ಪದ್ಯ ೫೩: ಯಾವ ಮುನಿವರ್ಯರು ಯುದ್ಧಭೂಮಿಗೆ ಆಗಮಿಸಿದರು?

ಅತ್ರಿ ಭಾರಧ್ವಾಜ ವಿಶ್ವಾ
ಮಿತ್ರ ಗೌತಮ ಕಣ್ವ ಕಶ್ಯಪ
ಮಿತ್ರಸೂನು ವಸಿಷ್ಠ ಗಾರ್ಗಾಂಗಿರಸ ಭಾರ್ಗವರು
ಅತ್ರಿಸುತ ವರ ವಾಲಖಿಲ್ಯರು
ಚಿತ್ರಚರಿತರು ಬಂದರಲ್ಲಿಗೆ
ಮಿತ್ರಭಾವದಲವರನಭಿವಂದಿಸಿದನಾಚಾರ್ಯ (ದ್ರೋಣ ಪರ್ವ, ೧೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪ್ರಸಿದ್ಧ ಮುನಿವರ್ಯರಾದ ಅತ್ರಿ, ಭಾರಧ್ವಾಜ, ವಿಶ್ವಾಮಿತ್ರ, ಗೌತಮ, ಕಣ್ವ, ಕಶ್ಯಪ, ವಸಿಷ್ಠ, ಗಾರ್ಗ್ಯ, ಅಂಗಿರಸ, ಪರಶುರಾಮ, ದುರ್ವಾಸ, ವಾಲಖಿಲ್ಯರು ದ್ರೋಣನ ಬಳಿಗೆ ಬರಲು, ಅವರನ್ನು ಕಂಡು ಸ್ನೇಹ ಭಾವದಿಂದ ದ್ರೋಣರು ಅವರಿಗೆ ನಮಸ್ಕರಿಸಿದರು.

ಅರ್ಥ:
ಸೂನು: ಮಗ; ಸುತ: ಮಗ; ವರ: ಶ್ರೇಷ್ಠ; ಚರಿತ: ಇತಿಹಾಸ; ಬಂದರು: ಆಗಮಿಸು; ಮಿತ್ರ: ಸ್ನೇಹ; ಭಾವ: ಭಾವನೆ; ಅಭಿವಂದಿಸು: ನಮಸ್ಕರಿಸು; ಆಚಾರ್ಯ: ಗುರು;

ಪದವಿಂಗಡಣೆ:
ಅತ್ರಿ +ಭಾರಧ್ವಾಜ +ವಿಶ್ವಾ
ಮಿತ್ರ +ಗೌತಮ +ಕಣ್ವ +ಕಶ್ಯಪ
ಮಿತ್ರಸೂನು +ವಸಿಷ್ಠ+ ಗಾರ್ಗ್ಯ+ಅಂಗಿರಸ +ಭಾರ್ಗವರು
ಅತ್ರಿಸುತ +ವರ+ ವಾಲಖಿಲ್ಯರು
ಚಿತ್ರ+ಚರಿತರು+ ಬಂದರಲ್ಲಿಗೆ
ಮಿತ್ರಭಾವದಲ್+ಅವರನ್+ಅಭಿವಂದಿಸಿದನ್+ಆಚಾರ್ಯ

ಅಚ್ಚರಿ:
(೧) ಸುತ, ಸೂನು – ಸಮಾನಾರ್ಥಕ ಪದ
(೨) ಕೊನೆಯ ಸಾಲು ಒಂದೇ ಪದವಾಗಿ ರಚಿತವಾದುದು

ಪದ್ಯ ೫೧: ಕರ್ಣನು ಯಾವ ಬಾಣಕ್ಕೆ ಕೈ ಹಾಕಿದನು?

ಮುಳಿದು ಮೀಸೆಯ ಮುರಿದು ಹುಬ್ಬನು
ಬಲಿದು ದಳ್ಳುರಿದಿರುಳನಕ್ಷಿಗ
ಳೊಳಗೆ ಪಸರಿಸಿ ಘುಡುಘುಡಿಸಿ ರೋಮಾಳಿ ಸೈನಿಮಿರೆ
ಹಲು ಮೊರೆದು ಹೊಗರಿಡುವ ಮೋರೆಯ
ಲಿಳಿವ ಬೆಮರನು ಬೆರಳ ಕೊನೆಯಲಿ
ಬಳಿದು ಭಾರ್ಗವದತ್ತಬಾಣಕೆ ನೀಡಿದನು ಕರವ (ದ್ರೋಣ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಹದಿನೆಂಟು ಬಾರಿ ಸೋತು ಅತಿಕೋಪಗೊಂಡು, ಮೀಸೆಯನ್ನು ತಿರುವಿ, ಹುಬ್ಬನ್ನು ಗಂಟಿಟ್ಟು ಕೋಪಾಗ್ನಿಯ ಹೊಗೆಯನ್ನು ಕಣ್ಣಲ್ಲಿ ತುಂಬಿಕೊಂಡು, ಘುಡುಘುಡಿಸಿ, ರೋಮಗಳು ನೆಟ್ಟಗೆ ನಿಲ್ಲುತ್ತಿರಲು, ಹಲ್ಗಡಿದು ಕೋಪದ ಕಾವಿನಿಂದ ಮುಖದಲ್ಲಿ ಬೆವರಿಳಿಯುತ್ತಿರಲು ಬೆರಳಿನಿಂದ ಬೆವರನ್ನು ನಿವಾರಿಸಿ, ಕರ್ಣನು ಪರಶುರಾಮನು ಕೊಟ್ಟ ಬಾಣಕ್ಕೆ ಕೈಯಿಟ್ಟನು.

ಅರ್ಥ:
ಮುಳಿ: ಸಿಟ್ಟು, ಕೋಪ; ಮುರಿ: ಸೀಳು; ಹುಬ್ಬು: ಕಣ್ಣಿನ ಮೇಲಿನ ಕೂದಲ ಸಾಲು; ಬಲಿ: ಗಟ್ಟಿಯಾಗು; ದಳ್ಳುರಿ: ದೊಡ್ಡಉರಿ; ಇರುಳು: ರಾತ್ರಿ; ಅಕ್ಷಿ: ಕಣ್ಣು; ಪಸರಿಸು: ಹರಡು; ಘುಡು: ಶಬ್ದವನ್ನು ವಿವರಿಸುವ ಪದ; ರೋಮಾಳಿ: ಕೂದಲ ಸಾಲು; ನಿಮಿರು: ಎದ್ದು ನಿಲ್ಲು; ಹಲು: ದಮ್ತ; ಮೊರೆ: ಧ್ವನಿ ಮಾಡು, ಝೇಂಕರಿಸು; ಹೊಗರು: ಕಾಂತಿ, ಪ್ರಕಾಶ; ಮೋರೆ: ಮುಖ; ಇಳಿ: ಕುಗ್ಗು; ಬೆಮರು: ಬೆವರು, ಸ್ವೇದಜಲ; ಬೆರಳು: ಅಂಗುಲಿ; ಕೊನೆ: ತುದಿ; ಬಳಿ: ಹತ್ತಿರ; ಭಾರ್ಗವ: ಪರಶುರಾಮ; ಬಾಣ: ಅಂಬು; ನೀಡು: ಕೊಡು; ಕರ: ಹಸ್ತ;

ಪದವಿಂಗಡಣೆ:
ಮುಳಿದು +ಮೀಸೆಯ +ಮುರಿದು +ಹುಬ್ಬನು
ಬಲಿದು +ದಳ್ಳುರಿದ್+ಇರುಳನ್+ಅಕ್ಷಿಗಳ್
ಒಳಗೆ +ಪಸರಿಸಿ+ ಘುಡುಘುಡಿಸಿ +ರೋಮಾಳಿ +ಸೈ+ನಿಮಿರೆ
ಹಲು +ಮೊರೆದು +ಹೊಗರಿಡುವ +ಮೋರೆಯಲ್
ಇಳಿವ +ಬೆಮರನು +ಬೆರಳ +ಕೊನೆಯಲಿ
ಬಳಿದು +ಭಾರ್ಗವದತ್ತ+ಬಾಣಕೆ +ನೀಡಿದನು +ಕರವ

ಅಚ್ಚರಿ:
(೧) ಕರ್ಣನ ಚಿತ್ರಣವನ್ನು ಹೇಳುವ ಪರಿ – ಮುಳಿದು ಮೀಸೆಯ ಮುರಿದು ಹುಬ್ಬನು ಬಲಿದು ದಳ್ಳುರಿದಿರುಳನಕ್ಷಿಗಳೊಳಗೆ ಪಸರಿಸಿ ಘುಡುಘುಡಿಸಿ ರೋಮಾಳಿ ಸೈನಿಮಿರೆ
(೨) ಮ ಕಾರದ ತ್ರಿವಳಿ ಪದ – ಮುಳಿದು ಮೀಸೆಯ ಮುರಿದು

ಪದ್ಯ ೫೬: ಅಭಿಮನ್ಯುವಿನ ವೀರ ನುಡಿ ಹೇಗಿತ್ತು?

ಬವರವಾದರೆ ಹರನ ವದನಕೆ
ಬೆವರ ತಹೆನವಗಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನಿವರವರಲೇನರ್ಜುನನು ಮಾ
ಧವನು ಮುನಿದಡೆ ಗೆಲುವೆನಂಜದೆ ರಥವ ಹರಿಸೆಂದ (ದ್ರೋಣ ಪರ್ವ, ೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ನನ್ನೊಡನೆ ಯುದ್ಧಕ್ಕೆ ಬಂದರೆ ಶಿವನ ಮುಖದಲ್ಲಿ ಬೆವರಿಳಿಸುತ್ತೇನೆ. ನನ್ನನ್ನು ತಡೆದರೆ ಇಂದ್ರನನ್ನು ಗೆಲ್ಲುತ್ತೇನೆ, ನನ್ನ ಜೊತೆಗೆ ಕದನಕ್ಕೆ ಬಂದರೆ ಪರಶುರಾಮನು ಮೆಚ್ಚಿ, ಹೌದು ಹೌದು ಎನ್ನುವಂತೆ ಮಾಡುತ್ತೇನೆ. ಯಮನ ವೇಗವನ್ನು ತಡೆಯಬಲ್ಲೆ, ಬರಿಯ ಅವರಿವರ ಮಾತೇಕೆ, ಅರ್ಜುನನೂ, ಶ್ರೀಕೃಷ್ಣನೂ ನನ್ನ ಮೇಲೆ ಸಿಟ್ಟಾಗಿ ಬಂದರೆ ಅವರನ್ನು ಗೆಲ್ಲುತ್ತೇನೆ. ನೀನು ಹೆದರದೆ ರಥವನ್ನು ನಡೆಸು.

ಅರ್ಥ:
ಬವರ: ಕಾಳಗ, ಯುದ್ಧ; ಹರ: ಶಿವ; ವದನ: ಮುಖ; ಬೆವರು: ಸ್ವೇದಜಲ; ತಹೆ: ತರುವೆ; ಅವಗಡಿಸು: ಕಡೆಗಣಿಸು; ವಾಸವ: ಇಂದ್ರ; ಸದೆ: ಹೊಡಿ, ಬಡಿ; ಹೊಕ್ಕು: ಸೇರು; ಭಾರ್ಗವ: ಪರಶುರಾಮ; ಜವ: ಯಮ; ಜವ: ವೇಗ; ಕೆಡಿಸು: ಹಾಳು ಮಾಡು; ಸಾಕು: ನಿಲ್ಲು; ಮಾಧವ: ಕೃಷ್ಣ; ಮುನಿ: ಕೋಪ; ಗೆಲುವು: ಜಯ; ಅಂಜು: ಹೆದರು; ರಥ: ಬಂಡಿ; ಹರಿಸು: ಚಲಿಸು;

ಪದವಿಂಗಡಣೆ:
ಬವರವಾದರೆ +ಹರನ+ ವದನಕೆ
ಬೆವರ +ತಹೆನ್+ಅವಗಡಿಸಿದರೆ+ ವಾ
ಸವನ +ಸದೆವೆನು +ಹೊಕ್ಕಡ್+ಅಹುದೆನಿಸುವೆನು +ಭಾರ್ಗವನ
ಜವನ +ಜವ+ಕೆಡಿಸುವೆನು+ ಸಾಕ್
ಇನ್ನಿವರ್+ಅವರಲೇನ್+ಅರ್ಜುನನು +ಮಾ
ಧವನು +ಮುನಿದಡೆ +ಗೆಲುವೆನ್+ಅಂಜದೆ +ರಥವ +ಹರಿಸೆಂದ

ಅಚ್ಚರಿ:
(೧) ಜವನ ಜವಗೆಡಿಸುವೆನು – ಜವ ಪದದ ಬಳಕೆ
(೨) ವೀರ ನುಡಿ – ಬವರವಾದರೆ ಹರನ ವದನಕೆ ಬೆವರ ತಹೆನು

ಪದ್ಯ ೨೪: ಭೀಷ್ಮನು ಯಾರ ಹಣೆಗೆ ಬಾಣವನ್ನು ಬಿಟ್ಟನು?

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ (ಭೀಷ್ಮ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ರಥವನ್ನು ನಡೆಸಿ ಭೀಷ್ಮನ ಎದುರಿನಲ್ಲೇ ಮುಖಾಮುಖಿ ತಂದು ನಿಲ್ಲಿಸಲು, ಪಿತಾಮಹನು ಅರ್ಜುನನಿಗೆ ಸೆರೆ ಸಿಕ್ಕನೆಂದು ಕೌರವ ಸೈನ್ಯವು ಬೆದರಿ ಉದ್ಗರಿಸಿತು. ಆಗ ಭೀಷ್ಮನು ಹತ್ತು ಬಾಣಗಳಿಂದ ಶ್ರೀಕೃಷ್ಣನನ್ನು ಹೊಡೆದು ಪರಶುರಾಮರು ಕೊಟ್ಟಿದ್ದ ಬಾಣವನ್ನು ಶ್ರೀಕೃಷ್ಣನ ಹಣೆಗೆ ಗುರಿಯಿಟ್ಟು ಬಿಟ್ಟನು.

ಅರ್ಥ:
ರಥ: ಬಂಡಿ; ಹರಿಸು: ಓಡಾಡು; ಹತ್ತೆ: ಹತ್ತಿರ, ಸಮೀಪ; ಬರೆ: ಆಗಮಿಸು; ಅಳವಿ: ಶಕ್ತಿ, ಯುದ್ಧ; ಮುತ್ತಯ: ಮುತ್ತಾತ; ಸಿಲುಕು: ಬಂಧನಕ್ಕೊಳಗಾಗು; ಬಲ: ಶಕ್ತಿ; ಬೆದರು: ಹೆದರು; ಶರ: ಬಾಣ; ಮುಸುಕು: ಹೊದಿಕೆ; ಭಾರ್ಗವ: ಪರಶುರಾಮ; ತೊಡಚು: ಕಟ್ಟು, ಬಂಧಿಸು; ನೊಸಲು: ಹಣೆ; ಕೀಲಿಸು: ಜೋಡಿಸು, ನಾಟು; ದತ್ತ: ನೀಡಿದ;

ಪದವಿಂಗಡಣೆ:
ಮತ್ತೆ +ರಥವನು +ಹರಿಸಿ +ಭೀಷ್ಮನ
ಹತ್ತೆ +ಬರೆ +ಕಟ್ಟಳವಿಯಲಿ +ಹಾ
ಮುತ್ತಯನು +ಸಿಲುಕಿದನು+ ಶಿವಶಿವಯೆನುತ+ ಬಲ+ ಬೆದರೆ
ಹತ್ತು +ಶರದಲಿ +ಕೃಷ್ಣರಾಯನ
ಮತ್ತೆ +ಮುಸುಕಿದ+ ಬಹಳ +ಭಾರ್ಗವ
ದತ್ತ +ಬಾಣವ +ತೊಡಚಿ +ದೇವನ+ ನೊಸಲ+ ಕೀಲಿಸಿದ

ಅಚ್ಚರಿ:
(೧) ಮತ್ತೆ, ಹತ್ತೆ; ಮುತ್ತ, ದತ್ತ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಹಳ ಭಾರ್ಗವದತ್ತ ಬಾಣವ

ಪದ್ಯ ೨೦: ಅರ್ಜುನನು ಯಾವುದರ ಮಧ್ಯೆ ಸೇತುವೆಯನ್ನು ಕಟ್ಟಿದನು?

ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಮ್ಗಣಕೆ ಕಲಿಪಾರ್ಥ (ವಿರಾಟ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭಲೇ ಕರ್ಣ, ಬಿಲುಗಾರನೆಂದರೆ ನೀನು, ನಿನ್ನ ಬಾಣ ಪ್ರಯೋಗ ಎಷ್ಟು ಸೊಗಸು, ನೀನು ಪರಶುರಾಮನ ಸಂಪ್ರದಾಯದಲ್ಲಿ ಬಿಲ್ವಿದ್ಯೆಯನ್ನು ಕಲಿತವನು. ನಿನ್ನ ಮುಮ್ದೆ ನಮ್ಮ ಬಿಲ್ವಿದ್ಯೆ ಏನು ಮಹಾ ದೊಡ್ಡದು ಎಂದು ಹೊಗಳಿ ಅರ್ಜುನನು ಭೂಮಿಗೂ ಆಕಾಶಕ್ಕೂ ಬಾಣದ ಕಟ್ಟೆಯನ್ನು ಕಟ್ಟಿದನು.

ಅರ್ಥ:
ಪೂತು: ಭಲೇ; ಬಿಲುಗಾರ: ಧನುಧರ; ಮಝ: ಭಲೇ; ಸೂತ: ಸಾರಥಿ; ನಂದನ: ಮಗ; ಬಾಣ: ಸರಳ; ರಚನೆ: ನಿರ್ಮಾಣ; ನೂತನ: ನವೀನ, ಹೊಸ; ವಿದ್ಯೆ: ಜ್ಞಾನ; ಬಿಲು: ಬಿಲ್ಲು, ಚಾಪ; ಭಾರ್ಗವ: ಪರಶುರಾಮ; ಸಂಪ್ರದಾಯ: ರೂಢಿ, ಪದ್ಧತಿ; ಬಲುಮೆ: ಶಕ್ತಿ; ಅತಿಶಯ: ಹೆಚ್ಚು; ಸರಳು: ಬಾಣ; ಸೇತು: ಸೇತುವೆ, ಸಂಕ; ಕಟ್ಟು: ನಿರ್ಮಿಸು; ಗಗನ: ಆಗಸ; ಅಂಗಣ: ಆವರಣದ ಬಯಲು, ಅಂಗಳ; ಕಲಿ: ಶೂರ;

ಪದವಿಂಗಡಣೆ:
ಪೂತುರೇ +ಬಿಲುಗಾರ+ ಮಝರೇ
ಸೂತನಂದನ +ಬಾಣರಚನಾ
ನೂತನದ+ ಬಿಲುವಿದ್ಯೆ+ ಭಾರ್ಗವ +ಸಂಪ್ರದಾಯವಲ
ಆತುಕೊಳ್ಳೈ +ನಮ್ಮ +ಬಲುಮೆಗಳ್
ಏತರ್+ಅತಿಶಯವೆನುತ +ಸರಳಿನ
ಸೇತುವನು +ಕಟ್ಟಿದನು +ಗಗನಾಂಗಣಕೆ +ಕಲಿಪಾರ್ಥ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪರಿ – ಪೂತುರೇ ಬಿಲುಗಾರ ಮಝರೇ ಸೂತನಂದನ
(೨) ಅರ್ಜುನನ ಶಕ್ತಿ – ಸರಳಿನ ಸೇತುವನು ಕಟ್ಟಿದನು ಗಗನಾಮ್ಗಣಕೆ ಕಲಿಪಾರ್ಥ

ಪದ್ಯ ೬: ಯಾವ ಗ್ರಹಗಳು ಕರ್ಣನ ಜೊತೆ ನಿಂತರು?

ವಿವಿಧ ರತ್ನಾವಳಿ ಮಹಾನಿಧಿ
ಯವರ ದೆಸೆ ರಜತಾದಿ ಲೋಹ
ಪ್ರವರ ಧಾತುಗಳಿತ್ತಲತ್ತಲು ನಿಮ್ಮ ಥಟ್ಟಿನಲಿ
ರವಿ ಶನೈಶ್ಚರ ರಾಹು ಬುಧ ಭಾ
ರ್ಗವರು ಕರ್ಣನ ದೆಸೆಯಲಾ ಮಿ
ಕ್ಕವರು ಪಾರ್ಥನ ದೆಸೆಯಲಾಯಿತು ರಾಯ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೬ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರನೇ, ಹಲವಾರು ಬಗೆಯ ರತ್ನಗಳು, ಶ್ರೇಷ್ಠವಾದ ಸಂಪತ್ತು, ಅರ್ಜುನನ ಕಡೆ ಸೇರಿದರೆ, ಬೆಳ್ಳಿಯೇ ಮೊದಲಾದ ಲೋಹಗಳು ಕರ್ಣನ ಕಡೆ ಸೇರಿದರು. ರವಿ, ಶನಿ, ರಾಹು, ಬುಧ, ಶುಕ್ರಗಳು ಕರ್ಣನ ಬಳಿ ನಿಂತರೆ, ಉಳಿದ ಗ್ರಹಗಳು ಅರ್ಜನನ ಜೊತೆ ನಿಂತರು ಎಂದು ಸಂಜಯನು ತಿಳಿಸಿದನು.

ಅರ್ಥ:
ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮಣಿ, ವಜ್ರ, ಮಾಣಿಕ್ಯ; ಆವಳಿ: ಸಾಲು; ಮಹಾ: ಶ್ರೇಷ್ಠ; ನಿಧಿ: ಸಂಪತ್ತು; ದೆಸೆ: ಕಡೆ, ದಿಕ್ಕು; ರಜತ: ಬೆಳ್ಳಿ; ಆದಿ: ಮುಂತಾದ; ಲೋಹ: ಖನಿಜ; ಪ್ರವರ: ಪ್ರಧಾನ; ಧಾತು: ಮೂಲವಸ್ತು; ಥಟ್ಟು: ಪಕ್ಕ, ಕಡೆ; ರವಿ: ಭಾನು; ಶನೈಶ್ಚರ: ಶನಿಗ್ರಹ; ಭಾರ್ಗವ: ಶುಕ್ರ; ಮಿಕ್ಕ: ಉಳಿದ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವಿವಿಧ +ರತ್ನಾವಳಿ +ಮಹಾ+ನಿಧಿ
ಅವರ+ ದೆಸೆ +ರಜತ+ಆದಿ+ ಲೋಹ
ಪ್ರವರ+ ಧಾತುಗಳ್+ಇತ್ತಲ್+ಅತ್ತಲು +ನಿಮ್ಮ +ಥಟ್ಟಿನಲಿ
ರವಿ +ಶನೈಶ್ಚರ+ ರಾಹು +ಬುಧ +ಭಾ
ರ್ಗವರು +ಕರ್ಣನ +ದೆಸೆಯಲ್+ಆ+ ಮಿ
ಕ್ಕವರು +ಪಾರ್ಥನ+ ದೆಸೆಯಲಾಯಿತು+ ರಾಯ +ಕೇಳೆಂದ

ಅಚ್ಚರಿ:
(೧) ಗ್ರಹಗಳ ಹೆಸರಿಸಿದ ೪ನೇ ಸಾಲು

ಪದ್ಯ ೯: ಮತ್ತಾವ ಋಷಿಗಳು ಯಾಗಕ್ಕೆ ಆಗಮಿಸಿದರು?

ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಞವಲ್ಕ್ಯ ಋಷಿ
ಪವನ ಭಕ್ಷಕ ದೀರ್ಘತಮ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯವರರೆಂಬ ಮಹಾಮುನೀಂದ್ರರು ಬಂದರೊಗ್ಗಿನಲಿ (ಸಭಾ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ಯಾಗಕ್ಕೆ ಇನ್ನು ಹಲವಾರು ಮುನೀಂದ್ರರು ಆಗಮಿಸಿದರು. ಚ್ಯವನ, ಗೌತಮ, ವೇಣುಜಂಘ, ಕೌಶಿಕ, ಸತ್ಯತಪ, ಭಾರ್ಗವ, ಸುಮಾಲಿ, ಸುಮಿತ್ರ, ಕಾಶ್ಯಪ, ಯಾಜ್ಞವಲ್ಕ್ಯ, ಪವನಭಕ್ಷಕ, ದೀರ್ಘತಮ, ಗಾಲವ, ಶಿತ, ಶಾಂಡಿಲ್ಯ, ಮಾಂಡವ್ಯರೆಂಬ ಋಷಿಗಳು ಆಗಮಿಸಿದರು.

ಅರ್ಥ:
ಋಷಿ: ಮುನಿ; ಮಹಾ: ಶ್ರೇಷ್ಠ; ಒಗ್ಗು: ಸಮೂಹ, ಗುಂಪು;

ಪದವಿಂಗಡಣೆ:
ಚ್ಯವನ+ ಗೌತಮ +ವೇಣುಜಂಘ
ಪ್ರವರ +ಕೌಶಿಕ+ ಸತ್ಯತಪ+ ಭಾ
ರ್ಗವ +ಸುಮಾಲಿ +ಸುಮಿತ್ರ +ಕಾಶ್ಯಪ +ಯಾಜ್ಞವಲ್ಕ್ಯ +ಋಷಿ
ಪವನ +ಭಕ್ಷಕ +ದೀರ್ಘತಮ +ಗಾ
ಲವನು +ಶಿತ+ ಶಾಂಡಿಲ್ಯ+ ಮಾಂಡ
ವ್ಯವರರ್+ಎಂಬ+ ಮಹಾಮುನೀಂದ್ರರು+ ಬಂದರ್+ಒಗ್ಗಿನಲಿ

ಅಚ್ಚರಿ:
(೧) ೧೬ ಋಷಿಗಳನ್ನು ಹೆಸರಿಸಿರುವುದು