ಪದ್ಯ ೬೧: ದ್ರೋಣನ ಪರಾಕ್ರಮ ಯಾರಿಗೆ ಸಮಾನ?

ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿ ಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘುಭುಜಬಲ ಭಾನು ನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ (ದ್ರೋಣ ಪರ್ವ, ೨ ಸಂಧಿ, ೬೧ ಪದ್ಯ
)

ತಾತ್ಪರ್ಯ:
ಈ ಕಾಳಗವನ್ನು ನೋಡುತ್ತಿದ್ದ ಕೌರವನು, ಕರ್ಣ ನೋಡು ದ್ರೋಣನ ಪರಾಕ್ರಮವು ಶಿವನ ಬಲ್ಮೆಗೆ ಸರಿ. ದ್ರೋಣನು ಗೆದ್ದ ಯುಧಿಷ್ಠಿರನು ಸೆರೆ ಸಿಕ್ಕ ಎನ್ನಲು ಮಹಾಬಾಹುಬಲನಾದ ಕರ್ಣನು ಅಳುಕದೆ ದುರ್ಯೋಧನನಿಗೆ ಈ ಮಾತುಗಳನ್ನು ಹೇಳಿದನು.

ಅರ್ಥ:
ಗೆಲಿದು: ಜಯ; ಮಝ: ಭಾಪು, ಭಲೇ; ಪೂತು: ಕೋಂಡಾಟದ ಮಾತು; ಬಲುಹು: ಬಲ, ಶಕ್ತಿ; ಭರ್ಗ: ಶಿವ, ಈಶ್ವರ; ಸರಿ: ಸಮಾನ; ಸಿಲುಕು: ಬಂಧನಕ್ಕೊಳಗಾಗು, ಸೆರೆಯಾಗು; ಕಲಿ: ಶೂರ; ನೋಡು: ವೀಕ್ಷಿಸು; ಉಲಿ: ಶಬ್ದ; ಈಕ್ಷಿಸು: ನೋಡು; ಅಲಗು: ಖಡ್ಗ, ಆಯುಧದ ಮೊನೆ, ಕತ್ತಿ; ಭುಜಬಲ: ಪರಾಕ್ರಮ; ಭಾನು: ಸೂರ್ಯ; ಅಳುಕು: ಹೆದರು; ನೀತಿ: ಮಾರ್ಗದರ್ಶನ; ಸಮ್ಮತ: ಒಪ್ಪಿಗೆಯಾದುದು;

ಪದವಿಂಗಡಣೆ:
ಗೆಲಿದನೈ +ಮಝ +ಪೂತು +ದ್ರೋಣನ
ಬಲುಹು +ಭರ್ಗನ +ಸರಿ +ಯುಧಿಷ್ಠಿರ
ಸಿಲುಕಿದನಲಾ+ ಶಿವಶಿವಾ+ ಕಲಿ+ ಕರ್ಣ +ನೋಡೆನುತ
ಉಲಿವ +ದುರಿಯೋಧನನನ್+ಈಕ್ಷಿಸುತ್
ಅಲಘು+ಭುಜಬಲ+ ಭಾನು +ನಂದನನ್
ಅಳುಕದೀ +ಮಾತುಗಳನ್+ಎಂದನು +ನೀತಿ+ಸಮ್ಮತವ

ಅಚ್ಚರಿ:
(೧) ದ್ರೋಣನ ಪರಾಕ್ರಮವನ್ನು ಹೊಗಳುವ ಪರಿ – ಗೆಲಿದನೈ ಮಝ ಪೂತು ದ್ರೋಣನ ಬಲುಹು ಭರ್ಗನ ಸರಿ

ಪದ್ಯ ೪೧: ಭೀಷ್ಮನು ಮತ್ತೆ ಹೇಗೆ ಗುಡುಗಿದನು?

ಸಾರು ಫಡ ಕೆಲಬಲದ ಹಂಗಿನ
ವೀರನೇ ಕಲಿ ಭೀಷ್ಮ ಮುನಿದರೆ
ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು
ಮೇರೆಗಿದ್ದೆನು ಮಕ್ಕಳೆಂದೇ
ವೈರಬಂಧವ ಬಿಟ್ಟೆನಕಟ ವಿ
ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ತನ್ನ ದೇಹವನ್ನು ಬಾಣಗಳು ನೆಟ್ಟಿರಲು, ಭೀಷ್ಮನು ಕೋಪಗೊಂಡು, ತೆಗೆ ಅಕ್ಕ ಪಕ್ಕದವರ ಹಂಗಿನಲ್ಲಿ ಹೋರಾಡುವ ವೀರನು ನಾನಲ್ಲ, ನಾನು ಕೋಪಗೊಂಡರೆ ಶಿವನನ್ನೇ ನನ್ನ ಜೊತೆಗೆ ಹೋರಾಡಲು ಕರೆಯಬೇಕು, ಮಕ್ಕಳೆಂದು ಕಟ್ಟುಹಾಕಿಕೊಂಡು ವೈರವನ್ನು ಬಿಟ್ಟಿದ್ದೆ, ಈಗ ಆ ಬಂಧವನ್ನು ತೊರೆದಿರುವೆ, ನನ್ನೊಡನೆ ಇಂತಹ ವೈರವನ್ನು ತೋರುತ್ತಿರುವವನೇ, ನೋಡಲಿ ಎಂದು ಭೀಷ್ಮನು ಬಾಣಗಳನ್ನು ಪ್ರಯೋಗಿಸಿದನು.

ಅರ್ಥ:
ಸಾರು: ಹರಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಕೆಲಬಲ: ಅಕ್ಕಪಕ್ಕ, ಎಡಬಲ; ಹಂಗು: ದಾಕ್ಷಿಣ್ಯ; ವೀರ: ಶೂರ; ಕಲಿ: ಶೂರ; ಮುನಿ: ಕೋಪಗೊಳ್ಳು; ಹೋರಟೆ: ಕಾಳಗ, ಯುದ್ಧ; ಬರಹೇಳು: ಆಗಮಿಸು; ಭರ್ಗ:ಶಿವ, ಶೋಭೆ; ಪಾಡು: ಸ್ಥಿತಿ; ಮೇರು: ಮಿಗಿಲಾದುದು; ಮೇರೆ: ಎಲ್ಲೆ, ಗಡಿ, ಆಶ್ರಯ; ಮಕ್ಕಳು: ಸುತರು; ವೈರ: ಶತ್ರುತ್ವ; ಬಂಧ: ಕಟ್ಟು, ಬಂಧನ, ವ್ಯಾಮೋಹ; ಬಿಟ್ಟೆ: ತೊರೆದೆ; ಅಕಟ: ಅಯ್ಯೋ; ವಿಕಾರಿ: ದುಷ್ಟ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸಾರು +ಫಡ +ಕೆಲಬಲದ +ಹಂಗಿನ
ವೀರನೇ +ಕಲಿ +ಭೀಷ್ಮ +ಮುನಿದರೆ
ಹೋರಟೆಗೆ +ಬರಹೇಳು +ಭರ್ಗನನ್+ಇವನ +ಪಾಡೇನು
ಮೇರೆಗಿದ್ದೆನು +ಮಕ್ಕಳೆಂದೇ
ವೈರ+ಬಂಧವ+ ಬಿಟ್ಟೆನ್+ಅಕಟ+ ವಿ
ಕಾರಿತನವೇ +ನಮ್ಮೊಡನೆ+ಎನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ಭೀಷ್ಮನ ಪರಾಕ್ರಮ – ಕಲಿ ಭೀಷ್ಮ ಮುನಿದರೆ ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು

ಪದ್ಯ ೧೪: ಭೀಮನು ಯಾರ ರೂಪವಾಗಿ ಶಲ್ಯನಿಗೆ ಕಂಡನು?

ಪವನಸುತನಿಂಗಿತವ ಮನದಂ
ಘವಣೆಯನು ಮಾದ್ರೇಶ ಕಂಡನು
ರವಿಸುತನ ನೋಡಿದನು ಮುಖದಲಿ ಮುರಿದು ತೋರಿದನು
ಇವನ ಬಲ್ಲೈ ಭೀಮನೋ ಭೈ
ರವನೊ ಭರ್ಗನೊ ಮನುಜ ಕಂಠೀ
ರವನೊ ಕಾಲಾಂತಕನೊ ಕೋಳಾಹಲವಿದೇನೆಂದ (ಕರ್ಣ ಪರ್ವ, ೧೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನ ಇಂಗಿತವನ್ನು ಅವನು ಮನಸ್ಸಿನಲ್ಲಿ ಏನನ್ನು ದೃಢೀಕರಿಸಿ ಬರುತ್ತಿರುವ ರೀತಿಯನ್ನು ಶಲ್ಯ ಗಮನಿಸಿ ಕರ್ಣನನ್ನು ನೋಡಿ, ಭೀಮನನ್ನು ನೋಡೆಂದು ಸನ್ನೆ ಮಾಡಿ, ಇವನಾರೆಂದು ಬಲ್ಲೆಯ ಕರ್ಣ ಎಂದು ಕೇಳಿದ. ಇವನು ಭೀಮನೋ, ಭೈರವನೋ, ಶಿವನೋ, ನರಸಿಂಹನೋ, ಕಾಲಾಂತಕನೋ ತಿಳಿಯದಗಿದೆ ಇದೆಂತಹ ಕೋಲಾಹಲ ಎಂದನು.

ಅರ್ಥ:
ಪವನ: ಗಾಳಿ, ವಾಯು; ಸುತ: ಮಗ; ಪವನಸುತ: ವಾಯುವಿನ ಮಗ (ಭೀಮ); ಮನ: ಮನಸ್ಸು; ಅಂಘವಣೆ: ರೀತಿ, ಬಯಕೆ, ಉದ್ದೇಶ; ಮಾದ್ರೇಶ: ಮದ್ರ ದೇಶದ ಒಡೆಯ (ಶಲ್ಯ); ಕಂಡು: ನೋಡು; ರವಿಸುತ: ಕರ್ಣ; ಮುಖ: ಆನನ, ವಕ್ತ್ರ; ಮುರಿ: ಸೀಳು; ತೋರು: ಪ್ರದರ್ಶಿಸು; ಬಲ್ಲೈ: ತಿಳಿದು; ಭೈರವ: ಶಿವನ ಅವತಾರ; ಭರ್ಗ: ಶಿವ; ಮನುಜ: ನರ; ಕಂಠೀರವ: ಸಿಂಹ; ಕಾಲ: ಸಮಯ; ಅಂತಕ: ಯಮ; ಕೋಲಾಹಲ:ಗದ್ದಲ, ಅವಾಂತರ;

ಪದವಿಂಗಡಣೆ:
ಪವನಸುತನ್+ಇಂಗಿತವ +ಮನದ್
ಅಂಘವಣೆಯನು +ಮಾದ್ರೇಶ +ಕಂಡನು
ರವಿಸುತನ +ನೋಡಿದನು +ಮುಖದಲಿ +ಮುರಿದು +ತೋರಿದನು
ಇವನ+ ಬಲ್ಲೈ +ಭೀಮನೋ +ಭೈ
ರವನೊ+ ಭರ್ಗನೊ +ಮನುಜ +ಕಂಠೀ
ರವನೊ +ಕಾಲಾಂತಕನೊ +ಕೋಳಾಹಲವ್+ಇದೇನೆಂದ

ಅಚ್ಚರಿ:
(೧) ಭೀಮನು ಕಂಡ ಪರಿ – ಭರ್ಗ, ಮನುಜಕಂಠೀರವ, ಕಾಲಾಂತಕ, ಭೈರವ
(೨) ನರಸಿಂಹನನ್ನು ಮನುಜಕಂಠೀರವ ಎಂದು ಕರೆದಿರುವುದು