ಪದ್ಯ ೧೬: ಪಾರ್ಥನು ಹೇಗೆ ಮೋಹಗೊಂಡನು?

ಎಳೆಯ ಬೆಳದಿಂಗಳವೊಲೀಕೆಯ
ತಳತಳಿಪ ಮುಖ ಚಂದ್ರಮನ ತಂ
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
ತಿಳಿದುದೀತನ ನಿದ್ರೆ ಕರಣಾ
ವಳಿಯ ಪರಮಪ್ರೀತಿ ರಸದಲಿ
ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ (ಅರಣ್ಯ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಳೆಯ ಬೆಳದಿಂಗಳ ಕಾಂತಿಯಂತೆ ದೇಹ ಪರಿಮಳದೊಡನೆ ಊರ್ವಶಿಯ ಮುಖಚಂದ್ರನ ಕಾಂತಿಯು ಎಲ್ಲೆಡೆ ಹಬ್ಬಿತು, ಒಡನೆ ಅರ್ಜುನನ ನಿದ್ರೆ ತಿಳಿದು, ಇಂದ್ರಿಯಗಳಿಗುಂಟಾದ ಸಂತೋಷ ಸುಖದಲ್ಲಿ ಮುಳುಗಿ, ಸುಖದ ಭಾರದಿಂದ ಮೋಹಗೊಂಡನು.

ಅರ್ಥ:
ಎಳೆ: ಚಿಕ್ಕ; ಬೆಳದಿಂಗಳು: ಪೂರ್ಣಿಮೆ; ತಳತಳಿಪ: ಹೊಳೆವ; ಮುಖ: ಆನನ; ಚಂದ್ರ: ಇಂದು; ತಂಬೆಳಗು: ತಂಪಾದ ಕಾಂತಿ; ಸುಳಿ: ಕಾಣಿಸಿಕೊಳ್ಳು; ಸಾರ: ರಸ; ಪರಿಮಳ: ಸುಗಂಧ; ಪೂರ: ಪೂರ್ತಿಯಾಗಿ, ಬಹಳವಾಗಿ; ತಿಳಿ: ಅರಿ; ನಿದ್ರೆ: ಶಯನ; ಕರಣ:
ಜ್ಞಾನೇಂದ್ರಿಯ, ಕಿವಿ, ಮನಸ್ಸು; ಆವಳಿ: ಗುಂಪು, ಸಾಲು; ಪರಮ: ಶ್ರೇಷ್ಠ; ಪ್ರೀತಿ: ಒಲವು; ರಸ: ಸಾರ; ಮುಳುಗು: ತೋಯು; ಸುಖ: ಸಂತಸ್; ಭಾರ: ಹೊರೆ; ಭುಲ್ಲವಿಸು: ಅತಿಶಯಿಸು; ಕಲಿ: ಶೂರ;

ಪದವಿಂಗಡಣೆ:
ಎಳೆಯ+ ಬೆಳದಿಂಗಳವೊಲ್+ಈಕೆಯ
ತಳತಳಿಪ +ಮುಖ +ಚಂದ್ರಮನ +ತಂ
ಬೆಳಗು+ ಸುಳಿದುದು +ಸಾರತರ+ ಪರಿಮಳದ +ಪೂರದಲಿ
ತಿಳಿದುದ್+ಈತನ +ನಿದ್ರೆ +ಕರಣಾ
ವಳಿಯ +ಪರಮ+ಪ್ರೀತಿ +ರಸದಲಿ
ಮುಳುಗಿ +ಸುಖಭಾರದಲಿ+ ಭುಲ್ಲವಿಸಿದನು +ಕಲಿಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳೆಯ ಬೆಳದಿಂಗಳವೊಲೀಕೆಯ ತಳತಳಿಪ ಮುಖ ಚಂದ್ರಮನ ತಂಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
(೨) ಅತೀವ ಸುಖ ಎಂದು ಹೇಳಲು – ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ