ಪದ್ಯ ೪೧: ಊರ್ವಶಿಯ ಎತ್ತಿದ ಕೈ ಹೇಗೆ ಹೊಳೆಯುತ್ತಿತ್ತು?

ತುಳುಕಿತದ್ಭುತ ರೋಷ ಸುಯ್ಲಿನ
ಝಳಹೊಡೆದು ಮೂಗುತಿಯ ಮುತ್ತಿನ
ಬೆಳಕು ಕಂದಿತು ಕುಂದಿತಮಲಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರೊಳ ಮಯೂಖದ ಮಣಿಯ ಮುದ್ರಿಕೆ
ದಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಊರ್ವಶಿಗೆ ಬಹಳ ಕೋಪವು ಆವರಿಸಿತು, ಉಕ್ಕಿದ ಕೋಪಕ್ಕೆ ಆಕೆಯು ನಿಟ್ಟುಸಿರು ಬಿಟ್ಟಳು, ಆ ಕೋಪದ ಉಸಿರಿನ ಶಾಖಕ್ಕೆ ಮೂಗಿತಿಯ ಮುತ್ತಿನ ಬೆಳಕು ಕಂದಿತು, ಮುಖ ಕಮಲದ ಕಾಮ್ತಿಯು ಕುಂದಿತು, ಊರ್ವಹ್ಸಿಯು ಕೈಯೆತ್ತಲು, ಅವಳ ಹಸ್ತದ ಕೆಂಪು, ಬೆರಳುಗಳ ಉಗುರುಗಳ ಬೆಡಗು ಮಣಿ ಮುದ್ರಿಕೆಯ ಕಿರಣಗಳಿಂದ ಅವಳ ಹಸ್ತವು ಶೋಭಿಸಿತು.

ಅರ್ಥ:
ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ಅದ್ಭುತ: ಅತ್ಯಾಶ್ಚರ್ಯಕರವಾದ, ವಿಸ್ಮಯ; ರೋಷ: ಕೋಪ; ಸುಯ್ಲು: ನಿಟ್ಟುಸಿರು; ಝಳ: ಕಾಂತಿ, ಶಾಖ; ಹೊಡೆ: ತಾಗು; ಮೂಗುತಿ: ಮೂಗಿನ ಆಭರಣ; ಮುಖ: ಆನನ; ಅಂಬುಜ: ಕಮಲ; ಮುತ್ತು: ಬೆಲೆಬಾಳುವ ರತ್ನ; ಬೆಳಕು: ಕಾಂತಿ; ಕಂದು: ಕಡಿಮೆಯಾಗು, ಮಾಸು; ಕುಂದು: ಕೊರತೆ; ಅಮಲ: ನಿರ್ಮಲ; ಚ್ಛವಿ: ಕಾಂತಿ; ಹೊಳೆ: ಪ್ರಕಾಶಿಸು; ಕೆಂದಳದ: ಕೆಂಪಾದ; ಸೆಳ್ಳು: ಚೂಪಾದ; ಉಗುರು: ನಖ; ಮಯೂಖ: ಕಿರಣ, ರಶ್ಮಿ; ಮುದ್ರಿಕೆ: ಮುದ್ರೆಯುಳ್ಳ ಉಂಗುರ; ದಳ: ಗುಂಪು, ಸಾಲು; ಮರೀಚಿ: ಕಿರಣ, ರಶ್ಮಿ, ಕಾಂತಿ; ಹಸ್ತ: ಕೈ;

ಪದವಿಂಗಡಣೆ:
ತುಳುಕಿತ್+ಅದ್ಭುತ +ರೋಷ +ಸುಯ್ಲಿನ
ಝಳ+ಹೊಡೆದು +ಮೂಗುತಿಯ +ಮುತ್ತಿನ
ಬೆಳಕು +ಕಂದಿತು +ಕುಂದಿತ್+ಅಮಲ+ಚ್ಛವಿ +ಮುಖಾಂಬುಜದ
ಹೊಳೆ +ಹೊಳೆವ +ಕೆಂದಳದ +ಸೆಳ್ಳ್+ಉಗು
ರೊಳ+ ಮಯೂಖದ+ ಮಣಿಯ+ ಮುದ್ರಿಕೆ
ದಳ +ಮರೀಚಿಯಲ್+ಎಸೆದುದ್+ಎತ್ತಿದ +ಹಸ್ತ+ಊರ್ವಶಿಯ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮಯೂಖದ ಮಣಿಯ ಮುದ್ರಿಕೆದಳ ಮರೀಚಿಯಲೆಸೆದುದೆತ್ತಿದ
(೨) ಬೆಳಕು, ಹೊಳೆ, ಮರೀಚಿ, ಝಳ, ಚ್ಛವಿ, ಮಯೂಖ – ಸಮನಾರ್ಥಕ ಪದಗಳು

ಪದ್ಯ ೨೬: ಪಾಂಡವರು ಕಾಡಿನಲ್ಲಿ ಹೇಗೆ ನಡೆಯುತ್ತಿದ್ದರು?

ಮುಂದೆ ಪಾರ್ಥನ ಬೀಸುಗೊಳ್ಳಿಗ
ಳಿಂದ ತಮದಾವಳಿ ಮುರಿಯೆ ಬಳಿ
ಸಂದು ಕುಂತೀದೇವಿ ಧರ್ಮಜ ನಕುಲ ಸಹದೇವ
ಹಿಂದೆ ಭೀಮನ ಕೈಯ ಕೊಳ್ಳಿಯ
ಬಿಂದು ಬೆಳಗಿನಲನಿಬರಟವೀ
ವೃಂದದಲಿ ಬರುತಿರ್ದರಿರುಳವನೀಶ ಕೇಳೆಂದ (ಆದಿ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಪಾರ್ಥನು ತನ್ನ ಕೈಯಲ್ಲಿದ್ದ ಕೊಳ್ಳಿ (ಪಂಜು)ಯಿಂದ ಮುನ್ನಡೆದ ಬೆಳಕಿನಿಂದ ಕತ್ತಲಿನ ಆವಳಿ ದೂರ ಸರಿದು ಆ ಬೆಳಕಿನ ಕಣಿವೆಯ ದಾರಿಯಲ್ಲಿ ಪಾರ್ಥನ ಹಿಂದೆ ಕುಂತಿ, ಧರ್ಮಜ, ನಕುಲ, ಸಹದೇವ ನಡೆದರೆ, ಅವರ ಹಿಂದೆ ಭೀಮನು ಸಹ ಇನ್ನೊಂದು ಪಂಜನ್ನು ಹಿಡಿದು ಬರಲು, ಆ ಬೆಳಕಿನ ದಾರಿಯಲ್ಲಿ ಇವರು ಕಾಡಿನಲ್ಲಿ ನಡೆಯುತ್ತಿದ್ದರು.

ಅರ್ಥ:
ಮುಂದೆ:ಮೊದಲು; ಬೀಸು: ಅಲುಗಾಡು, ಹಾರಾಡಿಸು; ತಮ: ಅಂಧಕಾರ; ಆವಳಿ: ಸಾಲು; ಮುರಿ: ಡೊಂಕಾಗು, ಬಾಗಿಸು; ಬಳಿ: ನಂತರ; ಸಂದು: ಕೋನೆ, ಗಲ್ಲಿ, ಕಿರಿದಾದ ಓಣೆ; ಹಿಂದೆ: ಹಿಂಬದಿ; ಕೊಳ್ಳಿ: ಉರಿಯುವ ಕಟ್ಟಿಗೆ; ಬಿಂದು: ಚುಕ್ಕೆ; ಬೆಳಕು: ದೀಪ, ಪ್ರಕಾಶ; ಅನಿಬರು: ಅಷ್ಟುಜನರು; ಅಟವಿ: ಕಾಡು; ವೃಂದ: ಗುಂಪು; ಬರು: ಆಗಮಿಸು; ಅವನೀಶ: ರಾಜ;

ಪದವಿಂಗಡನೆ:
ಮುಂದೆ+ ಪಾರ್ಥನ +ಬೀಸು+ಕೊಳ್ಳಿಗ
ಳಿಂದ +ತಮದ್+ಆವಳಿ +ಮುರಿಯೆ +ಬಳಿ
ಸಂದು +ಕುಂತೀದೇವಿ+ ಧರ್ಮಜ+ ನಕುಲ+ ಸಹದೇವ
ಹಿಂದೆ +ಭೀಮನ +ಕೈಯ +ಕೊಳ್ಳಿಯ
ಬಿಂದು +ಬೆಳಗಿನಲ್+ಅನಿಬರ್+ಅಟವೀ
ವೃಂದದಲಿ+ ಬರುತಿರ್ದರ್+ಇರುಳ್+ಅವನೀಶ +ಕೇಳೆಂದ

ಅಚ್ಚರಿ:
(೧) ಪಂಜಿನ ಬೆಳಕು ಕತ್ತಲಲ್ಲಿ ಮಾಡಿದ ದಾರಿಯ ವರ್ಣನೆ
(೨) ತಮ, ಬೆಳಕು; ಮುಂದೆ, ಹಿಂದೆ – ವಿರುದ್ಧ ಪದ
(೩) ೨ ಸಾಲಿನಲ್ಲಿ ಕತ್ತಲನ್ನು ಮುರಿಯೆ, ೫ ಸಾಲಿನಲ್ಲಿ ಕೊಳ್ಳಿಯ ಬಿಂದು ಬೆಳಗಿನಲಿ, ಒಮ್ಮೆ ಕತ್ತಲು ಮತ್ತೊಮ್ಮೆ ಬೆಳಕು ಎಂದು ವರ್ಣಿಸಿರುವ ಬಗೆ