ಪದ್ಯ ೪೫: ದ್ರೋಣನ ಆಕ್ರಮಣ ಹೇಗಿತ್ತು?

ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೂರ್ಯ ಕಿರಣಗಳ ದಾಳಿಯನ್ನು ಕತ್ತಲು ಎದುರಿಸೆ ನಿಲ್ಲಬಹುದೇ? ದ್ರೋಣನ ಅಮೋಘವಾದ ಬಾಣಗಳ ಮಳೆಯಿಂದ ಪಾಂಡವವೀರರ ಮೈಗಳು ರಕ್ತಮಯವಾದವು. ನಿರಂತರ ಬಾಣಗಳ ಪ್ರಯೋಗಕ್ಕೆ ಪಾಂಡವರು ಈಡಾದರೇ? ಧೃತರಾಷ್ಟ್ರ ಕೇಳು ನಿನ್ನ ಪರಾಕ್ರಮಿಗಳೆದುರು ನಿಲ್ಲುವರು ಯಾರು?

ಅರ್ಥ:
ತರಹರಿಸು: ತಡಮಾಡು, ಸೈರಿಸು; ತಿಮಿರ: ರಾತ್ರಿ; ಭಾನು: ಸೂರ್ಯ; ರಶ್ಮಿ: ಕಿರಣ; ಮುಂದೆ: ಎದುರು; ನೂನ: ಕೊರತೆ, ಭಂಗ; ಶರ: ಬಾಣ; ವರ್ಷ: ಮಳೆ; ನಾದ: ಧ್ವನಿ, ಶಬ್ದ; ಸುಭಟ: ಪರಾಕ್ರಮಿ; ಒಡಲು: ದೇಹ; ನಿರಂತರ: ಸದಾ; ನಿಶಿತ: ಹರಿತ; ಶರ: ಬಾಣ; ಸಂಧಾನ: ಸೇರು, ಒಡಂಬಡಿಕೆ; ಇವದಿರು: ಇಷ್ಟು ಜನ; ಲಕ್ಷ್ಯ: ಗುರುತು, ಚಿಹ್ನೆ; ಆನೆ: ಪರಾಕ್ರಮಿಗಳು, ಗಜ; ಇದಿರು: ಎದುರು; ಕೇಳು: ಆಲಿಸು;

ಪದವಿಂಗಡಣೆ:
ಏನು +ತರಹರಿಸುವುದು +ತಿಮಿರವು
ಭಾನು+ರಶ್ಮಿಯ+ ಮುಂದೆ+ ದ್ರೋಣನ
ನೂನ +ಶರ+ವರ್ಷದಲಿ+ ನಾದವು +ಸುಭಟರ್+ಒಡಲುಗಳು
ಆ +ನಿರಂತರ +ನಿಶಿತ+ಶರ +ಸಂ
ಧಾನಕ್+ಇವದಿರು +ಲಕ್ಷ್ಯವೇ +ನಿ
ನ್ನಾನೆಗಳಿಗ್+ಇದಿರಾವನೈ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಏನು ತರಹರಿಸುವುದು ತಿಮಿರವು ಭಾನುರಶ್ಮಿಯ ಮುಂದೆ

ಪದ್ಯ ೫೧: ರಾಕ್ಷಸರು ಯಾವಜ್ಞಾನದಲ್ಲಿ ನಿಪುಣರು?

ಏನ ಹೇಳ್ವುದು ಧರ್ಮತತ್ವ ನಿ
ಧಾನದಲಿ ಮುನಿ ಮುಖ್ಯರಿವರ
ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
ಆ ನಿಶಾಟರು ಮೆಚ್ಚರಗ್ಗದ
ಭಾನುರಶ್ಮಿಯನಂಧಕಾರ
ಜ್ಞಾನನಿಷ್ಠರು ನಿಪುಣರೈಸಲೆಯೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಮಾತನ್ನು ಮುಂದುವರಿಸುತ್ತಾ, ಧರ್ಮತತ್ತ್ವದ ನೆಲೆಯನ್ನರಿಯುವುದರಲ್ಲಿ ಈ ಋಷಿಮುಖ್ಯರು ಅಜ್ಞಾನಿಗಳು, ಶಿಶುಪಾಲನೇ ತತ್ತ್ವಜ್ಞಾನಿ, ಇದಕ್ಕೆ ಏನೆಂದು ಹೇಳೋಣ? ರಾಕ್ಷಸರು ಸೂರ್ಯನ ಬೆಳಕನ್ನು ಮೆಚ್ಚುವುದಿಲ್ಲ ಏಕೆಂದರೆ ಅವರು ಅಂಧಕಾರಜ್ಞಾನದಲ್ಲಿ ನಿಪುಣರಲ್ಲವೇ ಎಂದು ಭೀಷ್ಮರು ಹೇಳಿದರು.

ಅರ್ಥ:
ಹೇಳು: ತಿಳಿಸು; ಧರ್ಮ: ಧಾರಣೆ ಮಾಡಿದುದು, ಆಚಾರ, ಪುಣ್ಯ; ನಿಧಾನ: ಸಂಪತ್ತು, ಸಾವಕಾಶ; ಮುನಿ:ಋಷಿ; ಮುಖ್ಯ: ಪ್ರಮುಖ; ಅಜ್ಞಾನಿ: ತಿಳಿಯದವ; ತತ್ವ:ಅರ್ಥ, ತಾತ್ಪರ್ಯ; ಪಂಡಿತ: ಕೋವಿದ; ನಿಶಾಟರು: ರಾತ್ರಿಯಲ್ಲಿ ತಿರುಗುವ; ಮೆಚ್ಚು: ಒಲುಮೆ, ಪ್ರೀತಿ; ಅಗ್ಗ: ಶ್ರೇಷ್ಠ; ಭಾನು: ಸೂರ್ಯ; ರಶ್ಮಿ: ಕಿರಣ; ಅಂಧಕಾರ: ಕತ್ತಲು; ನಿಷ್ಠ: ಶ್ರದ್ಧೆಯುಳ್ಳವನು; ನಿಪುಣ: ಪಾರಂಗತ, ಪ್ರವೀಣ; ಐಸಲೇ: ಅಲ್ಲವೇ;

ಪದವಿಂಗಡಣೆ:
ಏನ +ಹೇಳ್ವುದು +ಧರ್ಮತತ್ವ +ನಿ
ಧಾನದಲಿ+ ಮುನಿ +ಮುಖ್ಯರ್+ಇವರ್
ಅಜ್ಞಾನಿಗಳು+ ಶಿಶುಪಾಲ+ ತತ್ವಜ್ಞಾನ +ಪಂಡಿತನು
ಆ +ನಿಶಾಟರು +ಮೆಚ್ಚರ್+ಅಗ್ಗದ
ಭಾನುರಶ್ಮಿಯನ್+ಅಂಧಕಾರ
ಜ್ಞಾನ+ನಿಷ್ಠರು+ ನಿಪುಣರ್+ಐಸಲೆ+ಎಂದನಾ ಭೀಷ್ಮ

ಅಚ್ಚರಿ:
(೧) ಶಿಶುಪಾಲನನ್ನು ತೆಗಳುವ ಪರಿ – ಮುನಿ ಮುಖ್ಯರಿವರ ಜ್ಞಾನಿಗಳು ಶಿಶುಪಾಲ ತತ್ವಜ್ಞಾನ ಪಂಡಿತನು
(೨) ರಾಕ್ಷಸರನ್ನು ತೆಗಳುವ ಪರಿ – ನಿಶಾಟರು ಮೆಚ್ಚರಗ್ಗದ ಭಾನುರಶ್ಮಿಯನಂಧಕಾರ ಜ್ಞಾನನಿಷ್ಠರು ನಿಪುಣರೈಸಲೆ