ಪದ್ಯ ೨೭: ಕರ್ಣನು ತನನ್ನು ಯಾರಿಗೆ ಹೋಲಿಸಿದನು?

ರಾಯತನದಲಿ ಬೆರೆತು ರಾಜ್ಯ
ಶ್ರೀಯ ನೆರೆ ಹೋಗಾಡಿ ಪರರಿಗೆ
ಜೀಯ ಬೆಸಸುವುದೆಂದು ಜೀವಿಸುವವರು ನಾವಲ್ಲ
ರಾಯತನವೆಮಗಿಲ್ಲ ಕೌರವ
ರಾಯನೋಲೆಯಕಾರರಹೆವೆ
ಮ್ಮಾಯತವು ತಾ ಬೇರೆನುತ ಕವಿದೆಚ್ಚನಾ ಕರ್ಣ (ಕರ್ಣ ಪರ್ವ, ೨೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕರ್ಣನು ಅರ್ಜುನನಿಗೆ ಉತ್ತರಿಸುತ್ತಾ, “ರಾಜರೆಂಬ ಗರ್ವದಲ್ಲಿ ತಮ್ಮ ರಾಜ್ಯಲಕ್ಷ್ಮಿಯನ್ನು ಕಳೆದುಕೊಂಡು ಪರರಬಳಿ ಹೋಗಿ “ಜೀಯ ಏನಪ್ಪಣೆ” ಎಂದು ಕೇಳುತ್ತಾ ನಾವು ಬದುಕುವವರಲ್ಲ. ನಾವು ರಾಜರಲ್ಲ ನಾವು ಕುರುರಾಜನ ಓಲೆಯಕಾರರು. ನಮ್ಮ ಯೋಗ್ಯತೆಯೇ ಬೇರೆ ಎಂದು ಕರ್ಣನು ಬಾಣಗಳನ್ನು ಬಿಟ್ಟನು.

ಅರ್ಥ:
ರಾಯ: ರಾಜ; ಬೆರೆತು: ಸೇರಿ; ರಾಜ್ಯಶ್ರೀ: ರಾಜ್ಯಲಕ್ಷ್ಮಿ; ನೆರೆ: ಪಕ್ಕ, ಪಾರ್ಶ್ವ; ಹೋಗಾಡು: ಹಾಳುಮಾಡಿಕೊಳ್ಳು; ಪರರು: ಬೇರೆಯವರು; ಜೀಯ: ಒಡೆಯ; ಬೆಸಸು: ಹೇಳು, ಆಜ್ಞಾಪಿಸು; ಜೀವಿಸು: ಬದುಕು; ಓಲೆಯಕಾರ: ಸೇವಕ; ಆಯತನ: ವಾಸಸ್ಥಾನ; ಬೇರೆ: ಅನ್ಯ; ಕವಿ: ಮುಸುಕು; ಎಚ್ಚು: ಬಾಣಬಿಡು;

ಪದವಿಂಗಡಣೆ:
ರಾಯತನದಲಿ +ಬೆರೆತು +ರಾಜ್ಯ
ಶ್ರೀಯ +ನೆರೆ +ಹೋಗಾಡಿ +ಪರರಿಗೆ
ಜೀಯ +ಬೆಸಸುವುದೆಂದು+ ಜೀವಿಸುವವರು +ನಾವಲ್ಲ
ರಾಯತನವ್+ಎಮಗಿಲ್ಲ +ಕೌರವ
ರಾಯನ್+ಓಲೆಯಕಾರರ್+ಅಹೆವ್+
ಎಮ್+ಆಯತವು+ ತಾ +ಬೇರೆನುತ+ ಕವಿದೆಚ್ಚನಾ +ಕರ್ಣ

ಅಚ್ಚರಿ:
(೧) ರಾಯ – ೧, ೪, ೫ ಸಾಲಿನ ಮೊದಲ ಪದ

ಪದ್ಯ ೨೫: ಅರ್ಜುನನು ಕೃಷ್ಣನನ್ನು ಏನು ಬೇಡಿದ?

ನಾವು ನೆರೆ ಸರ್ವಾಪರಾಧಿಗ
ಳಾವ ಗುಣದೋಷವನು ನಮ್ಮಲಿ
ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ
ಆವ ಪರಿಯಲಿ ತನ್ನ ಸತ್ಯದ
ಠಾವು ನಿಲುವುದು ರಾಯನುಪಹತಿ
ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ (ಕರ್ಣ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನಲ್ಲಿ ಮೊರೆಹೋಗಿ, ಕೃಷ್ಣಾ ನಾವು ಸರ್ವಾಪರಾಧಿಗಳು. ಧರ್ಮನಿರ್ಣಯವನ್ನು ನಾವು ಎತ್ತಬಲ್ಲೆವು? ನಮ್ಮ ಗುಣದೋಷಗಳನ್ನು ಏಕೆ ಭಾವಿಸುತ್ತೀಯ? ಏನು ಮಾಡಿದರೆ ನನ್ನ ಪ್ರತಿಜ್ಞೆ ಸತ್ಯವಾಗುವುದೋ ನಮ್ಮಣ್ಣನಿಗೆ ಯಾವ ತೊಂದರೆಯೂ ಆಗುವುದಿಲ್ಲವೋ ಅದನ್ನು ನಿರ್ಣಯಿಸಿ ನನಗೆ ಅಪ್ಪಣೆ ಕೊಡು ಎಂದು ಬೇಡಿದನು.

ಅರ್ಥ:
ನೆರೆ: ಪೂರ್ತಿಯಾಗಿ, ಅತಿಶಯ; ಸರ್ವಾ: ಎಲ್ಲಾ; ಅಪರಾಧಿ: ತಪ್ಪಿತಸ್ಥ; ಗುಣ: ನಡತೆ; ದೋಷ: ಕುಂದು, ಕಳಂಕ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಬಲ್ಲೆ: ತಿಳಿ; ಧರ್ಮ: ಧಾರಣೆ ಮಾಡಿದುದು; ಪರಿ: ರೀತಿ; ಸತ್ಯ: ದಿಟ, ನಿಜ; ಠಾವು: ಎಡೆ, ಸ್ಥಳ, ತಾಣ; ನಿಲುವು: ಇರುವಿಕೆ, ಸ್ಥಿತಿ; ರಾಯ: ರಾಜ; ಉಪಹತಿ:ಹೊಡೆತ, ಆಘಾತ; ಅರಿ: ತಿಳಿ; ಬೆಸಸು: ಅಪ್ಪಣೆಮಾಡು;

ಪದವಿಂಗಡಣೆ:
ನಾವು +ನೆರೆ +ಸರ್ವಾಪರಾಧಿಗಳ್
ಆವ +ಗುಣದೋಷವನು +ನಮ್ಮಲಿ
ಭಾವಿಸುವೆ +ನಾವೆತ್ತ +ಬಲ್ಲೆವು +ಧರ್ಮ+ನಿರ್ಣಯವ
ಆವ +ಪರಿಯಲಿ +ತನ್ನ +ಸತ್ಯದ
ಠಾವು +ನಿಲುವುದು +ರಾಯನ್+ಉಪಹತಿ
ಆವ +ಪರಿಯಿಂದ್+ಆಗದಿಹುದ್+ಅದನ್+ಅರಿದು +ಬೆಸಸೆಂದ

ಅಚ್ಚರಿ:
(೧) ಆವ – ೨, ೪, ೬ ಸಾಲಿನ ಮೊದಲ ಪದ
(೨) ನಾವು, ಠಾವು – ಪ್ರಾಸ ಪದಗಳು
(೩) ಬೇಡುವ ಬಗೆ – ಆವ ಗುಣದೋಷವನು ನಮ್ಮಲಿ ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ

ಪದ್ಯ ೧೦೬: ಸೇವಕನ ಲಕ್ಷಣವೇನು?

ಬರಲು ಕಂಡಡೆ ವಂದಿಸುತಲಂ
ತರಿಸಿ ಮಿಗೆ ಹತ್ತಿರವೆನಿಸದತಿ
ತರದ ದೂರವ ಸಾರದೀಪರಿ ಮಧ್ಯಗತನೆನಿಸಿ
ಪರಿವಿಡಿಯಲೋಲಗಿಸುತರಸನ
ಸಿರಿಮೊಗವ ನೀಕ್ಷಿಸುವ ಬೆಸಸಿದ
ನರವರಿಸದಾಕ್ಷಣಕೆ ಮಾಡುವನವನೆ ಸೇವಕನು (ಉದ್ಯೋಗ ಪರ್ವ, ೩ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ರಾಜನು ಬರುವುದನ್ನು ಕಂಡೊಡನೆ ಆತನಿಗೆ ನಮಸ್ಕರಿಸಿ, ಅವನ ಸಮೀಪದಲ್ಲಾಗಲಿ, ದೂರದಲ್ಲಾಗಲಿ ಇರದೆ, ಮಧ್ಯದ ಅಂತರದಲ್ಲಿದ್ದು ರಾಜನ ಮುಖವನ್ನು ನೋಡುತ್ತಾ ಕ್ರಮವಾಗಿ ಅವನಿಗೆ ಅನುಕೂಲನಾಗಿ, ಅವನು ಆಜ್ಞೆಮಾಡಿದುದನ್ನು ಆ ಕ್ಷಣದಲ್ಲೇ ತಪ್ಪದೆ ಮಾಡಬಲ್ಲವನೇ ಸೇವಕನೆನಿಸಿಕೊಳ್ಳಬಲ್ಲ ಎಂದು ವಿದುರ ತಿಳಿಸಿದ.

ಅರ್ಥ:
ಬರಲು: ಆಗಮಿಸು; ಕಂಡು: ನೋಡಿ; ವಂದಿಸು: ನಮಸ್ಕರಿಸು; ಅಂತರ: ದೂರ; ಮಿಗೆ: ಮತ್ತು; ಹತ್ತಿರ: ಸಮೀಪ; ಅತಿ:ಹೆಚ್ಚು; ತರ: ಕ್ರಮ, ಗುಂಪು; ದೂರ:ಸಮೀಪವಲ್ಲದ ; ಸಾರು: ಸಮೀಪಿಸು; ಪರಿ: ರೀತಿ; ಮಧ್ಯ: ನಡು; ಪರಿವಿಡಿ:ವ್ಯವಸ್ಥಿತವಾದ ಕ್ರಮ, ಅನುಕ್ರಮ; ಓಲಗ:ಸೇವೆ, ದರ್ಬಾರು; ಅರಸ: ರಾಜ; ಸಿರಿ:ಚೆಲುವು, ಶೋಭೆ; ಮೊಗ: ಮುಖ; ನೀಕ್ಷಿಸು: ನೋಡುತ; ಬೆಸಸು:ಹೇಳು, ಆಜ್ಞಾಪಿಸು; ಅರವರಿಸು: ಕಡೆಗಣಿಸು, ಉಪೇಕ್ಷಿಸು; ಕ್ಷಣ: ತಕ್ಷಣ; ಸೇವಕ: ದಾಸ;

ಪದವಿಂಗಡಣೆ:
ಬರಲು +ಕಂಡಡೆ +ವಂದಿಸುತಲ್
ಅಂತರಿಸಿ+ ಮಿಗೆ +ಹತ್ತಿರವೆನಿಸದ್+ಅತಿ
ತರದ +ದೂರವ +ಸಾರದ್+ಈ+ಪರಿ +ಮಧ್ಯಗತನ್+ಎನಿಸಿ
ಪರಿವಿಡಿಯಲ್+ಓಲಗಿಸುತ್+ಅರಸನ
ಸಿರಿಮೊಗವ +ನೀಕ್ಷಿಸುವ +ಬೆಸಸಿದನ್
ಅರವರಿಸದ್+ಆಕ್ಷಣಕೆ +ಮಾಡುವನ್+ಅವನೆ +ಸೇವಕನು

ಅಚ್ಚರಿ:
(೧) ಅಂತರ, ದೂರ – ಸಾಮ್ಯಪದಗಳು
(೨) ಸೇವಕನ ಲಕ್ಷಣ – ಬೆಸಸಿದನ್ ಅರವರಿಸದೆ ಆ ಕ್ಷಣಕೆ ಮಾಡುವನ್