ಪದ್ಯ ೬೧: ಅಶ್ವತ್ಥಾಮನ ದೃಢ ನಿಶ್ಚಯ ಹೇಗಿತ್ತು?

ಹರಿಹರಬ್ರಹ್ಮಾದಿದೇವರು
ವೆರಸಿ ಕಾಯಲಿ ರಾತ್ರಿಯಲಿ ರಿಪು
ಶಿರವ ತಹೆನಿದಕೇಕೆ ಸಂಶಯವೆನ್ನ ಕಳುಹುವುದು
ಇರಲಿ ಕೃಪ ಕೃತವರ್ಮಕರುಹ
ತ್ತಿಕರೆ ರಣಾಧ್ಯಕ್ಷದಲಿ ಭಾಷಾ
ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ (ಗದಾ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಮಾತನ್ನು ಮುಂದುವರೆಸುತ್ತಾ, ಹರಿಹರಬ್ರಹ್ಮಾದಿ ದೇವತೆಗಳು ಈ ರಾತ್ರಿ ಅವರನ್ನು ಕಾಯುತ್ತಿದ್ದರೂ ಅವರ ತಲೆಯನ್ನು ನಾನು ತರುತ್ತೇನೆ. ಸಂಶಯವಿಲ್ಲದೆ ನನ್ನನ್ನು ಕಳುಹಿಸಿಕೊಡು. ಕ್ರ್ಪಕೃತವರ್ಮರು ಹತ್ತಿರದಲ್ಲೇ ಇರಲಿ, ನನ್ನ ಮಾತು ತಪ್ಪಿದರೆ ನಾನು ದ್ರೋಣನ ಮಗನೇ ಅಲ್ಲ ಎಂದು ಶಪಥ ಮಾಡಿದನು.

ಅರ್ಥ:
ಹರಿ: ವಿಷ್ಣು; ಹರ: ಶಿವ; ಬ್ರಹ್ಮ: ಅಜ, ವಿರಿಂಚಿ; ದೇವ: ಭಗವಂತ; ವೆರಸು: ಬೆರಸು; ಕಾಯು: ರಕ್ಷಿಸು; ರಾತ್ರಿ: ಇರುಳು; ರಿಪು: ವೈರಿ; ಶಿರ: ತಲೆ; ತಹೆ: ತರುವೆ; ಸಂಶಯ: ಅನುಮಾನ; ಕಳುಹು: ತೆರಳು; ಹತ್ತಿರ: ಸಮೀಪ; ಅಧ್ಯಕ್ಷ: ಒಡೆಯ; ರಣ: ಯುದ್ಧಭೂಮಿ; ಭಾಷೆ: ಮಾತು, ಪ್ರಮಾಣ; ಚರಣ: ನಡಿಗೆ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ತನಯ: ಮಗ;

ಪದವಿಂಗಡಣೆ:
ಹರಿ+ಹರ+ಬ್ರಹ್ಮಾದಿ+ದೇವರು
ವೆರಸಿ +ಕಾಯಲಿ +ರಾತ್ರಿಯಲಿ +ರಿಪು
ಶಿರವ +ತಹೆನ್+ಇದಕೇಕೆ +ಸಂಶಯವ್+ಎನ್ನ+ ಕಳುಹುವುದು
ಇರಲಿ +ಕೃಪ +ಕೃತವರ್ಮಕರು+ಹ
ತ್ತಿಕರೆ +ರಣಾಧ್ಯಕ್ಷದಲಿ +ಭಾಷಾ
ಚರಣ +ಪೈಸರಿಸಿದಡೆ +ದ್ರೋಣನ +ತನಯನಲ್ಲೆಂದ

ಅಚ್ಚರಿ:
(೧) ಅಶ್ವತ್ಥಾಮನ ದಿಟ್ಟ ಶಪಥ – ರಣಾಧ್ಯಕ್ಷದಲಿ ಭಾಷಾ ಚರಣ ಪೈಸರಿಸಿದಡೆ ದ್ರೋಣನ ತನಯನಲ್ಲೆಂದ