ಪದ್ಯ ೪: ಬಾಣಗಳ ಸದ್ದು ಹೇಗಿತ್ತು?

ಇಳೆಯೊಳದುಭುತವಿದು ಕೃತಾಂತನ
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ಆಚಾರ್ಯನಂಬುಗಳೋ ಮಹಾದೇವ
ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ
ಛಿಳಿಛಿಟಿಲು ಭೋರೆಂಬ ಖಣಿಖಟಿ
ಖಳಿಲು ಖಳಿಲೆಂಬಂಬುಗಳ ದನಿ ತುಂಬಿತಂಬರವ (ದ್ರೋಣ ಪರ್ವ, ೧೮ ಸಂಧಿ, ೪ ಪದ್ಯ)

ತಾತ್ಪರ್ಯ:
ಯಮನ ಬೆಳೆ ಬಂದ ಗದ್ದೆಯನ್ನು ಮುತ್ತಿದ ಗಿಳಿಗಳೋ ದ್ರೋಣನ ಬಾಣಗಳೋ ಎಂದು ಹೇಳಲಾಗದು. ನಿಳಿ, ನಿಟಿಲು, ಭುಗಿಲ್, ಛಿಳಿ ಛಿಳಿ, ಛಿಟಿಲು, ಭೋರ್, ಖಣಿ ಖಟಿಲು ಖಳಿಲೆಂಬ ಬಾಣಗಳ ಸದ್ದು ಆಕಾಶದಲ್ಲೆಲ್ಲಾ ತುಂಬಿ ಮಹಾದ್ಭುತವನ್ನು ಮೂಡಿಸಿತು.

ಅರ್ಥ:
ಇಳೆ: ಭೂಮಿ; ಅದುಭುತ: ಆಶ್ಚರ್ಯ; ಕೃತಾಂತ: ಯಮ; ಫಲಿತ: ಹಣ್ಣಾದ; ಶಾಳೀವನ: ಬತ್ತದ ಗದ್ದೆ; ಮುತ್ತು: ಆವರಿಸು; ಗಿಳಿ: ಶುಕ; ಆಚಾರ್ಯ: ಗುರು; ಅಂಬು: ಬಾಣ; ಮಹಾದೇವ: ಶಿವ; ಅಂಬು: ಬಾಣ; ದನಿ: ಧ್ವನಿ, ಸದ್ದು; ತುಂಬು: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಇಳೆಯೊಳ್+ಅದುಭುತವ್+ಇದು +ಕೃತಾಂತನ
ಫಲಿತ +ಶಾಳೀವನವ+ ಮುತ್ತಿದ
ಗಿಳಿಗಳೋ +ಆಚಾರ್ಯನ್+ಅಂಬುಗಳೋ +ಮಹಾದೇವ
ನಿಳಿನಿಳಿಲು +ಭುಗಿಲೆಂಬ +ಛಿಳಿ+ಛಿಳಿ
ಛಿಳಿ+ಛಿಟಿಲು +ಭೋರೆಂಬ +ಖಣಿ+ಖಟಿ
ಖಳಿಲು +ಖಳಿಲೆಂಬ್+ಅಂಬುಗಳ +ದನಿ +ತುಂಬಿತ್+ಅಂಬರವ

ಅಚ್ಚರಿ:
(೧) ಬಾಣಗಳ ಶಬ್ದವನ್ನು ವಿವರಿಸುವ ಪದಗಳು – ನಿಳಿನಿಳಿ, ಭುಗಿಲ್, ಛಿಳಿಛಿಳಿ, ಛಿಳಿಛಿಟಿಲು, ಭೋರ್, ಖಣಿಖಟಿ, ಖಳಿಲು, ಖಳಿ

ಪದ್ಯ ೩೯: ದ್ರೌಪದಿಯು ಏನು ಯೋಚಿಸುತ್ತಾ ಭೀಮನ ಬಳಿ ಬಂದಳು?

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ
ತಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ (ವಿರಾಟ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಯೋಚಿಸುತ್ತಾ ಮುಂದೆ ನಡೆದಳು, ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇ? ಅಥವಾ ಒಬ್ಬಳೇ ಏಕೆ ಬಂದೆ? ಮುಖವೇಕೆ ಕುಂದಿದೆ? ಸಮಾಧಾನ ಮಾಡುವನೇ? ನಾನು ಬಂದದ್ದು ಯಾರಿಗಾದರೂ ತಿಳಿದರೆ? ಎಂದು ಯೋಚಿಸಿದ ದ್ರೌಪದಿಯು ಎಬ್ಬಿಸಿ ನೋಡುವ ಎಂದು ನಿಶ್ಚಯಿಸಿ ಭೀಮನ ಬಳಿ ಬಂದಳು.

ಅರ್ಥ:
ಎಬ್ಬಿಸು: ಎಚ್ಚರಗೊಳಿಸು; ಭುಗಿಲ್: ಕೂಡಲೆ, ಒಂದು ಅನುಕರಣ ಶಬ್ದ; ಮೇಣ್: ಅಥವ; ಬಂದೆ: ಆಗಮಿಸು; ಮೋರೆ: ಮುಖ; ಮಬ್ಬು: ನಸುಗತ್ತಲೆ, ಮಸುಕು; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ; ತಬ್ಬು: ಅಪ್ಪುಗೆ, ಆಲಿಂಗನ; ನಿಬ್ಬರ: ಅತಿಶಯ, ಹೆಚ್ಚಳ; ಜನ: ಮನುಷ್ಯ; ಮನ: ಮನಸ್ಸು; ನೋಡು: ವೀಕ್ಷಿಸು; ಸಾರು: ಹತ್ತಿರಕ್ಕೆ ಬರು, ಸಮೀಪಿಸು; ವಲ್ಲಭ: ಗಂಡ, ಪತಿ;

ಪದವಿಂಗಡಣೆ:
ಎಬ್ಬಿಸಲು+ ಭುಗಿಲ್+ಎಂಬನೋ +ಮೇಣ್
ಒಬ್ಬಳೇತಕೆ +ಬಂದೆ +ಮೋರೆಯ
ಮಬ್ಬಿದೇನ್+ಎಂದೆನ್ನ+ ಸಂತೈಸುವನೊ +ಸಾಮದಲಿ
ತಬ್ಬುವುದೊ+ ತಾ +ಬಂದ +ಬರವಿದು
ನಿಬ್ಬರವಲಾ+ ಜನದ+ ಮನಕಿನ್
ಎಬ್ಬಿಸಿಯೆ +ನೋಡುವೆನ್+ಎನುತ +ಸಾರಿದಳು +ವಲ್ಲಭನ

ಅಚ್ಚರಿ:
(೧) ಎಬ್ಬಿಸು – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರಶ್ನೆಗಳು – ಎಬ್ಬಿಸಲು ಭುಗಿಲೆಂಬನೋ, ಒಬ್ಬಳೇತಕೆ ಬಂದೆ, ಮೋರೆಯ ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ