ಪದ್ಯ ೬: ರಣಭೂಮಿಯು ಯಾವುದರಿಂದ ಅಲಂಕೃತಗೊಂಡಿತು?

ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಲ ರಂಜಿಸಿತು (ದ್ರೋಣ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವ ಯೋಧರ ಗಾಯಗಳು ರಕ್ತವನ್ನು ಕಾರಿದವು. ಮಾಂಸಖಂಡ, ನೆಣ, ಪಿತ್ತಕೋಶಗಳು ಹೊರಬಂದು ಬಿಳಿಯ ನೊರೆ ಕಾಣಿಸಿದವು. ಕೆಟ್ಟವಾಸನೆ ಹಬ್ಬಿತು. ಎಲುಬುಗಳು ತುಂಡಾಗಿ ಚರ್ಮದಿಂದ ಹೊರಕ್ಕೆ ಇಣುಕಿದವು. ಪೂರ್ತಿಯಾಗಿ ಗಾಯಗೊಂಡು ಬಿದ್ದ ಹೆಣಗಳ ರಾಶಿ ಎಲ್ಲೆಲ್ಲೂ ಕಾಣಿಸುತ್ತಿತ್ತು.

ಅರ್ಥ:
ಏರು: ಹತ್ತು, ಆರೋಹಿಸು; ಬುದುಬುದಿಸು: ಒಂದೇ ಸಮನೆ, ದಪದಪ; ರಕುತ: ನೆತ್ತರು; ಕಾರು: ಹರಿ; ಕಾಳಿಜ: ಪಿತ್ತಾಶಯ; ಖಂಡ: ತುಂಡು; ನೆಣ: ಕೊಬ್ಬು, ಮೇದಸ್ಸು; ಜಿಗಿ: ಹಾರು; ತೋರು: ಕಾಣಿಸು; ಬೆಳು: ಬಿಳುಪು; ನೊರೆ: ಬುರುಗು, ಫೇನ; ಮಸಗು: ಹರಡು; ನಸು: ಕೊಂಚ; ಬಿಸಿ: ಕಾವು; ಹೊನಲು: ಕಾಂತಿ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಕಡಿ: ಸೀಳು; ಮೊಗ: ಮುಖ; ತೋರು: ಗೋಚರ; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ತಾರು: ಸೊರಗು, ಬಡಕಲಾಗು; ಥಟ್ಟು: ಪಕ್ಕ, ಕಡೆ, ಗುಂಪು; ಹೆಣ: ಜೀವವಿಲ್ಲದ ಶರೀರ; ರಂಜಿಸು: ಹೊಳೆ, ಪ್ರಕಾಶಿಸು; ಎಲು: ಮೂಳೆ;

ಪದವಿಂಗಡಣೆ:
ಏರುಗಳು +ಬುದುಬುದಿಸಿ +ರಕುತವ
ಕಾರಿ +ಕಾಳಿಜ +ಖಂಡ +ನೆಣ +ಜಿಗಿ
ದೋರಿ +ಬೆಳುನೊರೆ +ಮಸಗಿ +ನಸು+ಬಿಸಿ+ರಕುತ +ಹೊನಲಿಡಲು
ಕೌರಿಡಲು +ಕಡಿದುಡಿದವ್+ಎಲು +ಮೊಗ
ದೋರುಗಳ+ ಪೂರಾಯ +ಘಾಯದ
ತಾರುಥಟ್ಟಿನ +ಹೆಣನ +ಮೆದೆ +ಹೇರಾಲ +ರಂಜಿಸಿತು

ಅಚ್ಚರಿ:
(೧) ರಣಭೂಮಿಯಲ್ಲು ರಂಜನೆಯ ಕಲ್ಪನೆಯನ್ನು ತೋರುವ ಕವಿ – ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಲ ರಂಜಿಸಿತು

ಪದ್ಯ ೫: ಸರ್ಪಾಸ್ತ್ರವು ಯಾವ ಶಬ್ದಮಾಡುತ್ತಾ ಹೊರಹೊಮ್ಮಿತು?

ಬೆರಳಲಂಬನು ತೂಗಲುರಿ ಫೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ (ಕರ್ಣ ಪರ್ವ, ೨೫ ಸಂಧಿ, ೫ ಪದ್ಯ)

ತಾತ್ಪರ್ಯ:
ಕರ್ಣನ ಬೆರಳಿನಲ್ಲಿ ಸರ್ಪಾಸ್ತ್ರವನ್ನು ಹಿಡಿದು ತೂಗಲು ಸರ್ಪವು ಫೂತ್ಕರಿಸಿತು. ಅದರ ಉಸಿರಿನಿಂದ ಬಿಳಿಯ ನೊರೆಯ ವಿಷದ ದ್ರವವು ಸುತ್ತುತ್ತಾ ಎಲ್ಲೆಡೆ ಹಬ್ಬಿತು. ವಿಷರಸದ ಹನಿಗಳು ಸುತ್ತಲೂ ವ್ಯಾಪಿಸಿತು. ಕಿಡಿಗಳ ತಂಡವು ಛಟಛಟವೆಂದು ಸದ್ದು ಮಾಡುತ್ತಿತ್ತು.

ಅರ್ಥ:
ಬೆರಳು: ಅಂಗುಲಿ; ಅಂಬು: ಬಾಣ; ತೂಗು: ಅಲ್ಲಾಡು; ಉರಿ: ಬೆಂಕಿಯ ಕಿಡಿ; ಫೂತ್ಕರಣೆ: ಹೊರಹಾಕು; ಪಂಠಿಸು: ಸುತ್ತುವರಿ; ಸುಯ್ಲು: ನಿಟ್ಟುಸಿರು; ಧರಧುರ: ಆರ್ಭಟ, ಕೋಲಾ ಹಲ; ಬೆಳು: ಬಿಳಿಯ; ನೊರೆ: ಬುರುಗು, ಫೇನ; ಲಹರಿ: ರಭಸ, ಆವೇಗ; ವಿಷ: ನಂಜು, ಗರಳ; ಲೋಳೆ:ಅ೦ಟುಅ೦ಟಾಗಿರುವ ದ್ರವ್ಯ; ಉರವಣಿಸು: ಆತುರಿಸು; ಗರಳ: ವಿಷ; ರಸ: ಸಾರ, ದ್ರವ; ಅಬ್ಬರ:ಆರ್ಭಟ; ಬೊಬ್ಬುಳಿಕೆ: ಗುಳ್ಳೆ, ಬುದ್ಬುದ; ಮುಸುಕು: ಹೊದಿಕೆ; ಹೊರಳು: ಚಲಿಸು; ಕಿಡಿ: ಬೆಂಕಿ; ಛಟ: ಬೆಂಕಿಯ ಕಿಡಿಗಳ ಶಬ್ದ; ಮಸಗು: ಹರಡು; ಅಡಿಗಡಿ: ಹೆಜ್ಜೆ ಹೆಜ್ಜೆ;

ಪದವಿಂಗಡಣೆ:
ಬೆರಳಲ್+ಅಂಬನು +ತೂಗಲ್+ಉರಿ +ಫೂ
ತ್ಕರಣೆಯಲಿ +ಪಂಠಿಸಿತು+ ಸುಯ್ಲಿನ
ಧರಧುರದ+ ಬೆಳುನೊರೆಯ +ಲಹರಿಯ +ವಿಷದ +ಲೋಳೆಗಳ
ಉರವಣಿಸಿದವು+ ಗರಳ+ ರಸದ್
ಅಬ್ಬರದ +ಬೊಬ್ಬುಳಿಕೆಗಳು +ಮುಸುಕಿತು
ಹೊರಳಿ+ಕಿಡಿಗಳ +ಛಟಛಟಧ್ವನಿ+ ಮಸಗಿತ್+ಅಡಿಗಡಿಗೆ

ಅಚ್ಚರಿ:
(೧) ಧರಧುರ, ಛಟಛಟ – ಪದಬಳಕೆ
(೨) ವಿಷವು ಹೊರಹೊಮ್ಮುವ ಪರಿ – ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
(೩) ಸಮನಾರ್ಥಕ ಪದಗಳು – ವಿಷ, ಗರಳ; ಉರಿ, ಕಿಡಿ –