ಪದ್ಯ ೪: ಸಭೆಯಲ್ಲಿ ಯಾರು ಎದ್ದು ನಿಂತರು?

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ (ದ್ರೋಣ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ವೀರರಿದ್ದು ಏನು ಮಾಡಿಯಾರು? ದೈವದ ಪ್ರೀತಿ ಬೇರೆ ಕಡೆಗಿದೆ. ನಮಗೊಲಿದು ಯಾರು ತಾನೇ ಏನು ಮಾಡಿಯಾರು? ಹೀಗೆಂದು ಕರ್ಣನು ನಿಟ್ಟುಸಿರಿಟ್ಟನು. ಸಭೆಯಲ್ಲಿದ್ದ ಮಹಾವೀರರಾದ ರಾಜರು ಸದ್ದಿಲ್ಲದ ಸಾಗರದಮ್ತೆ ಮೌನವಾಗಿದ್ದರು. ಆಗ ರಣಧೀರರಾದ ತ್ರಿಗರ್ತರು ಸಭೆಯಲ್ಲಿ ಎದ್ದು ನಿಂತರು.

ಅರ್ಥ:
ವೀರ: ಶೂರ; ಏಗು: ಸಾಗಿಸು, ನಿಭಾಯಿಸು; ದೈವ: ಭಗವಂತ; ಕೂರು: ಪ್ರೀತಿ, ಮೆಚ್ಚು; ನೆಲೆ: ಭೂಮಿ; ಬೇರೆ: ಅನ್ಯ; ಒಲಿ: ಪ್ರೀತಿ; ಕಲಿ: ಶೂರ; ಬಿಸುಸುಯ್: ನಿಟ್ಟುಸಿರುಬಿಡು; ಭೂರಿ: ಹೆಚ್ಚು, ಅಧಿಕ; ಭೂಪ: ರಾಜ; ವಿಸ್ತರ: ವಿಶಾಲ; ಗಂಭೀರ: ಆಳವಾದುದು; ಸಾಗರ: ಸಮುದ್ರ; ರಣ: ಸಮುದ್ರ; ಧೀರ: ಶೂರ; ವರ: ಶ್ರೇಷ್ಠ; ತ್ರಿಗರ್ತ: ಒಂದು ದೇಶದ ಹೆಸರು; ಎದ್ದು: ಮೇಲೇಳು; ಸಭೆ: ಓಲಗ;

ಪದವಿಂಗಡಣೆ:
ವೀರರಿದ್+ಏಗುವರು +ದೈವದ
ಕೂರುಮೆಯ +ನೆಲೆ +ಬೇರೆ +ನಮಗ್+ಒಲಿದ್
ಆರು +ಮಾಡುವುದೇನ್+ಎನುತ +ಕಲಿಕರ್ಣ+ ಬಿಸುಸುಯ್ಯೆ
ಭೂರಿ +ಭೂಪರು +ವಿಸ್ತರದ +ಗಂ
ಭೀರ +ಸಾಗರದಂತಿರಲು +ರಣ
ಧೀರರ್+ಎದ್ದರು +ವರ +ತ್ರಿಗರ್ತರು +ರಾಜಸಭೆಯೊಳಗೆ

ಅಚ್ಚರಿ:
(೧) ಕೆಲಸಕ್ಕೆ ದೈವದ ಮಹತ್ವ – ವೀರರಿದ್ದೇಗುವರು ದೈವದ ಕೂರುಮೆಯ ನೆಲೆ ಬೇರೆ
(೨) ಉಪಮಾನದ ಪ್ರಯೋಗ – ಭೂರಿ ಭೂಪರು ವಿಸ್ತರದ ಗಂಭೀರ ಸಾಗರದಂತಿರಲು