ಪದ್ಯ ೪೩: ಮಲ್ಲಯುದ್ಧದ ಯಾವ ವರಸೆಗಳನ್ನು ಇಬ್ಬರೂ ಪ್ರದರ್ಶಿಸಿದರು?

ತೆಗೆದು ಗಳಹತ್ತದಲಿ ಕೊರಳನು
ಬಿಗಿಯೆ ಬಿಡಿಸುವ ತೋರಹತ್ತದ
ಹೊಗುತೆಯನು ವಂಚಿಸುವ ತಳಹತ್ತದಲಿ ತವಕಿಸುವ
ಲಗಡಿಯಲಿ ಲಟಕಟಿಸುವಂತರ
ಲಗಡಿಯಲಿ ಲಾಲಿಸುವ ಡೊಕ್ಕರ
ಣೆಗಳ ಬಿಗುಹಿನ ಬಿಡೆಯ ಬಿನ್ನಾಣದಲಿ ಹೆಣಗಿದರು (ಕರ್ಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಹಸ್ತಗಳಿಂದ ಕತ್ತುಗಳನ್ನು ಹಿಡಿದುದನ್ನು ಬಿಡಿಸಿಕೊಳ್ಳುವ, ನೇರವಾಗಿ ತೋಳಿನಿಂದ ತಿವಿದುದನ್ನು ತಪ್ಪಿಸುವ, ಕೈಯನ್ನು ಕೆಳಗಿಳಿಸಿ ಕಾಲುಹಿಡಿಯಲು ತವಕಿಸುವ, ಲಗಡಿಯನ್ನುಪಯೋಗಿಸಿ ಹಿಡಿಯಲು ಆತುರಪಡುವ, ಅಂತರ ಲಗಡಿಯಿಂದ ಲಾಲಿಸುವ, ಡೊಕ್ಕರಣೆಗಳ ಬಿಗಿಯನ್ನು ಬಿಗಿಯಲೆತ್ನಿಸುವ ಬಿನ್ನಾಣಗಳನ್ನು ಇಬ್ಬರೂ ತೋರಿಸಿದರು.

ಅರ್ಥ:
ತೆಗೆ: ಹೊರಹಾಕು; ಗಳಹತ್ತ: ಮಲ್ಲಯುದ್ಧದ ಪಟ್ಟು; ಕೊರಳು: ಕತ್ತು; ಬಿಗಿ: ಬಂಧಿಸು; ಬಿಡಿಸು: ಕಳಚು, ಸಡಿಲಿಸು; ತೋರಹತ್ತ: ದಪ್ಪನಾದ ಕೈಯುಳ್ಳವನು, ರಣಧೀರ; ಹೊಗು: ಪ್ರವೇಶಿಸು; ವಂಚಿಸು: ಮೋಸ; ತಳ: ಕೆಳಭಾಗ; ತವಕ: ಕಾತುರ, ಕುತೂಹಲ; ಲಗಡಿ: ಕುಸ್ತಿಯ ಒಂದು ವರಸೆ; ಲಟಕಟಿಸು: ಉದ್ರೇಕಗೊಳ್ಳು, ಚಕಿತನಾಗು; ಲಾಲಿಸು: ಆರೈಕೆ ಮಾಡು;
ಡೊಕ್ಕರ: ಗುದ್ದು; ಬಿಗುಹು: ಗಟ್ಟಿ, ಬಂಧಿಸು; ಬಿಡೆಯ: ದಾಕ್ಷಿಣ್ಯ, ಸಂಕೋಚ; ಬಿನ್ನಾಣ: ಸೊಬಗು; ಹೆಣಗು: ಹೋರಾಡು, ಕಾಳಗ ಮಾಡು

ಪದವಿಂಗಡಣೆ:
ತೆಗೆದು +ಗಳಹತ್ತದಲಿ +ಕೊರಳನು
ಬಿಗಿಯೆ +ಬಿಡಿಸುವ+ ತೋರಹತ್ತದ
ಹೊಗುತೆಯನು +ವಂಚಿಸುವ +ತಳಹತ್ತದಲಿ+ ತವಕಿಸುವ
ಲಗಡಿಯಲಿ +ಲಟಕಟಿಸುವ್+ಅಂತರ
ಲಗಡಿಯಲಿ +ಲಾಲಿಸುವ+ ಡೊಕ್ಕರ
ಣೆಗಳ +ಬಿಗುಹಿನ+ ಬಿಡೆಯ +ಬಿನ್ನಾಣದಲಿ+ ಹೆಣಗಿದರು

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಿಗುಹಿನ ಬಿಡೆಯ ಬಿನ್ನಾಣದಲಿ
(೨) ಲ ಕಾರದ ಜೋಡಿ ಪದ – ಲಗಡಿಯಲಿ ಲಟಕಟಿಸುವ, ಲಗಡಿಯಲಿ ಲಾಲಿಸುವ

ಪದ್ಯ ೪೦: ದುಶ್ಯಾಸನನು ಭೀಮನಿಗೆ ಮಲ್ಲಯುದ್ಧದ ಬಗ್ಗೆ ಏನು ಹೇಳಿದ?

ಏಸನಗ್ಗಿಸಿಕೊಂಬೆ ನಿನಗಿ
ನ್ನೈಸು ಕೈದುಗಳಲ್ಲಿ ಕೃತವ
ಭ್ಯಾಸವಾ ಕೈದುಗಳ ಬಾಯಿಗೆ ನಿನ್ನ ಬೀರುವೆನು
ಏಸು ಬೇಹುದು ಮಲ್ಲತನ ನಿನ
ಗೈಸು ಬಿನ್ನಾಣದಲಿ ನಿನ್ನಯ
ಸೀಸವಾಳವ ಹೊಯ್ವೆನೆಂದನು ನಿನ್ನ ಮಗ ನಗುತ (ಕರ್ಣ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಮನ ಮಲ್ಲಯುದ್ಧದ ಪ್ರಸ್ತಾಪವನ್ನು ದುಶ್ಯಾಸನು ನಗುತ್ತಾ, ಎಲೈ ಭೀಮ ನಿನಗೆ ಎಷ್ಟು ಆಯುಧಗಳ ಅಭ್ಯಾಸವಿದೆಯೋ ಅಷ್ಟರಲ್ಲೂ ಕಾದು ನಿನ್ನ ಬಾಯಿಗೆ ಬೀಗ ಹಾಕುತ್ತೇನೆ. ಮಲ್ಲತನ ನಿನಗೆಷ್ಟು ಬೇಕೋ ಅಷ್ಟರಿಂದಲೂ ನಿನ್ನ ಕತ್ತಿನ ನಾಳವನ್ನು ಹೊಯ್ಯುತ್ತೇನೆ ಎಂದು ನಗುತ್ತ ನಿನ್ನ ಮಗ ದುಶ್ಯಾಸನು ನುಡಿದನೆಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಏಸು: ಎಷ್ಟು; ಅಗ್ಗಿಸು: ನಾಶಮಾಡು, ಅಡಗಿಸಿಕೊಳ್ಳು; ಕೈದು: ಆಯುಧ; ಕೃತ: ಮಾಡಿರುವ; ಅಭ್ಯಾಸ: ವ್ಯಾಸಂಗ; ಬಾಯಿ: ಮುಖದ ಅಂಗ; ಬೀರು: ಒಗೆ, ಎಸೆ, ತೂರು; ಬೇಹುದು: ಬೇಕು; ಮಲ್ಲತನ: ಮಲ್ಲಯುದ್ಧ; ಬಿನ್ನಾಣ: ಕೌಶಲ್ಯ, ನೈಪುಣ್ಯ; ಸೀಸ: ತಲೆ, ಶಿರ; ವಾಳ: ನಾಳ; ಹೊಯ್ವೆ: ಹೊರತೆಗೆ; ನಗು: ಸಂತಸ; ಐಸು: ಅಷ್ಟು;

ಪದವಿಂಗಡಣೆ:
ಏಸನ್+ಅಗ್ಗಿಸಿಕೊಂಬೆ +ನಿನಗಿನ್
ಐಸು+ ಕೈದುಗಳಲ್ಲಿ +ಕೃತವ್
ಅಭ್ಯಾಸವ್+ಆ+ ಕೈದುಗಳ +ಬಾಯಿಗೆ +ನಿನ್ನ +ಬೀರುವೆನು
ಏಸು +ಬೇಹುದು +ಮಲ್ಲತನ +ನಿನಗ್
ಐಸು +ಬಿನ್ನಾಣದಲಿ +ನಿನ್ನಯ
ಸೀಸವಾಳವ +ಹೊಯ್ವೆನೆಂದನು +ನಿನ್ನ +ಮಗ +ನಗುತ

ಅಚ್ಚರಿ:
(೧) ಏಸು, ಐಸು – ಪ್ರಾಸ ಪದಗಳ ಬಳಕೆ
(೨) ದುಶ್ಯಾಸನನ ಧೈರ್ಯದ ಪದಗಳು – ನಿನ್ನಯ ಸೀಸವಾಳವ ಹೊಯ್ವೆನ್

ಪದ್ಯ ೩೨: ಮಯ ರಚಿಸಿದ ಅಮೃತದ ಸರೋವರವನ್ನು ಹೇಗೆ ಬತ್ತಿಸಲಾಯಿತು?

ಮಯನ ಬಿನ್ನಾಣವನು ದೇವ
ತ್ರಯವರಿದುದಿದು ತೀರಲಸುರರ
ಲಯವೆನುತ ಹರಿ ಧೇನುವಬುಜಾಸನನು ಕರುವಾಗಿ
ಭಯವಿಹೀನರು ಹೊಕ್ಕರಾ ಬಾ
ವಿಯನು ಬತ್ತಿಸಿ ಬಳಿಕ ದೈತ್ಯರ
ಜಯವ ಮುರಿದರು ಮೋಹನದ ಬೌದ್ಧಾವತಾರದಲಿ (ಕರ್ಣ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮಯನ ಉಪಾಯವನ್ನು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು ತಿಳಿದುಕೊಂಡರು. ಇದನ್ನು ತಪ್ಪಿಸಿದರೆ ರಾಕ್ಷಸರು ನಾಶವಾದ ಹಾಗೆ ಎಂದು ತಿಳಿದು ವಿಷ್ಣುವು ಗೋವಾಗಿ ಮತ್ತು ಬ್ರಹ್ಮನು ಕರುವಾಗಿ ಬಂದು ಬಾವಿಯಲ್ಲಿಳಿದು ಅಮೃತವನ್ನೆಲ್ಲಾ ಕುಡಿದರು. ಬಳಿಕ ಮೋಹಕವಾದ ಬೌದ್ಧಾವತಾರದಿಂದ ರಾಕ್ಷಸರ ಶಕ್ತಿಯನ್ನು ನಾಶಪದಿಸಿದರು.

ಅರ್ಥ:
ಬಿನ್ನಾಣ:ವಿಶೇಷವಾದ ಜ್ಞಾನ, ಕೌಶಲ್ಯ; ದೇವ: ಭಗವಂತ; ದೇವತ್ರಯ: ತ್ರಿಮೂರ್ತಿ (ಬ್ರಹ್ಮ, ವಿಷ್ಣು, ಮಹೇಶ್ವರ); ಅರಿ: ತಿಳಿ; ತೀರದು: ಮುಗಿಯದು; ಅಸುರ: ದಾನವ; ಲಯ: ನಾಶ; ಹರಿ: ವಿಷ್ಣು; ಧೇನು: ಹಸು, ಕಾಮಧೇನು; ಅಬುಜಾಸನ: ಬ್ರಹ್ಮ; ಕರು: ಹಸುವಿನ ಮರಿ; ಭಯ: ಅಂಜಿಕೆ, ಹೆದರಿಕೆ; ವಿಹೀನ: ಇಲ್ಲದ; ಹೊಕ್ಕರು: ಸೇರಿದರು; ಬಾವಿ: ನೀರಿನ ಕೂಪ; ಬತ್ತಿಸು: ಬರಡು ಮಾಡು; ದೈತ್ಯ: ರಾಕ್ಷಸ; ಜಯ: ಗೆಲುವು; ಮುರಿ: ಹಾಳುಮಾಡು, ಸೀಳು; ಮೋಹನ: ಸೆಳೆತ, ಆಕರ್ಷಣೆ, ಮನೋಹರ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು;

ಪದವಿಂಗಡಣೆ:
ಮಯನ +ಬಿನ್ನಾಣವನು +ದೇವ
ತ್ರಯವ್+ಅರಿದುದ್+ಇದು +ತೀರಲ್+ಅಸುರರ
ಲಯವೆನುತ+ ಹರಿ +ಧೇನುವ್+ಅಬುಜಾಸನನು +ಕರುವಾಗಿ
ಭಯವಿಹೀನರು+ ಹೊಕ್ಕರ್+ಆ+ ಬಾ
ವಿಯನು +ಬತ್ತಿಸಿ +ಬಳಿಕ+ ದೈತ್ಯರ
ಜಯವ +ಮುರಿದರು+ ಮೋಹನದ +ಬೌದ್ಧಾವತಾರದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಾವಿಯನು ಬತ್ತಿಸಿ ಬಳಿಕ;
(೨) ಬ್ರಹ್ಮನನ್ನು ಅಬುಜಾಸನ ಎಂದು ಕರೆದಿರುವುದು

ಪದ್ಯ ೯೭: ಯಾರು ಮಲ್ಲನೆನಿಸಿಕೊಳ್ಳುವನು?

ಗಾಯದಲಿ ಮೇಣ್ ಚೊಕ್ಕೆಯದಲಡು
ಪಾಯಿಗಳಲುಪ ಕಾಯದೊಳಗೆ ನ
ವಾಯಿಗಳ ಬಿನ್ನಾಣದಲಿ ಬಳಿಸಂದು ಬೇಸರದೆ
ಸ್ಥಾಯಿಯಲಿ ಸಂಚಾರದಲಿ ಸಮ
ಗೈಯೆನಿಸಿ ನಾನಾ ವಿನೋದದ
ದಾಯವರಿವವನವನೆ ಮಲ್ಲನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೭ ಪದ್ಯ)

ತಾತ್ಪರ್ಯ:
ಪೆಟ್ಟು ವರಸೆ ಮತ್ತು ಮರುವರಸೆಗಳಲ್ಲಿ ದೇಹವನ್ನು ಹಿಡಿದು ಹೊಸ ರೀತಿಯ ಪಟ್ಟುಗಳನ್ನು ಹಾಕಿ ಬೇಸರವಿಲ್ಲದೆ ನೆಲಹಿಡಿದೋ, ಹಿಂದು ಮುಂದೆ ಓಡಾಡಿಯೋ ಹಲವು ಚಮತ್ಕಾರಗಳ ವಿನೋದವನ್ನೂ, ಯಾವುದಕ್ಕೆ ಇನ್ನಾವುದು ಎದುರು ಎಂಬ ಲೆಕ್ಕಾಚಾರವನ್ನೂ ಬಲ್ಲವನು ಮಲ್ಲನೆನಿಸಿಕೊಳ್ಳುತ್ತಾನೆ ಎಂದು ವಿದುರ ಹೇಳಿದನು.

ಅರ್ಥ:
ಗಾಯ:ಪೆಟ್ಟು; ಮೇಣ್: ಅಥವ; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಕಾಯ: ದೇಹ; ನವಾಯಿ:ಹೊಸತನ, ಚೆಲುವು; ಬಿನ್ನಾಣ: ವಿಶೇಷವಾದ ಜ್ಞಾನ, ಕೌಶಲ್ಯ; ಬಳಿ: ಹತ್ತಿರ; ಸಂದು: ಮೂಲೆ, ಕೋನ; ಬೇಸರ: ಆಸಕ್ತಿಯಿಲ್ಲದಿರುವಿಕೆ, ಬೇಜಾರು; ಸ್ಥಾಯಿ: ಸ್ಥಿರವಾದ, ನೆಲೆಗೊಂಡ; ಸಂಚಾರ: ಚಲನೆ, ಅಡ್ಡಾಡುವುದು; ಸಮಗೈ: ಒಂದೆ ಸಮನಾದ ಶಕ್ತಿ, ಸಮಾನತೆ; ನಾನಾ: ಹಲವಾರು; ವಿನೋದ: ಹಾಸ್ಯ, ತಮಾಷೆ; ದಾಯ: ಸಮಯ, ಅವಕಾಶ, ಉಪಾಯ; ಅರಿ: ತಿಳಿ; ಮಲ್ಲ: ಜಟ್ಟಿ; ರಾಯ: ರಾಜ;

ಪದವಿಂಗಡಣೆ:
ಗಾಯದಲಿ +ಮೇಣ್ +ಚೊಕ್ಕೆಯದಲ್+ಅಡು
ಪಾಯಿಗಳಲುಪ +ಕಾಯದೊಳಗೆ +ನ
ವಾಯಿಗಳ +ಬಿನ್ನಾಣದಲಿ +ಬಳಿಸಂದು +ಬೇಸರದೆ
ಸ್ಥಾಯಿಯಲಿ +ಸಂಚಾರದಲಿ +ಸಮ
ಗೈಯೆನಿಸಿ +ನಾನಾ +ವಿನೋದದ
ದಾಯವರಿವವನ್+ಅವನೆ +ಮಲ್ಲನು +ರಾಯ +ಕೇಳೆಂದ

ಅಚ್ಚರಿ:
(೧) ‘ಬ’ಕಾರದ ತ್ರಿವಳಿ ಪದ – ಬಿನ್ನಾಣದಲಿ ಬಳಿಸಂದು ಬೇಸರದೆ
(೨) ‘ಸ’ಕಾರದ ತ್ರಿವಳಿ ಪದ – ಸ್ಥಾಯಿಯಲಿ ಸಂಚಾರದಲಿ ಸಮಗೈಯೆನಿಸಿ
(೩) ಪಾಯಿ, ವಾಯಿ, ಸ್ಥಾಯಿ – ಪ್ರಾಸ ಪದಗಳು ೨,೩,೪ ಸಾಲಿನ ಮೊದಲ ಪದ

ಪದ್ಯ ೬೯: ಅರಗಿನ ಮನೆಯನ್ನು ಪುರೋಚನನು ಹೇಗೆ ನಿರ್ಮಿಸಿದನು?

ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟಸ್ತಂಭವೇದಿಗಳ
ವಿರಚಿಸಿದ ನವಸೌಧ ಭದ್ರಾ
ಸ್ತರಣ ನಂದ್ಯಾವರ್ತದಲಿ ಪರಿ
ಪರಿಯ ಬಿನ್ನಾಣದೊಳಗರಗಿನ ಮನೆಯ ಮಾಡಿಸಿದ (ಆದಿ ಪರ್ವ, ೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ಮೇಣ (ಅರಗು)ದಲ್ಲಿ ಗೋಡೆಗಳನ್ನು, ಸಜ್ಜರಸ, ಬೆಲ್ಲಗಳ ಮಿಶ್ರಣದಲ್ಲಿ ಉಪ್ಪರಿಗೆಗಳು, ಬಾಗಿಲುಗಳನ್ನು, ಕಂಬಗಳು, ಕಟ್ಟೆಗಳನ್ನು ರಚಿಸಿದನು. ಭದ್ರಾಕಾರದಲ್ಲಿ ಹೂಗಳ ಆಕಾರದಲ್ಲಿ ಹಲವು ವಿಧವಾದ ಅಲಂಕಾರಗಳಿಂದ ಅರಮನೆಯನ್ನು ಕಟ್ಟಿಸಿದನು.

ಅರ್ಥ:
ಅರಗು: ಕರಗು, ಲಾಕ್ಷ; ಭಿತ್ತಿ: ಗೋಡೆ; ಸಜ್ಜರಸ: ಅರಗಿನ ಅಂಟು, ರಾಳ; ಗುಡ: ಬೆಲ್ಲ; ಮಿಶ್ರ: ಕಲಸಿರುವ; ನೆಲೆ: ನೆಲ; ಉಪ್ಪರಿಗೆ: ಮಹಡಿ; ಕವಾಟ: ಬಾಗಿಲು, ಕದ; ಸ್ತಂಭ: ಕಂಬ, ಆಧಾರ; ವೇದಿ:ವೇದಿಕೆ; ರಚಿಸು: ನಿರ್ಮಾಣ; ನವ: ಹೊಸ; ಸೌಧ: ಅರಮನೆ; ಭದ್ರ: ದೃಢ, ಸುರಕ್ಷಿತ; ಸ್ತ್ರರ: ವಿಭಾಗ; ನಂದ್ಯಾವರ್ತ: ವಿಶಿಷ್ಟಾಕೃತಿಯ ಕಟ್ಟಡ; ಪರಿ: ವಿಧ; ಬಿನ್ನಾಣ: ಅಂದ, ಸೊಬಗು; ಮನೆ: ಆಲಯ;

ಪದವಿಂಗಡನೆ:
ಅರಗಿನಲಿ +ಭಿತ್ತಿಗಳ+ ನವ+ ಸ
ಜ್ಜರಸ+ ಗುಡ+ ಮಿಶ್ರದಲಿ+ ನೆಲೆಯ್+
ಉಪ್ಪರಿಗೆಗಳನ್+ಅವರಲಿ+ ಕವಾಟ+ಸ್ತಂಭ+ವೇದಿಗಳ
ವಿರಚಿಸಿದ+ ನವ+ಸೌಧ +ಭದ್ರಾ
ಸ್ತರಣ+ ನಂದ್ಯಾವರ್ತದಲಿ+ ಪರಿ
ಪರಿಯ +ಬಿನ್ನಾಣದೊಳಗ್+ಅರಗಿನ+ ಮನೆಯ+ ಮಾಡಿಸಿದ

ಅಚ್ಚರಿ:
(೧) ಅರಗು: ೧, ೬ ಸಾಲಿನಲ್ಲಿ ಕಾಣುವ ಪದ
(೨) ನವ: ೧, ೪ ಸಾಲಿನಲ್ಲಿ ಕಾಣುವ ಪದ
(೩) ಮನೆಯಲ್ಲಿರುವ ವಸ್ತು: ಭಿತ್ತಿ, ನೆಲೆ, ಉಪ್ಪರಿಗೆ, ಕವಾಟ, ಸ್ತಂಭ, ವೇದಿ;
(೪) ಸೌಧ, ಮನೆ – ಸಮಾನಾರ್ಥಕ ಪದ