ಪದ್ಯ ೨೬: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೩?

ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ (ಗದಾ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನೆಂಬ ಹೆಸರನ್ನು ಕೇಳಿದೊಡನೆ ಭುಗಿಲೆಂದು ಏಳುತ್ತಿದ್ದ ತಾಮಸಕೋಪವನ್ನು ಎತ್ತಲೋ ಕಳಿಸಿಬಿಟ್ಟೆಯಾ? ಪಾಂಡವ ತಿಮಿರರವಿಯೆಂಬ ಬಿರುದು ಹೆಸರಿಲ್ಲದೆ ಹೋಗಿಬಿಟ್ಟಿತೇ? ಭೀಮನೆಂಬ ಕಾಡಿಗೆ ಕಾಡುಗಿಚ್ಚೆಂದು ಕೊಚ್ಚಿಕೊಳ್ಳುತ್ತಿದ್ದವನೇ ಹೊರಕ್ಕೆ ಬಾ, ಭೀಮನೆಂಬ ಸೂರ್ಯನಿಗೆ ರಾಹುವೇ ಹೊರಕ್ಕೆ ಬಾ, ಭೀಮಗರ್ಜನೆ ನಿನಗೆ ಮಧುರ ಗೀತೆಯೇ? ರಾಜಾ ಏಳು ಎಂದು ಭೀಮನು ಕೌರವನನ್ನು ಹಂಗಿಸಿದನು.

ಅರ್ಥ:
ಭುಗಿಲ್- ಭುಗಿಲ್ ಎಂಬ ಶಬ್ದ; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ; ಬೀಳ್ಕೊಡು: ತೆರಳು; ನಿರ್ನಾಮ: ನಾಶ, ಅಳಿವು; ಬಿರುದು: ಗೌರವ ಸೂಚಕ ಪದ; ತಿಮಿರ: ಅಂಧಕಾರ; ರವಿ: ಸೂರ್ಯ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಹೊರವಡು: ತೆರಳು; ಭಾಸ್ಕರ: ಸೂರ್ಯ; ಗರ್ಜನೆ: ಆರ್ಭಟ, ಕೂಗು; ಮಧುರ: ಇಂಪುಆದ; ಗೀತ: ಹಾಡು; ನೃಪತಿ: ರಾಜ; ವನ: ಕಾಡು;

ಪದವಿಂಗಡಣೆ:
ಭೀಮನ್+ಎನೆ +ಭುಗಿಲೆಂಬ +ರೋಷದ
ತಾಮಸವ +ಬೀಳ್ಕೊಟ್ಟೆಲಾ +ನಿ
ರ್ನಾಮವಾದುದೆ +ಬಿರುದು +ಪಾಂಡವ +ತಿಮಿರ+ರವಿಯೆಂಬ
ಭೀಮ+ವನ+ದಾವಾಗ್ನಿ +ಹೊರವಡು
ಭೀಮ+ಭಾಸ್ಕರ+ರಾಹು +ಹೊರವಡು
ಭೀಮಗರ್ಜನೆ +ಮಧುರಗೀತವೆ+ ನೃಪತಿ+ಏಳೆಂದ

ಅಚ್ಚರಿ:
(೧) ಹೊರವಡು – ೪, ೫ ಸಾಲಿನ ಕೊನೆಯ ಪದ
(೨) ರೂಪಕದ ಪ್ರಯೋಗ – ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ

ಪದ್ಯ ೩೨: ಭೀಮನು ಯಾರನ್ನು ಸಂಹರಿಸಿದನು?

ವಿಂದನನುವಿಂದನನು ಚಿತ್ರಕ
ನಂದನನ ಚಿತ್ರಾಂಗದನ ಸಾ
ನಂದ ದುಸ್ಸಹ ಶಂಕುಕರ್ಣ ಸುದೀರ್ಘಬಾಹುಕನ
ನಂದ ಚಿತ್ರಾಂಬಕನ ಕುಂತಿಯ
ನಂದನನು ಬರಿಕೈದು ಭಾಸ್ಕರ
ನಂದನಾಶ್ವತ್ಥಾಮರನು ಮೂದಲಿಸಿ ತಾಗಿದನು (ದ್ರೋಣ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವಿಂದ, ಅನುವಿಂದ, ಚಿತ್ರಕನ ಮಗನಾದ ಚಿತ್ರಾಂಗದ, ಸಾನಂದ, ದುಸ್ಸಹ, ಶಂಕುಕರ್ಣ, ದೀರ್ಘಬಾಹು, ಚಿತ್ರಾಂಬಕರನ್ನು ಸಂಹರಿಸಿದ ಭೀಮನು ಕರ್ಣ ಅಶ್ವತ್ಥಾಮರನ್ನು ಮೂದಲಿಸಿ ಯುದ್ಧಕ್ಕೆ ನುಗ್ಗಿದನು.

ಅರ್ಥ:
ನಂದನ: ಮಗ; ಕೈದು: ಆಯುಧ, ಶಸ್ತ್ರ; ಭಾಸ್ಕರ: ರವಿ; ಮೂದಲಿಸು: ಹಂಗಿಸು; ಗಾಗು: ಮುಟ್ಟು;

ಪದವಿಂಗಡಣೆ:
ವಿಂದನ್+ಅನುವಿಂದನನು +ಚಿತ್ರಕ
ನಂದನನ +ಚಿತ್ರಾಂಗದನ +ಸಾ
ನಂದ +ದುಸ್ಸಹ +ಶಂಕುಕರ್ಣ +ಸುದೀರ್ಘಬಾಹುಕನ
ನಂದ+ ಚಿತ್ರಾಂಬಕನ+ ಕುಂತಿಯ
ನಂದನನು +ಬರಿಕೈದು+ ಭಾಸ್ಕರ
ನಂದನ+ಅಶ್ವತ್ಥಾಮರನು +ಮೂದಲಿಸಿ +ತಾಗಿದನು

ಅಚ್ಚರಿ:
(೧) ನಂದ ಪದದ ಬಳಕೆ – ೨-೬ ಸಾಲಿನ ಮೊದಲ ಪದ
(೨) ಚಿತ್ರಕನಂದನ, ಕುಂತಿಯ ನಂದನ, ಭಾಸ್ಕರ ನಂದನ – ಪದಗಳ ಬಳಕೆ

ಪದ್ಯ ೩೯: ದ್ರೌಪದಿಯು ಕೀಚಕನನ್ನು ಹೇಗೆ ಎಚ್ಚರಿಸಿದಳು?

ನ್ಯಾಯವನು ಮಿಗೆ ಗೆಲಿವುದೀಯ
ನ್ಯಾಯವಧಿಕವು ಧರ್ಮ ಪರರೇ
ಸ್ಥಾಯಿಗಳು ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದಳಬುಜಾಕ್ಷಿ (ವಿರಾಟ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ನ್ಯಾಯವನ್ನೇ ಗೆಲ್ಲುವುದರಿಂದ ಅನ್ಯಾಯವೇ ಮಿಗಿಲಾದುದು! ಧರ್ಮಪರರೇ ಸ್ಥಿರವಾಗಿ ನಿಲ್ಲುತ್ತಾರೆ, ಕತ್ತಲೆ ಸೂರ್ಯರ ನಡುವಿನ ವ್ಯತ್ಯಾಸ ನಿನಗೂ ನನ್ನ ಪತಿಗಳಿಗೂ ಇದೆ. ಅವರು ನಿನ್ನನ್ನು ಉಳಿಸುವುದಿಲ್ಲ. ಅವರ ಕೈಗುಣವನ್ನು ಬಲ್ಲವರೇ ಬಲ್ಲರು, ಕೀಚಕ, ನಾಯಿಯು ಸಿಂಕಕ್ಕೆ ಇದಿರು ನಿಂತೀತೇ? ಸಾಕು ನಡೆ ಎಂದು ದ್ರೌಪದಿ ಹೇಳಿದಳು.

ಅರ್ಥ:
ನ್ಯಾಯ: ಯೋಗ್ಯವಾದುದು; ಮಿಗೆ: ಮತ್ತು, ಅಧಿಕವಾಗಿ; ಗೆಲುವು: ಜಯ; ಅನ್ಯಾಯ: ಸರಿಯಲ್ಲದ; ಅಧಿಕ: ಹೆಚ್ಚು; ಧರ್ಮ: ಧಾರಣೆ ಮಾಡಿದುದು ಪರರು: ಅನ್ಯರು; ಸ್ಥಾಯಿ: ಸ್ಥಿರವಾಗಿರುವುದು, ಕಾಯಂ; ತಿಮಿರ: ಅಂಧಕಾರ; ಭಾಸ್ಕರ: ರವಿ; ಅಂತರ: ದೂರ; ಕಾಯು: ರಕ್ಷಣೆ; ಕೈಗುಣ: ಲಕ್ಷಣ; ಆಯತ:ಉಚಿತವಾದ; ಬಲ್ಲ: ತಿಳಿದ; ನಾಯಿ: ಶ್ವಾನ, ಕುನ್ನಿ; ಸಿಂಹ: ಕೇಸರಿ; ಇದಿರು: ಎದುರು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹೋಗು: ತೆರಳು; ಅಬುಜಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ನ್ಯಾಯವನು +ಮಿಗೆ +ಗೆಲಿವುದ್+ಈ+
ಅನ್ಯಾಯವ್+ಅಧಿಕವು+ ಧರ್ಮ +ಪರರೇ
ಸ್ಥಾಯಿಗಳು +ತಿಮಿರಕ್ಕೆ +ಭಾಸ್ಕರಗ್+ಆವುದ್+ಅಂತರವು
ಕಾಯರ್+ಎನ್ನವರ್+ಅವರ+ ಕೈಗುಣದ್
ಆಯತವ +ಬಲ್ಲವರೆ +ಬಲ್ಲರು
ನಾಯಿ+ ಸಿಂಹಕ್ಕಿದಿರೆ+ ಫಡ+ ಹೋಗೆಂದಳ್+ಅಬುಜಾಕ್ಷಿ

ಅಚ್ಚರಿ:
(೧) ಕೀಚಕನನ್ನು ಬಯ್ಯುವ ಪರಿ – ನಾಯಿ ಸಿಂಹಕ್ಕಿದಿರೆ, ತಿಮಿರಕ್ಕೆ ಭಾಸ್ಕರಗಾವುದಂತರವು
(೨) ಹಿತನುಡಿ – ಧರ್ಮ ಪರರೇ ಸ್ಥಾಯಿಗಳು

ಪದ್ಯ ೧೭: ಶಿಶುಪಾಲನು ಭೀಷ್ಮನನ್ನು ಏನು ಕೇಳಿದನು?

ತರಳರ ವದಿರು ಪಾಂಡುಸುತರಂ
ತಿರಲಿ ನೀ ಸುಪ್ರೌಢನೆಂದಾ
ದರಿಸಿದೈ ವಸುದೇವಸುತನಲಿ ಶಿಷ್ಟಯೋಗ್ಯತೆಯ
ಧರಣಿಪಾಲರ ಮಧ್ಯದಲಿ ಬಾ
ಸ್ಕರನು ಗಡ ತುರುಪಳ್ಳಿಕಾರರ
ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಳೆಂದ (ಸಭಾ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಪಾಂಡವರಿನ್ನು ಹುಡುಗರು, ಅವರ ಮಾತು ಹಾಗಿರಲಿ, ನೀನಾದರೋ ಹಿರಿಯವ, ನೀನು ಹೇಗೆ ಈ ವಸುದೇವನ ಮಗನಾದ ಕೃಷ್ಣನಲ್ಲಿ ಯಾಗ ಪೂಜೆಗೆ ಅರ್ಹಮಾಡುವ ಯಾವ ಯೋಗ್ಯತೆಯನ್ನು ಕಂಡೆ? ಸಮಸ್ತ ಭೂಮಂಡಲದ ರಾಜರ ಮಧ್ಯ ಈ ಕೃಷ್ಣನು ಅಗ್ರಗಣ್ಯನೇ? ಇವನು ಗೊಲ್ಲರ ಹಳ್ಳಿಗಳ ಗೋವರ ನಡುವೆ ಸೂರ್ಯನಲ್ಲವೇ? ನೀನೇ ಹೇಳು ಎಂದು ಶಿಶುಪಾಲನು ಭೀಷ್ಮನನ್ನು ಕೇಳಿದನು.

ಅರ್ಥ:
ತರಳ: ಚಂಚಲವಾದ, ಬಾಲಕ; ಸುತ: ಮಕ್ಕಳು; ಸುಪ್ರೌಢ: ಹಿರಿಯವ; ಆದರಿಸು: ಗೌರವಿಸು; ಶಿಷ್ಟ: ಒಳ್ಳೆಯವ, ಯೋಗ್ಯ; ಧರಣಿಪಾಲಕ: ರಾಜ; ಮಧ್ಯ:ನಡುವೆ; ಭಾಸ್ಕರ: ಸೂರ್ಯ; ಗಡ:ಅಲ್ಲವೆ; ಪಳ್ಳಿ: ಹಳ್ಳಿ; ಪುರ: ಊರು; ತುರು: ಗೋವು;

ಪದವಿಂಗಡಣೆ:
ತರಳರ +ವದಿರು +ಪಾಂಡು+ಸುತರ್
ಅಂತಿರಲಿ +ನೀ +ಸುಪ್ರೌಢನೆಂದ್
ಆದರಿಸಿದೈ+ ವಸುದೇವ+ಸುತನಲಿ+ ಶಿಷ್ಟಯೋಗ್ಯತೆಯ
ಧರಣಿಪಾಲರ+ ಮಧ್ಯದಲಿ +ಬಾ
ಸ್ಕರನು+ ಗಡ+ ತುರುಪಳ್ಳಿಕಾರರ
ಪುರದ+ ಭಾಸ್ಕರನ್+ಈತನಲ್ಲಾ +ಭೀಷ್ಮ +ಹೇಳೆಂದ

ಅಚ್ಚರಿ:
(೧) ಕೃಷ್ಣನನ್ನು ಜರಿದ ಬಗೆ – ತುರುಪಳ್ಳಿಕಾರರ ಪುರದ ಭಾಸ್ಕರ
(೨) ಭಾಸ್ಕರನು – ೨ ಬಾರಿ ಪ್ರಯೋಗ