ಪದ್ಯ ೩: ಯೋಜನಗಂಧಿಯು ಯಾರನ್ನು ಕರೆದಳು?

ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರ ಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು (ಆದಿ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಯೋಜನಗಂಧಿಯು ಚಿಂತೆಯ ಬಂದಿಯಾಗಿ ದುಃಖಿಸಿದಳು, ಒಂದಾನೊಂದು ರಾತ್ರಿ ತನ್ನ ಮಗ ವೇದವ್ಯಾಸರು ಕೊಟ್ಟ ಭಾಷೆಯು ನೆನಪಿಗೆ ಬಂತು. ಮುರಿಯುವ ಹಂತದಲ್ಲಿದ್ದ ಭರತವಮ್ಶವನ್ನು ಬೆಸೆಯುವ ಮಾರ್ಗವು ನನಗೆ ತಿಳಿಯಿತು. ಇದು ನನ್ನ ಪುಣ್ಯವೆಂದು ಯೊಚಿಸಿ ಮಗನೇ ವೇದವ್ಯಾಸ ಬಾ ಎಂದಳು.

ಅರ್ಥ:
ಮರುಗು: ತಳಮಳ, ಸಂಕಟ; ಚಿಂತೆ: ಯೋಚನೆ; ಸೆರೆ: ಬಂಧನ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ರಾತ್ರಿ: ಇರುಳು; ಅರಿ: ತಿಳಿ; ನೆನೆ: ಜ್ಞಾಪಿಸು; ಪೂರ್ವ: ಹಿಂದೆ; ಸೂಚಿತ: ತಿಳಿಸಿದ; ಪುತ್ರ: ಮಗ; ಭಾಷಿತ: ನುಡಿ; ಮುರಿ: ಸೀಳು; ಅನ್ವಯ: ಕುಲ; ಬೆಸುಗೆ: ಒಂದಾಗು; ಪುಣ್ಯ: ಸದಾಚಾರ; ಎಚ್ಚರ: ಗಮನ; ನುಡಿ: ಮಾತು; ಮಗ: ಸುತ; ಬಹುದು: ಬರಬೇಕು, ಆಗಮಿಸು;

ಪದವಿಂಗಡಣೆ:
ಮರುಗಿ +ಯೋಜನಗಂಧಿ +ಚಿಂತೆಯ
ಸೆರೆಗೆ +ಸಿಲುಕಿದಳ್+ಒಂದು +ರಾತ್ರಿಯೊಳ್
ಅರಿದು +ನೆನೆದಳು +ಪೂರ್ವಸೂಚಿತ +ಪುತ್ರ+ ಭಾಷಿತವ
ಮುರಿದ +ಭರತ+ಅನ್ವಯದ +ಬೆಸುಗೆಯ
ತೆರನು +ತೋರಿತೆ +ಪುಣ್ಯವೆನುತ್
ಎಚ್ಚರಿತು +ನುಡಿದಳು +ಮಗನೆ +ವೇದವ್ಯಾಸ +ಬಹುದೆಂದು

ಅಚ್ಚರಿ:
(೧) ರೂಪಕದ ಪ್ರಯೋಗ – ಯೋಜನಗಂಧಿ ಚಿಂತೆಯ ಸೆರೆಗೆ ಸಿಲುಕಿದಳ್

ಪದ್ಯ ೯: ಸಾತ್ಯಕಿ ಭೂರಿಶ್ರವರ ಯುದ್ಧದ ಅಬ್ಬರ ಹೇಗಿತ್ತು?

ಮಸೆಯ ಮೈಗಳೊಳೊರೆವುತಿರ್ದುವು
ಬಿಸಿರಕುತ ಮೊನೆಗುತ್ತುಗಳ ಕಿ
ಬ್ಬಸುರಿನಲಿ ಜೋಲಿದವು ಕರುಳುಗಳಾಹವದ ಭಟರ
ಮಸಕ ಮಸುಳದು ಮನದ ಖಾತಿಯ
ಮುಸುಡು ಮುರಿಯದು ಬಿಗಿದ ಹುಬ್ಬಿನ
ಬೆಸುಗೆ ಸಡಿಲದು ಭೂಪ ಭೂರಿಶ್ರವನ ಸಾತ್ಯಕಿಯ (ದ್ರೋಣ ಪರ್ವ, ೧೪ ಸಂಧಿ, ೯ ಪದ್ಯ)

ತಾತ್ಪರ್ಯ:
ಸಾತ್ಯಕಿ ಭೂರಿಶ್ರವರ ಮೈಯಲ್ಲಿ ಗಾಯದ ರಕ್ತ ಒಸರುತ್ತಿದ್ದಿತು. ಪಕ್ಕೆಗಳಲ್ಲಿ ತಿವಿದ ತಿವಿತಕ್ಕೆ ಕರುಳುಗಳು ಹೊರ ಬಂದವು. ಅವರ ಯುದ್ಧದ ವೇಗ ಕಡಿಮೆಯಾಗುತ್ತಿರಲಿಲ್ಲ, ಕೋಪದ ಉಗ್ರತೆ ಇಳಿಯಲಿಲ್ಲ, ಗಂಟಿಕ್ಕಿದ್ದ ಹುಬ್ಬು ಸಡಿಸಲಿಲ್ಲ, ರಾಜ ದೃತರಾಷ್ಟ್ರ ಕೇಳು ಇವರಿಬ್ಬರ ಹೋರಾಟದ ಅಬ್ಬರ ಕಡಿಮೆಯಾಗಲಿಲ್ಲ.

ಅರ್ಥ:
ಮಸೆ: ಹರಿತವಾದುದು; ಮೈ: ತನು, ದೇಹ; ಒರೆ: ನೋಡು; ರಕುತ: ನೆತ್ತರು; ಮೊನೆ: ತುದಿ, ಚೂಪು; ಕುತ್ತು: ತೊಂದರೆ, ಆಪತ್ತು; ಕಿಬ್ಬಸುರು: ಕೆಳೆಹೊಟ್ಟೆ; ಜೋಲು: ನೇತಾಡು; ಕರುಳು: ಪಚನಾಂಗ; ಆಹವ: ಯುದ್ಧ; ಭಟ: ಸೈನಿಕ; ಮಸಕ: ರಭಸ, ವೇಗ; ಮಸುಳು: ಕಾಂತಿಹೀನವಾಗು, ಮಂಕಾಗು; ಮನ: ಮನಸ್ಸು; ಖಾತಿ: ಕೋಪ; ಮುಸುಡು: ಮುಖ; ಮುರಿ: ಸೀಳು; ಬಿಗಿ: ಕಟ್ಟು, ಬಂಧಿಸು; ಹುಬ್ಬು: ಕಣ್ಣಿನ ಮೇಲಿನ ಕೂದಲು; ಬೆಸುಗೆ: ಒಂದಾಗು; ಸಡಿಲ: ಶಿಥಿಲವಾದುದು; ಭೂಪ: ರಾಜ;

ಪದವಿಂಗಡಣೆ:
ಮಸೆಯ +ಮೈಗಳೊಳ್+ಒರೆವುತಿರ್ದುವು
ಬಿಸಿರಕುತ +ಮೊನೆಗುತ್ತುಗಳ +ಕಿ
ಬ್ಬಸುರಿನಲಿ +ಜೋಲಿದವು +ಕರುಳುಗಳ್+ಆಹವದ +ಭಟರ
ಮಸಕ +ಮಸುಳದು +ಮನದ +ಖಾತಿಯ
ಮುಸುಡು +ಮುರಿಯದು +ಬಿಗಿದ +ಹುಬ್ಬಿನ
ಬೆಸುಗೆ +ಸಡಿಲದು+ ಭೂಪ +ಭೂರಿಶ್ರವನ +ಸಾತ್ಯಕಿಯ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಸಕ ಮಸುಳದು ಮನದ ಖಾತಿಯ ಮುಸುಡು ಮುರಿಯದು

ಪದ್ಯ ೩: ಆದಿಶೇಷನ ಕೊರಳೇಕೆ ಕುಸಿಯಿತು?

ಎಲೆಲೆ ಕವಿಕವಿ ಬೆರಸುಬೆರಸಿ
ಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರ ನೆನುತ
ಬಲಜಲಧಿ ಮುಕ್ಕುಳಿಸಿ ಮಿಗೆ ಹೆ
ಕ್ಕಳಿಸಿ ಕವಿದುದು ಗಿರಿಯ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ (ಭೀಷ್ಮ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೆ ಮೇಲೆ ಬೀಳು, ಮುನ್ನುಗ್ಗು, ಆಕ್ರಮಿಸು, ಚುಚ್ಚು, ಭಲೆ ಭಲೆ ಮಹಾಪರಾಕ್ರಮಿಗಳೇ ಹಿಂಜರಿಯಬೇಡಿ, ಎದುರು ಸಿಅನ್ಯದವರನ್ನು ಹೊಯ್ಯಿರಿ, ಎಂದು ಕೂಗುತ್ತಾ ಸೈನ್ಯಗಳು ಮೇಲೆ ಬಿದ್ದವು. ಆ ಸದ್ದಿಗೆ ಬೆಟ್ಟಗಳ ಬೆಸುಗೆ ಬಿಟ್ಟಿತು ಆಧಿಶೇಷನ ಕೊರಳು ಕುಸಿಯಿತು, ಕೂರ್ಮನ ಎದೆ ಬಿರಿಯಿತು.

ಅರ್ಥ:
ಕವಿ: ಆವರಿಸು; ಬೆರಸು: ಕೂಡಿಸು; ಇಟ್ಟಳಿಸು: ಒತ್ತಾಗು; ತಿವಿ: ಚುಚ್ಚು; ಭಲೆ: ಪ್ರಶಂಸೆಯ ನುಡಿ; ಅತಿಬಲರು: ಪರಾಕ್ರಮಿಗಳು; ಹಿಂಚದಿರು: ಹಿಂದೆ ಸರಿಯದಿರಿ; ಹೊಯ್: ಹೊಡೆ; ಚೂಣಿ: ಯುದ್ಧದಲ್ಲಿ ಮುಂದೆ ಇರುವ ಸೈನ್ಯ; ಬಲ: ಸೈನ್ಯ; ಜಲಧಿ: ಸಾಗರ; ಮುಕ್ಕುಳಿಸು: ಹೊರಹಾಕು; ಮಿಗೆ: ಅಧಿಕ; ಹೆಕ್ಕಳ: ಹೆಚ್ಚಳ, ಅತಿಶಯ; ಗಿರಿ: ಬೆಟ್ಟ; ಬೆಸುಗೆ: ಜೊತೆ, ಒಂದಾಗು; ಕಳಚು: ತೊರೆ; ಅಹಿಪ: ಸರ್ಪರಾಜ; ಕೊರಳು: ಗಂಟಲು, ಕುತ್ತಿಗೆ; ಕುಸಿ: ಕೆಳಕ್ಕೆ ಬೀಳು; ಕಮಠ: ಕೂರ್ಮ; ಎದೆ: ವಕ್ಷ; ಬಿರಿ: ಸೀಳು;

ಪದವಿಂಗಡನೆ:
ಎಲೆಲೆ +ಕವಿಕವಿ +ಬೆರಸು+ಬೆರಸ್
ಇಟ್ಟಳಿಸು+ ತಿವಿತಿವಿ +ಭಲರೆ +ಭಲರ್+ಅತಿ
ಬಲರೆ +ಹಿಂಚದಿರ್+ಇನ್ನು +ಹೊಯ್+ ಹೊಯ್ +ಚೂಣಿಗರನ್ +ಎನುತ
ಬಲ+ಜಲಧಿ+ ಮುಕ್ಕುಳಿಸಿ +ಮಿಗೆ +ಹೆ
ಕ್ಕಳಿಸಿ +ಕವಿದುದು +ಗಿರಿಯ +ಬೆಸುಗೆಯು
ಕಳಚಿತ್+ಅಹಿಪನ +ಕೊರಳು +ಕುಸಿದವು+ ಕಮಠನ್+ಎದೆ+ ಬಿರಿದ

ಅಚ್ಚರಿ:
(೧) ಜೋಡಿ ಪದಗಳು – ಎಲೆಲೆ ಕವಿಕವಿ ಬೆರಸುಬೆರಸಿಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರ ನೆನುತ – ಕವಿಕವಿ, ತಿವಿತಿವಿ, ಭಲರೆ ಭಲರೆ, ಹೊಯ್ ಹೊಯ್
(೨) ಸೈನ್ಯದ ಪರಾಕ್ರಮದ ವರ್ಣನೆ – ಬಲಜಲಧಿ ಮುಕ್ಕುಳಿಸಿ ಮಿಗೆ ಹೆಕ್ಕಳಿಸಿ ಕವಿದುದು ಗಿರಿಯ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ
(೩) ಕ ಕಾರದ ಸಾಲು ಪದ – ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ

ಪದ್ಯ ೬೭: ಸಂಜೆಯಾದುದನ್ನು ಹೇಗೆ ವಿವರಿಸಲಾಗಿದೆ?

ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಬಿಜಯಂಗೈಯಬೇಕೆಂದ (ವಿರಾಟ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ತಾವರೆಯ ದಳಗಲ ಮೇಲುಭಾಗಗಳು ಮುಚ್ಚುತ್ತಿವೆ, ಕನ್ನೈದಿಲೆಯ ನೆತ್ತಿಯು ಅರಳುತ್ತಿದೆ, ಚಕ್ರವಾಕ ಪಕ್ಷಿಗಳ ಆಲಿಂಗನವು ಸಡಿಲುತ್ತಿದೆ, ಎಲ್ಲೆಡೆಯಿದ್ದ ಹೊಂಬಿಸಿಲು ಮೆಲ್ಲಗೆ ಮಾಯವಾಗುತ್ತಿದೆ, ನೀವಿನ್ನು ದಯಮಾಡಿಸಿ ಎಂದು ಧರ್ಮಜನು ಕೃಷ್ಣನಿಗೆ ಹೇಳಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ಮುಖ; ತಾವರೆ: ಕಮಲ; ಮುಸುಕು: ಹೊದಿಕೆ; ನೆತ್ತಿ: ಮೇಲ್ಭಾಗ, ಶಿರ; ಬೆಸುಗೆ: ಪ್ರೀತಿ; ಬಿಡು: ತೊರೆ; ಜಕ್ಕವಕ್ಕಿ: ಚಕ್ರ ವಾಕ; ತೆಕ್ಕೆ: ಅಪ್ಪುಗೆ, ಆಲಿಂಗನ; ಸಡಿಲು: ಬಿಗಿಯಿಲ್ಲದಿರುವುದು; ದೆಸೆ: ದಿಕ್ಕು; ತಾಣ: ನೆಲೆ, ಬೀಡು; ಹೊಂಬಿಸಿಲು: ಚಿನ್ನದಂತಹ ಸೂರ್ಯನ ಕಿರಣ; ಬೀತು: ಕಳೆದು; ಜೀಯ: ಒಡೆಯ; ಬಿನ್ನಹ: ಕೋರಿಕೆ; ವಸುಧೆ: ಭೂಮಿ; ತಂಪು: ತಣಿವು, ಶೈತ್ಯ; ಬಿಜಯಂಗೈ: ದಯಮಾಡು;

ಪದವಿಂಗಡಣೆ:
ಎಸಳು+ಮೊನೆ+ ಮೇಲಾಗಿ +ತಾವರೆ
ಮುಸುಕುತಿದೆ+ ನೈದಿಲಿನ +ನೆತ್ತಿಯ
ಬೆಸುಗೆ +ಬಿಡುತಿದೆ +ಜಕ್ಕವಕ್ಕಿಯ +ತೆಕ್ಕೆ +ಸಡಿಲುತಿದೆ
ದೆಸೆದೆಸೆಯ +ತಾಣಾಂತರದ +ಹೊಂ
ಬಿಸಿಲು +ಬೀತುದು +ಜೀಯ +ಬಿನ್ನಹ
ವಸುಧೆ +ತಂಪೇರಿತ್ತು +ಬಿಜಯಂಗೈಯ+ಬೇಕೆಂದ

ಅಚ್ಚರಿ:
(೧) ಸಂಜೆಯಾಗುವುದನ್ನು ಸುಂದರವಾಗಿ ವರ್ಣಿಸುವ ಪರಿ – ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ

ಪದ್ಯ ೩೧:ಯಾವ ಶುಭ ಸಮಾಚಾರವನ್ನು ದೂತರು ತಂದರು?

ವಿಷವ ತೆಗೆದಳು ದ್ರುಪದಸುತೆ ಕೈ
ಮುಸುಕಿನಲಿ ಚೀಲಾಯವುಗಿದನು
ವಸುಮತೀಶ್ವರನಾ ಮುಹೂರ್ತಕ್ಕೆ ದೂತರೈ ತಂದು
ಒಸಗೆ ಜೀಯರ್ಜುನನ ಮಕುಟದ
ಬೆಸುಗೆ ಮುರಿದುದು ಹರಿ ವರೂಥವ
ಕುಸಿಯಲೊತ್ತಿದನಿಂದು ತಪ್ಪಿತು ತೀವ್ರ ಫಣಿಬಾಣ (ಕರ್ಣ ಪರ್ವ, ೨೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರವು ಅರ್ಜುನನ ಮುಕುಟವನ್ನು ಕೆಳಗುದುರಿಸದ ವಾರ್ತೆಯನ್ನು ತಿಳಿದ ದ್ರೌಪದಿಯು ವಿಷಪ್ರಾಸನಕ್ಕೆ ಮುಂದಾದಳು, ಧರ್ಮಜನು ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ಚಿಕ್ಕ ಕತ್ತಿಯೊಂದನ್ನು ಎಳೆದುಕೊಂಡನು. ಆ ಸಮಯಕ್ಕೆ ಸರಿಯಾಗಿ ದೂತರು ಬಂದು ಒಡೆಯಾ ಅರ್ಜುನನ ಕಿರೀಟದ ಬೆಸುಗೆ ಮುರಿದು ಬಿತ್ತು ಅಷ್ಟೆ, ಶ್ರೀಕೃಷ್ಣನು ರಥವನ್ನು ಕುಸಿಯುವಂತೆ ಒತ್ತಿದುದರಿಂದ ಸರ್ಪಾಸ್ತ್ರದ ಗುರಿ ತಪ್ಪಿತು, ಇದು ಶುಭ ಸಮಾಚಾರ ಎಂದರು.

ಅರ್ಥ:
ವಿಷ: ಗರಳ, ನಂಜು; ತೆಗೆ: ಈಚೆಗೆ ತರು, ಹೊರತರು; ಸುತೆ: ಮಗಳು; ಮುಸುಕು: ಹೊದಿಕೆ; ಚೀಲಾಯ: ಸಣ್ಣಕತ್ತಿ; ಉಗಿ: ಹೊರತೆಗೆ; ವಸುಮತಿ: ಭೂಮಿ, ಪೃಥ್ವಿ; ವಸುಮತೀಶ್ವರ: ರಾಜ; ಮುಹೂರ್ತ: ಸಮಯ; ದೂತ: ಸೇವಕ; ತಂದು: ಆಗಮಿಸು; ಒಸಗೆ: ಶುಭ, ಮಂಗಳ; ಜೀಯ: ಒಡೆಯ; ಮಕುಟ: ಕಿರೀಟ; ಬೆಸುಗೆ: ಒಂದಾಗುವುದು; ಮುರಿ: ಸೀಳು; ಹರಿ: ಕೃಷ್ಣ; ವರೂಥ: ತೇರು, ರಥ; ಕುಸಿ: ಕೆಳಕ್ಕೆ ಬೀಳು; ಒತ್ತು: ಅಮುಕು; ತಪ್ಪಿತು: ಸುಳ್ಳಾಗು; ತೀವ್ರ: ಹರಿತ, ತೀಕ್ಷ್ಣತೆ; ಫಣಿ: ಹಾವು; ಬಾಣ: ಶರ;

ಪದವಿಂಗಡಣೆ:
ವಿಷವ +ತೆಗೆದಳು +ದ್ರುಪದಸುತೆ+ ಕೈ
ಮುಸುಕಿನಲಿ +ಚೀಲಾಯ+ಉಗಿದನು
ವಸುಮತೀಶ್ವರನ್+ಆ+ ಮುಹೂರ್ತಕ್ಕೆ +ದೂತರೈ +ತಂದು
ಒಸಗೆ+ ಜೀಯ+ಅರ್ಜುನನ +ಮಕುಟದ
ಬೆಸುಗೆ +ಮುರಿದುದು +ಹರಿ +ವರೂಥವ
ಕುಸಿಯಲ್+ಒತ್ತಿದನ್+ಇಂದು +ತಪ್ಪಿತು +ತೀವ್ರ +ಫಣಿ+ಬಾಣ

ಅಚ್ಚರಿ:
(೧) ದ್ರೌಪದಿಯನ್ನು ದ್ರುಪದಸುತೆ ಮತ್ತು ಧರ್ಮರಾಯನನ್ನು ವಸುಮತೀಶ್ವರ ಎಂದು ಕರೆದಿರುವುದು
(೨) ಮಕುಟ ಕೆಳಗೆಬಿತ್ತು ಎಂದು ಹೇಳಲು – ಅರ್ಜುನನ ಮಕುಟದ ಬೆಸುಗೆ ಮುರಿದುದು

ಪದ್ಯ ೩೯: ಕೌರವರ ಸೈನ್ಯವು ಅರ್ಜುನನನ್ನು ಮೇಲೆ ಹೇಗೆ ಆಕ್ರಮಣ ಮಾಡಿತು?

ಬೆರಸಿ ಹೊಯ್ದರು ರಾವುತರು ರಥ
ತುರಗನಿಕರದ ಬೆಸುಗೆ ಬಿಡೆ ಮದ
ಕರಿಗಳಂಘವಿಸಿದವು ರಥ ಚಾಚಿದವು ಮುಂದಣಿಗೆ
ಹರಿಗೆಗಳ ತಲೆಗೊಡ್ಡಿ ಕಕ್ಕಡ
ಪರಶು ಖಂಡೆಯದವರು ಮಂಡಿಯ
ತೆರಳದಾಂತರು ಫಲುಗುಣನ ರಥದೆರಡುಪಕ್ಕದಲಿ (ಕರ್ಣ ಪರ್ವ, ೨೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾವುತರು ಅರ್ಜುನನ ರಥವನ್ನು ಅಡ್ಡಗಟ್ಟಿ ರಥದ ಕುದುರೆಗಳನ್ನು ಹೊಯ್ದರು. ಆನೆಗಳು ರಥದ ಮುಂದೆ ನುಗ್ಗಿದವು. ಕಾಲಾಳುಗಳು ತಲೆಗೆ ಗುರಾಣಿಗಳನ್ನು ಮರೆಮಾಡಿ ಕಕ್ಕಡ, ಪರಶು, ಕತ್ತಿಗಳನ್ನು ಹಿಡಿದು ರಥವನ್ನು ಲೆಕ್ಕಿಸದೆ ಅರ್ಜುನನನ್ನು ಹೊಯ್ದರು.

ಅರ್ಥ:
ಬೆರಸು: ಕೂಡಿಸು, ಮಿಶ್ರಮಾಡು; ಹೊಯ್ದು: ಹೊಡೆ; ರಾವುತ: ಕುದುರೆಸವಾರ; ರಥ: ಬಂಡಿ; ತುರಗ: ಅಶ್ವ; ನಿಕರ: ಗುಂಪು; ಬೆಸುಗೆ: ಒಲವು; ಬಿಡೆ: ತೊರೆ; ಮದ: ದರ್ಪ; ಕರಿ: ಆಂಘವಿಸು: ಬಯಸು, ಒಪ್ಪು; ಚಾಚು: ಹರಡು; ಮುಂದಣೆ: ಮುಂದೆ; ಹರಿಗೆ: ಚಿಲುಮೆ; ತಲೆ: ಶಿರ; ಒಡ್ಡು: ತೋರು; ಕಕ್ಕಡ: ದೀವಟಿಗೆ, ಪಂಜು; ಪರಶು: ಕೊಡಲಿ, ಕುಠಾರ; ಖಂಡೆಯ:ಕತ್ತಿ, ಖಡ್ಗ; ಮಂಡಿ: ಮೊಳಕಾಲು; ತೆರಳು: ಹೊರಡು; ಪಕ್ಕ: ಹತ್ತಿರ, ಸಮೀಪ;

ಪದವಿಂಗಡಣೆ:
ಬೆರಸಿ +ಹೊಯ್ದರು +ರಾವುತರು +ರಥ
ತುರಗ+ನಿಕರದ+ ಬೆಸುಗೆ +ಬಿಡೆ +ಮದ
ಕರಿಗಳ್+ಅಂಘವಿಸಿದವು +ರಥ +ಚಾಚಿದವು +ಮುಂದಣಿಗೆ
ಹರಿಗೆಗಳ +ತಲೆಗೊಡ್ಡಿ +ಕಕ್ಕಡ
ಪರಶು+ ಖಂಡೆಯದವರು +ಮಂಡಿಯ
ತೆರಳದಾಂತರು +ಫಲುಗುಣನ +ರಥದ್+ಎರಡು+ಪಕ್ಕದಲಿ