ಪದ್ಯ ೧೪: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಏಳೆನುತ ತೆಗೆದಪ್ಪಿದನು ಕರು
ಣಾಳು ಕೇಳೈ ಭೂಪ ಸುರಪತಿ
ಯಾಲಯದೊಳೂರ್ವಶಿಯ ಶಾಪವು ಬಂದೊಡೇನಾಯ್ತು
ಲೀಲೆಯಿಂದೀ ಭೀಮ ದೈತ್ಯರ
ಭಾಲಲಿಪಿಯನು ತೊಡೆದ ನಿನ್ನಯ
ಬಾಳು ಬರಹವು ಮುಂದೆಯೆಂದನು ನಗುತ ಮುರವೈರಿ (ಅರಣ್ಯ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರುಣಾಳವಾದ ಶ್ರೀಕೃಷ್ನನು ಧರ್ಮನಂದನನ್ನು ಏಳು ಎಂದು ಹೇಳಿ ಅವನನ್ನು ಆಲಂಗಿಸಿಕೊಂಡು ನಗುತ್ತಾ, ಅರ್ಜುನನಿಗೆ ಊರ್ವಶಿಯ ಶಾಪ ಬಂದರೇನಂತೆ? ಭೀಮನು ರಾಕ್ಷಸರನ್ನು ಸಂಹರಿಸಿದನಷ್ಟೇ, ಮುಂದೆ ನಿನ್ನ ಜೀವನಯನ್ನು ನೋಡು ಎಂದನು.

ಅರ್ಥ:
ಏಳು: ಮೇಲೆ ಬಾ; ಅಪ್ಪು: ಆಲಿಂಗಿಸು; ಕರುಣಾಳು: ದಯೆಯುಳ್ಳವನು; ಭೂಪ: ರಾಜ; ಸುರಪತಿ: ಇಂದ್ರ; ಆಲಯ: ಮನೆ; ಶಾಪ: ನಿಷ್ಠುರದ ನುಡಿ; ಲೀಲೆ: ಆಟ, ಕ್ರೀಡೆ; ದೈತ್ಯ: ರಾಕ್ಷಸ; ಭಾಳಲಿಪಿ: ಹಣೆಬರಹ; ತೊಡೆ: ಅಳಿಸು, ಒರಸು; ಬಾಳು: ಜೀವನ; ಬರಹ: ಲಿಖಿತ; ನಗು: ಸಂತಸ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಏಳೆನುತ +ತೆಗೆದಪ್ಪಿದನು +ಕರು
ಣಾಳು +ಕೇಳೈ +ಭೂಪ +ಸುರಪತಿ
ಆಲಯದೊಳ್+ಊರ್ವಶಿಯ +ಶಾಪವು +ಬಂದೊಡೇನಾಯ್ತು
ಲೀಲೆಯಿಂದೀ+ ಭೀಮ +ದೈತ್ಯರ
ಭಾಳಲಿಪಿಯನು +ತೊಡೆದ +ನಿನ್ನಯ
ಬಾಳು +ಬರಹವು +ಮುಂದೆ+ಎಂದನು +ನಗುತ +ಮುರವೈರಿ

ಅಚ್ಚರಿ:
(೧) ಭಾಳಲಿಪಿ, ಬಾಳುಬರಹ – ಹಣೆಬರಹ, ಜೀವನ ಬರಹ – ಪದಗಳ ಬಳಕೆ

ಪದ್ಯ ೨: ಕರ್ಣನು ಸೈನಿಕರಿಗೆ ಏನು ಹೇಳಿದನು?

ಆಳ ಹೊಯ್ ಹೊಯ್ ನಾಯಕರ ನಿಲ
ಹೇಳು ಕೃಪ ಗುರುನಂದನಾದಿಗ
ಳಾಲಿಗಳಿಗೌತಣವ ರಚಿಸುವೆ ನಿಮಿಷ ಸೈರಿಸಲಿ
ಕಾಳೆಗದಲಿಂದಹಿತರಾಯರ
ಭಾಳಲಿಪಿಗಳನೊರಸುವೆನು ಭೂ
ಪಾಲಕನ ಮೊಗವಡೆದ ದುಗುಡವನುಗಿವೆ ನಾನೆಂದ (ಕರ್ಣ ಪರ್ವ, ೨೧ ಸಂಧಿ, ೨ ಪದ್ಯ)

ತಾತ್ಪರ್ಯ:
ತನ್ನ ಸೈನಿಕರನ್ನುದ್ದೇಶಿಸಿ ಕರ್ಣನು, ಎಲೈ ಸೈನಿಕರೆ ಹೊಯ್ ಹೊಯ್ ಕೇಳಿರಿ, ನೀವೆಲ್ಲರು ಸ್ವಲ್ಪಹೊತ್ತು ಸುಮ್ಮನಿರಿ. ಕೃಪ, ಅಶ್ವತ್ಥಾಮದಿಗಳ ಕಣ್ಣುಗಳಿಗೆ ಶೀಘ್ರವಾಗಿ ಔತಣವನ್ನು ನೀಡುತ್ತೇನೆ, ಈ ದಿನ ನಮ್ಮ ವೈರಿರಾಜರ ಹಣೆಯ ಬರಹಗಳನ್ನು ಅಳಿಸಿ ಹಾಕುತ್ತೇನೆ, ಅರಸನ ಮುಖವನ್ನು ಆವರಿಸಿದ ದುಃಖವನ್ನು ತೊಲಗಿಸುತ್ತೇನೆ ಎಂದು ನುಡಿದನು.

ಅರ್ಥ:
ಆಳು: ಸೈನಿಕ; ನಾಯಕ: ಒಡೆಯ; ನಿಲ:ನಿಲ್ಲು; ಹೇಳು: ತಿಳಿಸು; ನಂದನ: ಮಗ; ಆದಿ: ಮುಂತಾದ; ಆಲಿಗಳು: ಗುಂಪು; ಔತಣ: ವಿಶೇಷ; ರಚಿಸು: ನಿರ್ಮಿಸು; ನಿಮಿಷ: ಕಾಲ ಪ್ರಮಾಣ; ಸೈರಿಸು: ತಾಳು, ಸಹಿಸು; ಕಾಳೆಗ: ಯುದ್ಧ; ಅಹಿತ: ವೈರಿ; ರಾಯ: ರಾಜ; ಭಾಳ: ಹಣೆ; ಲಿಪಿ: ಬರಹ; ಒರಸು: ನಾಶಮಾಡು; ಭೂಪಾಲಕ: ರಾಜ; ಮೊಗ: ಮುಖ; ಅಡೆ: ಮುಚ್ಚಿಹೋಗಿರು; ದುಗುಡ: ದುಃಖ; ಉಗಿ: ಹೋಗಲಾಡಿಸು;

ಪದವಿಂಗಡಣೆ:
ಆಳ +ಹೊಯ್ +ಹೊಯ್ +ನಾಯಕರ+ ನಿಲ
ಹೇಳು +ಕೃಪ +ಗುರುನಂದನ್+ಆದಿಗಳ್
ಆಲಿಗಳಿಗ್+ಔತಣವ+ ರಚಿಸುವೆ+ ನಿಮಿಷ+ ಸೈರಿಸಲಿ
ಕಾಳೆಗದಲಿಂದ್+ಅಹಿತ+ರಾಯರ
ಭಾಳಲಿಪಿಗಳನ್+ಒರಸುವೆನು +ಭೂ
ಪಾಲಕನ+ ಮೊಗವಡೆದ +ದುಗುಡವನ್+ಉಗಿವೆ +ನಾನೆಂದ

ಅಚ್ಚರಿ:
(೧) ಔತಣವ – ಭಾರಿ ರಣದ ವಿಶೇಷವನ್ನು ತೋರಿಸುವೆ ಎಂದು ಹೇಳುವ ಬಗೆ
(೨) ಕರ್ಣನ ವಿಶ್ವಾಸದ ನುಡಿಗಳು – ಕಾಳೆಗದಲಿಂದಹಿತರಾಯರ ಭಾಳಲಿಪಿಗಳನೊರಸುವೆನು ಭೂಪಾಲಕನ ಮೊಗವಡೆದ ದುಗುಡವನುಗಿವೆ

ಪದ್ಯ ೧೪: ಕರ್ಣನು ಬಾಣ ಬಿಡುವ ಮುನ್ನ ನಕುಲನಿಗೆ ಏನು ಹೇಳಿದ?

ಆಳು ನೀನಹುದೆಲವೊ ನಕುಲ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸುಸೈರಿದ್ಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯಿವೆ ಕೊಳ್ಳೆನುತ ನಕುಳನನೆಚ್ಚನಾ ಕರ್ಣ (ಕರ್ಣ ಪರ್ವ, ೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ನಿಜ ನೀನು ವೀರ, ಎಲವೋ ನಕುಲ ವಿಶಾಲಬುದ್ಧಿಯವನಾದು ನೀನು ಒಳ್ಳೆಯದ್ದನ್ನೇ ಮಾಡಿರುವೆ, ಚಿಕ್ಕವನಾದರೇನಂತೆ, ಅಭಿಮನ್ಯುವು ಸಹ ಚಿಕ್ಕವನಲ್ಲವೇ? ಅವನ ಹಾಗಿಯೇ ನೀನು ಆಗಬೇಕೆನ್ನುವದಾದರೆ ನಿನ್ನ ಹಣೆಯ ಬರಹವನ್ನು ಈಚೆಗೆಳೆಯ ಬಲ್ಲ ಸಮೃದ್ಧ ಬಾಣಗಳನ್ನು ಇದೋ ಬಿಟ್ಟೆ ಸಹಿಸುಕೋ ಎಂದು ಕರ್ಣನು ಬಾಣವನ್ನು ಬಿಟ್ಟನು.

ಅರ್ಥ:
ಆಳು: ಶೂರ; ಅಹುದು: ನಿಜ, ಹೌದು; ವಿಶಾಲ: ವಿಸ್ತಾರ; ಮತಿ: ಬುದ್ಧಿ; ಲೇಸು: ಒಳ್ಳೆಯದು; ಬಾಲ: ಚಿಕ್ಕವರು, ಹುಡುಗರು; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಜಾವಳ:ಸಮಾನ್ಯ, ಸಾಧಾರಣ; ಕೋಲ: ಬಾಣ; ಸೈರಿಸು: ತಾಳು, ಸಹಿಸು; ಭಾಳ: ಹಣೆ; ಲಿಪಿ: ಬರಹ; ಸಂಕರುಷ: ಆಕರ್ಷಣೆ; ವಿಪುಳ: ಬಹಳ; ಶರಾಳಿ: ಬಾಣಗಳ ಗುಂಪು; ಕೊಳ್ಳು: ತೆಗೆದುಕೊ; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಆಳು +ನೀನ್+ಅಹುದ್+ಎಲವೊ +ನಕುಲ +ವಿ
ಶಾಲಮತಿ +ನೀ +ಲೇಸು +ಮಾಡಿದೆ
ಬಾಲರಾದಡೆ +ಭಂಗವೇ +ಜಾವಳನೆ +ಅಭಿಮನ್ಯು
ಕೋಲ +ಸೈರಿಸು+ಸೈರಿಸಾದಡೆ
ಭಾಳಲಿಪಿ +ಸಂಕರುಷ +ವಿಪುಳ+ ಶ
ರಾಳಿಯಿವೆ +ಕೊಳ್ಳೆನುತ+ ನಕುಳನನ್+ಎಚ್ಚನಾ +ಕರ್ಣ

ಅಚ್ಚರಿ:
(೧) ಶರ, ಕೋಲ – ಸಮನಾರ್ಥಕ ಪದ