ಪದ್ಯ ೫೨: ಯುದ್ಧರಂಗಕ್ಕೆ ಯಾರು ಆಗಮಿಸಿದರು?

ಇಳಿದರಿತ್ತಲು ಗಗನದಿಂ ಹೊಳೆ
ಹೊಳೆವ ಢಾಳದ ಝಾಡಿಯಲಿ ಜಗ
ಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ
ಪುಲಿದೊಗಲ ಸುಲಿಪಲ್ಲ ಮುಕ್ತಾ
ವಳಿಯ ಮಣಿ ಜಪಮಾಲಿಕೆಯ ನಿ
ರ್ಮಳ ತಪೋಧನರೈದಿದರು ಸಂಗ್ರಾಮಭೂಮಿಯನು (ದ್ರೋಣ ಪರ್ವ, ೧೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಇತ್ತ ಯುದ್ಧಭೂಮಿಗೆ ತಪೋಧನರಾದ ಋಷಿಮುನಿಗಳು ಬಂದರು. ಆಗಸದಿಂದ ಕೆಳಗಿಳಿದರು, ಮೈಕಾಂತಿ ಹೊಳೆಯುತ್ತಿರಲು, ಭಸ್ಮ ವಿಭೂಷಿತರಾಗಿ, ಕೆಂಪು ಜಟೆಗಳನ್ನು ಹೊತ್ತು, ಹುಲಿಯ ಚರ್ಮವನ್ನುಟ್ಟು ಮುತ್ತು ಸ್ಫಟಿಕ ಮಣಿಗಳ ಜಪಮಾಲಿಕೆಗಳನ್ನು ಧರಿಸಿ, ಶುಭ್ರ ದಂತಕಾಂತಿಯು ಹಬ್ಬುತ್ತಿರಲು, ನಿರ್ಮಲರಾದ ತಪೋಧನರು ಆಗಮಿಸಿದರು.

ಅರ್ಥ:
ಇಳಿ: ಬಾಗು, ಕೆಳಕ್ಕೆ ಹೋಗು; ಗಗನ: ಆಗಸ; ಹೊಳೆ: ಪ್ರಕಾಶ; ಢಾಳ: ಕಾಂತಿ, ಪ್ರಕಾಶ; ಝಾಡಿಸು: ಅಲುಗಾಡಿಸು; ಜಗ: ಪ್ರಪಂಚ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಭಸ್ಮ: ಬೂದಿ; ವಿಭೂಷಿತ: ಶೋಭಿಸು, ಅಲಂಕೃತ; ಅಂಗ: ದೇಹದ ಭಾಗ; ಜಡಿ: ಅಲ್ಲಾಡು, ನಡುಗು; ಕೆಂಜೆಡೆ: ಕೆಂಪಾದ ಜಟೆ; ಪುಲಿ: ಹುಲಿ; ತೊಗಲು: ಚರ್ಮ; ಸುಲಿಪಲ್ಲು: ಶುಭ್ರವಾಗಿ ಹೊಳೆವ ಹಲ್ಲು; ಮುಕ್ತಾವಳಿ: ಮಣಿಗಳ ಸಾಲು, ಮುತ್ತಿನಹಾರ; ಮಣಿ: ಬೆಲೆಬಾಳುವ ರತ್ನ; ಮಾಲೆ: ಹಾರ; ನಿರ್ಮಳ: ಶುಭ್ರ; ತಪೋಧನ: ಋಷಿ ಮುನಿ; ಐದು: ಬಂದು ಸೇರು; ಸಂಗ್ರಾಮ: ಯುದ್ಧ; ಭೂಮಿ: ನೆಲ;

ಪದವಿಂಗಡಣೆ:
ಇಳಿದರ್+ಇತ್ತಲು +ಗಗನದಿಂ+ ಹೊಳೆ
ಹೊಳೆವ +ಢಾಳದ +ಝಾಡಿಯಲಿ +ಜಗ
ಮುಳುಗೆ +ಭಸ್ಮವಿಭೂಷಿತಾಂಗದ+ ಜಡಿವ +ಕೆಂಜೆಡೆಯ
ಪುಲಿ+ತೊಗಲ +ಸುಲಿಪಲ್ಲ+ ಮುಕ್ತಾ
ವಳಿಯ +ಮಣಿ +ಜಪಮಾಲಿಕೆಯ +ನಿ
ರ್ಮಳ +ತಪೋಧನರ್+ಐದಿದರು +ಸಂಗ್ರಾಮಭೂಮಿಯನು

ಅಚ್ಚರಿ:
(೧) ಋಷಿಮುನಿಗಳ ವರ್ಣನೆ – ಹೊಳೆಹೊಳೆವ ಢಾಳದ ಝಾಡಿಯಲಿ ಜಗಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ

ಪದ್ಯ ೫: ಅರ್ಜುನನು ಯಾರ ಶಿಷ್ಯನೆಂದು ಬೇಡನಿಗೆ ಹೇಳಿದನು?

ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ಪರಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲವೋ ಶಬರ ಕೇಳು, ಚುಚ್ಚುಮಾತುಗಳನ್ನೇಕೆ ನುಡಿಯುವೇ? ನಾನು ಉತ್ತಮ ತಪಸ್ವಿಯೆಂಬುದು ಅತಿ ಸ್ಪಷ್ಟವಾಗಿದೆಯಲ್ಲವೇ? ಜಟೆ, ಕೃಷ್ಣಾಜಿನ, ಭಸ್ಮಗಳೊಡನೆ ಬಿಲ್ಲು ಬಾಣ, ಖಡ್ಗಗಳನ್ನು ಧರಿಸಿದ ಶಿವನಿದ್ದಾನೆ, ನಾನು ಅವರ ಶಿಷ್ಯ ಎಂದು ಅರ್ಜುನನು ಹೇಳಿದನು.

ಅರ್ಥ:
ಕಟಕಿ:ವ್ಯಂಗ್ಯ, ಚುಚ್ಚು ಮಾತು; ಪುಳಿಂದ: ಬೇಡ; ಉಬ್ಬಟೆ: ಅತಿಶಯ, ಹಿರಿಮೆ; ತಪಸಿ: ಋಷಿ; ಸ್ಫುಟ: ಅರಳಿದುದು, ವಿಕಸಿತವಾದುದು; ತಪ್ಪು: ಸರಿಯಲ್ಲದ; ಒಡನೆ: ಜೊತೆ; ಫಲ: ಪ್ರಯೋಜನ; ಜಟೆ: ಕೂದಲು; ಮೃಗಾಜಿನ: ಜಿಂಕೆಯ ಚರ್ಮ; ಭಸ್ಮ: ವಿಭೂತಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಧನು: ಧನಸ್ಸು; ಶರ: ಬಾಣ; ಖಡ್ಗ: ಕತ್ತಿ; ಧೂರ್ಜಟಿ: ಶಿವ; ಶಿಷ್ಯ: ವಿದ್ಯಾರ್ಥಿ; ಶಬರ: ಬೇಟೆಗಾರ; ಕೇಳು: ಆಲಿಸು;

ಪದವಿಂಗಡಣೆ:
ಕಟಕಿಯೇಕೆ +ಪುಳಿಂದ +ನಾವ್
ಉಬ್ಬಟೆಯ +ತಪಸಿಗಳ್+ಎಂಬುದ್+ಇದು +ಪರಿ
ಸ್ಫುಟವಲೇ +ತಪ್ಪೇನು +ನಿನ್ನೊಡನೆಂದು +ಫಲವೇನು
ಜಟೆ +ಮೃಗಾಜಿನ +ಭಸ್ಮದೊಡನ್
ಉತ್ಕಟದ +ಧನುಶರ +ಖಡ್ಗದಲಿ +ಧೂ
ರ್ಜಟಿಯಿಹನು +ನಾವ್+ಅವರ +ಶಿಷ್ಯರು +ಶಬರ+ ಕೇಳೆಂದ

ಅಚ್ಚರಿ:
(೧) ಪುಳಿಂದ, ಶಬರ – ಸಮನಾರ್ಥಕ ಪದ
(೨) ಶಿವನನ್ನು ವರ್ಣಿಸುವ ಪರಿ – ಜಟೆ ಮೃಗಾಜಿನ ಭಸ್ಮದೊಡನುತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು