ಪದ್ಯ ೮೪: ಶಿಷ್ಯನ ಲಕ್ಷಣಗಳೇನು?

ಒಡಲೊಡವೆ ಮೊದಲಾದುವೆಲ್ಲವ
ಅಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯ ಬಲ್ಲವನವನೆ ಶಿಷ್ಯನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೪ ಪದ್ಯ)

ತಾತ್ಪರ್ಯ:
ತನ್ನ ದೇಹ, ಐಶ್ವರ್ಯ ಮೊದಲಾದ ತನ್ನದೆಲ್ಲವನ್ನೂ ಗುರುವಿಗೆ ಒಪ್ಪಿಸಿ, ಅವನ ಪಾದಕಮಲಗಳನ್ನು ಹಿಡಿದು ಸೇವೆ ಮಾಡುತ್ತಾ ಅವನು ಕೊಟ್ಟ ಕೆಲಸಗಳೆಲ್ಲವನ್ನೂ ಎದುರುನುಡಿಯದೆ ಭಯ ಭಕ್ತಿಯಿಂದ ನಡೆಯಬಲ್ಲವನೇ ಶಿಷ್ಯ ಎಂದು ವಿದುರ ತಿಳಿಸಿದ್ದಾರೆ.

ಅರ್ಥ:
ಒಡಲು: ದೇಹ; ಒಡವೆ: ಆಭರಣ, ಐಶ್ವರ್ಯ; ಮೊದಲಾದು: ಮುಂತಾದ; ಎಲ್ಲ: ಸರ್ವ; ಅಡೆ: ಆಶ್ರಯ, ಭರ್ತಿ ಮಾಡು; ಒಪ್ಪಿಸು: ನೀಡು; ಗುರು: ಆಚಾರ್ಯ; ಅಂಘ್ರಿ: ಪಾದ; ಹಿಡಿ: ಬಂಧನ, ಗ್ರಹಿಸು; ಭಜಿಸು: ಆರಾಧಿಸು; ಕೊಟ್ಟ: ನೀಡಿದ; ಕೆಲಸ: ಕಾರ್ಯ; ಅನಿತು: ಅಷ್ಟು; ಬಿಡದೆ: ತೊರೆ, ತ್ಯಜಿಸು; ಮಾರು: ದೊಡ್ಡ; ಉತ್ತರ: ಪ್ರಶ್ನೆಗೆ ಕೊಡುವ ಮರುನುಡಿ, ಜವಾಬು; ಮಾರುತ್ತರ: ಎದುರುತ್ತರ; ಭಯ: ಹೆದರಿಕೆ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ತಪ್ಪದೆ: ಬಿಡದೆ; ನಡೆ: ಮುನ್ನಡೆಯುವ; ಬಲ್ಲವ: ತಿಳಿದವ; ಶಿಷ್ಯ: ವಿದ್ಯಾರ್ಥಿ; ರಾಯ: ರಾಜ;

ಪದವಿಂಗಡಣೆ:
ಒಡಳ್+ಒಡವೆ +ಮೊದಲಾದುವೆಲ್ಲವ
ಅಡೆಯದ್+ಒಪ್ಪಿಸಿ+ ಗುರುವಿನ್+ಅಂಘ್ರಿಯ
ಹಿಡಿದು +ಭಜಿಸುತ +ಕೊಟ್ಟ+ ಕೆಲಸಂಗಳೊಳ್+ಅನಿತುವನು
ಬಿಡದೆ +ಮಾರುತ್ತರವನ್+ಅವರಿಗೆ
ಕೊಡದೆ +ಭಯ+ ಭಕ್ತಿಯಲಿ +ತಪ್ಪದೆ
ನಡೆಯ +ಬಲ್ಲವನ್+ಅವನೆ +ಶಿಷ್ಯನು +ರಾಯ +ಕೇಳೆಂದ

ಅಚ್ಚರಿ:
(೧) ಶಿಷ್ಯನ ೫ ಲಕ್ಷಣಗಳನ್ನು ತಿಳಿಸುವ ಪದ್ಯ