ಪದ್ಯ ೨೦: ಊರ್ವಶಿಯು ಯಾವ ಭಾವಗಳಿಗೆ ಒಳಪಟ್ಟಳು?

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತಗ್ಗಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ (ಅರಣ್ಯ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು ಬೆರಗಾದಳು, ಮನ್ಮಥನ ತಾಪದಿಂದ ತಗ್ಗಿದಳು, ಅರ್ಜುನನ ನಡವಳಿಕೆಗೆ ಮೆಚ್ಚಿದಳು, ಆದರೆ ಕಾಮಶರದ ಕಾಟಕ್ಕೆ ಬೆಚ್ಚಿದಳು, ಸಿಟ್ಟಿನಿಂದ ಸಿಡಿಮಿಡಿಗೊಂಡು ಕೆರಳಿದಳು, ಲಜ್ಜೆ ದಾಕ್ಷಿಣ್ಯದಿಂದ ಭಯಪಟ್ಟಳು, ಹೀಗೆ ಹಲವು ಭಾವಗಳ ತಾಕಲಾಟಕ್ಕೆ ಊರ್ವಶಿಯು ಒಳಗಾದಳು.

ಅರ್ಥ:
ನುಡಿ: ಮಾತು; ಬೆರಗು: ಆಶ್ಚರ್ಯ; ಮನೋಜ: ಕಾಮ, ಮನ್ಮಥ; ಸಡಗರ: ಉತ್ಸಾಹ, ಸಂಭ್ರಮ; ತಗ್ಗು: ಕುಗ್ಗು, ಕುಸಿ; ನಡವಳಿಗೆ: ನಡತೆ, ವರ್ತನೆ; ಮೆಚ್ಚು: ಒಲುಮೆ, ಪ್ರೀತಿ; ಬೆಚ್ಚು: ಭಯ, ಹೆದರಿಕೆ; ಅಂಗಜ: ಮನ್ಮಥ, ಕಾಮ; ಅಸ್ತ್ರ: ಆಯುಧ; ಕಡುಗು: ಶಕ್ತಿಗುಂದು; ಖಾತಿ: ಕೋಪ, ಕ್ರೋಧ; ಲಜ್ಜೆ: ನಾಚಿಕೆ; ಬಿಡೆಯ: ದಾಕ್ಷಿಣ್ಯ; ಭಯ: ಹೆದರಿಕೆ; ಅಂಗನೆ: ಹೆಂಗಸು; ಮಿಡುಕು: ಅಲುಗಾಟ, ಚಲನೆ; ವಿವಿಧ: ಹಲವಾರು; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬೆಡಗು, ಒಯ್ಯಾರ;

ಪದವಿಂಗಡಣೆ:
ನುಡಿಗೆ +ಬೆರಗಾದಳು +ಮನೋಜನ
ಸಡಗರಕೆ +ತಗ್ಗಿದಳು +ಪಾರ್ಥನ
ನಡವಳಿಗೆ +ಮೆಚ್ಚಿದಳು +ಬೆಚ್ಚಿದಳ್+ಅಂಗಜ+ಅಸ್ತ್ರದಲಿ
ಕಡುಗಿದಳು+ ಖಾತಿಯಲಿ +ಲಜ್ಜೆಯ
ಬಿಡೆಯದಲಿ +ಭಯಗೊಂಡಳ್+ಅಂಗನೆ
ಮಿಡುಕಿದಳು +ವಿವಿಧ+ಅನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಬೆರಗು, ಮೆಚ್ಚು, ಬೆಚ್ಚು, ಭಯ, ಮಿಡುಕು, ತಗ್ಗು – ಭಾವಗಳನ್ನು ವಿವರಿಸುವ ಪದ

ಪದ್ಯ ೩: ಕೃಷ್ಣ ನಾಮದ ಮಹಿಮೆ ಎಂತಹುದು?

ಆ ಮಹಾಸತಿ ಶಿವ ಶಿವಾ ಲ
ಜ್ಜಾಮಹೋದಧಿ ಬತ್ತುವುದೆ ನಿ
ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ
ಆ ಮುಕುಂದನ ದಿವ್ಯ ನಾಮ
ಪ್ರೇಮ ರಸಕಿದು ಸಿದ್ಧಿಯೆಂದೆನ
ಲಾಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ (ಸಭಾ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಶಿವ ಶಿವಾ ಮಹಾದೇವ, ಆ ಮಹಾ ಪತಿವ್ರತೆಯಾದ ದ್ರೌಪದಿಯ ಮಾನವು ಬತ್ತಿಹೋದೀತೆ? ಪಾಂಡವರು ಸೋಲನ್ನೊಪ್ಪಿ ನಿರ್ನಾಮರಾದರೇ? ಆ ಕೃಷ್ಣನ ದಿವ್ಯನಾಮದ ಮೇಲಿರುವ ಭಕ್ತಿಗೆ ಇದು ಸಿದ್ಧಿಯೆಂದುಕೊಂಡು ಆಸ್ಥಾನದಲ್ಲಿದ್ದವರ ಆಶ್ಚರ್ಯವು ಹೆಚ್ಚಿತು.

ಅರ್ಥ:
ಸತಿ: ಹೆಂಡತಿ; ಮಹಾಸತಿ: ಪತಿವ್ರತೆ; ಲಜ್ವ: ಮಾನ; ಮಹೋದಧಿ: ಮಹಾಸಾಗರ; ಬತ್ತು: ಬರಡಾಗು; ನಿರ್ನಾಮ: ನಾಶ, ಅಳಿವು; ಸುತ: ಮಗ; ಪಥ್ಯ: ಯೋಗ್ಯ, ಹಿತ; ಪರಾಭವ: ಸೋಲು; ದಿವ್ಯ: ಶ್ರೇಷ್ಠ; ನಾಮ: ಹೆಸರು; ಪ್ರೇಮ: ಒಲವು; ರಸ: ಸಾರ; ಸಿದ್ಧಿ: ಮೋಕ್ಷ, ಮುಕ್ತಿ; ಆಸ್ಥಾನ; ಓಲಗ; ಬೆಳೆ: ಅಭಿವೃದ್ಧಿ, ಜರಗು; ಬೆರಗು: ಆಶ್ಚರ್ಯ; ಬಿಂಕ: ಗರ್ವ, ಜಂಬ;

ಪದವಿಂಗಡಣೆ:
ಆ+ ಮಹಾಸತಿ +ಶಿವ+ ಶಿವಾ +ಲ
ಜ್ಜಾ+ಮಹ+ಉದಧಿ+ ಬತ್ತುವುದೆ +ನಿ
ರ್ನಾಮರೇ +ಕುಂತೀಸುತರು+ ಪಥ್ಯರೆ +ಪರಾಭವಕೆ
ಆ +ಮುಕುಂದನ +ದಿವ್ಯ +ನಾಮ
ಪ್ರೇಮ +ರಸಕಿದು +ಸಿದ್ಧಿಯೆಂದೆನಲ್
ಆ+ಮಹ+ಆಸ್ಥಾನದಲಿ +ಬೆಳೆದುದು +ಬೆರಗು +ಬಿಂಕದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೆಳೆದುದು ಬೆರಗು ಬಿಂಕದಲಿ
(೨) ಆ – ಮಹಾಸತಿ, ಮುಕುಂದ, ಮಹಾಸ್ಥಾನ – ಪದಗಳ ಮುಂದೆ ಬಳಸಿದ ಸ್ವರಾಕ್ಷರ

ಪದ್ಯ ೭೧: ಇತ್ತ ಧೃತರಾಷ್ಟ್ರನು ಪಾಂಡವರಿಗೆ ಏನು ಮಾಡಿದನು?

ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿಮನೆಯ ಬಿಡಾರದಲಿ ಬಿಡಿಸಲ್ಕೆಮನದಂದ (ಆದಿ ಪರ್ವ, ೮ ಸಂಧಿ, ೭೧ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಪುರೋಚನನು ಅರಗಿನ ಮನೆ ನಿರ್ಮಿಸಲು, ಇತ್ತ ಧೃತರಾಷ್ಟ್ರನು ಈ ದುಷ್ಕಾರ್ಯಕ್ಕೆ ಸಹಾಯ ಮಾಡುಲು, ಪಾಂಡವರನ್ನು ಹಸ್ತಿನಾಪುರಕ್ಕೆ ಆಹ್ವಾನಿಸಿ, ಏಕಾಂತದಲಿ ಅವರೊಂದಿಗೆ ಅತೀವೆ ಪ್ರೀತಿ, ಮಮತೆ ಯಿಂದ ಕೂಡಿದ ಆಶ್ಚರ್ಯಕರವಾದ ಮಾತುಗಳನ್ನಾಡುತ್ತಾ ಅರಗಿನ ಮನೆಯಲ್ಲಿ ನೆಲೆಗೊಳಿಸಲು ನಿರ್ಧರಿಸಿದನು.

ಅರ್ಥ:
ಧರಣಿ:ಭೂಮಿ; ಧರಣಿಪತಿ: ರಾಜ; ಕೇಳು: ಆಲಿಸು; ಕುಮಾರ: ಮಗ; ಏಕಾಂತ: ಮಂತ್ರಾಲೋಚನೆ;ಭೂಪಾಲ: ರಾಜ; ಬೆರಗು: ಆಶ್ಚರ್ಯ; ಬಿನ್ನಾಣ: ಅಂದ; ಮಕ್ಕಳು: ಕುಮಾರರು; ಮರುಳು: ಭ್ರಮೆ; ಹೇಳು: ವಿವರಿಸು; ಉರಿ:ಸುಡು; ಉರಿಮನೆ: ಅರಗಿನ ಮನೆ; ಬಿಡಾರ: ವಾಸಸ್ಥಳ;

ಪದವಿಂಗಡನೆ:
ಧರಣಿಪತಿ+ ಕೇಳಿತ್ತ +ಹಸ್ತಿನ
ಪುರ+ದೊಳಗೆ+ ಕುಂತೀ+ಕುಮಾರರ
ಕರೆಸಿ+ ಕಟ್ಟ್+ಏಕಾಂತದಲಿ+ ಧೃತರಾಷ್ಟ್ರ +ಭೂಪಾಲ
ಬೆರಗು+ ಬಿನ್ನಾಣದಲಿ+ ಮಕ್ಕಳ
ಮರುಳು +ಮಾಡಿದನ್+ಏನ+ ಹೇಳುವೆನ್
ಉರಿಮನೆಯ+ ಬಿಡಾರದಲಿ+ ಬಿಡಿಸಲ್ಕೆ+ಮನದ್+ಅಂದ

ಅಚ್ಚರಿ:
(೧) ಧರಣಿಪತಿ, ಭೂಪಾಲ ; ಕುಮಾರ, ಮಕ್ಕಳ;- ಸಮಾನಾರ್ಥಕ ಪದ
(೨) “ಕ” ಕಾರದ ತ್ರಿವಳಿ ಪದಗಳು: ಕುಂತೀಕುಮಾರರ ಕರೆಸಿ ಕಟ್ಟೇಕಾಂತದಲಿ
(೩) ಕೇಳು, ಹೇಳು – ವಿರುದ್ಧ ಪದ (೧, ೫ ಸಾಲು)
(೪) “ಬ” ಕಾರದ ತ್ರಿವಳಿ ಪದಗಳು: ಭೂಪಾಲ ಬೆರಗು ಬಿನ್ನಾಣದಲಿ
(೫) “ಮ” ಕಾರದ ತ್ರಿವಳಿ ಪದಗಳು: ಮಕ್ಕಳ ಮರುಳು ಮಾಡಿದನೇನ