ಪದ್ಯ ೩೮: ಕರ್ಣನ ಸ್ಥಿತಿ ಹೇಗಾಯಿತು?

ಜೋಡು ಹರಿದುದು ಸೀಸಕದ ದಡಿ
ಬೀಡೆ ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಸದ
ಖೋಡಿ ಖೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲವಿಸುತಿರ್ದುದು ಭಾನುನಂದನನ (ಅರಣ್ಯ ಪರ್ವ, ೨೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕರ್ಣನ ಕವಚ ಕಳಚಿತು. ಶಿರಸ್ತ್ರಾಣದ ಅಡಿಯು ಬಿರುಕು ಬಿಟ್ಟಿತು. ನೆತ್ತಿಗೆ ಪೆಟ್ಟು ಬಿದ್ದು ಶಿರಸ್ತ್ರಾಣ ಜಾರಿತು. ಯುದ್ಧದ ಸೊಗಡು ಮನಸ್ಸಿಗೆ ನಾಟಿತು. ಸೋಲಿನ ಸುಳಿವು ದೊರೆಯಿತು. ಕೇಡು ಸನ್ನಿಹಿತವಾಗಿ ಧೈರ್ಯವನ್ನು ದಿಕ್ಕಾಪಾಲಾಗಿ ಓಡಿಸಿತು. ಭಯವು ಹೆಚ್ಚಿತು. ಕರ್ಣನು ಕೈಗುಂದಿದನು.

ಅರ್ಥ:
ಜೋಡು: ಕವಚ; ಹರಿ: ಸೀಳು; ಸೀಸಕ: ಶಿರಸ್ತ್ರಾಣ; ಅಡಿ: ಕೆಳಭಾಗ; ಬೀಡೆ: ಬಿರುಕು; ಬಿರಿ: ಸೀಳು; ತಲೆ: ಶಿರ; ಚಿಪ್ಪು: ತಲೆಯ ಮೇಲುಭಾಗ; ಜರಿ: ಜಾರು; ಮನ: ಮನಸ್ಸು; ಸುರಿ: ಮೇಲಿನಿಂದ ಬೀಳು; ಸೊಗಡು: ಕಂಪು, ವಾಸನೆ; ರಣ: ಯುದ್ಧ; ರಸ: ಸಾರ; ಖೋಡಿ: ದುರುಳತನ, ನೀಚತನ; ಖೊಪ್ಪರಿಸು: ಮೀರು, ಹೆಚ್ಚು; ಧೈರ್ಯ: ಕೆಚ್ಚು, ದಿಟ್ಟತನ; ನೀಡು: ಕೊಡು; ಇರಿ: ಚುಚ್ಚು; ಅಪದೆಸೆ: ಕೆಡುಕು; ವಿಟಾಳ:ಅಪವಿತ್ರತೆ, ಮಾಲಿನ್ಯ; ಖೇಡ: ಹೆದರಿದವನು; ಭುಲ್ಲವಿಸು: ಅತಿಶಯಿಸು, ಅಧಿಕಗೊಳ್ಳು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಜೋಡು +ಹರಿದುದು +ಸೀಸಕದದ್ +ಅಡಿ
ಬೀಡೆ +ಬಿರಿದುದು +ತಲೆಯ +ಚಿಪ್ಪಿನ
ಜೋಡು +ಜರಿದುದು +ಮನಕೆ +ಸುರಿದುದು +ಸೊಗಡು +ರಣರಸದ
ಖೋಡಿ +ಖೊಪ್ಪರಿಸಿದುದು +ಧೈರ್ಯವನ್
ಈಡಿರಿದುದ್+ಅಪದೆಸೆ +ವಿಟಾಳಿಸಿ
ಖೇಡತನ +ಭುಲ್ಲವಿಸುತಿರ್ದುದು +ಭಾನುನಂದನನ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಖೋಡಿ ಖೊಪ್ಪರಿಸಿದುದು; ಭುಲ್ಲವಿಸುತಿರ್ದುದು ಭಾನುನಂದನನ; ಸುರಿದುದು ಸೊಗಡು;

ಪದ್ಯ ೪೫: ಭೀಮನೇಕೆ ಉತ್ಸಾಹಗೊಂಡನು?

ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗ
ಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ
ತಳಿತುದಾಪ್ಯಾಯಾನ ಮನೋರಥ
ಫಲಿಸಿತರಸಿಯ ಹರುಷದರ್ಪಣ
ಬೆಳಗುವುದು ಮಝಬಾಪೆನುತ ಭುಲ್ಲವಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಂಗಾಳಿಯ ಆಲಿಂಗನದಿಂದ ಭೀಮನ ಮಾರ್ಗಾಯಾಸವು ಮುರಿದು ಹೋಯಿತು. ಬೆವರ ಹನಿಗಳು ಆರಿದವು. ಕೂದಲುಗಳು ಆ ತಂಪಿಗೆ ಎದ್ದು ನಿಂತವು. ಬಾಯಾರಿಕೆ ಕಡಿಮೆಯಾಗಿ ಆನಂದದ ಭಾವನೆ ಹೆಚ್ಚಿತು. ದ್ರೌಪದಿಯ ಮನೋರಥವು ಫಲಿಸಿತು ಆಕೆಯ ಹರ್ಷದ ಕನ್ನಡಿ ನಿರ್ಮಲವಾಯಿತು, ಭಲೇ ಭಲೇ ಎಂದು ಯೋಚಿಸುತ್ತಾ ಭೀಮನು ಹಿಗ್ಗಿದನು.

ಅರ್ಥ:
ಝಳ: ಪ್ರಕಾಶ, ಕಾಂತಿ; ಲಳಿ: ರಭಸ; ಲಟಕಟ: ಚಕಿತನಾಗು; ಮಾರ್ಗ: ದಾರಿ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಖೇದ: ದುಃಖ; ಸ್ವೇದ: ಬೆವರು; ಬಿಂದು: ಹನೆ; ಒಳಸರಿ: ಆವಿಯಾಗು; ರೋಮಾಳಿ: ಕೂದಲುಗಳು; ಕಾಣಿಸೆ: ತೋರು; ತೃಷೆ: ನೀರಡಿಕೆ; ದೆಸೆ: ದಿಕ್ಕು; ಮುರಿ: ಸೀಳು; ತಳಿತ: ಚಿಗುರಿದ; ಆಪ್ಯಾಯನ: ಸುಖ, ಹಿತ; ಮನೋರಥ: ಆಸೆ, ಬಯಕೆ; ಫಲಿಸಿತು: ದೊರೆತುದು; ಅರಸಿ: ರಾಣಿ; ಹರುಷ: ಸಂತಸ; ದರ್ಪಣ: ಕನ್ನಡಿ; ಬೆಳಗು: ಪ್ರಕಾಶಿಸು; ಮಝಬಾಪು: ಭಲೇ; ಭುಲ್ಲವಿಸು: ಉತ್ಸಾಹಗೊಳ್ಳು;

ಪದವಿಂಗಡಣೆ:
ಝಳದ +ಲಳಿ+ ಲಟಕಟಿಸೆ +ಮಾರ್ಗ
ಸ್ಖಲಿತ+ ಖೇದ +ಸ್ವೇದ +ಬಿಂದುಗಳ್
ಒಳಸರಿಯೆ +ರೋಮಾಳಿಕಾಣಿಸೆ +ತೃಷೆಯ +ದೆಸೆ +ಮುರಿಯೆ
ತಳಿತುದ್+ಆಪ್ಯಾಯಾನ +ಮನೋರಥ
ಫಲಿಸಿತರಸಿಯ + ಹರುಷ+ದರ್ಪಣ
ಬೆಳಗುವುದು +ಮಝಬಾಪೆನುತ+ ಭುಲ್ಲವಿಸಿದನು+ ಭೀಮ

ಅಚ್ಚರಿ:
(೧) ಆಯಾಸ ಕಡಿಮೆಯಾಯಿತೆಂದು ಹೇಳುವ ಪರಿ – ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ

ಪದ್ಯ ೬: ಕೌರವನೇಕೆ ಉತ್ಸಾಹಿಯಾಗಿದ್ದನು?

ರಾಯನನುಜನ ರುಧಿರ ಜೀವದ
ಬೀಯದಲಿ ಕರ್ಣಾತ್ಮಜನ ಕುಲಿ
ಶಾಯುಧನ ಸಾಲೋಕ್ಯದಲಿ ಕಣ್ದೆರೆದ ವೇದನೆಯ
ಆಯಸವ ನೆರೆ ಮರೆದು ಕೌರವ
ರಾಯ ಭುಲ್ಲವಿಸಿದನು ಲಹರಿಯ
ಘಾಯದಲಿ ಸೂಳೈಸಿದವು ನಿಸ್ಸಾಳಕೋಟಿಗಳು (ಕರ್ಣ ಪರ್ವ, ೨೧ ಸಂಧಿ, ೬ ಪದ್ಯ)

ತಾತ್ಪರ್ಯ:
ದುರ್ಯೋಧನನ ತಮ್ಮನ ರಕ್ತವನ್ನು ಕುಡಿದು ಪ್ರಾಣವು ಹೋಗಿತ್ತು, ಕರ್ಣನ ಮಗ ವೃಷಸೇನನು ಇಂದ್ರನ ಓಲಗಕ್ಕೆ ಹೋಗಿದ್ದನು, ಇಂತಹ ನೋವುಗಳನ್ನು ನೋಡಿದ ಮೇಲೆ ನೋವಿನ ಆಯಾಸವು ಮರೆತುಹೋದವು, ಕೌರವನು ಉತ್ಸಾಹಿಯಾಗಿ, ರಣಭೇರಿಗಳು ಮತ್ತೆ ಮತ್ತೆ ಮೊರೆದವು.

ಅರ್ಥ:
ರಾಯ: ರಾಜ; ಅನುಜ; ತಮ್ಮ; ರುಧಿರ: ರಕ್ತ; ಜೀವ: ಉಸಿರು; ಬೀಯ: ವ್ಯಯ, ಹಾಳು, ನಷ್ಟ; ಆತ್ಮಜ: ಮಗ; ಕುಲಿಶ: ವಜ್ರಾಯುಧ; ಸಾಲೋಕ್ಯ: ಒಂದೇ ಲೋಕದಲ್ಲಿರುವಿಕೆ; ಕಣ್ದೆರೆ: ನಯನಗಳನ್ನು ಅರಳಿಸು, ನೋಡು; ವೇದನೆ: ನೋವು; ಆಯಸ: ಬಳಲಿಕೆ; ನೆರೆ: ತುಂಬು ಪ್ರವಾಹ; ಮರೆ: ಜ್ಞಾಪಕದಿಂದ ದೂರ ಹೋಗು; ಭುಲ್ಲವಿಸು: ಉತ್ಸಾಹಗೊಳ್ಳು; ಲಹರಿ: ಅಲೆ, ತೆರೆ, ರಭಸ; ಘಾಯ: ಪೆಟ್ಟು; ಸೂಳೈಸು: ಮೊರೆ, ಶಬ್ದಮಾಡು; ನಿಸ್ಸಾಳ: ರಣಭೇರಿ;

ಪದವಿಂಗಡಣೆ:
ರಾಯನ್+ಅನುಜನ +ರುಧಿರ +ಜೀವದ
ಬೀಯದಲಿ+ ಕರ್ಣಾತ್ಮಜನ+ ಕುಲಿ
ಶಾಯುಧನ+ ಸಾಲೋಕ್ಯದಲಿ +ಕಣ್ದೆರೆದ+ ವೇದನೆಯ
ಆಯಸವ+ ನೆರೆ+ ಮರೆದು+ ಕೌರವ
ರಾಯ +ಭುಲ್ಲವಿಸಿದನು +ಲಹರಿಯ
ಘಾಯದಲಿ+ ಸೂಳೈಸಿದವು +ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕರ್ಣಾತ್ಮಜನ ಕುಲಿಶಾಯುಧನ ಸಾಲೋಕ್ಯದಲಿ ಕಣ್ದೆರೆದ

ಪದ್ಯ ೩೩: ಪಾಂಡವರ ಕೌರವರ ಸೈನ್ಯದ ಸ್ಥಿತಿ ಹೇಗಿತ್ತು?

ಆರಿತದು ಬೊಬ್ಬೆಯಲಿ ದುಗುಡದ
ಭಾರದಲಿ ತಲೆಗುತ್ತಿತಿವರು
ಬ್ಬಾರದಲಿ ಭುಲ್ಲವಿಸಿತವರು ವಿಘಾತಿಯಿಂದಿವರು
ಪೂರವಿಸಿದುದು ಪುಳಕದಲಿ ದೃಗು
ವಾರಿ ಪೂರದಲಿವರಖಿಳ ಪರಿ
ವಾರವಿದ್ದುದು ಕೇಳು ಜನಮೇಜಯ ಮಹೀಪಾಲ (ಕರ್ಣ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವ ಕೌರವರ ಸೈನ್ಯವು ಹಿಂದಿರುಗಿತು. ಪಾಂಡವರು ಗೆದ್ದ ಸಂತೋಷದಿಂದ ಬೊಬ್ಬೆಯಿಟ್ಟರು, ಕೌರವರು ಸೋತ ದುಃಖದಿಂದ ತಲೆತಗ್ಗಿಸಿದರು. ಜಯದ ಆರ್ಭಟೆಯಿಂದ ಅವರು ಸಂತೋಷಗೊಂಡರು. ಒದೆ ತಿಂದು ಇವರು ದುಃಖಿತರಾದರು. ಪಾಂಡವರು ವಿಜಯದಿಂದ ರೋಮಾಂಚನಗೊಂಡರು, ಇವರು ಸೋತು ಕಣ್ಣಿರಿಟ್ಟರೆಂದು ವೈಶಂಪಾಯನರು ಭಾರತದ ಕಥೆಯನ್ನು ತಿಳಿಸುತ್ತಿದ್ದರು.

ಅರ್ಥ:
ಬೊಬ್ಬೆ: ಜೋರಾದ ಶಬ್ದ; ದುಗುಡು: ದುಃಖ; ಭಾರ: ಹೊರೆ; ತಲೆ: ಶಿರ; ತಲೆಗುತ್ತು: ತಲೆ ತಗ್ಗಿಸು; ಉಬ್ಬಾರ: ಸಂಭ್ರಮ, ಹಿಗ್ಗು; ಭುಲ್ಲವಿಸು: ಉತ್ಸಾಹಗೊಳ್ಳು; ವಿಘಾತ: ನಾಶ, ಧ್ವಂಸ; ಪೂರವಿಸು: ತುಂಬು; ಪುಳಕ: ರೋಮಾಂಚನ; ದೃಗುವಾರಿ: ಕಣ್ಣೀರು; ಪೂರದ:ತುಂಬ; ಅಖಿಳ: ಎಲ್ಲಾ; ಪರಿವಾರ: ಸಂಬಂಧದವರು; ಮಹೀಪಾಲ: ರಾಜ; ಮಹೀ: ಭೂಮಿ;

ಪದವಿಂಗಡಣೆ:
ಆರಿತದು +ಬೊಬ್ಬೆಯಲಿ +ದುಗುಡದ
ಭಾರದಲಿ+ ತಲೆಗುತ್ತಿತ್+ಇವರ್
ಉಬ್ಬಾರದಲಿ +ಭುಲ್ಲವಿಸಿತ್+ಅವರು +ವಿಘಾತಿಯಿಂದ್+ಇವರು
ಪೂರವಿಸಿದುದು+ ಪುಳಕದಲಿ +ದೃಗು
ವಾರಿ +ಪೂರದಲ್+ಇವರ್+ಅಖಿಳ +ಪರಿ
ವಾರವಿದ್ದುದು +ಕೇಳು +ಜನಮೇಜಯ +ಮಹೀಪಾಲ

ಅಚ್ಚರಿ:
(೧) ದೃಗುವಾರಿ, ದುಗುಡ, ವಿಘಾತಿ – ಕೌರವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ
(೨) ಬೊಬ್ಬೆ, ಭುಲ್ಲವಿಸು, ಪೂರವಿಸು – ಪಾಂಡವರ ಸ್ಥಿತಿಯನ್ನು ವಿವರಿಸಲು ಬಳಸಿದ ಪದ