ಪದ್ಯ ೪೪: ಭುವನಜನ ಏನೆಂದು ಒರಲಿದರು?

ಅರಿಪುರತ್ರಯ ದಹನ ಕರ್ಮ
ಸ್ಫುರಣವಸ್ಮತ್ಕಾರ್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀವೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ (ಕರ್ಣ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಲೋಕದ ಜನರು ಶಿವನ ಮುಂದೆ ಬಂದು ದೇವಾ ತ್ರಿಪುರಗಳನ್ನು ದಹಿಸು ಎಂದು ನಾವು ನಿಮ್ಮಲ್ಲಿ ಪ್ರಾರ್ಥಿಸಿದೆವು, ಅದು ಮುಗಿಯಿತು, ಅಲ್ಲಿಂದ ಮುಂದೆ ಇಡೀ ಹದಿನಾಲ್ಕು ಲೋಕಕ್ಕೆ ಬೆಂಕಿಯು ಆವರಿಸಿ ಸುಡುತ್ತಿದೆ ಇದು ಉಚಿತವೋ ಅನುಚಿತವೋ ನೀವೇ ಬಲ್ಲಿರಿ, ಇದು ಜನರನ್ನು ರಕ್ಷಿಸುವ ಕಾಲವೋ, ಸಂಹರಿಸುವ ಕಾಲವೋ ಎಂಬುದನ್ನು ಕರುಣಿಯಾದ ನೀನೇ ಬಲ್ಲೆ ಎಂದು ಜಗತ್ತಿನ ಜನರು ಗೋಳಿಟ್ಟರು.

ಅರ್ಥ:
ಅರಿ: ವೈರಿ; ಪುರ: ಊರು; ತ್ರಯ: ಮೂರು; ದಹನ: ಸುಡು; ಕರ್ಮ: ಕಾರ್ಯ; ಸ್ಫುರಣ: ಡುಗುವುದು, ಕಂಪನ; ಅಸ್ಮತ್: ನನ್ನ; ಕಾರ್ಯ: ಕೆಲಸ; ಗೋಚರಿಸು: ತೋರು; ಮೇಲಣ: ಮುಂದಿನ; ಉಚಿತ: ಸರಿಯಾದ; ಅನುಚಿತ: ಸರಿಯಲ್ಲದ; ಕೃತ್ಯ: ಕೆಲಸ; ಕರುಣಿ: ದಯಾಪರ; ಬಲ್ಲೆ: ತಿಳಿ; ಜನ: ಜೀವರು; ಸಂಹರಣ: ಅಂತ್ಯ; ಕಾಲ: ಸಮಯ; ಮೇಣು: ಅಥವ; ರಕ್ಷಾ: ಕಾಪಾದು; ದೇವ: ಭಗವಂತ; ಒರಲು: ಹೇಳು, ಅರಚು, ಗೋಳಿಡು; ಭುವನಜನ: ಜಗತ್ತಿನ ಜನ;

ಪದವಿಂಗಡಣೆ:
ಅರಿ+ಪುರತ್ರಯ +ದಹನ +ಕರ್ಮ
ಸ್ಫುರಣವ್+ಅಸ್ಮತ್+ಕಾರ್ಯವದು +ಗೋ
ಚರಿಸಿತ್+ಅಲ್ಲಿಂ +ಮೇಲಣ್+ಉಚಿತ+ಅನುಚಿತ +ಕೃತ್ಯವನು
ಕರುಣಿ +ನೀವೇ +ಬಲ್ಲೆ +ಜನ +ಸಂ
ಹರಣ +ಕಾಲವೊ +ಮೇಣು +ರಕ್ಷಾ
ಕರಣ+ ಕಾಲವೊ+ ದೇವ +ಎಂದ್+ಒರಲಿದುದು +ಭುವನಜನ

ಅಚ್ಚರಿ:
(೧) ಹರಣ, ಕರಣ – ಪ್ರಾಸ ಪದ
(೨) ಕರ್ಮ, ಕೃತ್ಯ, ಕಾರ್ಯ – ಸಾಮ್ಯಾರ್ಥದ ಪದಗಳು

ಪದ್ಯ ೪೩: ಜನರು ಶಿವನಲ್ಲಿ ಯಾವ ಮೊರೆಯಿಟ್ಟರು?

ಎಲೆ ಚತುರ್ದಶ ಜಗವನುರಿಯ
ಪ್ಪಳಿಸಿತೇ ಬೆಂದುದು ಸುರೌಘದ
ಗೆಲವು ಕರೆಯಾ ಕಲ್ಪಮೇಘವನುರಿಯ ಮಾಣಿಸಲಿ
ಬಲುಕಣಿಗಳಲ್ಲಾ ಜನಾರ್ದನ
ನಳಿನಭವರಾವೆಡೆಯೆನುತ ಕಳ
ವಳಿಸಿದುದು ಮೊರೆಯಿಟ್ಟುದಭವನ ಮುಂದೆ ಭುವನಜನ (ಕರ್ಣ ಪರ್ವ, ೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರದ ಮತ್ತು ಶಿವನ ಕಣ್ಣಿನ ಬೆಂಕಿಯು ಇಡೀ ಹದಿನಾಲ್ಕು ಲೋಕವನ್ನು ಸುಡಲಾರಂಭಿಸಿದುದನ್ನು ಕಂಡ ಜನರು ಬೆದರಿದರು, ಅಯ್ಯೋ ಏನಾಯಿತು ದೇವತೆಗಳಿಗೆ ಜಯವಾಗಿರುವುದಿರಲಿ ಎಲ್ಲಾ ಲೋಕವು ಬೆಂಕಿಗೆ ಆಹುತಿಯಾಗುತ್ತಿದೆಯಲ್ಲಾ, ಕಲ್ಪಾಂತರದ ಮೇಘಗಳನ್ನು ಕರೆಯಿತಿ ಅದರ ಮಳೆಯಿಂದ ಈ ಉರಿಯು ಶಾಂತವಾಗಲಿ, ಮಹಾಮಹಿಮರಾದ ಬ್ರಹ್ಮ, ವಿಷ್ಣುಗಳೆಲ್ಲಿ? ಅವರಿಗಾದಾರು ಹೇಳಿ, ಈ ಚಿಂತೆಯಲ್ಲಿ ಶಿವನೆದುರು ಜನರು ಬಂದು ಮೊರೆಯಿಟ್ಟರು.

ಅರ್ಥ:
ಚತುರ್ದಶ: ಹದಿನಾಲ್ಕು ಲೋಕ; ಜಗ: ಜಗತ್ತು; ಉರಿ: ಬೆಂಕಿ; ಅಪ್ಪಳಿಸು: ಆವರಿಸು, ಆಕ್ರಮಿಸು; ಬೆಂದು: ಸುಡು; ಔಘ: ಗುಂಪು; ಸುರೌಘ: ದೇವತೆಗಳ ಸಮೂಹ; ಗೆಲವು: ಜಯ; ಕರೆ: ಬರೆಮಾಡು ಕಲ್ಪ: ಯುಗ/ಕಾಲದ ಪ್ರಮಾಣ, ಬ್ರಹ್ಮನ ಒಂದು ದಿವಸ, ಸಹಸ್ರಯುಗ; ಮೇಘ: ಮೋಡ; ಮಾಣಿಸು: ನಿಲ್ಲಿಸು; ಬಲುಕಣಿ: ಬಲುಶೂರ; ಜನಾರ್ದನ: ವಿಷ್ಣು; ನಳಿನಭವ: ಬ್ರಹ್ಮ; ಆವೆಡೆ: ಎಲ್ಲಿ; ಕಳವಳಿಸು: ಆತಂಕ, ಚಿಂತೆ; ಮೊರೆ: ಗೋಳಾಟ, ಹುಯ್ಯಲು; ಅಭವ: ಶಿವ; ಮುಂದೆ: ಎದುರು; ಭುವನ: ಜಗತ್ತು; ಜನ: ಜೀವಿಗಳು, ಜನರು;

ಪದವಿಂಗಡಣೆ:
ಎಲೆ +ಚತುರ್ದಶ +ಜಗವನ್+ಉರಿ
ಅಪ್ಪಳಿಸಿತೇ +ಬೆಂದುದು +ಸುರೌಘದ
ಗೆಲವು +ಕರೆಯಾ +ಕಲ್ಪ+ಮೇಘವನ್+ಉರಿಯ +ಮಾಣಿಸಲಿ
ಬಲುಕಣಿಗಳಲ್ಲಾ+ ಜನಾರ್ದನ
ನಳಿನಭವರ್+ಆವೆಡೆ+ಯೆನುತ +ಕಳ
ವಳಿಸಿದುದು +ಮೊರೆಯಿಟ್ಟುದ್+ಅಭವನ +ಮುಂದೆ +ಭುವನಜನ

ಅಚ್ಚರಿ:
(೧) ನಳಿನಭವ, ಅಭವ – ಭವ ಪದದ ಬಳಕೆ