ಪದ್ಯ ೨: ದ್ರೋಣನ ಆಕ್ರಮಣ ಹೇಗಿತ್ತು?

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಜೀಯಾ ಏನು ಹೇಳಲಿ, ಕಾಳ್ಗಿಚ್ಚು ಅಡವಿಯಲ್ಲಿ ಹಬ್ಬಿದಂತೆ ದ್ರೋಣನು ಪ್ರಖ್ಯಾತರಾದ ಭಟರನ್ನು ಸಂಹರಿಸಿದನು. ಅವನು ಹೋದ ದಾರಿಯಲ್ಲಿ ಪಾಂಡವಸೇನೆ ಕಲುಕಿತು. ಕಡಲು ಬತ್ತಿದರೆ ಮೀನುಗಳು ಮರುಗುವಂತೆ ವೀರರು ಮರುಗಿದರು. ದ್ರೋಣನು ಧರ್ಮಪುತ್ರನ ಬೆನ್ನು ಹತ್ತಿ ಹೋದನು

ಅರ್ಥ:
ಹೇಳು: ತಿಳಿಸು; ಜೀಯ: ಒಡೆಯ; ಕೃಶಾನು: ಅಗ್ನಿ, ಬೆಂಕಿ; ಅಡವಿ: ಕಾದು; ನಿರೂಢಿ: ವಿಶೇಷ ರೂಢಿಯಾದ, ಸಾಮಾನ್ಯ; ಭಟ: ಸೈನಿಕ; ಮುರಿ: ಸೀಳು; ಮಾರ್ಗ: ದಾರಿ; ಸೇನೆ: ಸೈನ್ಯ; ಕಲಕು: ಅಲ್ಲಾಡಿಸು; ಬತ್ತು: ಒಣಗು, ಆರು; ಉದಧಿ: ಸಾಗರ; ಮೀನು: ಮತ್ಸ್ಯ; ಮರುಗು: ತಳಮಳ, ಸಂಕಟ; ಭಟರು: ಸೈನಿಕ; ನರೇಂದ್ರ: ರಾಜ; ಅಳವಿ: ಶಕ್ತಿ; ಬೆಂಬತ್ತು: ಹಿಂಬಾಲಿಸು;

ಪದವಿಂಗಡಣೆ:
ಏನ+ ಹೇಳಲುಬಹುದು +ಜೀಯ +ಕೃ
ಶಾನುವ್+ಅಡವಿಯಲಾಡಿದಂದದಿನ್
ಆ +ನಿರೂಢಿಯ+ ಭಟರ+ ಮುರಿದನು +ಮುರಿದ+ ಮಾರ್ಗದಲಿ
ಸೇನೆ +ಕಲಕಿತು +ಬತ್ತಿದ್+ಉದಧಿಯ
ಮೀನಿನಂತಿರೆ +ಮರುಗಿದರು +ಭಟರ್
ಆ+ ನರೇಂದ್ರನನ್+ಅಳವಿಯಲಿ +ಬೆಂಬತ್ತಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃಶಾನುವಡವಿಯಲಾಡಿದಂದದಿ; ಬತ್ತಿದುದಧಿಯ ಮೀನಿನಂತಿರೆ ಮರುಗಿದರು ಭಟರ್

ಪದ್ಯ ೭: ಪಾಂಡವರ ಸೈನ್ಯವನ್ನು ಯಾರು ಆಕ್ರಮಣ ಮಾಡಿದರು?

ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ (ಭೀಷ್ಮ ಪರ್ವ, ೯ ಸಂಧಿ, ೭ ಪದ್ಯ
)

ತಾತ್ಪರ್ಯ:
ಕೌರವ ವೀರರೆಲ್ಲರೂ ಅರ್ಜುನನತ್ತ ಹೋಗಿ ಅವನನ್ನು ಒಂದು ಕಡೆಗೆ ತೆಗೆದು ಯುದ್ಧವನ್ನಾರಂಭಿಸಿದರು. ಇತ್ತ ಭೀಷ್ಮನು ಬಾಣಗಳ ಹೊರೆಗಳ ಕಟ್ಟುಗಳನ್ನು ಕಿತ್ತು ಶತ್ರುಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಪಾಂಡವ ಸೈನ್ಯದ ಬೆನ್ನುಹತ್ತಿದನು.

ಅರ್ಥ:
ವಿಗಡ: ಶೌರ್ಯ, ಪರಾಕ್ರಮ; ಅನಿಬರು: ಅಷ್ಟುಜನ; ನೆರೆ: ಸೇರು, ಜೊತೆಗೂಡು; ತೆಗೆ: ಹೊರಹಾಕು; ಹೊಗೆ: ಧುಮುಗುಡು; ಅಂತ್ಯ: ಕೊನೆ; ರುದ್ರ: ಶಿವ, ಭಯಂಕರವಾದ; ಅಗ್ಗ: ಶ್ರೇಷ್ಠ; ಕಣ್ಣು: ನೇತ್ರ; ಶಿಖಿ: ಬೆಂಕಿ; ಬಿಗಿ: ಕಟ್ಟು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹರಿ: ಸೀಳು; ಬಿಲ್ಲು: ಚಾಪ; ಉಗುಳು: ಹೊರಹಾಕು; ಅಂಬು: ಬಾಣ; ಅಳವಿ: ಶಕ್ತಿ, ಯುದ್ಧ; ತೆಗೆ: ಹೊರತರು; ಬಲ: ಶಕ್ತಿ, ಸೈನ್ಯ; ಬೆಂಬತ್ತಿ: ಹಿಂಬಾಲಿಸು; ಖಾತಿ: ಕೋಪ;

ಪದವಿಂಗಡಣೆ:
ವಿಗಡರ್+ಅನಿಬರು +ನೆರೆದು +ಪಾರ್ಥನ
ತೆಗೆದರ್+ಅತ್ತಲು +ಭೀಷ್ಮನ್+ಇತ್ತಲು
ಹೊಗೆದನ್+ಅಂತ್ಯದ +ರುದ್ರನ್+ಅಗ್ಗದ +ಕಣ್ಣ +ಶಿಖಿಯಂತೆ
ಬಿಗಿದ +ಹೊದೆಗಳ +ಹರಿದು +ಬಿಲ್ಲಿಂದ್
ಉಗುಳಿಸಿದನ್+ಅಂಬುಗಳನ್+ಅಳವಿಗೆ
ತೆಗೆದು+ ಪಾಂಡವ +ಬಲವ +ಬೆಂಬತ್ತಿದನು +ಖಾತಿಯಲಿ

ಅಚ್ಚರಿ:
(೧) ಬಾಣ ಬಿಟ್ಟನು ಎಂದು ಹೇಳುವ ಪರಿ – ಬಿಲ್ಲಿಂದುಗುಳಿಸಿದನಂಬುಗಳನಳವಿಗೆ

ಪದ್ಯ ೩೦: ಉತ್ತರನು ಏನೆಂದು ಕೂಗಿದನು?

ಎನಲು ಚಪ್ಪರಿಸಿದನು ತೇಜಿಗ
ಳನಿಲ ಜವದಲಿ ನಿಗುರಿದವು ಮುಂ
ಮೊನೆಯವರ ಮನ್ನಿಸದೆ ಬೆಂಬತ್ತಿದನು ಕೌರವನ
ಜನಪ ಬಿಡು ಬಿಡು ತುರುಗಳು ಫಲು
ಗುಣ ಕಣಾ ಬಂದವನು ಕುರುಕುಲ
ವನದವಾನಳನರಿಯೆನುತ್ತುತ್ತರನು ಗರ್ಜಿಸಿದ (ವಿರಾಟ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಉತ್ತರ್ನು ಕುದುರೆಗಳನ್ನು ಚಪ್ಪರಿಸಲು ಅವಉ ವಾಯುವೇಗದಿಂದ ಮುನ್ನುಗ್ಗಿದವು. ಸೈನ್ಯದ ಮುಂಭಾಗದಲ್ಲಿದ್ದವರನ್ನು ಲೆಕ್ಕಿಸದೆ ಅರ್ಜುನನು ಕೌರವನನ್ನು ಬೆನ್ನು ಹತ್ತಿದನು. ಉತ್ತರನು ರಾಜಾ, ಗೋವುಗಳನ್ನು ಬಿಡು, ಕುರುಕುಲವೆಂಬ ಕಾಡಿಗೆ ಕಿಚ್ಚಿನಂತಿರುವ ಅರ್ಜುನ ಬಂದಿದ್ದಾನೆ, ತಿಳಿದುಕೋ ಎಂದು ಕೂಗಿದನು.

ಅರ್ಥ:
ಚಪ್ಪರಿಸು: ಆಸ್ಚಾದಿಸು; ತೇಜಿ: ಕುದುರೆ; ಜವ: ವೇಗ, ರಭಸ; ನಿಗುರು: ಹೆಚ್ಚಳ, ಆಧಿಕ್ಯ; ಮೊನೆ: ತುದಿ, ಕೊನೆ; ಮನ್ನಿಸು: ಗೌರವಿಸು; ಬೆಂಬತ್ತು: ಹಿಂಬಾಲಿಸು, ಬೆನ್ನುಹತ್ತು; ಜನಪ: ರಾಜ; ಬಿಡು: ತೊರೆ; ತುರು: ಹಸು; ಫಲುಗುಣ: ಅರ್ಜುನ; ವನ: ಕಾದು; ದವಾನಳ: ಬಡಬಾಗ್ನಿ; ಅರಿ: ತಿಳಿ; ಗರ್ಜಿಸು: ಕೂಗು;

ಪದವಿಂಗಡಣೆ:
ಎನಲು +ಚಪ್ಪರಿಸಿದನು +ತೇಜಿಗಳ್
ಅನಿಲ +ಜವದಲಿ +ನಿಗುರಿದವು +ಮುಂ
ಮೊನೆಯವರ+ ಮನ್ನಿಸದೆ +ಬೆಂಬತ್ತಿದನು +ಕೌರವನ
ಜನಪ+ ಬಿಡು +ಬಿಡು +ತುರುಗಳು+ ಫಲು
ಗುಣ +ಕಣಾ +ಬಂದವನು +ಕುರುಕುಲ
ವನ+ದವಾನಳನ್+ಅರಿ+ಎನುತ್ತ್+ಉತ್ತರನು+ ಗರ್ಜಿಸಿದ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಕುರುಕುಲವನದವಾನಳನರಿಯೆನುತ್ತುತ್ತರನು
(೨) ವೇಗವನ್ನು ಸೂಚಿಸುವ ಪರಿ – ಚಪ್ಪರಿಸಿದನು ತೇಜಿಗಳನಿಲ ಜವದಲಿ

ಪದ್ಯ ೨೫: ಯಾವ ಬಾಣವನ್ನು ಹಿಡಿದು ಭೀಮಾರ್ಜುನರು ಮುನ್ನಡೆದರು?

ಐದುವಡೆ ಮೆಣ್ಮಂತ್ರಸಿದ್ಧಿಯ
ಕೈದು ಮನೆಯಲಿ ಬೇಂಟೆಕಾರರ
ಕೈದು ಕೈಯಲಿ ಸಮಯವಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಶ್ಶಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ (ಅರಣ್ಯ ಪರ್ವ, ೨೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಯುದ್ಧ ಮಾಡಲು ಹೊರಟಿದ್ದೇವೆ, ಮಂತ್ರಾಸ್ತ್ರಗಳು ಮನೆಯಲ್ಲಿವೆ, ಬೇಟೆಯಾಡುವ ಬಾಣಗಳು ಕೈಯಲ್ಲಿವೆ, ಮಹಾಸ್ತ್ರ ಪ್ರಯೋಗಕ್ಕೆ ಇದು ಸಮಯವಲ್ಲ, ಮೈದುನನ ಮೈ ಮೇಲೆ ಸರಸದಿಂದ ಪ್ರಯೊಗ ಮಾಡಲು ಈ ಬೇಟೆಯಾಡುವ ಬಾಣಗಳು ಸಾಕಲ್ಲವೇ? ತಂಗಿ ದುಶ್ಶಳೆಯ ಮುತ್ತೈದೆತನವಿಲ್ಲದಂತಾಗುತ್ತದೆ ಎಂದುಕೊಂಡು ಭೀಮಾರ್ಜುನರು ಸೈಂಧವನನ್ನು ಬೆನ್ನುಹತ್ತಿದರು.

ಅರ್ಥ:
ಐದು: ಬಂದು ಸೇರು; ಮೇಣ್: ಮತ್ತು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕೈದು: ಆಯುಧ, ಶಸ್ತ್ರ; ಮನೆ: ಆಲಯ; ಬೇಂಟೆ: ಬೇಟೆ; ಕೈ: ಹಸ್ತ; ಸಮಯ: ಕಾಲ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಮೈದುನ: ತಂಗಿಯ ಗಂಡ; ಮೈ: ತನು; ಸರಸ: ಚೆಲ್ಲಾಟ; ಹುಲು: ಕ್ಷುಲ್ಲ; ಸಾಲದೆ: ಸಾಕಲ್ಲವೇ; ತಂಗಿ: ಸಹೋದರಿ; ಐದೆ: ಮುತ್ತೈದೆ; ಬಯಲು: ಬರಿದಾದ ಜಾಗ, ಶೂನ್ಯ; ಬೆಂಬತ್ತು: ಹಿಂಬಾಲಿಸು; ಖಳ: ದುಷ್ಟ;

ಪದವಿಂಗಡಣೆ:
ಐದುವಡೆ +ಮೆಣ್+ಮಂತ್ರ+ಸಿದ್ಧಿಯ
ಕೈದು+ ಮನೆಯಲಿ+ ಬೇಂಟೆಕಾರರ
ಕೈದು+ ಕೈಯಲಿ +ಸಮಯವಲ್ಲ+ ಮಹಾಸ್ತ್ರಕರ್ಷಣಕೆ
ಮೈದುನನ +ಮೈಸರಸಕ್+ಈ +ಹುಲು
ಕೈದು+ ಸಾಲದೆ+ ತಂಗಿ+ ದುಶ್ಶಳೆ
ಐದೆತನ+ ಬಯಲಾಯ್ತೆನುತ+ ಬೆಂಬತ್ತಿದರು +ಖಳನ

ಅಚ್ಚರಿ:
(೧) ಐದು, ಕೈದು, ಮೈದುನ, ಐದೆತನ – ಐ ಪದದ ಪ್ರಯೋಗ
(೨) ಬೇಟೆಯ ಬಾಣಗಳೇ ಸಾಕು ಎಂದು ಹೇಳುವ ಪರಿ – ಮೈದುನನ ಮೈಸರಸಕೀ ಹುಲು
ಗೈದು ಸಾಲದೆ

ಪದ್ಯ ೭: ಜಟಾಸುರನು ಯಾರನ್ನು ಬಂಧಿಸಿದನು?

ಖಳ ಜಟಾಸುರನೆಂಬನಾ ದ್ವಿಜ
ಕುಲವನಂಜಿಸಿ ಯಮಳರೊಡನಿ
ಟ್ಟಣಿಸಿಕಾದಿ ಕಠೋರದಲಿ ಪಿಡಿದನು ಮಹಾಸತಿಯ
ಬಲುಗಡಿಯನಿವನೊಡನೆ ಹೋರಿದು
ಬಳಲಿದರು ಬೆಂಬತ್ತಿದರು ಗಾ
ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ (ಅರಣ್ಯ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ದುಷ್ಟನಾದ ಜಟಾಸುರನೆಂಬ ರಾಕ್ಷಸನು ಬಾಹ್ಮಣರನ್ನು ಬೆದರಿಸಿ, ನಕುಲ ಸಹದೇವರನ್ನು ಕಾಳಗದಲ್ಲಿ ಸೋಲಿಸಿ, ದ್ರೌಪದಿಯನ್ನು ಸೆರೆಹಿಡಿದನು. ಬಲಶಾಲಿಯಾದ ಅವನೊಡನೆ ಹೋರಾಡಿ ಬಳಲಿ ಅವನ ಬೆನ್ನು ಹತ್ತಿದರು, ಅನೇಕರು ಅಳಲುತ್ತಾ ಭೀಮನ ರಕ್ಷಣೆಯನ್ನು ಪಡೆಯಲು ಬಂದರು.

ಅರ್ಥ:
ಖಳ: ದುಷ್ಟ; ದ್ವಿಜ: ಬ್ರಾಹ್ಮಣ; ಕುಲ: ವಂಶ; ಅಂಜಿಸು: ಹೆದರಿಸು; ಯಮಳ: ನಕುಲ ಸಹದೇವ; ಇಟ್ಟಣಿಸು: ದಟ್ಟವಾಗಿ; ಕಠೋರ: ಬಿರುಸು, ಉಗ್ರ; ಪಿಡಿ: ಹಿಡಿ; ಕಾದು: ಜಗಳ, ಯುದ್ಧ; ಮಹಾಸತಿ: ಶ್ರೇಷ್ಠವಾದ ಗರತಿ; ಬಲುಗಡಿ: ಮಹಾಪರಾಕ್ರಮ; ಹೋರು: ಜಗಳ, ಕಲಹ; ಬಳಲು: ಆಯಾಸಗೊಳ್ಳು; ಬೆಂಬತ್ತು: ಹಿಂಬಾಲಿಸು, ಬೆನ್ನುಹತ್ತು; ಗಾವಳಿ: ಗುಂಪು, ಸಮೂಹ; ಗಜಬಜ: ಗೊಂದಲ; ತಿರುಗು: ಸುತ್ತು; ಪವನಜ: ವಾಯುಪುತ್ರ (ಭೀಮ) ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಖಳ+ ಜಟಾಸುರನೆಂಬನ್+ಆ+ ದ್ವಿಜ
ಕುಲವನ್+ಅಂಜಿಸಿ+ ಯಮಳರೊಡನ್
ಇಟ್ಟಣಿಸಿ+ ಕಾದಿ+ ಕಠೋರದಲಿ+ ಪಿಡಿದನು+ ಮಹಾಸತಿಯ
ಬಲುಗಡಿಯನ್+ಇವನೊಡನೆ +ಹೋರಿದು
ಬಳಲಿದರು +ಬೆಂಬತ್ತಿದರು+ ಗಾ
ವಳಿಯ +ಗಜಬಜ+ ತಿರುಗಿತ್+ಇತ್ತಲು +ಪವನಜನ +ಹೊರೆಗೆ

ಅಚ್ಚರಿ:
(೧) ಜಟಾಸುರನ ಬಲವನ್ನು ವಿವರಿಸುವ ಪರಿ – ಜಟಾಸುರನೆಂಬನಾ ದ್ವಿಜಕುಲವನಂಜಿಸಿ ಯಮಳರೊಡನಿಟ್ಟಣಿಸಿಕಾದಿ ಕಠೋರದಲಿ ಪಿಡಿದನು ಮಹಾಸತಿಯ

ಪದ್ಯ ೪೪: ಧರ್ಮರಾಯನು ಶಿಶುಪಾಲನನ್ನು ಹೇಗೆ ತಡೆದನು?

ಶಿವಶಿವಾ ತಪ್ಪಾಯ್ತು ನಮ್ಮು
ತ್ಸವಕೆ ಬಂದವನಿಪನ ಗುಣ ದೋ
ಷವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ
ಅವನಿಪತಿ ಬೆಂಬತ್ತಿ ಗಮನಕೆ
ತವಕಿಸುವ ಶಿಶುಪಾಲಕನ ಹಿಡಿ
ದವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ (ಸಭಾ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಯ್ಯೋ ಭಗವಂತಾ, ನಮ್ಮ ಯಾಗಕ್ಕೆ ಬಂದ ರಾಜನ ಗುಣದೋಷಗಳನ್ನು ಎತ್ತಿ ಆಡುವುದು ಅನುಚಿತ, ತಪ್ಪಾಯಿತು, ಎಂದುಕೊಂಡು ಹೋಗಲು ಮುಂದಾಗಿದ್ದ ಶಿಶುಪಾಲನನ್ನು ತಡೆದು ಅಪ್ಪಿಕೊಂಡು ತಲೆಯನ್ನು ಸವರಿ ಮಧುರವಾಣಿಗಳಿಂದ ಮಾತಾಡಿಸಿದನು.

ಅರ್ಥ:
ತಪ್ಪು: ಸರಿಯಲ್ಲದ; ಉತ್ಸವ; ಸಮಾರಂಭ; ಬಂದ: ಆಗಮಿಸು; ಅವನಿಪ: ರಾಜ; ಗುಣ: ನಡತೆ, ಸ್ವಭಾವ; ದೋಷ: ಕುಂದು, ಕಳಂಕ; ಈಕ್ಷೀಸು: ನೋಡು; ಅನುಚಿತ: ಸರಿಯಲ್ಲದ; ವಿನಯ: ಒಳ್ಳೆಯತನ, ಸೌಜನ್ಯ; ಬೆಂಬತ್ತು: ಹಿಂಬಾಲಿಸು; ಗಮನ: ಹೋಗುವುದು; ತವಕ: ಆತುರ; ಹಿಡಿ: ಬಂಧಿಸು; ಅವುಚು: ಅಪ್ಪು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ನುಡಿಸು: ಮಾತಾಡಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು

ಪದವಿಂಗಡಣೆ:
ಶಿವಶಿವಾ +ತಪ್ಪಾಯ್ತು +ನಮ್ಮ
ಉತ್ಸವಕೆ +ಬಂದ್+ಅವನಿಪನ +ಗುಣ +ದೋ
ಷವನು +ನಾವ್+ಈಕ್ಷಿಸುವುದ್+ಅನುಚಿತವೆಂದು +ವಿನಯದಲಿ
ಅವನಿಪತಿ+ ಬೆಂಬತ್ತಿ+ ಗಮನಕೆ
ತವಕಿಸುವ+ ಶಿಶುಪಾಲಕನ +ಹಿಡಿದ್
ಅವುಚಿದನು +ಮಧುರ+ಉಕ್ತಿಯಲಿ +ನುಡಿಸಿದನು +ಬೋಳೈಸಿ

ಅಚ್ಚರಿ:
(೧) ಸರಿಯಲ್ಲದ ಕ್ರಮ – ಉತ್ಸವಕೆ ಬಂದವನಿಪನ ಗುಣ ದೋಷವನು ನಾವೀಕ್ಷಿಸುವುದನುಚಿತ
(೨) ಸಮಾಧಾನ ಪಡಿಸುವ ಬಗೆ – ಅವುಚಿದನು ಮಧುರೋಕ್ತಿಯಲಿ ನುಡಿಸಿದನು ಬೋಳೈಸಿ