ಪದ್ಯ ೨೨: ಕರ್ಣನು ಭೀಮನೊಡನೆ ಹೇಗೆ ಯುದ್ಧ ಮಾಡಿದನು?

ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಆರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ (ದ್ರೋಣ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೋ ಭೀಮ, ನುಗ್ಗುನುಸಿಗಳನ್ನು ಬಡಿದು ಬಂಡು ವೃಥ ಅಹಂಕಾರದಿಂದ ಸಾಹಸ ಮಾಡಲು ಬಂದರೆ ಇಲ್ಲಿ ನಡೆಯುವುದಿಲ್ಲ. ನಾನು ಕರ್ಣ, ಎನ್ನುತ್ತಾ ಗರ್ಜಿಸಿ ಭೀಮನನ್ನು ಐದು ಬಾಣಗಳಿಂದ ಹೊಡೆಯಲು ಭೀಮನು ಗಂಭೀರ ಶಬ್ದಗಳಿಂದ ಕರ್ಣನಿಗೆ ಹೀಗೆ ಹೇಳಿದನು.

ಅರ್ಥ:
ಸಾರು: ಪ್ರಕಟಿಸು, ಘೋಷಿಸು; ವೃಥ: ಸುಮ್ಮನೆ; ಅಹಂಕಾರ: ಗರ್ವ; ನುಗ್ಗು: ಳ್ಳಿಕೊಂಡು ಮುಂದೆ ಸರಿ; ಸದೆ: ಹೊಡಿ, ಬಡಿ; ಕಠೋರ: ಬಿರುಸಾದ; ಸಾಹಸ: ಪರಾಕ್ರಮ; ಕೊಳ್ಳು: ಪಡೆ; ಅಂಬು: ಬಾಣ; ಪವನಕುಮರ: ವಾಯುಪುತ್ರ (ಭೀಮ); ಮೇಘ: ಮೋಡ; ಘನ: ಶ್ರೇಷ್ಠ; ಗಂಭೀರ: ಆಳವಾದ; ರವ: ಶಬ್ದ; ನುಡಿ: ಮಾತಾಡಿಸು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಸಾರ್+ಎಲವೊ +ಸಾಯದೆ +ವೃಥ+ಅಹಂ
ಕಾರವ್+ಏತಕೆ +ನುಗ್ಗ +ಸದೆದ +ಕ
ಠೋರ+ ಸಾಹಸವ್+ಇಲ್ಲಿ +ಕೊಳ್ಳದು +ಕರ್ಣ +ತಾನೆನುತ
ಆರಿದ್+ಐದಂಬಿನಲಿ +ಪವನಕು
ಮಾರಕನನ್+ಎಸೆ +ಮೇಘ +ಘನ+ಗಂ
ಭೀರ + ರವದಲಿ +ಭೀಮ +ನುಡಿದನು +ಭಾನುನಂದನನ

ಅಚ್ಚರಿ:
(೧) ಪವನಕುಮಾರ, ಭಾನುನಂದನ – ಕರ್ಣ ಮತ್ತು ಭೀಮರನ್ನು ಕರೆದ ಪರಿ
(೨) ಭೀಮನ ಆರ್ಭಟ – ಮೇಘ ಘನಗಂಭೀರರವದಲಿ ಭೀಮ ನುಡಿದನು

ಪದ್ಯ ೧೪: ಶ್ರೀಕೃಷ್ಣನು ಯಾರನ್ನು ನೆನೆದನು?

ಯಮನ ನೆನೆಯಲು ಬಂದನಾಕ್ಷಣ
ಕಮಲನಾಭಗೆ ಕರವ ಮುಗಿದನು
ಯಮನು ಬೆಸನೇನುಂಟು ಜೀಯ ನಿರೂಪಿಸುವುದೆನಲು
ಸುಮನಸಾನತ ಚರಣ ನುಡಿದನು
ಯಮಗೆ ಕೃತ್ರಿಮ ಮಖದಲಳಿವರು
ಹವಣ ಹೇಳೆಂದೆನಲು ನುಡಿದನು ಭಾನುನಂದನನು (ಅರಣ್ಯ ಪರ್ವ, ೨೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯಮನನ್ನು ನೆನೆಯಲು ಅವನು ಬಂದು ನಮಸ್ಕರಿಸಿದನು. ಒಡೆಯ ನನಗೇನು ಕಾರ್ಯವೆಂದು ಕೇಳಲು, ಒಳ್ಳೆಯ ಮನಸ್ಸುಳ್ಳವರಿಂದ ನಮಸ್ಕರಿಸಲ್ಪಟ್ಟ ಚರಣಯುಳ್ಳವನಾದ ಶ್ರೀಕೃಷ್ಣನು ನುಡಿಯುತ್ತಾ, ಪಾಂಡವರು ಮಾರಣ ಹೋಮದಿಂದ ನಾಶವಾಯುತ್ತಾರೆ ಇದಕ್ಕೇನುಪಾಯ ಎಂದು ಕೇಳಿದನು. ಆಗ ಯಮನು ಉತ್ತರಿಸಿದನು.

ಅರ್ಥ:
ಯಮ: ಕಾಲ; ನೆನೆ: ಜ್ಞಾಪಿಸು; ಬಂದು: ಆಗಮಿಸು; ಕ್ಷಣ: ನಿಮಿಷ, ಕಾಲ; ಕಮಲನಾಭ: ಕಮಲವನ್ನು ನಾಭಿಯಲ್ಲಿ ಹೊಂದಿರುವವ (ವಿಷ್ಣು); ಕರ: ಹಸ್ತ, ಕೈ; ಮುಗಿ: ನಮಸ್ಕರಿಸು; ಬೆಸ: ಕಾರ್ಯ; ಜೀಯ: ಒಡೆಯ; ನಿರೂಪಿಸು: ತಿಳಿಸು; ಸುಮನಸ: ದೇವತೆ, ಒಳ್ಳೆಯ ಮನಸ್ಸುಳ್ಳ; ಆನತ: ನಮಸ್ಕರಿಸಿದ; ಚರಣ: ಪಾದ; ನುಡಿ: ಮಾತಾಡು; ಕೃತ್ರಿಮ: ಮೋಸ; ಮಖ: ಯಜ್ಞ; ಅಳಿ: ನಾಶ; ಹವಣ:ಉಪಾಯ, ಸಿದ್ಧತೆ; ಹೇಳು: ತಿಳಿಸು; ನುಡಿ: ಮಾತಾಡು; ಭಾನುನಂದನ: ಸೂರ್ಯನ ಮಗ (ಯಮ);

ಪದವಿಂಗಡಣೆ:
ಯಮನ +ನೆನೆಯಲು +ಬಂದನ್+ಆ+ಕ್ಷಣ
ಕಮಲನಾಭಗೆ +ಕರವ +ಮುಗಿದನು
ಯಮನು +ಬೆಸನ್+ಏನುಂಟು +ಜೀಯ +ನಿರೂಪಿಸುವುದ್+ಎನಲು
ಸುಮನಸಾನತ ಚರಣ+ ನುಡಿದನು
ಯಮಗೆ +ಕೃತ್ರಿಮ +ಮಖದಲ್+ಅಳಿವರು
ಹವಣ+ ಹೇಳೆಂದೆನಲು +ನುಡಿದನು +ಭಾನುನಂದನನು

ಅಚ್ಚರಿ:
(೧) ಕೃಷ್ಣನನ್ನು ಕಮಲನಾಭ, ಸುಮನಸಾನತ ಚರಣ ಎಂದು ಕರೆದಿರುವುದು
(೨) ಯಮನನ್ನು ಭಾನುನಂದನ ಎಂದು ಕರೆದಿರುವುದು

ಪದ್ಯ ೬: ಕರ್ಣನು ವಿಪ್ರನನ್ನು ಏನು ಬೇಡಲು ಕೇಳಿದನು?

ಏನು ಬಿಜಯಂಗೈದ ಹದನನು
ಮಾನನಿಧಿ ನೀವ್ ಬೆಸಸಿಯೆನೆ ರವಿ
ಸೂನುವಿಂಗಿತವರಿಯುತಾಶೀರ್ವಾದವನು ಮಾಡಿ
ಸಾನುರಾಗದಿ ಹರಸಿದರೆ ವರ
ಭಾನುನಂದನೆ ಹೆಚ್ಚಿ ನಿಮ್ಮಡಿ
ಯೇನುವನು ವರಿಸಿದುದನಿತ್ತಪೆನೆಂದನಾ ಕರ್ಣ (ಅರಣ್ಯ ಪರ್ವ, ೨೩ ಸಂಧಿ, ೬ ಪದ್ಯ)

ತಾತ್ಪರ್ಯ:
ತಾವು ಇಲ್ಲಿಯವರೆಗೂ ಬಂದಿದುದೇಕೆ ಎಂದು ಕರ್ಣನು ಕೇಳಿದನು. ದೇವೇಂದ್ರನು ಅವನನ್ನು ಆಶೀರ್ವದಿಸಿದನು. ಕರ್ಣನು ಅತೀವ ಸಂತೋಷಪಟ್ಟು ನೀನು ಏನನ್ನು ಕೇಳಿದರೂ ಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡು; ಹದ: ಸ್ಥಿತಿ; ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಟ್ಟುಕೊಂಡಿರುವವ; ಬೆಸ: ಕೆಲಸ, ಕಾರ್ಯ; ರವಿ: ಸೂರ್ಯ; ಸೂನು: ಮಗ; ಇಂಗಿತ: ಆಶಯ, ಅಭಿಪ್ರಾಯ; ಅರಿ: ತಿಳಿ; ಆಶೀರ್ವಾದ: ಹರಸು; ಅನುರಾಗ: ಪ್ರೀತಿ; ಹರಸು: ಆಶೀರ್ವದಿಸು; ವರ: ಶ್ರೇಷ್ಠ; ಭಾನು: ಸೂರ್ಯ; ನಂದನ: ಮಗ; ಹೆಚ್ಚು: ಅಧಿಕ; ಅಡಿ: ಪಾದ; ವರಿಸು: ಕೇಳು; ಇತ್ತು: ನೀಡು;

ಪದವಿಂಗಡಣೆ:
ಏನು +ಬಿಜಯಂಗೈದ+ ಹದನನು
ಮಾನನಿಧಿ +ನೀವ್ +ಬೆಸಸಿಯೆನೆ +ರವಿ
ಸೂನುವ್+ಇಂಗಿತವ್+ಅರಿಯುತ+ಆಶೀರ್ವಾದವನು +ಮಾಡಿ
ಸ+ಅನುರಾಗದಿ +ಹರಸಿದರೆ+ ವರ
ಭಾನುನಂದನೆ +ಹೆಚ್ಚಿ +ನಿಮ್ಮಡಿ
ಯೇನುವನು +ವರಿಸಿದುದನ್+ಇತ್ತಪೆನ್+ಎಂದನಾ +ಕರ್ಣ

ಅಚ್ಚರಿ:
(೧) ರವಿಸೂನು, ಭಾನುನಂದನ – ಕರ್ಣನನ್ನು ಕರೆದ ಪರಿ

ಪದ್ಯ ೧೩: ಧೃತರಾಷ್ಟ್ರನು ಯಾವ ವಿಷವಯವನ್ನು ತಿಳಿಯಲು ಬಯಸಿದನು?

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ (ಕರ್ಣ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ದುಃಖದಿಂದ ಧೃತರಾಷ್ಟ್ರ ಸಂಜಯನನ್ನು ಕೇಳುತ್ತಾ, ಭೀಷ್ಮ ಪಿತಾಮಹರು ಗಾಯಗೊಂಡು ಬಾಣಗಳ ಮೇಲೆ ಮಲಗಿದರು, ದ್ರೋಣಾಚಾರ್ಯರ ಪ್ರಾಣದ ತೊಟ್ಟು ಉದುರಿತು, ಕರ್ಣನು ನಮ್ಮನ್ನು ಈ ಸ್ಥಿತಿಗೆ ತಂದನು, ಇನ್ನೂ ದುರ್ಯೋಧನನು ಸಾಯಲಿಲ್ಲವೇ? ಹೋಗಲಿ ಆ ನಾಯಿಯ ಸುದ್ದಿ ಬೇಡ, ಕರ್ಣನು ಅಳಿದನೇ? ಆ ದುಃಖವಾರ್ತೆಯನ್ನು ವಿಸ್ತಾರವಾಗಿ ತಿಳಿಸು ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಘಾಯ: ನೋವು, ಹುಣ್ಣು; ಬಳಿಕ: ನಂತರ; ಆಯುಧ: ಶಸ್ತ್ರ; ಗುರು: ಆಚಾರ್ಯ; ತೊಡಬೆಗಳಚು: ಆಯುಧದ ಸಮೂಹವನ್ನು ಕಳಚು; ಅವಸ್ಥೆ: ಸ್ಥಿತಿ; ತಂದು: ಬರೆಮಾಡು; ಭಾನು: ಸೂರ್ಯ; ನಂದನ: ಮಗ; ಸಾಯನೇ: ಮರಣ ಹೊಂದಿದನೇ; ಮಗ: ಸುತ; ನಾಯ: ನಾಯಿ, ಶ್ವಾನ; ನುಡಿ: ಮಾತು; ಕಡೆ: ಕೊನೆ; ಶೋಕ: ದುಃಖ; ವಿಸ್ತರಿಸು: ವಿವರಣೆ, ವ್ಯಾಪ್ತಿ; ಹೇಳು: ತಿಳಿಸು;

ಪದವಿಂಗಡಣೆ:
ಘಾಯವಡೆದನು +ಭೀಷ್ಮ+ ಬಳಿಕಿನೊಳ್
ಆಯುಧದ +ಗುರು +ತೊಡಬೆಗಳಚಿದನ್
ಈ+ ಅವಸ್ಥೆಗೆ +ನಮ್ಮ +ತಂದನು +ಭಾನು+ನಂದನನು
ಸಾಯನೇ +ಮಗನ್+ಇನ್ನು +ಸಾಕ್+ಆ
ನಾಯ +ನುಡಿಯಂತಿರಲಿ+ ಕರ್ಣಂಗ್
ಆಯಿತೇ +ಕಡೆ +ಶೋಕವನು +ವಿಸ್ತರಿಸಿ+ ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ದುರ್ಯೋಧನನನ್ನು ಬಯ್ಯುವ ಪರಿ – ಸಾಕಾ ನಾಯ ನುಡಿಯಂತಿರಲಿ
(೨) ಕರ್ಣನನ್ನು ಭಾನುನಂದನ ಎಂದು ಕರೆದಿರುವುದು
(೩) ದ್ರೋಣರನ್ನು ಆಯುಧದ ಗುರು ಎಂದು ಕರೆದಿರುವುದು