದೇನೆ, ಭಕ್ತವತ್ಸಲನೇ ಆಗಿದ್ದರೆ ನನ್ನನ್ನು ರಕ್ಷಿಸು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಅಕಟ: ಅಯ್ಯೋ; ಹಂಸ: ಮರಾಲ, ಬಿಳಿಯ ಪಕ್ಷಿ; ಮರಿ: ಶಿಶು; ಮೋದು: ಹೊಡೆ, ಅಪ್ಪಳಿಸು; ಬಕ: ಕೊಕ್ಕರೆ; ತೆಗೆ: ಹೋಗಲಾಡಿಸು; ಗಿಡುಗ: ಹದ್ದು; ಎರಗು: ಬೀಳು; ಶುಕ: ಗಿಳಿ; ಶೋಕ: ದುಃಖ; ಮಾಣಿಸು: ನಿಲ್ಲುವಂತೆ ಮಾಡು; ವಾಣಿ: ಮಾತು; ಭಕುತ: ಆರಾಧಕ; ಪ್ರಕಟ: ಸ್ಪಷ್ಟವಾದುದು, ಕಾಣುವಿಕೆ; ಭೂತ: ದೆವ್ವ, ಪಿಶಾಚಿ; ಬಾಧೆ: ತೊಂದರೆ; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಬಿರುದು: ಪದವಿ, ಪಟ್ಟ; ತಡೆ: ನಿಲ್ಲಿಸು; ವತ್ಸಲ: ಪ್ರೀತಿಸುವ; ಅಹರು: ಆಗುವರು; ಸಲಹು: ಕಾಪಾಡು; ಒರಲು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಅಕಟ +ಹಂಸೆಯ +ಮರಿಯ +ಮೋದುವ
ಬಕನ+ ತೆಗೆಸೈ+ ಗಿಡುಗನ್+ಎರಗುವ
ಶುಕನ+ ಶೋಕದ+ ಮಾಣಿಸೈ+ ವಾಣಿಯವೆ+ ಭಕುತರಲಿ
ಪ್ರಕಟ+ಭೂತಗ್ರಹದ+ ಬಾಧೆಗೆ
ವಿಕಳೆ+ ನಿನ್ನಯ+ ಬಿರುದ+ ತಡೆದೆನು
ಭಕುತ+ವತ್ಸಲನ್+ಅಹರೆ+ ಸಲಹೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹಂಸೆಯ ಮರಿಯ ಮೋದುವ ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ