ಪದ್ಯ ೩: ಸೈನಿಕರು ಹೇಗೆ ಘಟೋತ್ಕಚನನ್ನು ಆವರಿಸಿದರು?

ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ (ದ್ರೋಣ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಎಡಬಲ ಹಿಂದೆ ಮುಂದೆ ಉಳಿದ ದಿಕ್ಕುಗಲಲ್ಲಿ ನುಗ್ಗಿ ಮಂದರಪರ್ವತವನ್ನು ಸಮುದ್ರದ ತೆರೆಗಳು ಅಪ್ಪಳಿಸುವಮ್ತೆ ಸೈನಿಕರು ನುಗ್ಗಿದರು. ಅವರನ್ನು ದೂರಕ್ಕೆ ದಬ್ಬಿದರೆ, ಕಟ್ಟಿರುವೆಗಳು ಹಾವನ್ನು ಮುತ್ತಿಕೊಂಡಂತೆ ಬಿದ್ದ ಹೆಣಗಲನ್ನು ತುಳಿದು ಘಟೋತ್ಕಚನ ಮೇಲೆ ಹಾಯ್ದರು.

ಅರ್ಥ:
ಎಡಬಲ: ಅಕ್ಕಪಕ್ಕ; ಹಿಂದೆ: ಹಿಂಭಾಗ; ಇದಿರು: ಎದುರು; ದಿಕ್ಕು: ದಿಶ; ಔಕು: ಒತ್ತು; ಬಲು: ಬಹಳ; ಕಡಲ: ಸಾಗರ; ಗಿರಿ: ಬೆಟ್ಟ; ಅಬುಧಿ: ಸಾಗರ; ತೆರೆ: ಅಲೆ, ತರಂಗ; ಒದೆ: ತುಳಿ, ಮೆಟ್ಟು; ಕೊಡಹು: ಬೆನ್ನುಬಿಡು; ಭುಜ: ಬಾಹು; ಅಳಿಸು: ನಾಶ; ಅಡಸು: ಆಕ್ರಮಿಸು, ಮುತ್ತು; ತಲೆ: ಶಿರ; ಬೀಳು: ಬಾಗು; ಹೆಣ: ಜೀವವಿಲ್ಲದ ಶರೀರ; ಇರುಹೆ: ಇರುವೆ;

ಪದವಿಂಗಡಣೆ:
ಎಡಬಲದಿ +ಹಿಂದ್+ಇದಿರಿನಲಿ +ಕೆಲ
ಕಡೆಯ +ದಿಕ್ಕಿನೊಳ್+ಔಕಿದರು +ಬಲು
ಕಡಲ+ ಕಡೆಹದ +ಹಿರಿಯನ್+ಅಬುಧಿಯ +ತೆರೆಗಳ್+ಒದೆವಂತೆ
ಕೊಡಹಿದರೆ+ ಕಟ್ಟಿರುಹೆಗಳು +ಬೆಂ
ಬಿಡದೆ +ಭುಜಗನನ್+ಅಳಿಸುವವೋಲ್
ಅಡಸಿ +ತಲೆಯೊತ್ತಿದರು +ಬೀಳುವ +ಹೆಣನ್+ಒಡಮೆಟ್ಟಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲುಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ; ಕಟ್ಟಿರುಹೆಗಳು ಬೆಂಬಿಡದೆ ಭುಜಗನನಳಿಸುವವೋಲ್

ಪದ್ಯ ೬೦: ಇಂದ್ರನು ಅರ್ಜುನನ ಬಗ್ಗೆ ಏನು ಹೇಳಿದನು?

ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ
ಕಲಿ ಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗಸುರನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು (ವಿರಾಟ ಪರ್ವ, ೯ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೀಷ್ಮಾರ್ಜುನರ ಯುದ್ಧವನ್ನು ನೋಡುತ್ತಿದ್ದ ಇಂದ್ರನು ಬೆರಳನ್ನು ಅಲುಗಾಡಿಸುತ್ತಾ, ಅರ್ಜುನನ ದಿವ್ಯ ಶರಗಳ ಹೊಡೆತಕ್ಕೆ ಭೀಷ್ಮನಲ್ಲದೆ ಇನ್ನಾರು ಇದಿರಾಗಿ ನಿಲ್ಲಬಲ್ಲರು? ಭೀಷ್ಮನ ಆಕ್ರಮಣಕ್ಕೆ ಮನುಷ್ಯ, ದೇವ, ಸರ್ಪಗಣಗಳಲ್ಲಿ ಇದಿರಾಗಿ ನಿಲ್ಲಬಲ್ಲವರು ಅರ್ಜುನನಲ್ಲದೆ ಇನ್ನಾರಿದ್ದಾರೆ ಎಂದನು.

ಅರ್ಥ:
ಮಲೆತ: ಕೊಬ್ಬಿದ; ನಿಲು: ನಿಂತು, ನಿಲ್ಲು; ಕೆಲರು: ಕೆಲವರು; ದಿವ್ಯ: ಶ್ರೇಷ್ಠ; ಬಾಣಾವಳಿ: ಬಾಣಗಳ ಸಾಲು; ಬಾಣ: ಶರ; ಆವಳಿ: ಸಾಲು; ಗಾರಾಗಾರಿ: ಜೋರು, ಭಯಂಕರ; ಇದಿರು: ಎದುರು; ಉರವಣೆ: ಆಧಿಕ್ಯ, ಆತುರ, ಅವಸರ; ಕಲಿ: ಶೂರ; ನಿಲು: ನಿಲ್ಲು; ಭುಜಗ: ಹಾವು; ಸುರ: ದೇವತೆ; ನರ: ಮನುಷ; ಕೆಲರು: ಸ್ವಲ್ಪ; ನುಡಿ: ಮಾತಾಡು; ಇಂದ್ರ: ಶಕ್ರ; ಬೆರಳು: ಅಂಗುಲಿ; ಒಲೆ: ತೂಗಾಡು;

ಪದವಿಂಗಡಣೆ:
ಮಲೆತು +ನಿಲುವೊಡೆ +ಭೀಷ್ಮನಲ್ಲದೆ
ಕೆಲರು+ ಪಾರ್ಥನ+ ದಿವ್ಯ+ ಬಾಣಾ
ವಳಿಯ+ ಗಾರಾಗಾರಿಗ್+ಇದಿರೇ+ ಭೀಷ್ಮನ+ಉರವಣೆಗೆ
ಕಲಿ +ಧನಂಜಯನ್+ಅಲ್ಲದ್+ಇದಿರಲಿ
ನಿಲುವರುಂಟೇ +ಭುಜಗ+ಸುರ+ನರ
ರೊಳಗೆ +ಕೆಲರೆಂದ್+ಇಂದ್ರ +ನುಡಿದನು+ ಬೆರಳನ್+ಒಲೆದೊಲೆದು

ಅಚ್ಚರಿ:
(೧) ಮೂರುಲೋಕದಲ್ಲಿ ಎಂದು ಹೇಳಲು – ಭುಜಗ ಸುರ ನರ ರೊಳಗೆ

ಪದ್ಯ ೭: ಅರ್ಜುನನು ಹೇಗೆ ಕೋಪಗೊಂಡನು?

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
ಉಸುರುಗಳ ಕರ್ಬೊಗೆಗಳಾಲಿಯ
ಬಿಸುಗುದಿಯ ಬಲುಕೆಂಡವಂಬಿನ
ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ ಖತಿಗೊಂಡ (ಅರಣ್ಯ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ನಿಮ್ಮವನಾದ ಅರ್ಜುನನು ಆಗ ತಿವಿದೆಬ್ಬಿಸಿದ ಹುಲಿಯೋ, ಗಾಯಗೊಂಡ ಹಂದಿಯೋ, ಹಸಿದ ನಾಗರಹಾವೋ, ಕಾಯಿಸಿದ ಉಕ್ಕಿನ ಕೂರ್ಪೋ ಎಂಬಂತೆ ರೋಷಗೊಂಡನು. ಅವನ ಉಸಿರು ಕರಿಹೊಗೆಯಂತಿತ್ತು. ಕಣ್ಣಿನ ಕೆಂಪು ಕೆಂಡದಂತಿತ್ತು. ಅವನು ತೆಗೆದ ಬಾಣವು ಉರಿಯಂತಿತ್ತು.

ಅರ್ಥ:
ಮಸಗು: ಹರಡು; ಕೆರಳು; ಎಬ್ಬಿಸು: ಎಚ್ಚರಗೊಳಿಸು; ಹುಲಿ: ವ್ಯಾಘ್ರ; ನೊಂದ: ಪೆಟ್ಟಾದ; ಹಂದಿ: ಸೂಕರ; ಹಸಿ: ಆಹಾರವನ್ನು ಬಯಸು, ಹಸಿವಾಗು; ಭುಜಗ: ಹಾವು; ಕಾದ: ಬಿಸಿಯಾದ; ಉಕ್ಕು: ಹದಮಾಡಿದ ಕಬ್ಬಿಣ, ಆಯುಧ; ಛಡಾಳ: ಹೆಚ್ಚಳ, ಆಧಿಕ್ಯ; ಉಸುರು: ಪ್ರಾಣ, ಗಾಳಿ; ಕರ್ಬೊಗೆ: ಕರಿಹೊಗೆ; ಆಲಿ: ಕಣ್ಣು; ಬಿಸು: ಸೇರಿಸು; ಕುದಿ: ಶಾಖದಿಂದ ಉಕ್ಕು, ಕೋಪಗೊಳ್ಳು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಅಂಬು: ಬಾಣ; ಹೊಸ: ನವೀನ; ಮಸೆ: ಹರಿತವಾದುದು, ಚೂಪಾದುದು; ಉರಿ: ಜ್ವಾಲೆ; ಝಾಡಿ: ಕಾಂತಿ; ಝಳ: ತಾಪ; ಖತಿ: ಕೋಪ;

ಪದವಿಂಗಡಣೆ:
ಮಸಗಿದನು +ನಿಮ್ಮಾತನ್+ಉಗಿದ್
ಎಬ್ಬಿಸಿದ +ಹುಲಿಯೋ +ನೊಂದ +ಹಂದಿಯೊ
ಹಸಿದ +ಭುಜಗನೊ+ ಕಾದಕಟ್+ಉಕ್ಕಿನ +ಛಡಾಳಿಕೆಯೊ
ಉಸುರುಗಳ+ ಕರ್ಬೊಗೆಗಳ್+ಆಲಿಯ
ಬಿಸು+ಕುದಿಯ +ಬಲು+ಕೆಂಡವ್+ಅಂಬಿನ
ಹೊಸಮಸೆಗಳ್+ಉರಿ +ಝಾಡಿ +ಝಳುಪಿಸೆ+ ಪಾರ್ಥ +ಖತಿಗೊಂಡ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಎಬ್ಬಿಸಿದ ಹುಲಿಯೋ ನೊಂದ ಹಂದಿಯೊ
ಹಸಿದ ಭುಜಗನೊ ಕಾದಕಟ್ಟುಕ್ಕಿನ ಛಡಾಳಿಕೆಯೊ
(೨) ಕೋಪವನ್ನು ವಿವರಿಸುವ ಪರಿ – ಉಸುರುಗಳ ಕರ್ಬೊಗೆಗಳಾಲಿಯ ಬಿಸುಗುದಿಯ ಬಲುಕೆಂಡವಂಬಿನ ಹೊಸಮಸೆಗಳುರಿ ಝಾಡಿ ಝಳುಪಿಸೆ ಪಾರ್ಥ