ಪದ್ಯ ೪೨: ಸೈಂಧವನ ತಂದೆ ಯಾವ ಶಾಪವನ್ನಿತ್ತಿದ್ದನು?

ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ (ದ್ರೋಣ ಪರ್ವ, ೧೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಇವನ ತಲೆಯನ್ನು ಯಾರು ನೆಲಕ್ಕೆ ಕೆಡಹುವರೋ ಅವನ ತಲೆ ಬಿರಿದು ಬೀಳಲಿ ಎಂದು ಇವನ ತಂದೆಯ ಶಾಪವಿದೆ. ಈ ತಲೆಯು ಇವನ ತಂದೆಯ ಕೈಗೆ ಬೀಳುವ ಹಾಗೆ ಉಪಾಯವನ್ನು ಮಾಡು ಎಂದು ಕೃಷ್ಣನು ಹೇಳಲು, ಅರ್ಜುನನು ಹಾಗೆ ಆಗಲಿ ಎಂದು ಪಾಶುಪತಾಸ್ತ್ರಕ್ಕೆ ಆದೇಶವನ್ನಿತ್ತನು.

ಅರ್ಥ:
ತಂದೆ: ಅಪ್ಪ, ಪಿತ; ಶಾಪ: ನಿಷ್ಠುರದ ನುಡಿ; ತಲೆ: ಶಿರ; ನೆಲ: ಭೂಮಿ; ಕೆಡಹು: ಬೀಳು; ಮಸ್ತಕ: ತಲೆ; ಬಿರಿ: ಸೀಳು; ಬೀಳು: ಕುಸಿ; ಕೈ: ಹಸ್ತ; ಉಪಾಯ: ಯೋಚನೆ; ದಿವಿಜಪತಿ: ದೇವತೆಗಳ ರಾಜ (ಇಂದ್ರ); ಅಸ್ತ್ರ: ಶಸ್ತ್ರ; ಬೆಸಸು: ಕಾರ್ಯ; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ಇವನ +ತಂದೆಯ +ಶಾಪವ್+ಆವವನ್
ಇವನ +ತಲೆಯನು +ನೆಲಕೆ +ಕೆಡಹುವನ್
ಅವನ +ಮಸ್ತಕ +ಬಿರಿದು +ಬೀಳಲಿ+ಎಂದನ್+ಈ+ ತಲೆಯ
ಇವನ +ತಂದೆಯ +ಕೈಯೊಳಗೆ +ಬೀ
ಳುವ+ಉಪಾಯವ +ಮಾಡು +ನೀನ್+ಎನೆ
ದಿವಿಜಪತಿ+ಸುತನ್+ಆ+ ಮಹಾಸ್ತ್ರಕೆ +ಬೆಸಸಿದನು +ಹದನ

ಅಚ್ಚರಿ:
(೧) ತಲೆ, ಮಸ್ತಕ – ಸಮಾನಾರ್ಥಕ ಪದ
(೨) ಇವನ ತಂದೆಯ – ೧, ೪ ಸಾಲಿನ ಮೊದಲ ಪದ