ಪದ್ಯ ೧೫: ಸಂಜಯನು ಯಾರ ನಡಿಗೆಯನ್ನು ನೋಡಿದನು – ೮?

ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ (ಗದಾ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂತಗಳ ಕೂಗು, ಬೇತಾಳಗಳ ಜಗಳ, ನರಿ ಗೂಬೆ ಕಾಗೆಗಳ ರಭಸಕ್ಕೆ ಪಾಂಡವರ ಸೇನೆ ಎಲ್ಲಿ ಬಂದಿತೋ ಎಂದು ಬೆಚ್ಚುತಿದ್ದನು. ಆಗಾಗ ಏನನ್ನಾದರೂ ಹಿಡಿದು ಹಿಂದಕ್ಕೆ ನೋಡುತ್ತಾ ವೈಭವವು ನಾಶವಾಯಿತಲ್ಲಾ ಎಂದು ಛಲದಿಂದ ಉಗ್ರ ಭಾವವನ್ನು ತಾಳುತ್ತಿದ್ದನು.

ಅರ್ಥ:
ಭೂತ: ದೆವ್ವ, ಪಿಶಾಚಿ; ರವ: ಶಬ್ದ; ಭೇತಾಳ: ದೆವ್ವ; ಕಲಹ: ಜಗಳ; ವಿಧೂತ: ಅಲುಗಾಡುವ; ಜಂಬುಕ: ನರಿ; ಘೂಕ: ಗೂಬೆ; ಕಾಕ: ಕಾಗೆ; ವ್ರಾತ: ಗುಂಪು; ರಭಸ: ವೇಗ; ಬೆಚ್ಚು: ಭಯ, ಹೆದರಿಕೆ; ಬಲ: ಶಕ್ತಿ, ಸೈನ್ಯ; ಆತು: ಮುಗಿದ; ಮರಳು: ಹಿಂದಿರುಗು; ಹಿಂದ: ಭೂತ, ನಡೆದ; ನೋಡು: ವೀಕ್ಷಿಸು; ಪರೇತ: ಹೆಣ, ಶವ; ವಿಭವ: ಸಿರಿ, ಸಂಪತ್ತು; ಛಲ: ದೃಢ ನಿಶ್ಚಯ; ಚೇತನ: ಮನಸ್ಸು, ಬುದ್ಧಿ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಚಂಡಿ: ಹಟಮಾರಿತನ, ಛಲ; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಭೂತ+ರವ +ಭೇತಾಳ +ಕಲಹ +ವಿ
ಧೂತ +ಜಂಬುಕ +ಘೂಕ +ಕಾಕ
ವ್ರಾತ +ರಭಸಕೆ +ಬೆಚ್ಚುವನು +ಪಾಂಡವರ +ಬಲವೆಂದು
ಆತು +ಮರಳಿದು+ ಹಿಂದ + ನೋಡಿ+ ಪ
ರೇತ +ವಿಭವವಲಾ +ಎನುತ +ಛಲ
ಚೇತನನು +ಸಲೆ +ಚಂಡಿಯಾದನು +ಕಳನ +ಚೌಕದಲಿ

ಅಚ್ಚರಿ:
(೧) ದುರ್ಯೋಧನನು ಹೆದರುವ ಪರಿ – ಭೂತರವ ಭೇತಾಳ ಕಲಹ ವಿಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು
(೨) ದುರ್ಯೋಧನನನ್ನು ಕರೆದ ಪರಿ – ಛಲಚೇತನನು ಸಲೆ ಚಂಡಿಯಾದನು

ಪದ್ಯ ೨೦: ಊರ್ವಶಿಯು ಯಾವ ಭಾವಗಳಿಗೆ ಒಳಪಟ್ಟಳು?

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತಗ್ಗಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ (ಅರಣ್ಯ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು ಬೆರಗಾದಳು, ಮನ್ಮಥನ ತಾಪದಿಂದ ತಗ್ಗಿದಳು, ಅರ್ಜುನನ ನಡವಳಿಕೆಗೆ ಮೆಚ್ಚಿದಳು, ಆದರೆ ಕಾಮಶರದ ಕಾಟಕ್ಕೆ ಬೆಚ್ಚಿದಳು, ಸಿಟ್ಟಿನಿಂದ ಸಿಡಿಮಿಡಿಗೊಂಡು ಕೆರಳಿದಳು, ಲಜ್ಜೆ ದಾಕ್ಷಿಣ್ಯದಿಂದ ಭಯಪಟ್ಟಳು, ಹೀಗೆ ಹಲವು ಭಾವಗಳ ತಾಕಲಾಟಕ್ಕೆ ಊರ್ವಶಿಯು ಒಳಗಾದಳು.

ಅರ್ಥ:
ನುಡಿ: ಮಾತು; ಬೆರಗು: ಆಶ್ಚರ್ಯ; ಮನೋಜ: ಕಾಮ, ಮನ್ಮಥ; ಸಡಗರ: ಉತ್ಸಾಹ, ಸಂಭ್ರಮ; ತಗ್ಗು: ಕುಗ್ಗು, ಕುಸಿ; ನಡವಳಿಗೆ: ನಡತೆ, ವರ್ತನೆ; ಮೆಚ್ಚು: ಒಲುಮೆ, ಪ್ರೀತಿ; ಬೆಚ್ಚು: ಭಯ, ಹೆದರಿಕೆ; ಅಂಗಜ: ಮನ್ಮಥ, ಕಾಮ; ಅಸ್ತ್ರ: ಆಯುಧ; ಕಡುಗು: ಶಕ್ತಿಗುಂದು; ಖಾತಿ: ಕೋಪ, ಕ್ರೋಧ; ಲಜ್ಜೆ: ನಾಚಿಕೆ; ಬಿಡೆಯ: ದಾಕ್ಷಿಣ್ಯ; ಭಯ: ಹೆದರಿಕೆ; ಅಂಗನೆ: ಹೆಂಗಸು; ಮಿಡುಕು: ಅಲುಗಾಟ, ಚಲನೆ; ವಿವಿಧ: ಹಲವಾರು; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬೆಡಗು, ಒಯ್ಯಾರ;

ಪದವಿಂಗಡಣೆ:
ನುಡಿಗೆ +ಬೆರಗಾದಳು +ಮನೋಜನ
ಸಡಗರಕೆ +ತಗ್ಗಿದಳು +ಪಾರ್ಥನ
ನಡವಳಿಗೆ +ಮೆಚ್ಚಿದಳು +ಬೆಚ್ಚಿದಳ್+ಅಂಗಜ+ಅಸ್ತ್ರದಲಿ
ಕಡುಗಿದಳು+ ಖಾತಿಯಲಿ +ಲಜ್ಜೆಯ
ಬಿಡೆಯದಲಿ +ಭಯಗೊಂಡಳ್+ಅಂಗನೆ
ಮಿಡುಕಿದಳು +ವಿವಿಧ+ಅನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಬೆರಗು, ಮೆಚ್ಚು, ಬೆಚ್ಚು, ಭಯ, ಮಿಡುಕು, ತಗ್ಗು – ಭಾವಗಳನ್ನು ವಿವರಿಸುವ ಪದ

ಪದ್ಯ ೫೫: ರಾಜನಾದವನು ಯಾವ ಗುಣಗಳನ್ನು ಬಿಡಬೇಕು?

ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆಡರಿನಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಜನಾದವನು ಐಶ್ವರ್ಯವನ್ನು ಬಹಳ ನಂಬಬಾರದು, ವ್ಯರ್ಥವಾಗಿ ಮದದ ಬೆಂಕಿಯ ಜ್ವಾಲೆಯಲ್ಲಿ ಬೇಯಬಾರದು,
ಮತ್ತು ಕಷ್ಟಗಳು ಅಡಚಣೆಗಳು ಬಂದಾಗ ಹೆದರಿ ಬೆಚ್ಚುಬೀಳಬಾರದು, ಸತ್ಯವನ್ನು ಬಿಟ್ಟು ಕದಲಬಾರದು, ಅಸತ್ಯವನ್ನು ಮೆಚ್ಚಬಾರದು, ಒಳ್ಳೆಯ ಗುಣವನ್ನು ಮುಚ್ಚಿಡಬಾರದು, ಅಪಕೀರ್ತಿಯ ಮಾಯೆಯನ್ನು ಮೆಚ್ಚಬಾರದು ಮತ್ತು ಈ ಅಪಕೀರ್ತಿಯಾ ಮಾಯೆಗೆ ಸಿಲುಕಿ ಹುಚ್ಚನಾಗಬಾರದು, ಎಂದು ರಾಜನಿಗಿರಬೇಕಾದ ಗುಣಗಳನ್ನು ನಾರದರು ಯುಧಿಷ್ಠಿರನಿಗೆ ವಿವರಿಸಿದರು.

ಅರ್ಥ:
ನೆಚ್ಚು: ನಂಬಿಕೆ, ವಿಶ್ವಾಸ; ಮೆಚ್ಚು: ಒಲುಮೆ, ಪ್ರೀತಿ; ಸಿರಿ: ಐಶ್ವರ್ಯ; ವೃಥಾ:ವ್ಯರ್ಥವಾಗಿ; ಮದ: ಅಹಂಕಾರ; ಕಿಚ್ಚು: ತಾಪ, ಅಗ್ನಿ; ಉರಿ: ಜ್ವಾಲೆ; ಬೇಯು:ದಹಿಸು; ಬೆಚ್ಚಿ: ಭಯ; ಬೆದರು: ಹೆದರು; ಸತ್ಯ ನಿಜ; ಚಲಿಸು: ನಡೆಸು; ಅಸತ್ಯ: ಸುಳ್ಳು; ಗುಣ: ನಡೆ, ಸ್ವಭಾವ; ಮುಚ್ಚು: ಮರೆಮಾಡು; ಕೀರ್ತಿ: ಖ್ಯಾತಿ, ಯಶಸ್ಸು; ಮರುಳು: ಹುಚ್ಚು; ಭೂಪಾಲ: ರಾಜ;
ಮಿಗೆ: ಮತ್ತು; ಎಡರು: ವಿಘ್ನ, ಅಡಚಣೆ;

ಪದವಿಂಗಡಣೆ:
ನೆಚ್ಚದಿರು +ಸಿರಿಯನು +ವೃಥಾ +ಮದ
ಕಿಚ್ಚಿನ್+ಉರಿಯಲಿ +ಬೇಯದಿರು +ಮಿಗೆ
ಬೆಚ್ಚಿ +ಬೆದರದಿರ್+ಎಡರಿನಲಿ+ ಸತ್ಯವನು +ಚಲಿಸದಿರು
ಮೆಚ್ಚದಿರ್+ಅಸತ್ಯವನು +ಗುಣವನು
ಮುಚ್ಚದಿರು +ಅಪಕೀರ್ತಿ+ನಾರಿಯ
ಮೆಚ್ಚದಿರು +ಮರುಳಾಗದಿರು+ ಭೂಪಾಲ +ಕೇಳೆಂದ

ಅಚ್ಚರಿ:
(೧) ನೆಚ್ಚು, ಮೆಚ್ಚು, ಬೆಚ್ಚು, ಕಿಚ್ಚು, ಮುಚ್ಚು – ಚ್ಚು ಕಾರದಿಂದ ಕೊನೆಗೊಳ್ಳುವ ಪದಗಳು
(೨) ಅಪಕೀರ್ತಿನಾರಿಯ – ಎಂಬ ಪದಪ್ರಯೋಗ, ಅಪಕೀರ್ತಿ ಯನ್ನು ನಾರಿಗೆ ಹೋಲಿಸಿರುವುದು (ವಿಜಯಲಕ್ಷ್ಮಿ – ವಿಜಯವನ್ನು ಲಕ್ಶ್ಮಿಜೊತೆ ಕೂಡಿಸುವಹಾಗೆ)