ಪದ್ಯ ೪೬: ದುರ್ಯೋಧನನ ಸಂಕಲ್ಪವೇಕೆ ಗಟ್ಟಿಗೊಂಡಿತು?

ಕದನವಾರಲಿ ಪಾಂಡುಸುತರಲಿ
ಕದನವಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಸಾಯುವುದು ಧರ್ಮವೆಂದಿರಿ, ಭಾರತ ವರ್ಷದಲ್ಲಿ ಪಾಂಡವರನ್ನು ಬಿಟ್ಟು ನಮಗೆ ವಿರೋಧಿಗಳಾರು? ಈಗ ಅವರು ನಮ್ಮನ್ನು ಗಂಧರ್ವರಿಂದ ಬಿಡುಗಡೆಗೊಳ್ಳಿಸಿರುವುದರಿಂದ ಅವರೊಡನೆ ಯುದ್ಧಮಾಡುವುದು ಉಚಿತವೇ? ಇದನ್ನು ತಿಳಿದೇ ನಾನು ಸಂಕಲ್ಪ ಭಂಗಮಾಡಲಾರೆ, ತಾವು ತಮ್ಮ ಮನೆಗಳಿಗೆ ಹಿಂದಿರುಗಿ ನನ್ನ ಮೇಲೆ ಕರುಣೆ ತೋರಿಸಬೇಡಿ ಎಂದು ಬೇಡಿದನು.

ಅರ್ಥ:
ಕದನ: ಯುದ್ಧ; ಸುತ: ಮಕ್ಕಳು; ಉಚಿತ: ಸರಿ; ಇದಿರು: ಎದುರು; ಬಳಿಕ: ನಂತರ; ವರುಷ: ಪ್ರದೇಶ; ಸೀಮೆ: ಎಲ್ಲೆ, ಗಡಿ; ಸಂಕಲ್ಪ: ನಿಶ್ಚಯ; ಭಂಗ: ಮುರಿಯುವಿಕೆ; ಆಸ್ಪದ: ಪ್ರತಿಷ್ಠೆ; ಸದನ: ಆಲಯ; ಅಭಿಮುಖ: ಎದುರು; ಕರುಣೆ: ದಯೆ; ಭೂಪ: ರಾಜ;

ಪದವಿಂಗಡಣೆ:
ಕದನವ್+ಆರಲಿ +ಪಾಂಡು+ಸುತರಲಿ
ಕದನವಾಡುವುದ್+ಉಚಿತವೇ +ನಮಗ್
ಇದಿರು +ಬಳಿಕಾರುಂಟು +ಭಾರತ+ ವರುಷ+ ಸೀಮೆಯಲಿ
ಇದನರಿತು +ಸಂಕಲ್ಪ +ಭಂಗ
ಆಸ್ಪದವ +ಮಾಡುವುದ್+ಒಳ್ಳಿತೇ +ನಿಜ
ಸದನಕ್+ಅಭಿಮುಖರಾಗಿ+ ಕರುಣಿಪುದೆಂದನಾ +ಭೂಪ

ಅಚ್ಚರಿ:
(೧) ಹಿಂದಿರುಗಿ ಎಂದು ಹೇಳುವ ಪರಿ – ನಿಜಸದನಕಭಿಮುಖರಾಗಿ

ಪದ್ಯ ೪೩: ಊರ್ವಶಿಯು ಅರ್ಜುನನ್ನು ಏನಾಗೆಂದು ಶಪಿಸಿದಳು?

ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಹೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ (ಅರಣ್ಯ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲವೋ ನರರೂಪಿನಿಂದಿರುವ ಅಧಮ ಮೃಗವೇ, ಭಾರತ ವರ್ಷದಲ್ಲಿ ಒಂದು ವರ್ಷ ಕಾಲ ನಪುಂಸಕನಾಗಿರು, ವಿಷ್ಣುವಿನ ಮೊರೆಹೋಗು, ಶಿವನನ್ನು ಹಿಂಬಾಲಿಸು, ನಿಮ್ಮ ತಂದೆಗೆ ಹೇಳು, ನನ್ನ ಶಾಪವು ತಪ್ಪುವುದಿಲ್ಲ ಹೋಗು ಎಂದು ಊರ್ವಶಿಯು ಶಾಪವನ್ನು ಕೊಟ್ಟು ಅಲ್ಲಿಂದ ನಿರ್ಗಮಿಸಿದಳು.

ಅರ್ಥ:
ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು, ನೀಚ; ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಭೂಮಿ: ಇಳೆ; ವರುಷ: ಸಂವತ್ಸರ; ಅಂತರ: ವರೆಗೂ; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಚರಿಸು: ಓಡಾಡು; ನಿರಂತರ: ಎಡೆಬಿಡದ, ಸತತವಾಗಿ; ಆಯ: ಪರಿಮಿತಿ; ಹರಿ: ವಿಷ್ಣು; ಮರೆಹೋಗು: ಶರಣಿಗೆ ತೆರಳು, ಸಹಾಯ ಬೇಡು; ಹರ: ಶಿವ; ಅನುಸರಿಸು: ಹಿಂಬಾಲಿಸು; ಅಯ್ಯ: ತಂದೆ; ಹೇಳು: ತಿಳಿಸು; ನಿರುತ: ದಿಟ, ಸತ್ಯ, ನಿಶ್ಚಯ; ತಪ್ಪು: ಸರಿಯಿಲ್ಲದ; ಹೋಗು: ತೆರಳು; ಮೊಗ: ಮುಖ; ಚಪಲೆ: ಚಂಚಲೆ;

ಪದವಿಂಗಡಣೆ:
ನರ+ಮೃಗ+ಅಧಮ +ನಿಮ್ಮ +ಭಾರತ
ವರುಷ +ಭೂಮಿಯೊಳ್+ಒಂದು+ ವರುಷಾಂ
ತರ+ ನಪುಂಸಕನಾಗಿ+ ಚರಿಸು +ನಿರಂತರ್+ಆಯದಲಿ
ಹರಿಯ +ಮರೆಹೊಗು +ಹರನ +ನೀನ್+ಅನು
ಸರಿಸು +ನಿಮ್ಮಯ್ಯಂಗೆ +ಹೇಳಿದು
ನಿರುತ +ತಪ್ಪದು +ಹೋಗೆನುತ +ಮೊಗದಿರುಹಿದಳು +ಚಪಲೆ

ಅಚ್ಚರಿ:
(೧) ಊರ್ವಶಿಯ ಶಾಪ – ನಿಮ್ಮ ಭಾರತವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು ನಿರಂತರಾಯದಲಿ
(೨) ಊರ್ವಶಿಯು ಬಯ್ಯುವ ಪರಿ – ನರಮೃಗಾಧಮ
(೩) ವರುಷ – ೨ ಸಾಲಿನ ಮೊದಲ ಹಾಗು ಕೊನೆ ಪದ