ಪದ್ಯ ೧೩: ಸುಪ್ರತೀಕ ಗಜವು ಸೈನ್ಯದಲ್ಲಿ ಹೇಗೆ ಕೋಲಾಹಲ ಸೃಷ್ಟಿಸಿತು?

ಮೊಗದ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊದೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ (ದ್ರೋಣ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸುಪ್ರತೀಕದ ಮುಖದ ಪರದೆಯನ್ನು ತೆಗೆದು ಚೂಪಾದ ಅಂಕುಶದಿಂದ ನೆತ್ತಿಯನ್ನು ಚುಚ್ಚಿದೊಡನೆ, ಅದು ಮುಂದೆ ನುಗ್ಗಿತು. ಪಾಂಡವ ಸೈನ್ಯದಲ್ಲಿ ಹೆಜ್ಜೆಯಿಟ್ಟು ಸುಭಟರನ್ನು ತುಳಿದು ತಲೆಗಳನ್ನು ಕಿತ್ತು ಆಕಾಶದಲ್ಲಿ ಎಸೆಯಿತು.

ಅರ್ಥ:
ಮೊಗ: ಮುಖ; ಜವನಿಕೆ: ತೆರೆ, ಪರದೆ; ತೆಗೆ: ಈಚೆಗೆ ತರು, ಹೊರತರು; ನೆತ್ತಿ: ಶಿರ; ಬಗಿ: ಸೀಳುವಿಕೆ, ಕತ್ತರಿಸುವಿಕೆ; ಕೂರಂಕುಶ: ಹರಿತವಾದ ಅಂಕುಶ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಆನೆ: ಗಜ; ಬೆಗಡು: ಆಶ್ಚರ್ಯ, ಬೆರಗು; ಬೀದಿ: ರಸ್ತೆ; ಸುಭಟ: ಪರಾಕ್ರಮಿ; ಎದೆ: ವಕ್ಷಸ್ಥಳ; ಒದೆ: ತಳ್ಳು; ಹಗೆ: ವೈರಿ; ಬಲ: ಶಕ್ತಿ; ಹರಿ: ಕಡಿ, ಕತ್ತರಿಸು; ಚಿಗುಳಿದುಳಿ: ಜಿಗಿಜಿಗಿಯಾಗುವಂತೆ ತುಳಿ; ತಲೆ: ಶಿರ; ಮುಗಿಲು: ಆಗಸ; ಅಗಲ: ವಿಸ್ತಾರ; ಹರಹು: ವಿಸ್ತಾರ, ವೈಶಾಲ್ಯ; ದಿಕ್ಕರಿ: ದಿಗ್ಗಜ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಮೊಗದ +ಜವನಿಕೆ+ತೆಗೆದು +ನೆತ್ತಿಯ
ಬಗಿದು+ ಕೂರಂಕುಶದಲ್+ಆನೆಯ
ಬೆಗಡುಗೊಳಿಸಲು+ ಬೀದಿವರಿದುದು +ಸುಭಟರ್+ಎದೆ+ಒದೆಯೆ
ಹಗೆಯ +ಬಲದಲಿ +ಹರಿದು +ಸುಭಟರ
ಚಿಗುಳಿದುಳಿದುದು +ತಲೆಗಳನು +ಮುಗಿಲ್
ಅಗಲದಲಿ +ಹರಹಿದುದು +ದಿಕ್ಕರಿ+ ಹೊಕ್ಕು +ಮೋಹರವ

ಅಚ್ಚರಿ:
(೧) ಸುಪ್ರತೀಕದ ಬಲ – ಹಗೆಯ ಬಲದಲಿ ಹರಿದು ಸುಭಟರ ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು

ಪದ್ಯ ೪೪: ಮಾರುತನು ಯಾರನ್ನು ಆಲಂಗಿಸಿದನು?

ಒಗುಮಿಗೆಯ ಪರಿಮಳದ ಕಂಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತುಂಬಿಯ ಲಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತನಪ್ಪಿದನು ಮಗನ (ಅರಣ್ಯ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ದಟ್ಟವಾಗಿ ಬೆಳದ ಪರಿಮಳ ಭರಿತ ಹೂವುಗಳನ್ನು ದಾಟಿ, ಪುಷ್ಪದ ಮೊಗ್ಗುಗಳನ್ನರಳಿಸಿ, ಮಕರಂದವನ್ನು ಹೀರುವ ದುಮ್ಬಿಗಳ ರಭಸವನ್ನು ಆವರಿಸಿ, ಕಿರುದೆರೆಗಳ ಚಲನೆಯ ಇಬ್ಬನಿಯನ್ನು ಒಳಗೊಂಡು ನಿಧಾನವಾಗಿ ಬೀಸುವ ಗಾಳಿಯು ತನ್ನ ಮಗನಾದ ಭೀಮನನ್ನು ಆಲಂಗಿಸಿತು.

ಅರ್ಥ:
ಒಗುಮಿಗೆ: ಆಧಿಕ್ಯ, ಹೆಚ್ಚಳ; ಪರಿಮಳ: ಸುಗಂಧ; ಕಂಪು: ಸುಗಂಧ; ತಗಡ: ದಟ್ಟಣೆ, ಸಾಂದ್ರತೆ; ತೆಕ್ಕೆ: ಅಪ್ಪುಗೆ, ಆಲಿಂಗನ, ಗುಂಪು; ಬೀದಿವರಿ: ಸಂಚಾರ, ಚಲನೆ; ಮುಗುಳು: ಮೊಗ್ಗು; ಮೊಗ್ಗು: ಪೂರ್ತಿಯಾಗಿ ಅರಳದೆ ಇರುವ ಹೂವು; ತೆಗೆ:ಹೊರತರು; ತುಂಬಿ: ಭ್ರಮರ; ಲಳಿ: ರಭಸ, ಆವೇಶ; ಲಗ್ಗೆ: ಮುತ್ತಿಗೆ, ಆಕ್ರಮಣ; ಹೊಗರು: ಕಾಂತಿ, ಪ್ರಕಾಶ, ಹೆಚ್ಚಳ; ಹೊರಳಿ:ಗುಂಪು, ಸಮೂಹ; ಕಿರುದೆರೆ: ಚಿಕ್ಕ ಅಲೆ; ನೂಕು: ತಳ್ಳು; ತಳಿತ: ಚಿಗುರಿದ; ತುಷಾರ: ಹಿಮ, ಮಂಜು, ಇಬ್ಬನೆ; ಭಾರ: ಹೊರೆ; ಸೊಗಸು: ಚೆಂದ; ಸೇರಿಸು: ಜೋಡಿಸು; ಮಂದ: ನಿಧಾನ; ಮಾರುತ: ವಾಯು; ಅಪ್ಪು: ಆಲಂಗಿಸು; ಮಗ: ಸುತ;

ಪದವಿಂಗಡಣೆ:
ಒಗುಮಿಗೆಯ+ ಪರಿಮಳದ+ ಕಂಪಿನ
ತಗಡ+ ತೆಕ್ಕೆಯ+ ಬೀದಿವರಿಗಳ
ಮುಗುಳ +ಮೊಗ್ಗೆಯ +ತೆಗೆವ+ ತುಂಬಿಯ +ಲಳಿಯ ಲಗ್ಗೆಗಳ
ಹೊಗರ+ ಹೊರಳಿಯ+ ಕಿರುದೆರೆಯ+ ನೂ
ಕುಗಳ +ತಳಿತ +ತುಷಾರ +ಭಾರದ
ಸೊಗಸ +ಸೇರಿಸಿ +ಮಂದ+ಮಾರುತನ್+ಅಪ್ಪಿದನು +ಮಗನ

ಅಚ್ಚರಿ:
(೧) ತಂಗಾಳಿಯು ಭೀಮನ ಮೇಲೆ ಬೀಸಿತು ಎಂದು ಹೇಳುವ ಸುಂದರ ಕಲ್ಪನೆ
(೨) ಜೋಡಿ ಅಕ್ಷರ ಪದಗಳ ಬಳಕೆ – ತಗಡ ತೆಕ್ಕೆಯ; ಮುಗುಳ ಮೊಗ್ಗೆಯ; ತೆಗೆವ ತುಂಬಿಯ; ಲಳಿಯ ಲಗ್ಗೆಗಳ; ಹೊಗರ ಹೊರಳಿಯ; ತಳಿತ ತುಷಾರ; ಸೊಗಸ ಸೇರಿಸಿ