ಪದ್ಯ ೧೩: ಬಂಡಿಗಳಲ್ಲಿ ಯಾವ ವಸ್ತುಗಳನ್ನು ಹೇರಿದರು?

ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ
ವರದುಕೂಲದ ಪಟ್ಟ ಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು (ಗದಾ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲಕ್ಷಗಟ್ಟಲೆ ಬಂಡಿಗಳಲ್ಲಿ ಆಭರಣಗಳ ಪೆಟ್ಟಿಗೆಗಳನ್ನು ಹೇರಿದರು. ಪಟ್ಟವಾಳಿ ವಸ್ತ್ರಗಳು ಬಂಗಾರದ ಪಾತ್ರೆಗಳು ಇವನ್ನು ಬಂಗಾರದ ಪೆಟ್ಟಿಗೆಗಳಲ್ಲಿ ಹಾಕಿ ಬಂಡಿಯಲ್ಲಿಟ್ಟು ಕಳುಹಿಸಿದರು.

ಅರ್ಥ:
ಸರಕು: ಸಾಮಾನು, ಸಾಮಗ್ರಿ; ಹಿಡಿ: ಗ್ರಹಿಸು; ಬಂಡಿ: ರಥ; ಶತ: ನೂರು; ಸಾವಿರ: ಸಹಸ್ರ; ನೃಪಾಲಯ: ಅರಮನೆ; ವಿವಿಧ: ಹಲವಾರು; ಆಭರಣ: ಒಡವೆ; ಭರಿತ: ತುಂಬಿದ; ಭೂರಿ: ಹೆಚ್ಚು, ಅಧಿಕ; ಪೆಟ್ಟಿಗೆ: ಡಬ್ಬ; ಘಾಡಿಸು: ವ್ಯಾಪಿಸು; ರಥ: ಬಂಡಿ; ವರ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ಪಟ್ಟ: ವಸ್ತ್ರ; ಕರ್ಮ: ಕೆಲಸ; ಒತ್ತು: ಮುತ್ತು, ಚುಚ್ಚು; ಚಾಮೀಕರ: ಬಂಗಾರ, ಚಿನ್ನ; ಬಹುವಿಧ: ಹಲವಾರು ರೀತಿ; ಭಾಂಡ: ಒಡವೆ, ಆಭರಣ; ನೂಕು: ತಳ್ಳು;

ಪದವಿಂಗಡಣೆ:
ಸರಕ +ಹಿಡಿದವು +ಬಂಡಿ +ಶತ+ಸಾ
ವಿರ +ನೃಪಾಲಯದಿಂದ +ವಿವಿಧ
ಆಭರಣ+ಭರಿತದ +ಭೂರಿ +ಪೆಟ್ಟಿಗೆ +ಘಾಡಿಸಿತು +ರಥವ
ವರ+ದುಕೂಲದ +ಪಟ್ಟ +ಕರ್ಮದ
ಥರದದಿಂದ್+ಒತ್ತಿದವು +ಚಾಮೀ
ಕರಮಯದ +ಬಹುವಿಧದ +ಭಾಂಡದ +ಬಂಡಿ +ನೂಕಿದವು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಹುವಿಧದ ಭಾಂಡದ ಬಂಡಿ

ಪದ್ಯ ೩೭: ಪಾಂಡವರು ಕಾಡಿನಲ್ಲಿ ಹೇಗಿದ್ದರು?

ದಿನಪ ಕೃಪೆ ಮಾಡಿದನಲೇ ಕಾಂ
ಚನಮಯದ ಭಾಂಡವನು ಬಳಿಕಾ
ವನಜಮುಖಿ ಮಾಡಿದ ಸುಪಾಕದ ಪಡುರಸಾನ್ನದಲಿ
ಮುನಿಜನಕೆ ಪರಿಜನಕೆ ಭೂಸುರ
ಜನಕೆ ತುಷ್ಟಿಯ ಮಾಡಿ ಭೂಪತಿ
ವನದೊಳಿದ್ದನು ವೀರನಾರಾಯಣನ ಕರುಣದಲಿ (ಅರಣ್ಯ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೂರ್ಯನ ಆಶೀರ್ವಾದದಿಂದ ದೊರೆತ ಚಿನ್ನದ ಅಕ್ಷಯಪಾತ್ರೆಯಲ್ಲಿ ದ್ರೌಪದಿಯು ಷಡ್ರಸ ಭರಿತವಾದ ಅಡುಗೆಯನ್ನು ಮಾಡುತ್ತಿದ್ದಳು, ಅದರಿಂದ ಮುನಿಗಳು, ಪರಿವಾರದವರು, ಬ್ರಾಹ್ಮಣರನ್ನು ಯುಧಿಷ್ಠಿರನು ತೃಪ್ತಿಪಡಿಸುತ್ತಿದ್ದನು. ಹೀಗೆ ಶ್ರೀಕೃಷ್ಣನ ಕೃಪೆಯಿಂದ ಪಾಂಡವರು ಅರಣ್ಯವಾಸವನ್ನಾರಂಭಿಸಿದರು.

ಅರ್ಥ:
ದಿನಪ: ಸೂರ್ಯ; ಕೃಪೆ: ದಯೆ, ಕರುಣೆ; ಕಾಂಚನ: ಚಿನ್ನ; ಭಾಂಡ: ಪಾತ್ರೆ; ಬಳಿಕ: ನಂತರ; ವನಜಮುಖಿ: ಕಮಲದಂತ ಮುಖವುಳ್ಳ (ದ್ರೌಪದಿ); ಸುಪಾಕ: ಅಡುಗೆ; ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಅನ್ನ: ಊಟ; ಮುನಿ: ಋಷಿ; ಪರಿಜನ; ಪರಿವಾರದ ಜನ; ಭೂಸುರ: ಬ್ರಾಹ್ಮಣ; ತುಷ್ಟಿ: ತೃಪ್ತಿ; ಭೂಪತಿ: ರಾಜ; ವನ: ಕಾನನ; ಕರುಣ: ದಯೆ;

ಪದವಿಂಗಡಣೆ:
ದಿನಪ +ಕೃಪೆ +ಮಾಡಿದನಲೇ +ಕಾಂ
ಚನಮಯದ+ ಭಾಂಡವನು+ ಬಳಿಕಾ
ವನಜಮುಖಿ +ಮಾಡಿದ +ಸುಪಾಕದ +ಪಡುರಸಾನ್ನದಲಿ
ಮುನಿಜನಕೆ +ಪರಿಜನಕೆ+ ಭೂಸುರ
ಜನಕೆ +ತುಷ್ಟಿಯ +ಮಾಡಿ +ಭೂಪತಿ
ವನದೊಳಿದ್ದನು +ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ದಿನ, ಕಾಂಚನ, ವನ, ಜನ – ಪ್ರಾಸ ಪದಗಳು

ಪದ್ಯ ೩೪: ದುಷ್ಟರನ್ನು ಏನು ಮಾಡುವೆನೆಂದು ಭೀಮನು ಹೇಳಿದನು?

ಉರಿವ ಕೋಪಾಗ್ನಿಯಲಿ ಕರ್ಣನ
ಶಿರದ ಭಾಂಡದಲಿವನ ನೊರೆ ನೆ
ತ್ತರಿನಲಿವನಗ್ರಜನಕೊಬ್ಬಿದ ನೆಣನ ಕೊಯ್ಕೊಯ್ದು
ದುರುಳ ಶಕುನಿಯ ಕಾಳಿಜದೊಳೊಡೆ
ವೆರಸಿ ಕುದಿಸಿ ಮಹೋಗ್ರಭೂತದ
ನೆರವಿಗುಣಲಿಕ್ಕುವೆನು ಸತಿ ಕೇಳೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ನನ್ನಲ್ಲಿ ಹೊಮ್ಮುತ್ತಿರುವ ಕೋಪಾಗ್ನಿಯಲ್ಲಿ ಕರ್ಣನ ತಲೆಯ ಪಾತ್ರೆಯನ್ನಿಟ್ಟು, ದುಶ್ಯಾಸನ ರಕ್ತದಲ್ಲಿ ಕೊಬ್ಬಿದ ದುರ್ಯೋಧನನ ಮಾಂಸವನ್ನು ಕಡಿದು ಕಡಿದು ಹಾಕಿ, ಶಕುನಿಯ ಪಿತ್ತಕೋಶವನ್ನು ಸೇರಿಸಿ ಹದವಾಗಿ ಕುಇಸಿ ಮಹೋಗ್ರವಾದ ಭೂತಗಳ ಹಿಂಡಿಗೆ ಊಟಕ್ಕೆ ಹಾಕುತ್ತೇನೆ ಕೇಳು ಎಂದು ಭೀಮನು ದ್ರೌಪದಿಗೆ ಹೇಳಿದನು.

ಅರ್ಥ:
ಉರಿ: ಜ್ವಾಲೆ; ಕೋಪ: ರೋಷ; ಅಗ್ನಿ: ಬೆಂಕಿ; ಶಿರ: ತಲೆ; ಭಾಂಡ: ಬಾಣಲಿ, ಮಡಿಕೆ; ನೊರೆ: ಬುರುಗು, ಫೇನ; ನೆತ್ತರು: ರಕ್ತ; ಅಗ್ರಜ: ಅಣ್ಣ; ಕೊಬ್ಬು: ಸೊಕ್ಕು; ನೆಣ: ಕೊಬ್ಬು; ಕೊಯ್ದು: ಸೀಳು; ದುರುಳ: ದುಷ್ಟ; ಕಾಳಿಜ: ಪಿತ್ತಾಶಯ; ವೆರಸಿ: ಸೇರಿಸು; ಕುದಿ: ಬೇಯಿಸು; ಮಹ: ದೊಡ್ಡ; ಉಗ್ರ: ಭಯಂಕರ; ಭೂತ: ದೆವ್ವ, ಪಿಶಾಚ; ನೆರವು: ಸಹಾಯ; ಉಣಲು: ತಿನ್ನಲು; ಸತಿ: ಹೆಂಡತಿ; ಕೇಳು: ಆಲಿಸು;

ಪದವಿಂಗಡಣೆ:
ಉರಿವ+ ಕೋಪಾಗ್ನಿಯಲಿ +ಕರ್ಣನ
ಶಿರದ +ಭಾಂಡದಲ್+ಇವನ +ನೊರೆ +ನೆ
ತ್ತರಿನಲ್+ಇವನ್+ಅಗ್ರಜನ+ಕೊಬ್ಬಿದ +ನೆಣನ +ಕೊಯ್ಕೊಯ್ದು
ದುರುಳ+ ಶಕುನಿಯ+ ಕಾಳಿಜದೊಳ್+ಒಡೆ
ವೆರಸಿ+ ಕುದಿಸಿ+ ಮಹೋಗ್ರ+ಭೂತದ
ನೆರವಿಗ್+ಉಣಲಿಕ್ಕುವೆನು +ಸತಿ+ ಕೇಳೆಂದನಾ+ ಭೀಮ

ಅಚ್ಚರಿ:
(೧) ಭೀಮನ ಕೋಪವನ್ನು ಪಾಕಶಾಲ ಪ್ರವೀಣತೆಯಲ್ಲಿ ತೋರುವ ಪದ್ಯ

ಪದ್ಯ ೬: ಭೀಮನು ವೈರಿಯನ್ನು ಹೇಗೆ ಸಂಹರಿಸಿದನು?

ಅಕಟ ಮಗುವಿನ ಕೂಡೆ ಬಲುನಾ
ಯಕರು ಬಯಸಿದರಳಿವನಿದು ಸೇ
ವಕರ ಪಂಥವಲಾ ವಿರೋಧವೆ ಎನುತ ಮುರಿದೆದ್ದು
ಲಕುಟಹತನಿರ್ಭಿನ್ನಭಾಂಡ
ಪ್ರಕರವೋ ನಿನ್ನಾಳುಕುದುರೆಯೊ
ಸಕಲ ಸುಭಟರನೊಕ್ಕಲಿಕ್ಕಿದನೊಂದು ನಿಮಿಷದಲಿ (ಕರ್ಣ ಪರ್ವ, ೨೦ ಸಂಧಿ, ೬ ಪದ್ಯ)

ತಾತ್ಪರ್ಯ:
ಭೀಮನು ಕೌರವ ಸೈನ್ಯವು ತನ್ನನ್ನು ಆವರಿಸಿದುದನ್ನು ಕಂಡು, ಅಯ್ಯೋ ಈ ಮಗುವಿನೊಡನೆ ಸಕಲ ಸೇನಾನಾಯಕರೂ ಸಾವನ್ನು ಬಯಸಿದರಲ್ಲಾ, ಇದು ಸೇವಕರ ಪಂಥವಲ್ಲವೇ ಎಂದು ಹೇಳುತ್ತಾ ಭೀಮನು ದೊಣ್ಣೆಯಿಂದ ಮಡಿಕೆಗಳನ್ನು ಮುರಿಯುವಂತೆ ವೈರಿ ವೀರರನ್ನು ನಿಮಿಷ ಮಾತ್ರದಲ್ಲಿ ಸಂಹರಿಸಿದನು.

ಅರ್ಥ:
ಅಕಟ: ಅಯ್ಯೋ; ಮಗು: ಚಿಕ್ಕವ; ಕೂಡೆ: ಜೊತೆ; ಬಲು: ಬಹಳ; ನಾಯಕ: ಒಡೆಯ; ಬಯಸು: ಇಚ್ಛೆಪಡು; ಅಳಿ: ಸಾವು; ಸೇವಕ: ದಾಸ; ಪಂಥ: ಹಟ, ಛಲ, ಸ್ಪರ್ಧೆ; ವಿರೋಧ: ವೈರತ್ವ, ಹಗೆತನ; ಮುರಿ:ಸೀಳು; ಲಕುಟ: ದೊಣ್ಣೆ; ಹತ: ಬಡಿದ, ಹೊಡೆದ; ನಿರ್ಭಿನ್ನ: ಬೇರೆಯಲ್ಲದ; ಭಾಂಡ:ಮಡಕೆ; ಪ್ರಕರ:ಗುಂಪು; ಆಳು: ಸೈನಿಕ; ಕುದುರೆ: ಅಶ್ವ; ಸಕಲ: ಎಲ್ಲಾ; ಸುಭಟ: ಸೈನಿಕರು, ಪರಾಕ್ರಮಿಗಳು; ಒಕ್ಕಲಿಕ್ಕು: ಸಂಹರಿಸು; ನಿಮಿಷ: ಕಾಲಪ್ರಮಾಣ;

ಪದವಿಂಗಡಣೆ:
ಅಕಟ +ಮಗುವಿನ +ಕೂಡೆ +ಬಲುನಾ
ಯಕರು+ ಬಯಸಿದರ್+ಅಳಿವನಿದು +ಸೇ
ವಕರ +ಪಂಥವಲಾ +ವಿರೋಧವೆ+ ಎನುತ+ ಮುರಿದೆದ್ದು
ಲಕುಟ+ಹತ+ನಿರ್ಭಿನ್ನ+ಭಾಂಡ
ಪ್ರಕರವೋ+ ನಿನ್ನಾಳು+ಕುದುರೆಯೊ
ಸಕಲ +ಸುಭಟರನ್+ಒಕ್ಕಲಿಕ್ಕಿದನ್+ಒಂದು +ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಕುಟಹತನಿರ್ಭಿನ್ನಭಾಂಡಪ್ರಕರವೋ