ಪದ್ಯ ೩೯: ಕೌರವರನ್ನು ಕೊಲ್ಲಿಸಲು ಯಾರು ಉಪಾಯ ಮಾಡಿದರೆಂದು ಕೌರವನು ಹೇಳಿದನು?

ಬಣಗುಗಳು ಭೀಮಾರ್ಜುನರು ಕಾ
ರಣಿಕ ನೀ ನಡುವಾಯಿ ಧರ್ಮದ
ಕಣಿ ಯುಧಿಷ್ಠಿರನೆತ್ತಬಲ್ಲನು ನಿನ್ನ ಮಾಯೆಗಳ
ಸೆಣಸನಿಕ್ಕಿದೆ ನಮ್ಮೊಳಗೆ ಧಾ
ರುಣಿಯ ಭಾರವ ಬಿಡಿಸಲೋಸುಗ
ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆಯೆಂದ (ಗದಾ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಭೀಮಾರ್ಜುನರಾದರೋ ಅಲ್ಪ ವ್ಯಕ್ತಿಗಳು, ನೀನು ನಡುವೆ ಮಾತಾಡಿ ನಮ್ಮಲಿ ವೈರವನ್ನು ಬಿತ್ತಿಸಿದೆ. ಧರ್ಮದ ಗಣಿಯಾದ ಯುಧಿಷ್ಠಿರನಿಗೆ ನಿನ್ನ ಮೋಸವೇನು ತಿಳಿದುದು? ಭೂಮಿಯ ಭಾರವನ್ನು ಕಳೆಯಲು ನಮ್ಮಲ್ಲಿ ಯುದ್ಧವನ್ನು ಮಾಡಿಸಿ ನಮ್ಮನ್ನು ಬೇಟೆಯಾಡಿಸಿದೆ ಎಂದು ದುರ್ಯೋಧನನು ಕೃಷ್ಣನನ್ನು ಜರೆದನು.

ಅರ್ಥ:
ಬಣಗು: ಕೀಳು, ಅಲ್ಪ; ಕಾರಣಿಕ: ಅವತಾರ ಪುರುಷ, ವಿಮರ್ಶಕ; ನಡುವಾಯಿ: ಮಧ್ಯ ಮಾತಾಡು; ಕಣಿ: ಗಣಿ, ಆಕರ, ನೆಲೆ; ಬಲ್ಲನು: ತಿಳಿದನು; ಮಾಯೆ: ಗಾರುಡಿ; ಸೆಣಸು: ಹೋರಾಡು; ಧಾರುಣಿ: ಭೂಮಿ; ಭಾರ: ಹೊರೆ; ಬಿಡಿಸು: ಕಳಚು, ಸಡಿಲಿಸು; ಓಸುಗ: ಓಸ್ಕರ; ರಣ: ಯುದ್ಧ; ಹೊತ್ತಿಸು: ಹಚ್ಚು; ಬೇಂಟೆ: ಬೇಟೆ, ಕೊಲ್ಲು;

ಪದವಿಂಗಡಣೆ:
ಬಣಗುಗಳು +ಭೀಮಾರ್ಜುನರು +ಕಾ
ರಣಿಕ +ನೀ +ನಡುವಾಯಿ +ಧರ್ಮದ
ಕಣಿ +ಯುಧಿಷ್ಠಿರನ್+ಎತ್ತಬಲ್ಲನು+ ನಿನ್ನ+ ಮಾಯೆಗಳ
ಸೆಣಸನಿಕ್ಕಿದೆ +ನಮ್ಮೊಳಗೆ+ ಧಾ
ರುಣಿಯ +ಭಾರವ+ ಬಿಡಿಸಲೋಸುಗ
ರಣವ +ಹೊತ್ತಿಸಿ+ ನಮ್ಮ +ಬೇಂಟೆಯನ್+ಆಡಿಸಿದೆಯೆಂದ

ಅಚ್ಚರಿ:
(೧) ಯುಧಿಷ್ಠಿರನನ್ನು ಹೊಗಳುವ ಪರಿ – ಧರ್ಮದ ಕಣಿ
(೨) ಯುದ್ಧವನ್ನು ಮಾಡಿಸಿದ ಕಾರಣ – ಧಾರುಣಿಯ ಭಾರವ ಬಿಡಿಸಲೋಸುಗ ರಣವ ಹೊತ್ತಿಸಿ ನಮ್ಮ ಬೇಂಟೆಯನಾಡಿಸಿದೆ

ಪದ್ಯ ೪೪: ಅಭಿಮನ್ಯುವು ದುಶ್ಯಾಸನನಿಗೆ ಹೇಗೆ ಉತ್ತರಿಸಿದನು?

ಕೊಳಚಿ ನೀರೊಳಗಾಳುತೇಳುತ
ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ (ದ್ರೋಣ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ಕೊಳಚೆ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಸಮುದ್ರವೇನು ಮಹಾ! ಕಾಲಿನಲ್ಲಿ ದಾಟುವ ಹೊಳೆ ಎಂದು ಮಾತನಾಡುವ ಭಂಡರ ಮೇಲೆ ಸಿಟ್ಟಾಗಿ ಏನು ಪ್ರಯೋಜನ. ಎಲವೋ ಹುಚ್ಚಾ, ಮೊದಲು ನಮ್ಮನ್ನು ಗೆದ್ದು ಆಮೇಲೆ ಭೀಮಾರ್ಜುನರ ಮಾತಾದು. ನಿನ್ನ ದೇಹವನ್ನು ಈಗಲೇ ಸೀಳಿ ನಿನ್ನ ತಿಳಿರಕ್ತದಿಂದ ನನ್ನ ತಾಯಿಯ ತುರುಬನ್ನು ತೋಯಿಸಿ ಕಟ್ಟುತ್ತೇನೆ ಎಂದು ಗುಡುಗಿದನು.

ಅರ್ಥ:
ಕೊಳಚೆ: ಗಲೀಜು; ನೀರು: ಜಲ; ಆಳುತೇಳು: ಮುಳುಗುತ್ತಾ, ತೇಲುತ್ತಾ; ಜಲಧಿ: ಸಾಗರ; ಕಾಲ್ವೊಳೆ: ಕಾಲಿನಲ್ಲಿ ದಾಟುವ ಹೊಳೆ; ಭಂಡ: ಮೂಢ; ಮುಳಿ: ಸಿಟ್ಟು, ಕೋಪ; ಮೊದಲು: ಆದಿ; ಗೆಲಿದು: ಜಯಿಸು; ಬಳಿಕ: ನಂತರ; ಬಯಸು: ಇಚ್ಛೆಪಡು; ಮರುಳ: ಮೂಢ; ಒಡಲು: ದೇಹ; ಸೀಳು: ಚೂರು, ತುಂಡು; ತಿಳಿ: ಶುದ್ಧವಾಗು, ಪ್ರಕಾಶಿಸು; ರಕುತ: ನೆತ್ತರು; ತಾಯಿ: ಮಾತೆ; ತುರುಬು: ಕೂದಲಿನ ಗಂಟು, ಮುಡಿ; ನಾದಿಸು: ಹದಮಾಡು, ಕಟ್ಟು;

ಪದವಿಂಗಡಣೆ:
ಕೊಳಚಿ+ ನೀರೊಳಗ್+ಆಳುತ್+ಏಳುತ
ಜಲಧಿ +ಕಾಲ್ವೊಳೆಯೆಂಬ+ ಭಂಡರ
ಮುಳಿದು +ಮಾಡುವುದೇನು+ ಮೊದಲಲಿ +ನಮ್ಮ +ನೀ +ಗೆಲಿದು
ಬಳಿಕ +ಭೀಮಾರ್ಜುನರ +ಬಯಸುವುದ್
ಎಲೆ+ ಮರುಳೆ+ ನಿನ್ನೊಡಲ +ಸೀಳಿಯೆ
ತಿಳಿರಕುತದಲಿ +ತಾಯ +ತುರುಬನು +ನಾದಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೊಳಚಿ ನೀರೊಳಗಾಳುತೇಳುತ ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು

ಪದ್ಯ ೨೧: ದ್ರೋಣನು ಯುದ್ಧಕ್ಕೆ ಯಾರನ್ನು ಬರಹೇಳಿದನು?

ಮೇಳವದಲೆನ್ನಾನೆಗಳ ಬರ
ಹೇಳು ಸುಭಟರೊಳಗ್ಗಳರ ಬರ
ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು
ಲೋಲುಪತೆಯವನಿಯಲಿಹರೆ ಬರ
ಹೇಳು ಯಮನಂದನನಿಂದಿನ
ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ (ದ್ರೋಣ ಪರ್ವ, ೪ ಸಂಧಿ, ೨೧ ಪದ್ಯ
)

ತಾತ್ಪರ್ಯ:
ದ್ರೋಣನು ಭಟ್ಟರನ್ನು ಕರೆದು, ನನ್ನ ಪರಾಕ್ರಮಿಳನ್ನು ಯುದ್ಧಕ್ಕೆ ಬರಲು ಹೇಳು, ವೀರರಲ್ಲಿ ಮಹಾವೀರರೆಂದು ಗರ್ವದಿಂದ ಬೀಗುವ ಭೀಮಾರ್ಜುನರನ್ನು ಯುದ್ಧಕ್ಕೆ ಬರಹೇಳು, ಭೂಮಿಯನ್ನಾಳುವ ಬಯಕೆಯಿದ್ದರೆ ಇಂದಿನ ಯುದ್ಧಕ್ಕೆ ಬಾ ಎಂದು ಧರ್ಮಜನನ್ನು ಬರಹೇಳು ಎಂದು ದ್ರೋಣನು ತಿಳಿಸಿದನು.

ಅರ್ಥ:
ಮೇಳ: ಗುಂಪು; ಆನೆ: ಗಜ, ಪರಾಕ್ರಮಿ; ಬರಹೇಳು: ಆಗಮಿಸು; ಸುಭಟ: ಪರಾಕ್ರಮಿ; ಅಗ್ಗ: ಶ್ರೇಷ್ಠ; ಬಿಂಕ: ಗರ್ವ, ಜಂಬ; ಮೆರೆ: ಹೊಳೆ, ಪ್ರಕಾಶಿಸು, ಒಪ್ಪು; ಲೋಲುಪ: ಅತಿಯಾಸೆಯುಳ್ಳವನು; ಅವನಿ: ಭೂಮಿ; ಇಹರು: ಇರುವ, ಜೀವಿಸು; ನಂದನ: ಮಗ; ಯಮ: ಕಾಲ; ಕಾಳೆಗ: ಯುದ್ಧ; ಭಟ್ಟ: ಸೈನಿಕ; ಅಟ್ಟು: ಹಿಂಬಾಲಿಸು;

ಪದವಿಂಗಡಣೆ:
ಮೇಳವದಲ್+ಎನ್ನಾನೆಗಳ +ಬರ
ಹೇಳು+ ಸುಭಟರೊಳ್+ಅಗ್ಗಳರ +ಬರ
ಹೇಳು +ಬಿಂಕಕೆ +ಮೆರೆವ +ಭೀಮಾರ್ಜುನರ +ಬರಹೇಳು
ಲೋಲುಪತೆ+ಅವನಿಯಲ್+ಇಹರೆ +ಬರ
ಹೇಳು +ಯಮನಂದನನ್+ಇಂದಿನ
ಕಾಳೆಗಕ್ಕೆಂದಿತ್ತ +ಭಟ್ಟರನ್+ಅಟ್ಟಿದನು +ದ್ರೋಣ

ಅಚ್ಚರಿ:
(೧) ಸುಭಟ, ಎನ್ನಾನೆ – ಸಾಮ್ಯಾರ್ಥಪದ

ಪದ್ಯ ೪೨: ಯಾರನ್ನು ಸೇವಕನಾಗಿರಿಸುವೆ ಎಂದು ಭೀಷ್ಮನು ಹೇಳಿದನು?

ಕೇಳಿದೆವು ಹಿಂದಾದ ಖೇಚರ
ರೂಳಿಗವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ (ಅರಣ್ಯ ಪರ್ವ, ೨೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಷ್ಮನು ದುರ್ಯೋಧನನ ಮಾತನ್ನು ಕೇಳಿ ಆತನನ್ನು ಸಂತೈಸಲೆಂದು, ನೀನು ಗಂಧರ್ವರಿಗೆ ಸೋತುದನ್ನು ಅರ್ಜುನನು ನಿಮ್ಮನ್ನು ಬಿಡಿಸಿಕೊಂಡು ಬಂದುದನ್ನು ನಿನಗೆ ಅದರಿಂದಾದ ಅಪಮಾನವನ್ನು ಕೇಳಿದ್ದೇನೆ. ನೀನು ನಿರಶನವನ್ನು ಬಿಟ್ಟೇಳು. ಭೀಮಾರ್ಜುನರನ್ನು ಕರೆಸಿ ನಿನಗೆ ಆಳುಗಳಾಗಿರುವಂತೆ ನೇಮಿಸುತ್ತೇನೆ ಎಂದನು.

ಅರ್ಥ:
ಕೇಳು: ಆಲಿಸು; ಹಿಂದೆ: ಪೂರ್ವ; ಖೇಚರ: ಗಂಧರ್ವರು; ಊಳಿಗ: ಕೆಲಸ, ಕಾರ್ಯ; ಅಡಹಾಯ್ದು: ಇದಿರಿಸು, ಅಡ್ಡಬರು; ಓಲಯಿಸು: ಉಪಚರಿಸು; ಪರಿಭವ: ಸೋಲು; ತಾಳು: ಸೈರಿಸು; ಕರೆಸು: ಬರೆಮಾಡು; ಆಳು: ಸೇವಕ; ನಡೆಸು: ಚಲಿಸು, ನಡಗೆ, ಆಚರಿಸು;

ಪದವಿಂಗಡಣೆ:
ಕೇಳಿದೆವು +ಹಿಂದಾದ +ಖೇಚರರ್
ಊಳಿಗವನ್+ಅಡಹಾಯ್ದು +ನಿಮ್ಮುವನ್
ಓಲಯಿಸಿದ್+ಅಂದವನು +ನಿನಗ್+ಅದರಿಂದ +ಪರಿಭವವ
ತಾಳದಂತಿರಲ್+ಅವರ +ಕರೆಸುವೆವ್
ಏಳು +ಭೀಮಾರ್ಜುನರ +ನಿನಗಿನ್
ಆಳು +ಕೆಲಸದೊಳಿರಿಸಿ+ ನಡೆಸುವೆವ್+ಎಂದನಾ+ ಭೀಷ್ಮ

ಅಚ್ಚರಿ:
(೧) ಭೀಷ್ಮರ ಓಲೈಸುವ ಪ್ರಕ್ರಿಯೆ – ಆಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ

ಪದ್ಯ ೧೯: ಶಕುನಿಯು ಭೀಮಾರ್ಜುನರಿಗೆ ಏನು ಹೇಳಿದ?

ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನೆ ಮಾರಿದನಲಾ ಕೌರವೇಂದ್ರನಿಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಜರಿದು ಸೌಬಲನ (ಸಭಾ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಧನಂಜಯನನ್ನು ಒಡ್ಡಿದ ಮೇಲೆ ಶಕುನಿಯು ಅರ್ಜುನನಿಗೆ, ಎಲೈ ಅರ್ಜುನ ನಿಮ್ಮ ಅಣ್ಣನು ನಿನ್ನನ್ನು ಪಣವಾಗಿ ಒಡ್ಡಿದ್ದಾನೆ. ಅವನು ಸೋತರೆ ನಿನ್ನನ್ನು ಕೌರವನಿಗೆ ಮಾರಿದ ಹಾಗೆ, ಇದನ್ನು ತಿಳಿದು ನೀವು ಭೀಮಾರ್ಜುನರು ಜೀವವನ್ನು ಗಟ್ಟಿಮಾಡಿಕೊಳ್ಳಿ ಎನ್ನಲು, ಅವರಿಬ್ಬರು ಶಕುನಿಯನ್ನು ಬೈದರು.

ಅರ್ಥ:
ಒಡ್ಡು: ನೀಡು,ಜೂಜಿನಲ್ಲಿ ಒಡ್ಡುವ ಹಣ; ಛಲಿ: ಹಟವುಳ್ಳವನು; ಸೋಲು: ಪರಾಭವ; ಬಳಿಕ: ನಂತರ; ಮಾರು: ಹರಾಜು; ತಿಳಿ: ಅರಿ; ಬಲಿ: ಗಟ್ಟಿ; ಖತಿ: ಕೋಪ; ಮುಳಿ: ಸಿಟ್ಟು, ಕೋಪ; ಬೈದರು: ಜರಿದರು; ಜರಿ:ನಿಂದಿಸು; ಸೌಬಲ: ಶಕುನಿ;

ಪದವಿಂಗಡಣೆ:
ಎಲೆ +ಧನಂಜಯ+ ನಿನ್ನನ್+ಒಡ್ಡಿದ
ಛಲಿ+ ಯುಧಿಷ್ಠಿರನ್+ಇಲ್ಲಿ +ಸೋತರೆ
ಬಳಿಕ+ ನಿನ್ನನೆ+ ಮಾರಿದನಲಾ+ ಕೌರವೇಂದ್ರನಿಗೆ
ತಿಳಿದು +ಭೀಮಾರ್ಜುನರು +ನೀವ್ +ನಿ
ಮ್ಮೊಳಗೆ+ ಬಲಿದಿಹುದ್+ಎನಲು +ಖತಿಯಲಿ
ಮುಳಿದು +ಬೈದರು +ಭೀಮ +ಪಾರ್ಥರು +ಜರಿದು +ಸೌಬಲನ

ಅಚ್ಚರಿ:
(೧) ಧನಂಜಯ, ಪಾರ್ಥ, ಅರ್ಜುನ – ಸಮನಾರ್ಥಕ ಪದ

ಪದ್ಯ ೫೬: ದುರ್ಯೋಧನನು ಏನು ಹೇಳಿ ಹೊರಟನು?

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ (ಸಭಾ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆ ತಾಯಿಯನ್ನು ಭಾವುಕವಾಗಿ ತನ್ನ ಬಳಿ ಸಳೆಯಲು ತನ್ನ ಮಾತನ್ನು ಮುಂದುವರಿಸುತ್ತಾ, ನನ್ನ ಮಾತು ನಿಮಗೆ ಹಿತವೆನಿಸುತ್ತಿಲ್ಲ, ನನ್ನನ್ನೇಕೆ ಸುಮ್ಮನೆ ಇಲ್ಲಿಗೆ ಕರೆಸಿದಿರಿ? ಅಪ್ಪ, ನಿಮ್ಮವರಾದ ಭೀಮಾರ್ಜುನರೊಡನೆ ಈ ಭೂಮಿಯನ್ನು ನೀವೇ ಆಳಿರಿ, ಅಮ್ಮಾ, ಧರ್ಮಜನು ನ್ಯಾಯಮಾರ್ಗದಲ್ಲಿ ಸುಶಿಕ್ಷಿತನು, ನಿಮ್ಮ ಮಕ್ಕಳಾದ ನಾವು ಅಧರ್ಮದವರು, ಧರ್ಮದಿಂದ ದೂರವುಳಿದವರು, ಅವರೊಂದಿಗೆ ನೀವು ಈ ಭೂಮಿಯನ್ನು ಆಳಿರಿ, ನಮಗೆ ತೆರಳಲು ಅಪ್ಪಣೆ ನೀಡಿ ಎಂದು ಹೇಳಿ ತೆರಳಿದನು.

ಅರ್ಥ:
ಮಾತು: ವಾಣಿ; ಸೊಗಸು: ಚೆಂದ; ವೃಥ: ಸುಮ್ಮನೆ; ಕರೆಸು: ಬರೆಮಾಡು; ಸಹಿತ: ಜೊತೆ; ಮಹೀತಳ: ಭೂಮಿ; ತಾತ: ತಂದೆ; ಆಳು: ಅಧಿಕಾರ ನಡೆಸು; ತಾಯಿ: ಮಾತೆ; ಸುನೀತ: ಒಳ್ಳೆಯ ನಡತೆ; ವಿಘಾತ: ಕೇಡು, ಹಾನಿ; ಕಳುಹು: ಕಳಿಸು, ಬೀಳ್ಕೊಡು; ಹೊರವಂಟ: ತೆರಳು;

ಪದವಿಂಗಡಣೆ:
ಮಾತು+ ಸೊಗಸದಲಾ+ ವೃಥಾ +ನೀ
ವೇತಕ್+ಎನ್ನನು +ಕರೆಸಿದಿರಿ+ ನಿ
ಮ್ಮಾತಗಳು+ ಭೀಮಾರ್ಜುನರು +ಸಹಿತೀ +ಮಹೀತಳವ
ತಾತ +ನೀವಾಳುವುದು +ತಾಯೆ +ಸು
ನೀತನ್+ಆ+ಧರ್ಮಜನು +ಧರ್ಮ +ವಿ
ಘಾತಕರು +ನಾವೆಮ್ಮ +ಕಳುಹುವುದ್+ಎನುತ +ಹೊರವಂಟ

ಪದ್ಯ ೩೮: ಪಾಂಡವರು ಯುದ್ಧರಂಗಕ್ಕೆ ಹೇಗೆ ಹೊರಟರು?

ಮುಂದೆ ಹರಿರಥವಸುರ ವೈರಿಯ
ಹಿಂದೆ ಧರ್ಮಜನೆಡಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದರು ಪಾಂಡುನಂದನರು (ಉದ್ಯೋಗ ಪರ್ವ, ೧೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಬಾಗದಲ್ಲಿ ಶ್ರೀಕೃಷ್ಣನ ರಥ, ಅವನ ಹಿಂದೆ ಯುಧಿಷ್ಠಿರನು, ಅವನ ಎಡಬಲದಲ್ಲಿ ಪಾಂಡವರ ಮಕ್ಕಳು, ಬಲಭಾಗದ ಪಕ್ಕದಲ್ಲಿ ಭೀಮಾರ್ಜುನರು, ಹೀಗೆ ಹಲವಾರು ಮಂದಿ ರಥವೇರಿ ಸಿದ್ಧರಾದರು. ಸೈನ್ಯವೂ ಸೇರಿತು. ಈ ಭಾರಕ್ಕೆ ತಲೆ ಬಾಗಿಸದೆ ನೆಟ್ಟನಿದ್ದರೆ ಆದಿಶೇಷನಿಗೆ ಯಾರೂ ಸರಿಯಿಲ್ಲ ಎಂದು ದೇವತೆಗಳು ಮಾತನಾಡುತ್ತಿರಲು ಪಾಂಡವರು ಯುದ್ಧರಂಗಕ್ಕೆ ನಡೆದರು.

ಅರ್ಥ:
ಮುಂದೆ: ಅಗ್ರ, ಮೊದಲು; ರಥ: ಬಂಡಿ; ಅಸುರವೈರಿ: ರಾಕ್ಷರಸ ರಿಪು (ಕೃಷ್ಣ); ಹಿಂದೆ: ಹಿಂಬಾಗ; ಧರ್ಮಜ: ಯುಧಿಷ್ಠಿರ; ಎಡಬಲ: ಆಚೆಯೀಚೆ, ಪಕ್ಕದಲ್ಲಿ; ನಂದನ: ಮಕ್ಕಳು; ಕೆಲಬಲ: ಬಲಭಾಗದಲ್ಲಿ; ಆದಿ: ಮುಂತಾದವರು; ಸಂದಣಿ: ಗುಂಪು; ಸೇನೆ: ಸೈನ್ಯ; ಸೈರಿಸಿ: ತಾಳು, ಸಹಿಸು; ನಿಂದು: ನಿಲ್ಲು; ಫಣಿ: ಹಾವು; ಸರಿ: ಸದೃಶ, ತಪ್ಪಲ್ಲದ್ದು; ಸುರ: ದೇವತೆ; ಕುಲ: ವಂಶ; ಉಲಿ: ಧ್ವನಿ; ನಡೆ: ಸಾಗು;

ಪದವಿಂಗಡಣೆ:
ಮುಂದೆ +ಹರಿ+ರಥವ್+ಅಸುರ ವೈರಿಯ
ಹಿಂದೆ +ಧರ್ಮಜನ್+ಎಡಬಲದಲ್
ಆ+ನಂದನರು+ ಕೆಲಬಲದಲ್+ಆ+ ಭೀಮಾರ್ಜುನ+ಆದಿಗಳು
ಸಂದಣಿಸಿದುದು +ಸೇನೆ +ಸೈರಿಸಿ
ನಿಂದನಾದಡೆ+ ಫಣಿಗೆ+ ಸರಿಯಿ
ಲ್ಲೆಂದು+ ಸುರ+ಕುಲ+ಉಲಿಯೆ +ನಡೆದರು +ಪಾಂಡು+ನಂದನರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೈರಿಸಿ ನಿಂದನಾದಡೆ ಫಣಿಗೆ ಸರಿಯಿಲ್ಲೆಂದು ಸುರಕುಲವುಲಿಯೆ
(೨) ಹರಿ, ಅಸುರವೈರಿ – ಕೃಷ್ಣನಿಗೆ ಉಪಯೋಗಿಸಿದ ಪದಗಳು