ಪದ್ಯ ೪೮: ದ್ರೋಣನು ಪಾಂಚಾಲ ಸೈನ್ಯವನ್ನು ಹೇಗೆ ನಾಶ ಮಾಡಿದನು?

ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೂರ್ಯನು ಯಾರ ಸಹಾಯದಿಂದ ಕತ್ತಲನ್ನು ಗೆಲ್ಲುತ್ತಾನೆ? ಶತ್ರುಸೈನ್ಯ ಸಂಹಾರಕ್ಕೆ ದ್ರೋಣನು ಇನ್ನೊಬ್ಬರ ಹಂಗಿಗೊಳಗಾಗುವನೇ? ಪಾಂಚಾಲ ಸೈನ್ಯವನ್ನು ದ್ರೋಣನು ಸಂಹರಿಸಲು ರಕ್ತದ ತೊರೆ ಹರಿದು ಪಾಂಚಾಲ ನಾಯಕರು ಮುಳುಗಿ ಹೋದರು.

ಅರ್ಥ:
ನೆರವು: ಸಹಾಯ; ಅಂಧಕಾರ: ಕತ್ತಲೆ; ಭಾರ: ಹೊರೆ; ರವಿ: ಸೂರ್ಯ; ಗೆಲುವು: ಜಯ; ವೈರಿ: ಶತ್ರು; ಬಲ: ಸೈನ್ಯ; ಭಂಜನ: ನಾಶಕಾರಿ, ಒಡೆಯುವುದು; ಗುರು: ಆಚಾರ್ಯ; ಹಂಗು: ದಾಕ್ಷಿಣ್ಯ, ಆಭಾರ; ಕೆಲಬಲ: ಅಕ್ಕಪಕ್ಕ, ಎಡಬಲ; ಭೂರಿ: ಹೆಚ್ಚು, ಅಧಿಕ; ರಿಪು: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಸಂಹಾರ: ನಾಶ, ಕೊನೆ; ಎದ್ದು: ಮೇಲೇಳು; ರಕುತ: ನೆತ್ತರು; ಪೂರ: ಭರ್ತಿ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಆದಿ: ಮುಂತಾದ; ನಾಯಕ: ಒಡೆಯ;

ಪದವಿಂಗಡಣೆ:
ಆರ +ನೆರವಿಯೊಳ್+ಅಂಧಕಾರದ
ಭಾರವನು +ರವಿ +ಗೆಲುವನ್+ಇನ್ನೀ
ವೈರಿಬಲ+ಭಂಜನಕೆ +ಗುರು +ಹಂಗಹನೆ+ ಕೆಲಬಲಕೆ
ಭೂರಿ +ರಿಪು+ಚತುರಂಗ+ಬಲ+ಸಂ
ಹಾರದಲಿ +ಒರವೆದ್ದ+ ರಕುತದ
ಪೂರದಲಿ +ಮುಳುಗಿದರು +ಪಾಂಚಾಲಾದಿ +ನಾಯಕರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ನೆರವಿಯೊಳಂಧಕಾರದ ಭಾರವನು ರವಿ ಗೆಲುವನ್
(೨) ಯುದ್ಧದ ಭೀಕರತೆ – ರಿಪುಚತುರಂಗಬಲಸಂಹಾರದಲಿ ಒರವೆದ್ದ ರಕುತದ ಪೂರದಲಿ ಮುಳುಗಿದರು

ಪದ್ಯ ೬೪: ಧರ್ಮಜನು ಅರ್ಜುನನಿಗೆ ಯಾವ ಆಶೆಯನ್ನು ತೋಡಿಕೊಂಡನು?

ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲೇ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀಶಾಂ
ಭವಮಹಾಸ್ತ್ರ ಪೌಢಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ (ಅರಣ್ಯ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅಸಮಾನವಾದ ಪಾಶುಪತಾಸ್ತ್ರವು ಹದಿನಾಲ್ಕು ಲೋಕಗಳನ್ನು ಸುಡಬಲ್ಲದು, ಇದು ನಮ್ಮ ಸಮರಸಾಧನವಾದುದು ಮಹಾಪುಣ್ಯವೇ ಸರಿ. ಈ ಪಾಶುಪತಾಸ್ತ್ರದ ಪ್ರೌಢ ವಿಧಾನವನ್ನು ನೋಡಬೇಕೆಂಬಾಶೆಯಾಗಿದೆ, ತೋರಿಸು ಎಂದು ಧರ್ಮಜನು ಕೇಳಿದನು.

ಅರ್ಥ:
ಶಿವ: ಶಂಕರ; ಅಘಾಟ: ಅದ್ಭುತ, ಅತಿಶಯ; ಶರ: ಬಾಣ; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಭಂಜನ: ನಾಶಕಾರಿ; ಆಹವ: ಯುದ್ಧ; ಹೂಣಿಗ: ಬಿಲ್ಲುಗಾರ; ಹೇರಾಳ: ಬಹಳ; ಸುಕೃತ: ಒಳ್ಳೆಯ ಕಾರ್ಯ; ಎವಗೆ: ನನಗೆ; ತೋರಿಸು: ನೋಡು, ಗೋಚರಿಸು; ಮಹಾಸ್ತ್ರ: ದೊಡ್ಡ ಶಸ್ತ್ರ; ಪ್ರೌಢ: ಶ್ರೇಷ್ಠ; ವಿವರಣ: ವಿಚಾರ; ಕಾಂಬು: ನೋಡು;

ಪದವಿಂಗಡಣೆ:
ಶಿವನ್+ಅಘಾಟದ +ಶರ +ಚತುರ್ದಶ
ಭುವನ +ಭಂಜನವಿದು +ಮದೀಯ
ಆಹವಕೆ+ ಹೂಣಿಗನ್+ಆಯ್ತಲೇ +ಹೇರಾಳ +ಸುಕೃತವಿದು
ಎವಗೆ+ ತೋರಿಸಬೇಹುದ್+ಈಶಾಂ
ಭವ+ಮಹಾಸ್ತ್ರ +ಪೌಢ+ಕೇಳ್+ಈ
ವಿವರಣವ+ ಕಾಂಬರ್ತಿಯಾಯ್ತೆಂದನು +ಧನಂಜಯಗೆ

ಅಚ್ಚರಿ:
(೧) ಪಾಶುಪತಾಸ್ತ್ರದ ಹಿರಿಮೆ – ಶಿವನಘಾಟದ ಶರ ಚತುರ್ದಶ ಭುವನ ಭಂಜನವಿದು

ಪದ್ಯ ೧೦: ಅರ್ಜುನನು ಇಂದ್ರನಿಗೆ ಏನು ಹೇಳಿದ?

ಹೈ ಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆ ಹರಾಸ್ತ್ರದೊಳಮರ ವೈರಿ
ವ್ಯೂಹ ಭಂಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದೆನು ಸುರಪತಿಗೆ (ಅರಣ್ಯ ಪರ್ವ, ೧೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ದೇವತೆಗಳ ಪಾಡನ್ನು ಇಂದ್ರನಿಂದ ಕೇಳಿದ ಅರ್ಜುನನು, ಓಹೋ ಮಹಾ ಪ್ರಸಾದ, ನಿಮ್ಮ ಕೃಪಾದೃಷ್ಟಿಯಿದ್ದರೆ ಏನು ತಾನೇ ಅಸಾಧ್ಯ! ನಿವಾತ ಕವಚರು ಸಾಹಸಿಗಳೇನು? ಆಗಲಿ, ದೇವತೆಗಳಿಗೆ ಹಿತವಾಗುವುದಾದರೆ ಅವರನ್ನು ಬಡಿದು ಹಾಕುತ್ತೇನೆ, ಪಾಶುಪತಾಸ್ತ್ರದಿಂದ ರಾಕ್ಷಸರ ವ್ಯೂಹವನ್ನು ಮುರಿದು ನಿಮಗೆ ಯಾವ ತೊಂದರೆಯೂ ಇಲ್ಲದಂತೆ ಮಾಡುತ್ತೇನೆ ಎಂದು ಅರ್ಜುನನು ದೇವೇಂದ್ರನಿಗೆ ಹೇಳಿದನು.

ಅರ್ಥ:
ಹಸಾದ: ಮಹಾ ಪ್ರಸಾದ; ಕೃಪೆ: ದಯೆ; ಅವಗಾಹಿಸು: ಮಗ್ನವಾಗಿರುವಿಕೆ; ಅರಿ: ಕತ್ತರಿಸು; ದೈತ್ಯ: ರಾಕ್ಷಸ; ಸಾಹಸಿ: ಬಲಶಾಲಿ; ಸದೆ: ಹೊಡಿ; ಸುರಜನ: ದೇವತೆ; ಹಿತ: ಒಳ್ಳೆಯದು; ಹರ: ಶಂಕರ; ಅಸ್ತ್ರ; ಶಸ್ತ್ರ; ಅಮರ: ದೇವತೆ; ವೈರಿ: ರಿಪು, ಶತ್ರು; ವ್ಯೂಹ: ಜಾಲ; ಭಂಜನ: ನಾಶಕಾರಿ; ಪ್ರತ್ಯೂಹ: ಅಡ್ಡಿ, ಅಡಚಣೆ; ನಿಶ್ಚಯ: ನಿರ್ಣಯ; ಬಿನ್ನವಿಸು: ವಿಜ್ಞಾಪಿಸು; ಸುರಪತಿ: ಇಂದ್ರ;

ಪದವಿಂಗಡಣೆ:
ಹೈ+ ಹಸಾದವು+ ನಿಮ್ಮ +ಕೃಪೆ+ಅವ
ಗಾಹಿಸುವೊಡ್+ಅರಿದೇನು+ ದೈತ್ಯರು
ಸಾಹಸಿಗರೇ+ ಸದೆವೆನ್+ಈ+ ಸುರಜನಕೆ +ಹಿತವಹರೆ
ಆ +ಹರಾಸ್ತ್ರದೊಳ್+ಅಮರ +ವೈರಿ
ವ್ಯೂಹ +ಭಂಜನವ್+ಅಹುದು +ನಿಷ್ಪ್ರ
ತ್ಯೂಹ +ನಿಶ್ಚಯವೆಂದು +ಬಿನ್ನವಿಸಿದೆನು +ಸುರಪತಿಗೆ

ಅಚ್ಚರಿ:
(೧) ಅರ್ಜುನನು ಅಭಯವನ್ನು ನೀಡುವ ಪರಿ – ದೈತ್ಯರು ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ