ಪದ್ಯ ೧೨: ಸೇನೆಯು ಯುದ್ಧರಂಗಕ್ಕೆ ಹೇಗೆ ಬಂದು ನಿಂತಿತು?

ಭುವನಗರ್ಭಿತವಾದುದಾ ಮಾ
ಧವನ ಜಠರದವೋಲು ವರ ಭಾ
ಗವತನಂತಿರೆ ವಿಷ್ಣುಪದ ಸಂಸಕ್ತ ತನುವಾಯ್ತು
ರವಿಯವೊಲು ಶತಪತ್ರ ಸಂಘಾ
ತವನು ಪಾದದಲಣೆದು ಕೆಂಧೂ
ಳವಗಡಿಸೆ ಕುರುಸೇನೆ ಕೈಕೊಂಡುದು ರಣಾಂಗಣವ (ಭೀಷ್ಮ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ವಿಷ್ಣುವು ಭೂಮಿಯನ್ನು ತನ್ನ ಜಠರದಲ್ಲಿ ತಾಳುವಂತೆ ಸೈನ್ಯವು ರಣರಂಗದ ಸುತ್ತ ನಿಂತು ಆ ಭೂಮಿಯನ್ನು ತನ್ನೊಳಗೆ ತಾಳಿತು. ಭಾಗವತನು ವಿಷ್ಣುವಿನ ಪಾದಗಳಿಗೆ ತನ್ನ ಶರೀರವನ್ನು ಸೇರಿಸಿದಂತೆ, ಸೈನ್ಯದ ಧ್ವಜಾದಿಗಳು ವಿಷ್ಣು ಪದಕ್ಕೆ ಅಂಟಿಕೊಂಡವು. ಸೂರ್ಯನಂತೆ ಕಮಲ ಪುಷ್ಪಗಳನ್ನು ತಟ್ಟಿ ಕೆಂಧೂಳೆಬ್ಬಿಸುತ್ತಾ ಕೌರವ ಸೈನ್ಯವು ಯುದ್ಧರಂಗಕ್ಕೆ ಬಂದು ನಿಂತಿತು.

ಅರ್ಥ:
ಭುವನ: ಜಗತ್ತು; ಗರ್ಭ:ಹೊಟ್ಟೆ; ಮಾಧವ: ವಿಷ್ಣು; ಜಠರ: ಹೊಟ್ಟೆ; ವರ: ಶ್ರೇಷ್ಠ; ಭಾಗವತ: ಹರಿಭಕ್ತ; ಪದ: ಚರಣ; ಸಂಸಕ್ತ: ಮಗ್ನವಾದ; ತನು: ದೇಹ; ರವಿ: ಸೂರ್ಯ; ಶತಪತ್ರ: ತಾವರೆ; ಸಂಘಾತ: ಗುಂಪು; ಪಾದ: ಚರಣ; ಅಣೆ:ಹೊಡೆ, ಆವರಿಸು; ಕೆಂಧೂಳ: ಕೆಂಪಾದ ಧೂಳು; ಅವಗಡಿಸು: ಕಡೆಗಣಿಸು, ಸೋಲಿಸು; ರಣಾಂಗಣ: ಯುದ್ಧಭೂಮಿ;

ಪದವಿಂಗಡಣೆ:
ಭುವನಗರ್ಭಿತವಾದುದ್+ಆ+ ಮಾ
ಧವನ+ ಜಠರದವೋಲು +ವರ+ ಭಾ
ಗವತನಂತಿರೆ+ ವಿಷ್ಣುಪದ +ಸಂಸಕ್ತ +ತನುವಾಯ್ತು
ರವಿಯವೊಲು +ಶತಪತ್ರ+ ಸಂಘಾ
ತವನು +ಪಾದದಲ್+ಅಣೆದು +ಕೆಂಧೂಳ್
ಅವಗಡಿಸೆ +ಕುರುಸೇನೆ+ ಕೈಕೊಂಡುದು +ರಣಾಂಗಣವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭುವನಗರ್ಭಿತವಾದುದಾ ಮಾಧವನ ಜಠರದವೋಲು; ರವಿಯವೊಲು ಶತಪತ್ರ ಸಂಘಾತವನು ಪಾದದಲಣೆದು ಕೆಂಧೂಳವಗಡಿಸೆ