ಪದ್ಯ ೬೦: ಯುಧಿಷ್ಠಿರನೇಕೆ ಧನ್ಯನಾಗಿರುವನು?

ಅರಸ ಕೇಳೈ ಕ್ಷಾತ್ರ ತೇಜವ
ಹೊರೆವುದೇ ಬ್ರಾಹ್ಮಣ್ಯ ಶಕ್ತಿ
ಸ್ಫುರಣ ನೀನೀ ಬ್ರಹ್ಮವರ್ಗದ ಸಾರ ಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನಂಜುಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯನಹೆಯೆಂದ (ಅರಣ್ಯ ಪರ್ವ, ೧೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ರಾಜ ಧರ್ಮಜ ಕೇಳು, ಕ್ಷಾತ್ರ ತೇಜಸ್ಸನ್ನು ಬ್ರಾಹ್ಮಣ್ಯದ ಶಕ್ತಿಯೇ ಕಾಪಾಡುತ್ತದೆ. ಇಷ್ಟು ಜನ ಬ್ರಾಹ್ಮಣರ ಸಮೂಹದಲ್ಲಿ ನೀನು ಶೋಭಿಸುತ್ತಿರುವೆ. ವಿಪ್ರರನ್ನು ಅವಮಾನಿಸುವುದೇ ಐಶ್ವರ್ಯಕ್ಕೆ ವಿಷ ಸಮಾನ. ನೀನು ಬ್ರಾಹ್ಮಣರನ್ನು ಸೇವಿಸುತ್ತಿರುವುದರಿಂದ ಧನ್ಯನಾಗಿರುವೆ ಎಂದು ನಹುಷನು ನುಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಾತ್ರ: ಕ್ಷತ್ರಿಯ; ತೇಜ: ಕಾಮ್ತಿ; ಹೊರೆ:ಕಾಪಾಡು; ಬ್ರಾಹ್ಮಣ್ಯ: ಬ್ರಾಹ್ಮಣನ ಕರ್ಮಗಳು; ಶಕ್ತಿ: ಬಲ; ಸ್ಫುರಣ: ಕಂಪನ, ಹೊಳಪು; ಬ್ರಹ್ಮ: ಬ್ರಾಹ್ಮಣ; ವರ್ಗ: ಗುಂಪು; ಸಾರ: ಶ್ರೇಷ್ಠವಾದ; ಸೌಖ್ಯ: ಸುಖ, ನೆಮ್ಮದಿ; ಮೆರೆ: ಶೋಭಿಸು; ವಿಪ್ರ: ಬ್ರಾಹ್ಮಣ; ಅವಮಾನ: ನಿಂದಿಸು, ಅಗೌರವ; ಸಿರಿ: ಐಶ್ವರ್ಯ; ನಂಜು: ವಿಷ; ಮಹೀಸುರ: ಬ್ರಾಹ್ಮಣ; ವರ: ಶ್ರೇಷ್ಠ; ಉಪಾಸನೆ: ಪೂಜೆ; ಕೃತಕೃತ್ಯ: ಧನ್ಯ, ಕೃತಾರ್ಥ;

ಪದವಿಂಗಡಣೆ:
ಅರಸ +ಕೇಳೈ +ಕ್ಷಾತ್ರ +ತೇಜವ
ಹೊರೆವುದೇ +ಬ್ರಾಹ್ಮಣ್ಯ +ಶಕ್ತಿ
ಸ್ಫುರಣ+ ನೀನ್+ಈ+ ಬ್ರಹ್ಮವರ್ಗದ +ಸಾರ +ಸೌಖ್ಯದಲಿ
ಮೆರೆದೆಲಾ+ ವಿಪ್ರ+ಅವಮಾನವೆ
ಸಿರಿಗೆ+ ನಂಜುಕಣಾ +ಮಹೀಸುರ
ವರರ್+ಉಪಾಸನೆ +ನಿನಗೆ+ ನೀ +ಕೃತಕೃತ್ಯನಹೆಯೆಂದ

ಅಚ್ಚರಿ:
(೧) ಯಾವುದು ವಿಷಕ್ಕೆ ಸಮಾನ – ವಿಪ್ರಾವಮಾನವೆ ಸಿರಿಗೆ ನಂಜುಕಣಾ
(೨) ಮಹೀಸುರ, ಬ್ರಹ್ಮವರ್ಗ, ಬ್ರಾಹ್ಮಣ್ಯ, ವಿಪ್ರ – ಸಮನಾರ್ಥಕ ಪದಗಳು

ಪದ್ಯ ೪೮: ನಹುಷನು ಧರ್ಮಜನಿಗೆ ಮೊದಲು ಯಾವ ಪ್ರಶ್ನೆಯನ್ನು ಕೇಳಿದನು?

ಎಸೆವ ವಿಪ್ರರ ಮತಿಗೆ ಸಂಭಾ
ವಿಸುವ ಧರ್ಮ ಸ್ಥಿತಿಯನಭಿವ
ರ್ಣಿಸುವೆನೆಂದೈ ಭೂಮಿಪತಿ ಭೂದೇವ ಕುಲದೊಳಗೆ
ಎಸೆವ ವಿಪ್ರನದಾರು ಪರಿಶೋ
ಭಿಸುವುದೀ ಬ್ರಾಹ್ಮಣ್ಯವೇತರ
ದೆಸೆಯೊಳಿದನೇ ಮುನ್ನಹೇಳೆನೆ ರಾಯನಿಂತೆಂದ (ಅರಣ್ಯ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಹುಷನು ಧರ್ಮಜನ ಮಾತನ್ನು ಕೇಳಿ, ವಿಖ್ಯಾತರಾದ ಬ್ರಾಹ್ಮಣರು ಅರಿತ ಧರ್ಮವನ್ನು ಹೇಳುತ್ತೇನೆಂದೆಯಲ್ಲವೇ? ಹಾಗಾದರೆ ಬ್ರಾಹ್ಮಣರಲ್ಲಿ ವಿಪ್ರನಾರು? ಬ್ರಾಹ್ಮಣ್ಯವು ಏತರದಿಂದ ಶೋಭಿತವಾಗಿದೆ? ಅದನ್ನೇ ಮೊದಲು ಹೇಳು ಎಂದನು.

ಅರ್ಥ:
ಎಸೆ: ಶೋಭಿಸು; ಒಗೆ; ವಿಪ್ರ: ಬ್ರಾಹ್ಮಣ; ಮತಿ: ಬುದ್ಧಿ; ಸಂಭಾವಿಸು: ಯೋಚಿಸು; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಇರವು, ಅಸ್ತಿತ್ವ; ಅಭಿವರ್ಣಿಸು: ಬಣ್ಣಿಸು, ವಿವರಿಸು; ಭೂಮಿಪತಿ: ರಾಜ; ಭೂದೇವ: ಬ್ರಾಹ್ಮಣ; ಕುಲ: ವಂಶ; ವಿಪ್ರ: ಬ್ರಾಹ್ಮಣ; ಪರಿಶೋಭಿಸು: ಅಂದವಾಗು, ಪ್ರಕಾಶಿಸು; ದೆಸೆ: ದೆಶೆ, ಕಾರಣ; ಮುನ್ನ: ಮೊದಲು; ಹೇಳು: ತಿಳಿಸು; ರಾಯ: ರಾಜ;

ಪದವಿಂಗಡಣೆ:
ಎಸೆವ +ವಿಪ್ರರ +ಮತಿಗೆ +ಸಂಭಾ
ವಿಸುವ +ಧರ್ಮ +ಸ್ಥಿತಿಯನ್+ಅಭಿವ
ರ್ಣಿಸುವೆನೆಂದೈ+ ಭೂಮಿಪತಿ+ ಭೂದೇವ+ ಕುಲದೊಳಗೆ
ಎಸೆವ+ ವಿಪ್ರನದ್+ಆರು+ ಪರಿಶೋ
ಭಿಸುವುದೀ +ಬ್ರಾಹ್ಮಣ್ಯವ್+ಏತರ
ದೆಸೆಯೊಳ್+ಇದನೇ +ಮುನ್ನ+ಹೇಳೆನೆ+ ರಾಯನ್+ಇಂತೆಂದ

ಅಚ್ಚರಿ:
(೧) ವಿಪ್ರ, ಬ್ರಾಹ್ಮಣ, ಭೂದೇವ – ಸಮನಾರ್ಥಕ ಪದ

ಪದ್ಯ ೩೦: ದೇವಾಂಶ, ಜ್ಞಾನ, ಬ್ರಾಹ್ಮಣ್ಯವೆಲ್ಲಿರುತ್ತದೆ?

ಎಲ್ಲಿಹುದು ಋಣ ಭಯವು ಮನುಜರೊ
ಳಲ್ಲಿಹುದು ದೇವಾಂಶ ನಿಜವಾ
ಗೆಲ್ಲಿಹುದು ಸನ್ಮಾರ್ಗ ಬಳಿಕಲ್ಲಿಹುದು ಬ್ರಾಹ್ಮಣ್ಯ
ಎಲ್ಲಿಹುದು ಪರಸತಿಯರಂಜಿಕೆ
ಯಲ್ಲಿಹುದು ವಿಜ್ಞಾನವಿದನರಿ
ದಲ್ಲದಿಹಪರವಿಲ್ಲ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ಯಾವ ಮನುಷ್ಯನಲ್ಲಿ ತನ್ನ ಋಣ ಭಾರವನ್ನು ತೀರಿಸುವ ಭಯವಿರುವುದೋ ಅವನಲ್ಲಿ ದೇವಾಂಶವು ಇರುತ್ತದೆ, ಯಾರು ಸನ್ಮಾರ್ಗದಲ್ಲಿ ನಡೆಯುತ್ತಾರೋ ಅಲ್ಲಿ ಬ್ರಾಹ್ಮಣಿಕೆ ಅಡಗಿರುತ್ತದೆ, ಯಾರಲ್ಲಿ ಪರಸತಿಯರ ಮೇಲೆ ಭಕ್ತಿ ಭಯವಿದೆಯೋ ಅಲ್ಲಿ ವಿಶೇಷ ಜ್ಞಾನವಿರುತ್ತದೆ, ಇದನ್ನು ಅರಿಯದಿದ್ದರೆ ಅವರಿಗೆ ಈ ಲೋಕದಲ್ಲೂ ಹಾಗು ಪರಲೋಕದಲ್ಲೂ ಗತಿಯಿಲ್ಲ.

ಅರ್ಥ:
ಋಣ: ಸಾಲ; ಭಯ: ಅಂಜಿಕೆ; ಮನುಜ: ಮಾನವ; ದೇವಾಂಶ: ದೈವತ್ವ; ನಿಜ: ಸತ್ಯ; ಸನ್ಮಾರ್ಗ: ಒಳ್ಳೆಯ ದಾರಿ; ಬಳಿಕ: ನಂತರ; ಬ್ರಾಹ್ಮಣ:ವಿಪ್ರ, ಹಾರವ; ಪರ: ಬೇರೆ; ಸತಿ: ಹೆಂಡತಿ; ವಿಜ್ಞಾನ: ಅರಿವು, ತಿಳಿವಳಿಕೆ; ಅರಿ: ತಿಳಿ; ಇಹ: ಭೂಮಿ; ಪರ: ಬೇರೆಯ ಲೋಕ, ಸ್ವರ್ಗ/ನರಕ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಎಲ್ಲಿಹುದು +ಋಣ +ಭಯವು +ಮನುಜರೊಳ್
ಅಲ್ಲಿಹುದು +ದೇವಾಂಶ +ನಿಜವಾಗ್
ಎಲ್ಲಿಹುದು +ಸನ್ಮಾರ್ಗ +ಬಳಿಕಲ್ಲಿಹುದು +ಬ್ರಾಹ್ಮಣ್ಯ
ಎಲ್ಲಿಹುದು +ಪರಸತಿಯರ್+ಅಂಜಿಕೆ
ಯಲ್ಲಿಹುದು +ವಿಜ್ಞಾನವ್+ಇದನ್+ಅರಿದ್
ಅಲ್ಲದ್+ಇಹಪರವಿಲ್ಲ+ ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಎಲ್ಲಿಹುದು ಅಲ್ಲಿಹುದು ಪ್ರತಿಸಾಲಿನಲ್ಲೂ ಕಾಣಬಹುದು
(೨) ೩ ಉಪಮಾನಗಳ ಮೂಲಕ ಇಹ ಪರದಲ್ಲಿ ಗತಿ ಹೇಗೆ ಪಡೆಯಬೇಕೆಂದು ತಿಳಿಸುವ ಪದ್ಯ
(೩) ಅಂಜಿಕೆ, ಭಯ – ಸಮನಾರ್ಥಕ ಪದ
(೪) ಇಹ ಪರ – ಜೋಡಿ ಪದಗಳು