ಪದ್ಯ ೮೧: ಗಂಡನು ಯಾರನ್ನು ತೊರೆಯುವುದುತ್ತಮ?

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಸ್ಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣ್ದ ದಿಟ್ಟೆ ಹತ್ತನು
ಹಡೆದಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಹೆಂಡತಿಯಾದವಳು ತನ್ನ ಮನೆ ಅವಳ ಮನೆಯಕೆಲಸಗಳನ್ನು ಬಿಟ್ಟು, ಹೆಜ್ಜೆ ಹೆಜ್ಜೆಗೂ ಬೇರೆಯವರ ಮನೆಯಲ್ಲಿ ಬಾಯ್ಬಡಿದು ಮಾತನಾಡುತ್ತಾ, ತನಗೆ ಒಬ್ಬ ಗಂಡನಿರುವನೆಂಬುದನ್ನು ಮರೆತು, ಅವನನ್ನು ಎಡವಿದರೂ ಗಮನಿಸದಿರುವ ದಿಟ್ಟ ಹೆಂಗಸು ತನ್ನಿಂದ ಹತ್ತು ಮಕ್ಕಳನ್ನು ಪಡೆದಿದ್ದರೂ ಶ್ರೇಷ್ಠ ಪುರುಷನು ಆಕೆಯನ್ನು ತೊರೆಯುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಡದಿ: ಹೆಂಡತಿ; ನಿಜ: ಸ್ವಂತ; ನಿಳಯ: ಆಲಯ,ಮನೆ; ಬಿಟ್ಟು: ತೊರೆದು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ, ಯಾವಾಗಲೂ; ಪರ: ಬೇರೆ; ಗೃಹ: ಮನೆ; ಬಾಯನುಬಡಿದು: ಹರಟು, ಬೊಬ್ಬೆಹಾಕು; ಮನೆ: ಆಲಯ; ವಾರ್ತೆ: ವಿಷಯ; ಬೀದಿ: ರಸ್ತೆ; ಕಲಹ: ಜಗಳ; ಒಡರು: ಮಾಡು, ರಚಿಸು; ಪತಿ: ಗಂಡ; ಎಡಹು: ತಪ್ಪುಮಾಡು, ಮುಗ್ಗರಿಸು; ಕಾಣದ: ಗೋಚರಿಸದ; ಹತ್ತು: ದಶ; ಹಡೆದು: ಪಡೆದು, ಜನ್ಮನೀಡು; ವರ್ಜಿಸು: ತೊರೆ; ಉತ್ತಮ: ಒಳ್ಳೆಯ, ಶ್ರೇಷ್ಠ; ಪುರುಷ: ಗಂಡ;

ಪದವಿಂಗಡಣೆ:
ಮಡದಿ +ನಿಜ+ನಿಳಯವನು +ಬಿಟ್ಟ್+ಅಡಿ
ಗಡಿಗೆ +ಪರ+ಗೃಹದೊಳಗೆ +ಬಾಯನು
ಬಡಿದು +ಮನೆಮನೆ+ವಾರ್ತೆಯೆನ್ನದೆ +ಬೀದಿ+ಕಲಹವನು
ಒಡರಿಚುವ +ಪತಿಯೊಬ್ಬನ್+ಉಂಟೆಂದ್
ಎಡಹಿ +ಕಾಣ್ದ +ದಿಟ್ಟೆ +ಹತ್ತನು
ಹಡೆದಡೆಯು+ ವರ್ಜಿಸುವುದ್+ಉತ್ತಮ +ಪುರುಷರುಗಳೆಂದ

ಅಚ್ಚರಿ:
(೧) ಅಡಿಗಡಿ, ಮನೆಮನೆ – ಜೋಡಿ ಪದಗಳ ಬಳಕೆ
(೨) ಪತಿ, ಮಡದಿ – ಗಂಡ ಹೆಂಡತಿಗೆ ಉಪಯೋಗಿಸಿದ ಪದ

ಪದ್ಯ ೨: ಹಸ್ತಿನಾಪುರದ ಜನರು ಏತಕ್ಕೆ ಹೆದರಿದರು?

ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸುಕೊಂಡೆಸಗಿ ನಟಿಸಿತು ನಾಡು ನಾಡಿನಲಿ
ಆದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ (ಆದಿ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ಕೌರವರ ಪಾಂಡವರ ಜಗಳವು ಬೀದಿಗೆ ಬಂದಿತು. ಈ ಜಗಳದಿಂದ ಊರಿನ ವಾತಾವರಣವು ಹದಗೆಟ್ಟಿತು. ಜನವಸತಿ ಪ್ರದೇಶಗಳಲ್ಲಿ ಕೌರವರ ಪಾಂಡವರ ಗುಂಪು ಹುಟ್ಟುಕೊಂಡು ಇಬ್ಬರ ನಡುವೆ ಹೋರಟ ಶುರುವಾಯಿತು.ಹಸ್ತಿನಾಪುರಕ್ಕೆ ಇಬ್ಬರು ದೊರೆಗಳಾಗಲು ಮುಂದೆ ಇನ್ನೇನೆಂದು ಪುರಜನ ಭೀಮ ದುರ್ಯೋಧನರ ಹೋರಾಟಕ್ಕೆ ಹೆದರಿತು.

ಅರ್ಥ:
ಬೀದಿ: ರಸ್ತೆ; ಕಲಹ: ಜಗಳ, ವೈರ, ಕದನ; ಕದಡು: ಕಲುಕು, ಕೆರಳಿಸು, ಬೆರಸು; ಬೀಡು: ಆವಾಸ, ನೆಲೆ; ಐದೆ: ವಿಶೇಷವಾಗಿ; ಹಬ್ಬು: ಹರಡು, ಪಸರಿಸು; ಕೈ: ಹಸ್ತ; ಎಸಗು: ಉಂಟುಮಾಡು, ಒದಗು; ನಟಿಸು: ಅಭಿನಯ, ನರ್ತಿಸು; ನಾಡು: ದೇಶ; ಅರಸ: ರಾಜ; ಇಭಪುರಿ: ಹಸ್ತಿನಾಪುರ; ಕಾಳು: ಕೆಟ್ಟದ್ದು, ಕೀಳಾದುದು; ಪುರ: ಊರು; ಹೆದರು: ಭಯಪಡು; ಹೋರಟೆ: ಜಗಳ, ಹೋರಾಟ;

ಪದವಿಂಗಡನೆ:
ಬೀದಿ+ಕಲಹದ+ ಕದಡು+ ಬೀಡಿನಲ್
ಐದೆ +ಹಬ್ಬಿತು +ಬೀಡು+ಕಲಹದ
ಕೈ+ದೊಳಸು+ಕೊಂಡ್+ಎಸಗಿ+ ನಟಿಸಿತು +ನಾಡು +ನಾಡಿನಲಿ
ಆದುದ್+ಎರಡ್+ಅರಸ್+ಇಭಪುರಿಗೆ+ ಕಾಳ್
ಆದುದ್+ಇನ್ನೇನೆಂದು +ಪುರಜನವ್
ಐದೆ+ ಹೆದರಿತು+ ಭೀಮ +ದುರ್ಯೋಧನರ +ಹೋರಟೆಗೆ

ಅಚ್ಚರಿ:
(೧) ಐದೆ – ೨ ಮತ್ತು ೬ ಸಾಲಿನ ಮೊದಲ ಪದಗಳು
(೨) ಕಲಹ, ಬೀಡು – ೨ ಬಾರಿ ಪ್ರಯೋಗ ೧, ೨ ಸಾಲು
(೩) ಪುರ, ನಾಡು, ಪುರಿ – ಸಮಾನಾರ್ಥಕ ಪದಗಳು
(೪) ಬೀದಿಗಲಹದ, ಬೀಡುಗಲಹದ – ಪದಗಳ ಬಳಕೆ