ಪದ್ಯ ೨೦: ಗಾಳಿ ಬಿಸಿಲುಗಳೇಕೆ ರಾಣಿಯರ ಮೇಲೆರಗಿದವು?

ಗಾಳಿಯರಿಯದು ಮುನ್ನ ರವಿಕಿರ
ಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು ಕಡುವಿಸಿಲು ಬಿರುಗಾಳಿ
ತೂಳಿದವು ತರುಣಿಯರನಾವವ
ರಾಲಿಯರಿಯದ ನೆಲೆಯನಾ ಚಾಂ
ಡಾಲಜನಪರಿಯಂತ ಕಂಡುದು ರಾಯ ರಾಣಿಯರ (ಗದಾ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಈ ರಾಣಿಯರ ರೂಪವನ್ನು ಗಾಳಿ ಬಿಸಿಲುಗಳೇ ಈ ಮೊದಲು ಕಂಡಿರಲಿಲ್ಲ. ಇಂತಹ ಅಪೂರ್ವ ರೂಪವನ್ನ ಆವರಿಸುವೆವು ಎಂದು ಕಡು ಬಿಸಿಲೂ ಬಿರುಗಾಳಿಯೂ ಅವರನ್ನು ಹಿಂಸಿಸಿದವು. ಅವರೆಂದೂ ಕಾಣದ ಜಾಗಕ್ಕೆ ಅವರನ್ನು ದಬ್ಬಿದವು. ಸಮಾಜದ ಸಮಸ್ತರೂ ಅವರನ್ನು ಕಂಡರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ಮುನ್ನ: ಮೊದಲು; ರವಿ: ಸೂರ್ಯ; ಕಿರಣ: ರಶ್ಮಿ, ಬೆಳಕಿನ ಕದಿರು; ಆಳಿ: ಸಾಲು, ಸಮೂಹ; ಸೋಂಕು: ತಾಗು; ಅಪೂರ್ವ: ಹಿಂದೆಂದೂ ಕಾಣದ, ಅಪರೂಪವಾದ; ರೂಪ: ಆಕಾರ, ಚೆಲುವು; ಬೀಳು: ತಗುಲು; ಕಡು: ಬಹಳ; ವಿಸಿಲು: ಬಿಸಿಲು, ತಾಪ; ಬಿರುಗಾಳಿ: ಜೋರಾದ ಗಾಳಿ; ತೂಳು: ಆವೇಶ, ಉನ್ಮಾದ; ತರುಣಿ: ಹೆಣ್ಣು; ನೆಲೆ: ಭೂಮಿ; ಚಾಂಡಾಲ: ದುಷ್ಟ; ಪರಿಯಂತ: ಅಲ್ಲಿಯವರೆಗೂ; ಕಂಡು: ನೋಡು; ರಾಯ: ರಾಜ; ರಾಣಿ: ಅರಸಿ; ಆಲಿ: ಕಣ್ಣು;

ಪದವಿಂಗಡಣೆ:
ಗಾಳಿ+ಅರಿಯದು +ಮುನ್ನ+ ರವಿ+ಕಿರ
ಣಾಳಿ +ಸೋಂಕದ್+ಅಪೂರ್ವ+ರೂಪಿನ
ಮೇಲೆ +ಬೀಳುವವ್+ಎಂಬವೊಲು +ಕಡು+ಬಿಸಿಲು +ಬಿರುಗಾಳಿ
ತೂಳಿದವು +ತರುಣಿಯರನ್+ಆವವರ್
ಆಲಿ + ಅರಿಯದ+ ನೆಲೆಯನ್+ಆ+ ಚಾಂ
ಡಾಲ+ಜನ+ಪರಿಯಂತ +ಕಂಡುದು +ರಾಯ +ರಾಣಿಯರ

ಅಚ್ಚರಿ:
(೧) ಕವಿಯ ಕಲ್ಪನೆಯ ಸೊಬಗು – ಗಾಳಿಯರಿಯದು ಮುನ್ನ ರವಿಕಿರಣಾಳಿ ಸೋಂಕದಪೂರ್ವರೂಪಿನ
ಮೇಲೆ ಬೀಳುವವೆಂಬವೊಲು

ಪದ್ಯ ೪: ದುರ್ಯೋಧನನ ಪತನ ಕಾಲದಲ್ಲಿ ಯಾವ ಬದಲಾವಣೆಗಳಾದವು?

ಬೀಸಿದುದು ಬಿರುಗಾಳಿ ಕತ್ತಲೆ
ಸೂಸಿದುದು ದಿಗುವಳಯದಲಿ ಪರಿ
ವೇಷದಲಿ ಗ್ರಹ ನೆರೆದವೈದಾರೇಳು ರವಿಯೊಡನೆ
ಸೂಸಿದವು ಹಗಲುಳುಕು ಮೃಗಗಣ
ವಾಸುರದಲೊದರಿದವು ಕಂದಿತು
ವಾಸರಪ್ರಭೆ ಕೌರವೇಂದ್ರನ ಪತನ ಕಾಲದಲಿ (ಗದಾ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ಬಿರುಗಾಳಿ ಬೀಸಿತು. ದಿಗ್ವಲಯದಲ್ಲಿ ಕತ್ತಲು ಕವಿಯಿತು. ಸೂರ್ಯನ ಸುತ್ತಲೂ ಐದಾರು ಏಳು ಗ್ರಹಗಳು ಕಾಣಿಸಿಕೊಂಡವು. ಹಗಲು ಆಗಾಗ ಮಾಸಿ ಹೋಯಿತು. ಮೃಗಗಳು ಭಯಮ್ಕರವಾಗಿ ಅರಚಿಕೊಂಡವು. ಬಿಸಿಲು ಕಂದಿಹೋಯಿತು.

ಅರ್ಥ:
ಬೀಸು: ಹರಡು, ಸೂಸು; ಬಿರುಗಾಳಿ: ಜೊರಾದ ಗಾಳಿ (ವಾಯು); ಕತ್ತಲೆ: ಅಂಧಕಾರ; ಸೂಸು: ಹರಡು; ದಿಗು: ದಿಕ್ಕು; ವಳಯ: ಪರಧಿ; ಪರಿವೇಷ: ಸುತ್ತುವರಿದಿರುವುದು, ಬಳಸಿರುವಿಕೆ; ಗ್ರಹ: ಆಕಾಶಚರಗಳು; ನೆರೆ: ಗುಂಪು; ರವಿ: ಸೂರ್ಯ; ಸೂಸು: ಹರಡು; ಉಳುಕು: ಕುಂದು, ಮರೆಯಾಗು, ನೋವುಂಟಾಗು; ಮೃಗಗಣ: ಪ್ರಾಣಿಗಳ ಗುಂಪು; ಆಸುರ: ಭಯಂಕರ; ಒದರು: ಹೊರಹಾಕು; ಕಂದು: ಕಳಾಹೀನ; ವಾಸರ: ದಿನ, ನಿತ್ಯ; ಪ್ರಭೆ: ಪ್ರಕಾಶ; ಪತನ: ಅವಸಾನ; ಕಾಲ: ಸಮಯ;

ಪದವಿಂಗಡಣೆ:
ಬೀಸಿದುದು +ಬಿರುಗಾಳಿ +ಕತ್ತಲೆ
ಸೂಸಿದುದು+ ದಿಗುವಳಯದಲಿ +ಪರಿ
ವೇಷದಲಿ +ಗ್ರಹ+ ನೆರೆದವ್+ಐದಾರೇಳು +ರವಿಯೊಡನೆ
ಸೂಸಿದವು +ಹಗಲ್+ಉಳುಕು +ಮೃಗಗಣವ್
ಆಸುರದಲ್+ಒದರಿದವು +ಕಂದಿತು
ವಾಸರಪ್ರಭೆ +ಕೌರವೇಂದ್ರನ+ ಪತನ +ಕಾಲದಲಿ

ಅಚ್ಚರಿ:
(೧) ಅದ್ಭುತವನ್ನು ಸೂಚಿಸುವ ಪರಿ – ಹಗಲುಳುಕು; ಮೃಗಗಣ ವಾಸುರದಲೊದರಿದವು; ಕಂದಿತು ವಾಸರಪ್ರಭೆ;

ಪದ್ಯ ೫೫: ಭೀಮನು ಶತ್ರುಸೈನ್ಯವನ್ನು ಹೇಗೆ ನಾಶ ಮಾಡಿದನು?

ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ (ಗದಾ ಪರ್ವ, ೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಬಿರುಗಳಿಯು ತುಂತುರು ಹನಿಯನ್ನು ತೆಗೆದೆಸೆದಂತೆ ತನ್ನ ಮೇಲೆ ಬಂದ ಬಾಣಗಳನ್ನು ಉಳಿದ ಈಟಿಯೇ ಮೊದಲಾದವನ್ನೂ ತನ್ನ ಗದೆಯಿಂದ ಭೀಮನು ಹೊಡೆದು ಹಾಕಿದನು. ತುಂತುರು ಮಳೆಯಿಂದ ಪರ್ವತಶಿಲೆಯು ನೆನೆದೀತೇ? ಭೀಮನೆಂಬ ದಿಗ್ಗಜದ ಕಾಲ್ತುಳಿತಕ್ಕೆ ಗಜಸೈನ್ಯವು ಬಾಳೆಯ ವನದಂತೆ ನಾಶವಾಯಿತು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಜಡಿ: ಗದರಿಸು, ಬೆದರಿಸು; ತುಂತುರ್ವನಿ: ಹನಿ ಹನಿಯಾದ ನೀರು; ಬಿರುಗಾಳ: ರಭಸವಾದ ಗಾಳಿ, ಸುಂಟರಗಾಳಿ; ಮೊಗೆ: ತುಂಬಿಕೊಳ್ಳು; ಸೆಲ್ಲೆಹ: ಈಟಿ, ಭರ್ಜಿ; ಶರವಳೆ: ಬಾಣಗಳ ಮಳೆ; ಗದೆ: ಮುದ್ಗರ; ಘಟ್ಟಿಸು: ಹೊಡೆ, ಅಪ್ಪಳಿಸು; ಜಿನುಗು: ಸೋನೆ ಮಳೆ, ಜಡಿ ಮಳೆ; ಪರ್ವತ: ಬೆಟ್ಟ; ಶಿಲೆ: ಕಲ್ಲು; ನೆನೆ: ತೋಯು; ಗಜಸೇನೆ: ಆನೆಗಳ ಸೈನ್ಯ; ಕದಳೀ: ಬಾಳೆ; ವನ: ಕಾಡು; ಕಲಿ: ಶೂರ; ದಿಗ್ಗಜ: ಅತಿಶ್ರೇಷ್ಠ; ಪದಹತಿ: ಕಾಲ್ತುಳಿತ;

ಪದವಿಂಗಡಣೆ:
ಜನಪ +ಕೇಳೈ +ಜಡಿವ +ತುಂತು
ರ್ವನಿಗಳನು +ಬಿರುಗಾಳಿ+ ಮೊಗೆವವೊಲ್
ಅನಿತು +ಸೆಲ್ಲೆಹ +ಶರವಳೆಯ+ ಗದೆಯಿಂದ +ಘಟ್ಟಿಸಿದ
ಜಿನುಗುವಳೆಯಲಿ +ಪರ್ವತದ+ ಶಿಲೆ
ನೆನೆವುದೇ +ಗಜಸೇನೆ +ಕದಳೀ
ವನವಲೇ+ ಕಲಿಭೀಮ+ದಿಗ್ಗಜ +ಗಾಢ +ಪದಹತಿಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಡಿವ ತುಂತುರ್ವನಿಗಳನು ಬಿರುಗಾಳಿ ಮೊಗೆವವೊಲ್
(೨) ಉಪಮಾನದ ಪ್ರಯೋಗ – ಜಿನುಗುವಳೆಯಲಿ ಪರ್ವತದ ಶಿಲೆ ನೆನೆವುದೇ
(೩) ರೂಪಕದ ಪ್ರಯೋಗ – ಗಜಸೇನೆ ಕದಳೀವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ

ಪದ್ಯ ೯: ಘಟೋತ್ಕಚನ ಮಾಯಾವತಾರಗಳು ಹೇಗಿದ್ದವು?

ಬೀಳಹೊಯ್ದನು ಬಿರುದರನು ಬಿರು
ಗಾಳಿಯಾಗಿ ವರೂಥಚಯವನು
ಕಾಳುಕಿಚ್ಚಾಗುರುಹಿದನು ಫಣಿಯಾಗಿ ತುಡುಕಿದನು
ಮೇಲುಗವಿದನು ಜಲಧಿಯಾಗಿ ನೃ
ಪಾಲನಿಕರದೊಳುರುಳಿದನು ಗಿರಿ
ಜಾಳವಾಗಿ ಘಟೋತ್ಕಚನು ಘಲ್ಲಿಸಿದನತಿರಥರ (ದ್ರೋಣ ಪರ್ವ, ೧೬ ಸಂಧಿ, ೯ ಪದ್ಯ)

ತಾತ್ಪರ್ಯ:
ಬಿರುಗಾಳಿಯಾಗಿ ಬೀಸಿ ವೀರರನ್ನುರುಳಿಸಿದನು. ಕಾಡುಗಿಚ್ಚಾಗಿ ರಥಗಳನ್ನು ಸುಟ್ಟನು. ಹಾವಾಗಿ ಕಚ್ಚಿದನು, ಸಮುದ್ರವಾಗಿ ಕೊಚ್ಚಿಕೊಂಡು ಹೋದನು. ಬೆಟ್ಟವಾಗಿ ಶತ್ರುಗಳ ಮೇಲೆ ಬಿದ್ದು ಅತಿರಥರನ್ನು ಪೀಡಿಸಿದನು.

ಅರ್ಥ:
ಬೀಳು: ಬಾಗು; ಹೊಯ್ದು: ಹೊಡೆ; ಬಿರುದು: ಗೌರವ ಸೂಚಕ ಪದ; ಬಿರುದರು: ಪರಾಕ್ರಮಿ; ಬಿರುಗಾಳಿ: ಸುಂಟರಗಾಳಿ; ವರೂಥ: ತೇರು, ರಥ; ಚಯ: ಗುಂಪು; ಕಾಳುಕಿಚ್ಚು: ಬೆಂಕಿ; ಉರು: ತಾಪಗೊಳಿಸು; ಫಣಿ: ಹಾವು; ತುಡುಕು: ಹೋರಾಡು, ಸೆಣಸು; ಕವಿ: ಆವರಿಸು; ಜಲಧಿ: ಸಾಗರ; ನೃಪಾಲ: ರಾಜ; ನಿಕರ: ಗುಂಪು; ಉರುಳು: ಕೆಳಕ್ಕೆ ಬೀಳು, ನೆಲದ ಮೇಲೆ ತಿರುಗು; ಗಿರಿ: ಬೆಟ್ಟ; ಘಲ್ಲಿಸು: ಪೀಡಿಸು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಬೀಳಹೊಯ್ದನು+ ಬಿರುದರನು +ಬಿರು
ಗಾಳಿಯಾಗಿ +ವರೂಥ+ಚಯವನು
ಕಾಳುಕಿಚ್ಚಾಗ್+ಉರುಹಿದನು +ಫಣಿಯಾಗಿ +ತುಡುಕಿದನು
ಮೇಲು+ಕವಿದನು +ಜಲಧಿಯಾಗಿ +ನೃ
ಪಾಲ+ನಿಕರದೊಳ್+ಉರುಳಿದನು +ಗಿರಿ
ಜಾಳವಾಗಿ +ಘಟೋತ್ಕಚನು +ಘಲ್ಲಿಸಿದನ್+ಅತಿರಥರ

ಅಚ್ಚರಿ:
(೧) ಬಿರುದರನು ಬಿರುಗಾಳಿಯಾಗಿ, ಘಟೋತ್ಕಚನು ಘಲ್ಲಿಸಿದ – ಪದಗಳ ಬಳಕೆ
(೨) ಬಿರುಗಾಳಿ, ಕಾಳುಕಿಚ್ಚು, ಫಣಿ, ಜಲಧಿ, ಗಿರಿಜಾಳ – ಮಾಯಾವತಾರಗಳು

ಪದ್ಯ ೮೨: ಭೀಮನ ಆಕ್ರಮಣ ಹೇಗಿತ್ತು?

ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿ ಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೮೨ ಪದ್ಯ)

ತಾತ್ಪರ್ಯ:
ಗಿಳಿವಿಂಡುಗಳೆಲ್ಲಿ ಗಿಡಗವೆಲ್ಲಿ? ಭೀಮನ ದಾಳಿಯಿಂದ ಆನೆಗಲದಳವು ಕಾಲೂರಿ ನಿಲ್ಲಲೂ ಆಗಲಿಲ್ಲ. ಭೀಮನೆಂಬ ಬಿರುಗಾಳಿಗೆ ಶತ್ರುಸೈನ್ಯವೆಂಬ ಅರಳಿದ ಹೂಗೊಂಚಲುಗಳು ಹಾರಿ ಹೋದವು. ಭೀಮನ ಪರಾಕ್ರಮವನ್ನು ಬಲ್ಲವರಾರು?

ಅರ್ಥ:
ಗಿಳಿ: ಗಿಣಿ, ಶುಕ; ಹಿಂಡು: ಗುಂಪು; ಗಿಡುಗ: ಹದ್ದು; ದಳ: ಗುಂಫು; ಉಳವು: ಉಳಿಸು, ಜೀವಿಸು; ಸುಳಿವು: ಕುರುಹು, ಜಾಡು; ಗಡ: ತ್ವರಿತವಾಗಿ, ಅಲ್ಲವೇ; ಕಾಲು: ಪಾದ; ಊರು: ಮೆಟ್ಟು; ಕರಿ: ಆನೆ; ಘಟೆ: ಗುಂಪು; ಒಗ್ಗು: ಗುಂಪು; ಕಳಿತ: ಪೂರ್ಣ ಹಣ್ಣಾದ; ಹೂವು: ಮಲರು, ಪುಷ್ಪ; ತೊಡಬೆ: ತುಂಬು, ಕಾವು, ಸಮೂಹ; ರಿಪು: ವೈರಿ; ಬಲ: ಸೈನ್ಯ; ಬಿರುಗಾಳಿ: ಜೋರಾದ ಗಾಳಿ; ವೃಕೋದರ: ತೋಳಿನಂತಹ ಹೊಟ್ಟೆ (ಭೀಮ); ಅಳವು: ಶಕ್ತಿ; ಬಲ್ಲ: ತಿಳಿದ; ಕೇಳು: ಆಲಿಸು;

ಪದವಿಂಗಡಣೆ:
ಗಿಳಿಯ+ ಹಿಂಡುಗಳೆತ್ತ +ಗಿಡಿಗನ
ದಳದುಳವು +ತಾನೆತ್ತ +ಭೀಮನ
ಸುಳಿವು+ ಗಡ+ ಕಾಲೂರುವವೆ+ ಕರಿ+ ಘಟೆಗಳ್+ಒಗ್ಗಿನಲಿ
ಕಳಿತ+ ಹೂವಿನ +ತೊಡಬೆಗಳೊ+ ರಿಪು
ಬಲವೊ+ ಬಿರುಗಾಳಿಯೊ+ ವೃಕೋದರನ್
ಅಳವ +ಬಲ್ಲವನ್+ಆವನೈ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿಳಿಯ ಹಿಂಡುಗಳೆತ್ತ ಗಿಡಿಗನ ದಳದುಳವು ತಾನೆತ್ತ

ಪದ್ಯ ೨: ದ್ರೋಣರು ಯಾವ ಅಪಶಕುನಗಳು ಭೀಷ್ಮರಿಗೆ ಹೇಳಿದರು?

ಸುರಿಸುತಿವೆ ಕಂಬನಿಗಳನು ಗಜ
ತುರಗ ಚಯವೊರೆಯುಗಿದಡಾಯುಧ
ಮುರಿದು ಬಿದ್ದವು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲಧಾರೆಯಿದೆ ತರ
ತರದಲಿವೆ ಪಡಿ ಸೂರ್ಯ ಮಂಡಲವೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೨ ಪದ್ಯ)

ತಾತ್ಪರ್ಯ:
ತಮಗೆ ಕಂಡ ಅಪಶಕುನಗಳನ್ನು ದ್ರೋಣರು ಭೀಷ್ಮರಿಗೆ ಹೇಳತೊಡಗಿದರು, ಯುದ್ಧದಲ್ಲಿದ್ದ ಆನೆ ಕುದುರೆಗಳು ಕಣ್ಣೀರು ಸುರಿಸುತ್ತಿವೆ, ಒರೆಯಿಂದ ಹೊರತಂದ ಕತ್ತಿಯು ಮುರಿದು ಬೀಳುತ್ತಿದೆ, ಸೈನ್ಯವು ಹೆದರುವಂತೆ ಬಿರುಗಾಳಿ ಬೀಸುತ್ತಿದೆ, ಆಕಾಶದಲ್ಲಿ ನಕ್ಷತ್ರಗಳು ಹಗಲು ಹೊತ್ತಿನಲ್ಲೇ ಕಾಣುತ್ತಿವೆ, ಕೆಂಪು ಬಣ್ಣದ ಮಳೆ ಬೀಳುತ್ತಿದೆ ಇನ್ನೊಂದು ಸೂರ್ಯ ಮಂಡಲವು ಕಾಣುತ್ತಿದೆ ಎಂದು ದ್ರೋಣರು ಭೀಷ್ಮರಿಗೆ ತಿಳಿಸಿದರು.

ಅರ್ಥ:
ಸುರಿಸು: ಮೇಲಿನಿಂದ ಬೀಳು, ವರ್ಷಿಸು; ಕಂಬನಿ: ಕಣ್ಣೀರು; ಗಜ: ಆನೆ; ತುರಗ: ಕುದುರೆ; ಚಯ: ಸಮೂಹ; ಒರೆ: ಕತ್ತಿಯನ್ನು ಇಡುವ ಸಾಧನ; ಉಗಿ: ಹೊರತರು; ಆಯುಧ: ಶಸ್ತ್ರ; ಮುರಿ: ಸೀಳು; ಬೀಸು: ತೂಗುವಿಕೆ; ಬಿರುಗಾಳಿ: ಜೋರಾದ ಗಾಳಿ; ಬಲ: ಶಕ್ತಿ; ಬೆದರು: ಹೆದರು; ಹರಿ: ಓಡಾಡು; ತಾರಕಿ: ನಕ್ಷತ್ರ; ಅಭ್ರ: ಆಗಸ; ಅರುಣ: ಕೆಂಪು; ಮಯ: ತುಂಬು; ಜಲಧಾರೆ: ವರ್ಷ; ತರತರ: ಹಲವಾರು; ಪಡಿ: ಸಮಾನವಾದುದು; ಸೂರ್ಯ: ರವಿ; ಮಂಡಲ: ಜಗತ್ತು;

ಪದವಿಂಗಡಣೆ:
ಸುರಿಸುತಿವೆ +ಕಂಬನಿಗಳನು+ ಗಜ
ತುರಗ+ ಚಯ+ ಒರೆ+ಉಗಿದಡ್+ಆಯುಧ
ಮುರಿದು +ಬಿದ್ದವು +ಬೀಸುತಿದೆ +ಬಿರುಗಾಳಿ+ ಬಲ +ಬೆದರೆ
ಹರಿವುತಿವೆ +ತಾರಕಿಗಳ್+ಅಭ್ರದೊಳ್
ಅರುಣಮಯ +ಜಲಧಾರೆಯಿದೆ+ ತರ
ತರದಲಿವೆ+ ಪಡಿ +ಸೂರ್ಯ +ಮಂಡಲವ್+ಎಂದನಾ +ದ್ರೋಣ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಿದ್ದವು ಬೀಸುತಿದೆ ಬಿರುಗಾಳಿ ಬಲ ಬೆದರೆ
(೨) ಅಪಶಕುನಗಳು – ಸುರಿಸುತಿವೆ ಕಂಬನಿಗಳನು ಗಜತುರಗ ಚಯ

ಪದ್ಯ ೧೫: ಸೈರಂಧ್ರಿಯು ಏಕೆ ಬಿದ್ದಳು?

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು (ವಿರಾಟ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಓಡುವುದನ್ನು ನೋಡಿ, ಕೀಚಕನು ಅವಳ ಹಿಂದೆಯೇ ಬೆನ್ನು ಹತ್ತಿ ಓಡಿದನು. ಅವಳ ತಲೆಗೂದಲನ್ನು ಹಿಡಿದು ಏ ದಾಸಿಯ ಮಗಳೇ, ಓಡಿ ಹೋದರೆ ಬಿಟ್ಟು ಬಿಡುವೆನೇ ಎಂದು ಕೋಪದಿಂದ ಕೂಗುತ್ತಾ ಕಾಲಿನಿಂದ ಅವಳನ್ನು ಒದೆದು ಅವಳನ್ನು ಮೆಟ್ಟಿ ಹೊಡೆದನು. ಆ ಹೊಡೆತಕ್ಕೆ ಕೆಳಕ್ಕೆ ಉರುಳಿದ ಸೈರಂಧ್ರಿಯು ರಕ್ತವನ್ನು ಕಾರಿ, ಕೇಶರಾಶಿಯ ಹುಡಿಮಣ್ಣಿನಲ್ಲಿ ಹೊರಳುತ್ತಿದ್ದಳು, ಬಿರುಗಾಳಿಗೆ ಮುರಿದು ಬಿದ್ದ ಬಾಳೆಯ ಮರದಂತೆ ದ್ರೌಪದಿಯು ನೆಲದಲ್ಲಿ ಹೊರಳಿದಳು.

ಅರ್ಥ:
ಒಡನೆ: ಕೂಡಲೆ; ಬೆಂಬತ್ತು: ಹಿಂಬಾಲಿಸು; ತುರುಬು: ತಲೆಗೂದಲು; ಹಿಡಿ: ಗ್ರಹಿಸು; ತೊತ್ತು: ದಾಸಿ; ಮಗಳು: ಸುತೆ; ಹಾಯ್ದು: ಓಡು, ಚೆಲ್ಲು; ಬಿಡು: ತೊರೆ; ಫಡ: ಬಯ್ಯುವ ಒಂದು ಪದ; ಹೊಯ್ದು: ಹೊಡೆ; ಕಾಲು: ಪಾದ; ಮೆಟ್ಟು: ತುಳಿದು ನಿಲ್ಲು; ಕೆಡೆ: ಬೀಳು, ಕುಸಿ; ರಕುತ: ನೆತ್ತರು; ಕಾರು: ಕೆಸರು; ಹುಡಿ: ಮಣ್ಣು; ಹೊರಳು: ಉರುಳಾಡು, ಉರುಳು; ಬಿರುಗಾಳಿ: ಜೋರಾದ ಗಾಳಿ; ಸೈಗೆಡೆ: ಅಡ್ಡಬೀಳು; ಕದಳಿ: ಬಾಳೆ; ಕಂಬ: ಉದ್ದನೆಯ ಕೋಲು, ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಕಾಂತೆ: ಹೆಣ್ಣು; ಹೊರಳು: ಉರುಳು;

ಪದವಿಂಗಡಣೆ:
ಒಡನೆ +ಬೆಂಬತ್ತಿದನು +ತುರುಬನು
ಹಿಡಿದು +ತೊತ್ತಿನ +ಮಗಳೆ +ಹಾಯ್ದರೆ
ಬಿಡುವೆನೇ +ಫಡ+ಎನುತ +ಹೊಯ್ದನು +ಕಾಲಲ್+ಒಡೆಮೆಟ್ಟಿ
ಕೆಡೆದು+ ರಕುತವ +ಕಾರಿ +ಹುಡಿಯಲಿ
ಮುಡಿ +ಹೊರಳಿ +ಬಿರುಗಾಳಿಯಲಿ+ ಸೈ
ಗೆಡೆದ +ಕದಳಿಯ+ ಕಂಬದಂತಿರೆ +ಕಾಂತೆ +ಹೊರಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು

ಪದ್ಯ ೪೯: ಕಾಲಕೇಯರ ಯುದ್ಧದ ಪರಿ ಹೇಗಿತ್ತು?

ಬೀಸಿದರು ಬಿರುಗಾಳಿಯಾಗಿ ಮ
ಹಾ ಸಮುದ್ರದ ನೂಕು ತೆರೆಯಲಿ
ಬೇಸರಿಸಿದರು ಹುರಿದರವನಿಯನಗ್ನಿ ರೂಪದಲಿ
ಆಸುರದ ತಮವಾಗಿ ರವಿಶತ
ದಾಸರಿನ ಬಿಸಿಲಾಗಿ ಮಾಯಾ
ಭ್ಯಾಸಿಗಳು ಮೋಹಿಸಿದರದನೇವಣ್ಣಿಸುವೆನೆಂದ (ಅರಣ್ಯ ಪರ್ವ, ೧೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಾಲಕೇಯರು ಬಿರುಗಾಳಿಯಾಗಿ ಬೀಸಿದರು. ಸಮುದ್ರದ ತೆರೆಯಾಗಿ ನನ್ನನ್ನು ಹಿಂದಕ್ಕೆ ತಳ್ಳಿ ಬೇಸರಿಸಿದರು. ಅಗ್ನಿ ರೂಪದಿಂದ ಭೂಮಿಯನ್ನೇ ಹುರಿದರು. ಒಮ್ಮೆ ಕಾಳಗತ್ತಲೆಯಾಗಿ, ಒಮ್ಮೆ ನೂರು ಸೂರ್ಯರ ಬಿಸಿಲನ್ನು ಬೀರಿ ಮಾಯಾಯುದ್ಧವನ್ನು ಮಾಡಿದರು. ಅದನ್ನು ನಾನು ಹೇಗೆ ವರ್ಣಿಸಲಿ ಎಂದು ಅರ್ಜುನನು ವಿವರಿಸಿದನು.

ಅರ್ಥ:
ಬೀಸು: ತೂಗುವಿಕೆ, ಹರಹು; ಬಿರುಗಾಳಿ: ಜೋರಾದ ಗಾಳಿ; ಗಾಳಿ: ವಾಯು; ಮಹಾ: ದೊಡ್ಡ; ಸಮುದ್ರ: ಸಾಗರ; ನೂಕು: ತಳ್ಳು; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಬೇಸರ: ಬೇಜಾರು; ಹುರಿ: ಕಾಯಿಸು, ಬಾಡಿಸು; ಅವನಿ: ಭೂಮಿ; ಅಗ್ನಿ: ಬೆಂಕಿ; ರೂಪ: ಆಕಾರ; ಆಸುರ: ಭಯಂಕರ; ತಮ: ಅಂಧಕಾರ; ರವಿ: ಸೂರ್ಯ; ಶತ: ನೂರು; ಆಸರು: ದಣಿವು, ಬಳಲಿಕೆ; ಬಿಸಿಲು: ಶಾಕ; ಮಾಯೆ: ಇಂದ್ರಜಾಲ; ಅಭ್ಯಾಸ: ರೂಢಿ

ಪದವಿಂಗಡಣೆ:
ಬೀಸಿದರು +ಬಿರುಗಾಳಿಯಾಗಿ +ಮ
ಹಾ +ಸಮುದ್ರದ +ನೂಕು +ತೆರೆಯಲಿ
ಬೇಸರಿಸಿದರು +ಹುರಿದರ್+ಅವನಿಯನ್+ಅಗ್ನಿ +ರೂಪದಲಿ
ಆಸುರದ +ತಮವಾಗಿ +ರವಿಶತದ್
ಆಸರಿನ+ ಬಿಸಿಲಾಗಿ +ಮಾಯಾ
ಭ್ಯಾಸಿಗಳು+ ಮೋಹಿಸಿದರ್+ಅದನೇವಣ್ಣಿಸುವೆನೆಂದ

ಅಚ್ಚರಿ:
(೧) ಕಾಲಕೇಯರ ಯುದ್ಧದ ಪರಿ – ಬೀಸಿದರು ಬಿರುಗಾಳಿಯಾಗಿ ಮಹಾ ಸಮುದ್ರದ ನೂಕು ತೆರೆಯಲಿ ಬೇಸರಿಸಿದರು ಹುರಿದರವನಿಯನಗ್ನಿ ರೂಪದಲಿ

ಪದ್ಯ ೨೨: ಬಿರುಗಾಳಿಯ ಚಿತ್ರಣ ಹೇಗಿತ್ತು?

ಮರಮರನ ತಕ್ಕೈಸಿದವು ಕುಲ
ಗಿರಿಯ ಗಿರಿ ಮುಂಡಾಡಿದವು ತೆರೆ
ತೆರೆಗಳಲಿ ತೆರೆ ತಿವಿದಾಡಿದವು ಸಾಗರದ ಸಾಗರದ
ಧರಣಿ ಕದಡಲು ಸವಡಿಯಡಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ (ಅರಣ್ಯ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮರಗಳು ಒಂದನ್ನೊಂದು ಅಪ್ಪಿದವು. ಕುಲಗಿರಿಗಳನ್ನು ಗಿರಿಗಳು ಮುಂಡಾಡಿದವು ಸಾಗರಗಳ ತೆರೆಗಳು ಇನ್ನೊಂದು ಸಾಗರದ ತೆರೆಗಳಿಗೆ ಅಪ್ಪಳಿಸಿದವು. ಭೂಮಿ ಕದಡಿತು. ಜೋಡಿಸಿದ ಲೋಕಗಳ ಅಡಕಿಲು ಜಾರಿ ಬೀಳದಿದ್ದೀತೆ. ಲೋಕವನ್ನು ನುಂಗಲು ವಾಯುವಿಗೆ ಆಹ್ವಾನ ಕೊಡಿರೆಂದು ಹೇಳುವಂತೆ ಬಿರುಗಾಳಿ ಬಿರುಸಿನಿಂದ ಬೀಸಿತು.

ಅರ್ಥ:
ಮರ: ತರು, ವೃಕ್ಷ; ತಕ್ಕೈಸು: ಅಪ್ಪು; ಗಿರಿ: ಬೆಟ್ಟ; ಮುಂಡಾಡು: ಮುದ್ದಾಡು, ಪ್ರೀತಿಸು; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ತಿವಿ: ಹೊಡೆತ, ಗುದ್ದು; ಸಾಗರ: ಸಮುದ್ರ; ಧರಣಿ: ಭೂಮಿ; ಕದಡು: ಕಲಕು; ಸವಡು: ಪುರಸತ್ತು; ಜರಿ: ನಿಂದಿಸು, ತಿರಸ್ಕರಿಸು; ಜಗ: ಜಗತ್ತು; ಬೋನ:ಅನ್ನ, ಆಹಾರ; ಹರಿ: ಕಡಿ, ಕತ್ತರಿಸು; ಬೀಸು: ಒಗೆ, ಎಸೆ, ಬಿಸಾಡು; ಬಿರುಗಾಳಿ: ಬಿರುಸಿನಿಂದ ಬೀಸುವ ಗಾಳಿ; ಬಿರುಸು: ಒರಟು, ಕಠಿಣ;

ಪದವಿಂಗಡಣೆ:
ಮರಮರನ +ತಕ್ಕೈಸಿದವು +ಕುಲ
ಗಿರಿಯ +ಗಿರಿ+ ಮುಂಡಾಡಿದವು +ತೆರೆ
ತೆರೆಗಳಲಿ +ತೆರೆ+ ತಿವಿದಾಡಿದವು +ಸಾಗರದ +ಸಾಗರದ
ಧರಣಿ+ ಕದಡಲು +ಸವಡಿ+ಅಡಕಿಲು
ಜರಿಯದಿಹುದೇ +ಜಗದ +ಬೋನಕೆ
ಹರಿಗೆ +ಹೇಳೆನೆ +ಬೀಸಿದುದು +ಬಿರುಗಾಳಿ +ಬಿರುಸಿನಲಿ

ಅಚ್ಚರಿ:
(೧) ಬಿ ಕಾರದ ತ್ರಿವಳಿ ಪದ – ಬೀಸಿದುದು ಬಿರುಗಾಳಿ ಬಿರುಸಿನಲಿ
(೨) ಜೋಡಿ ಪದಗಳ ಬಳಕೆ – ಮರಮರ, ಗಿರಿಯ ಗಿರಿ, ತೆರೆ ತೆರೆ, ಸಾಗರದ ಸಾಗರದ

ಪದ್ಯ ೪೧: ಹಸ್ತಿನಾಪುರ ಮತ್ತಾವ ಅಪಶಕುನಗಳನ್ನು ಕಂಡಿತು?

ಉಗುಳಿದವು ಕುಳುಗಿಡಿಗಳನು ಕೈ
ದುಗಳು ವಾರುವ ಪಟ್ಟದಾನೆಗ
ಳೊಗುಮಿಗೆಯ ಕಂಬನಿಗಳಭ್ರದಿ ಧೂಮಕೇತುಗಳು
ನೆಗಳಿದವು ಬಿರುಗಾಳಿ ಗಿರಿಗಳ
ಮಗುಚಿ ಮುರಿದವು ದೇವತಾಭವ
ನಗಳ ಶಿಖರವನಂತವದ್ಭುತವಾಯ್ತು ನಿಮಿಷದಲಿ (ಸಭಾ ಪರ್ವ, ೧೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಹಸ್ತಿನಾಪುರದಲ್ಲಿ ಉತ್ಪಾತಗಳು, ಅಪಶಕುನಗಳು ಕಾಣಿಸಿಕೊಂಡವು. ಆಯುಧಗಳ ಚೂಪಾದ ಅಲಗುಗಳು ಕಿಡಿಗಳನ್ನುಗುಳಿದವು. ಪಟ್ಟದಾನೆ ಕುದುರೆಗಳು ಕಂಬನಿಗೆರೆದವು. ಆಕಾಶದಲ್ಲಿ ಧೂಮಕೇತುಗಳು ಕಾಣಿಸಿಕೊಂಡವು. ಬಿರುಗಾಳಿಯು ಬೆಟ್ಟಗಳನ್ನು ತಿರುವಿಹಾಕುವಂತೆ ಬೀಸಲು, ಅನೇಕ ದೇವಸ್ಥಾನಗಳ ಗೋಪುರಗಳು ಮುರಿದು ಬಿದ್ದವು.

ಅರ್ಥ:
ಉಗುಳು: ಹೊರಹಾಕು; ಕುಳುಗಿಡಿ: ತೀಕ್ಷ್ಣವಾದ ಕಿಡಿ; ಕೈದು: ಆಯುಧ, ಶಸ್ತ್ರ; ವಾರುವ: ಕುದುರೆ, ಅಶ್ವ; ಪಟ್ಟ: ಹಣೆಗಟ್ಟು; ಆನೆ: ಗಜ, ಕರಿ; ಒಗು: ಚೆಲ್ಲು, ಸುರಿ; ಕಂಬನಿ: ಕಣ್ಣಿರು; ಅಭ್ರ: ಆಗಸ; ಧೂಮಕೇತು: ಉಲ್ಕೆ, ಅಗ್ನಿ; ನೆಗಳು: ಕೈಗೊಳ್ಳು; ಬಿರುಗಾಳಿ: ರಭಸವಾದ ವಾಯು; ಗಿರಿ: ಬೆಟ್ಟ; ಮಗುಚಿ: ಉರುಳು; ಮುರಿ: ಸೀಳು; ದೇವತಾಭವನ: ದೇವಸ್ಥಾನ, ಗುಡಿ; ಶಿಖರ: ಗೋಪುರ; ಅದ್ಭುತ: ವಿಚಿತ್ರ, ವಿಸ್ಮಯ; ನಿಮಿಷ: ಕ್ಷಣ;

ಪದವಿಂಗಡಣೆ:
ಉಗುಳಿದವು +ಕುಳುಗಿಡಿಗಳನು+ ಕೈ
ದುಗಳು+ ವಾರುವ+ ಪಟ್ಟದಾನೆಗ
ಳೊಗುಮಿಗೆಯ ಕಂಬನಿಗಳ್+ಅಭ್ರದಿ +ಧೂಮಕೇತುಗಳು
ನೆಗಳಿದವು +ಬಿರುಗಾಳಿ+ ಗಿರಿಗಳ
ಮಗುಚಿ+ ಮುರಿದವು +ದೇವತಾಭವ
ನಗಳ +ಶಿಖರವ್+ಅನಂತವ್+ಅದ್ಭುತವಾಯ್ತು +ನಿಮಿಷದಲಿ

ಅಚ್ಚರಿ:
(೧) ಅಪಶಕುನಗಳು – ವಾರುವ ಪಟ್ಟದಾನೆಗಳೊಗುಮಿಗೆಯ ಕಂಬನಿಗಳ; ಅಭ್ರದಿ ಧೂಮಕೇತುಗಳು; ನೆಗಳಿದವು ಬಿರುಗಾಳಿ; ಗಿರಿಗಳ ಮಗುಚಿ ಮುರಿದವು; ದೇವತಾಭವ
ನಗಳ ಶಿಖರವನಂತವದ್ಭುತವಾಯ್ತು