ಪದ್ಯ ೯: ಭೀಮನು ಅಡವಿಯಲ್ಲಿ ಹೇಗೆ ನಡೆದನು?

ಮುಡುಹು ಸೋಂಕಿದೊಡಾ ಮಹಾದ್ರಿಗ
ಳೊಡನೆ ತೋರಹ ತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು ಮೀರಿ ನಡೆದನು ಭೀಮನಡವಿಯಲಿ (ಅರಣ್ಯ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಭುಜದ ತುದಿಯು ಸೋಂಕಿದ ಮಾತ್ರಕ್ಕೆ ಮಹಾ ಪರ್ವತಗಳು, ವೃಕ್ಷಗಳು ಕೆಳಕ್ಕೆ ಬಿದ್ದವು. ಹೆಜ್ಜೆಯನ್ನಿಟ್ಟ ಮಾತ್ರಕ್ಕೆ ಚಿಕ್ಕ ಪುಟ್ಟ ದಿನ್ನೆಗಳು ಭೂಮಿಯೂ ತಗ್ಗಿ ಹೋದವು. ಇವನು ಹಾಕಿದ ಕೇಕೆಗೆ ಭೂಮಿ ಬಿರುಕು ಬಿಟ್ಟಿತು. ಇವನ ತೊಡೆಯ ಗಾಳಿಗೆ ಚಿಕ್ಕ ಮರಗಳು, ಗಿಡಗಳು, ಹಾರಿಹೋದವು. ಈ ರೀತಿ ಭೀಮನು ಅಡವಿಯಲ್ಲಿ ದಾಟುತ್ತಾ ನಡೆದನು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಸೋಂಕು: ಮುಟ್ಟು, ಸ್ಪರ್ಶ; ಮಹಾದ್ರಿ: ದೊಡ್ಡ ಬೆಟ್ಟ; ತೋರು: ಗೋಚರಿಸು; ತರು: ಮರ; ಕೆಡೆ: ಬೀಳು, ಕುಸಿ; ಅಡಿಯಿಡು: ಹೆಜ್ಜೆಯಿಡು; ಹೆಜ್ಜೆ: ಪಾದ; ತಗ್ಗು: ಹಳ್ಳ, ಗುಣಿ; ನೆಲ: ಭೂಮಿ; ಸಹಿತ: ಜೊತೆ; ಹೆದ್ದೆವರು: ದೊಡ್ಡ ದಿಣ್ಣೆ; ಒಡೆದು: ಸೀಳು; ಇಳೆ: ಭೂಮಿ; ಬೊಬ್ಬಿರಿತ: ಜೋರಾದ ಕೂಗು, ಗರ್ಜನೆ; ತೊಡೆ: ಊರು; ಗಾಳಿ: ವಾಯು; ಹಾರು: ಲಂಘಿಸು; ಕಿರುಗಿಡ: ಚಿಕ್ಕ ಗಿಡ; ಮರ: ತರು; ಮೀರು: ದಾಟು, ಹಾದುಹೋಗು; ನಡೆ: ಚಲಿಸು; ಅಡವಿ: ಕಾಡು;

ಪದವಿಂಗಡಣೆ:
ಮುಡುಹು +ಸೋಂಕಿದೊಡ್+ಆ+ ಮಹಾದ್ರಿಗಳ್
ಒಡನೆ +ತೋರಹ +ತರು +ಕೆಡೆದುವ್+ಅಡಿ
ಯಿಡಲು +ಹೆಜ್ಜೆಗೆ +ತಗ್ಗಿದುದು +ನೆಲ +ಸಹಿತ+ ಹೆದ್ದೆವರು
ಒಡೆದುದ್+ಇಳೆ +ಬೊಬ್ಬಿರಿತಕ್+ಈತನ
ತೊಡೆಯ +ಗಾಳಿಗೆ +ಹಾರಿದವು +ಕಿರು
ಗಿಡ +ಮರಂಗಳು +ಮೀರಿ +ನಡೆದನು +ಭೀಮನ್+ಅಡವಿಯಲಿ

ಅಚ್ಚರಿ:
(೧) ಭೀಮನ ನಡೆತದ ರಭಸ – ಒಡೆದುದಿಳೆ ಬೊಬ್ಬಿರಿತಕೀತನ ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು