ಪದ್ಯ ೪೦: ಸಂಜಯನೇಕೆ ಹೊರಳಾಡಿದನು?

ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ (ಗದಾ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಸುಂದರವಾದ ಚಂದ್ರಕಾಂತ ಶಿಲೆಯ ರಮ್ಯಭವನದಲ್ಲಿ, ವಿಸ್ತಾರವಾದ ಭದ್ರಗೃಹದ ಚಿತ್ರಶಾಲೆಯಲ್ಲಿ ಮಣಿಮಂಚದಲ್ಲಿ ಮಲಗುವ ಅರಸನು ಈಗ ನೀರಿನಲ್ಲಿ ಮಲಗುವನೆಂದು ಸಂಜಯನು ಅಳುತ್ತಾ ನೆಲದ ಮೇಲೆ ಹೊರಳಿದನು.

ಅರ್ಥ:
ಚಾರು: ಚೆಲುವು, ಸುಂದರ; ಆಗರ: ಆಶ್ರಯ; ಚಂದ್ರ: ಶಶಿ; ಉಪಲ: ಕಲ್ಲು, ಶಿಲೆ; ರಮ್ಯ: ಮನೋಹರ; ಮಣಿ: ಬೆಲೆಬಾಳುವ ರತ್ನ; ಬಹು: ಬಹಳ; ವಿಸ್ತಾರ: ವಿಶಾಲ; ಭದ್ರ: ದೃಢ, ಉತ್ತಮವಾದ ಪೀಠ; ಭವನ: ಆಲಯ; ಚಿತ್ರ: ಪಟ; ಶಾಲೆ: ಆಲಯ; ಸಾರ: ಶ್ರೇಷ್ಠವಾದ; ಪರಿಯಂಕ: ಹಾಸುಗೆ; ಸಂಸ್ಕಾರ: ಸಂಸ್ಕೃತಿ, ಸ್ವಭಾವ; ಮಲಗು: ನಿದ್ರಿಸು; ಮಹೀಪತಿ: ರಾಜ; ನೀರು: ಜಲ; ಒರಗು: ಮಲಗು; ಒರಲು: ಅರಚು, ಕೂಗಿಕೊಳ್ಳು; ಹೊರಳು: ಉರುಳಾಡು;

ಪದವಿಂಗಡಣೆ:
ಚಾರು+ ಚಂದ್ರೋಪಲದ +ರಮ್ಯಾ
ಗಾರದಲಿ +ಮಣಿಮಯದ +ಬಹು+ವಿ
ಸ್ತಾರ +ಭದ್ರೋಪರಿಯ +ಭವನದ +ಚಿತ್ರ+ಶಾಲೆಯಲಿ
ಸಾರಮಣಿ +ಪರಿಯಂಕ +ಪರಿ+ಸಂ
ಸ್ಕಾರದಲಿ +ಮಲಗುವ +ಮಹೀಪತಿ
ನೀರೊಳ್+ಒರಗುವನೆಂದು +ಸಂಜಯನ್+ಒರಲಿದನು +ಹೊರಳಿ

ಅಚ್ಚರಿ:
(೧) ಜೋಡಿ ಪದಗಳು – ಚಾರು ಚಂದ್ರೋಪಲದ; ಬಹುವಿಸ್ತಾರ ಭದ್ರೋಪರಿಯ ಭವನದ, ಪರಿಯಂಕ ಪರಿಸಂಸ್ಕಾರದಲಿ, ಮಲಗುವ ಮಹೀಪತಿ