ಪದ್ಯ ೨೭: ಬಂಧುಗಳು ಏನು ಹೇಳಿ ಯುದ್ಧಕ್ಕೆ ಮುನ್ನುಗ್ಗಿದರು?

ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮರೆಯದಿರು ಮುಂಗಲಿತನಕೆ ತಾ
ಸಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಾಂಧವ ಮಿತ್ರ ಭೂಮಿಪರು (ಗದಾ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸೇನೆಯಲ್ಲಿದ್ದ ಬಂಧುಗಳು, ಸ್ನೇಹಿತರಾಗಿದ್ದ ರಾಜರು, ಭಾವಮೈದುನನೇ, ಈಗ ತಿಳಿಯುತ್ತದೆ, ನಿನ್ನ ಬಾಹುಬಲವನ್ನು ಮೆರೆ. ಹಿಂದಾದ ಸೋಲನ್ನು ತಿದ್ದಿಕೋ, ಮಗನೇ ನಿನ್ನ ತಂದೆ ಅಜ್ಜ ಮೊದಲಾದವರ ಕೀರ್ತಿಯನ್ನು ಮರೆಯಬೇಡ, ನಾನು ಮುನ್ನುಗ್ಗಿ ಯುದ್ಧಮಾಡುತ್ತೇನೆ, ನಿನಗಿಂತ ಮೊದಲು ನಾನು ಎಂದೆಲ್ಲಾ ಹೇಳುತ್ತಾ ಹೊರಟರು.

ಅರ್ಥ:
ಅರಿ: ತಿಳಿ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಮೆರೆ: ಶೋಭಿಸು; ಭುಜಾಟೋಪ: ಪರಾಕ್ರಮ; ಹಿಂದಣ: ಹಿಂದಿನ; ಕೊರತೆ: ನ್ಯೂನ್ಯತೆ; ಕಳೆ: ನೀಗಿಸು; ಮಗ: ಪುತ್ರ; ಬೊಪ್ಪ: ತಂದೆ; ಕುಲ: ವಂಶ; ಕ್ರಮ: ನಡೆಯುವಿಕೆ; ಮರೆ: ನೆನಪಿನಿಂದ ದೂರಮಾಡು; ಕಲಿ: ಶೂರ; ಸಿರಿ: ಐಶ್ವರ್ಯ; ಮುನ್ನ: ಹಿಂದೆ ನಡೆದ; ಜರೆ: ಬಯ್ಯು; ಒಡವುಟ್ಟು: ಜೊತೆಯಲ್ಲಿ ಹುಟ್ಟಿದ; ಬಾಂಧವ: ಸಹೊದರ; ಮಿತ್ರ: ಸ್ನೇಹಿತ; ಭೂಮಿಪ: ರಾಜ;

ಪದವಿಂಗಡಣೆ:
ಅರಿಯಬಹುದೈ +ಭಾವಮೈದುನ
ಮೆರೆ +ಭುಜಾಟೋಪವನು +ಹಿಂದಣ
ಕೊರತೆಯನು +ಕಳೆ +ಮಗನೆ +ಬೊಪ್ಪ+ಕುಲ+ಕ್ರಮಾಗತವ
ಮರೆಯದಿರು +ಮುಂಗಲಿತನಕೆ +ತಾ
ಸಿರಿವೆ +ನಾ +ಮುನ್ನೆಂದು +ತಮ್ಮೊಳು
ಜರೆದರ್+ಒಡವುಟ್ಟಿದರು +ಬಾಂಧವ +ಮಿತ್ರ +ಭೂಮಿಪರು

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳಲು – ಭುಜಾಟೋಪ ಪದದ ಬಳಕೆ

ಪದ್ಯ ೨೭: ಊರ್ವಶಿಯು ತನ್ನ ಹಿರಿಮೆಯನ್ನು ಹೇಗೆ ಹೇಳಿದಳು?

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವ ಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ಕೇಳು, ನಿಮ್ಮ ತಂದೆ, ಅವನ ತಂದೆ, ನಿಮ್ಮ ಮುತ್ತಜ್ಜ, ಅವನ ಭಾವಮೈದುನ, ಅವನ ತಂದೆ, ಅಣ್ಣ, ತಮ್ಮ ಎಂಬ ನಿಮ್ಮ ತಂದೆಯ ಕಡೆಯ ಬಾಂಧವರಿಗೆ, ಯುದ್ಧರಂಗದಲ್ಲಿ ಶತ್ರುಗಳ ಜೊತೆಗೆ ಯುದ್ಧ ಮಾಡಿ ತಲೆಗಳನ್ನು ಚೆಂಡಾಡಿದವರಿಗೆ, ಅಷ್ಟೆ ಅಲ್ಲ, ಯಜ್ಞಗಳನ್ನು ಮಾಡಿದ ಸಂಭಾವಿತರಿಗೆ ಇರುವವಳು ನಾನೊಬ್ಬಳೇ, ಎಂದು ಊರ್ವಶಿಯು ನಗುತ ಅರ್ಜುನನಿಗೆ ತನ್ನ ಹಿರಿಮೆಯನ್ನು ಹೇಳಿಕೊಂಡಳು.

ಅರ್ಥ:
ಅಯ್ಯ: ತಂದೆ; ಮುತ್ತಯ್ಯ: ಮುತ್ತಾತ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಅಗ್ರಜ: ಹಿರ; ಅನುಜ: ಸಹೋದರ; ಜ್ಞಾತಿ: ತಂದೆಯ ಕಡೆಯ ಬಂಧು; ಬಾಂಧವ: ಸಂಬಂಧಿಕರು; ಅರಿ: ಶತ್ರು; ಹೊಯ್ದು: ತೊರೆ; ಶಿರ: ತಲೆ; ಅರಿ: ಕತ್ತರಿಸು; ಮೇಣ್: ಮತ್ತು; ಮಖ: ಯಾಗ; ನಗುತ: ಸಂತಸ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಅಯ್ಯನ್+ಅಯ್ಯನು +ನಿಮ್ಮವರ+ ಮು
ತ್ತಯ್ಯನ್+ಆತನ +ಭಾವ ಮೈದುನನ್
ಅಯ್ಯನ್+ಅಗ್ರಜರ್+ಅನುಜರ್+ಎಂಬೀ +ಜ್ಞಾತಿ +ಬಾಂಧವರ
ಕೈಯಲ್+ಅರಿಗಳ+ಹೊಯ್ದು +ಶಿರನ್+ಅರಿ
ದುಯ್ಯಲ್+ಆಡಿದವರ್ಗೆ+ ಮೇಣ್+ ಮಖದ್
ಅಯ್ಯಗಳಿಗ್+ಆನೊಬ್ಬಳ್+ಎಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಅಯ್ಯ, ಮುತ್ತಯ್ಯ – ಪ್ರಾಸ ಪದಗಳು
(೨) ಅಯ್ಯ, ಮುತ್ತಯ್ಯ, ಭಾವಮೈದುನ, ಅಗ್ರಜ, ಅನುಜ, ಜ್ಞಾತಿ – ಸಂಬಂಧಗಳನ್ನು ವಿವರಿಸುವ ಪದ