ಪದ್ಯ ೨೧: ಎರಡೂ ಸೈನ್ಯದ ಯುದ್ಧವು ಹೇಗೆ ನಡೆಯಿತು?

ಕದಡಿದವು ಬಲವೆರಡು ಕಲ್ಪದೊ
ಳುದಧಿಯುದಧಿಯನೊದೆವವೊಲು ತಾ
ಗಿದರು ನೀಗಿದರಸುವ ನಸೆಮಸೆಗಕ್ಕುಡಿಸಿದವರು
ಬಿದಿರಿದರು ಕೊಯ್ದಲೆಗಳನು ಕಾ
ರಿದರು ಕರುಳನು ಕುಸುರಿ ಖಂಡದ
ಕದಳಿ ಮೈಗಳ ಚೂಣಿ ಮಲಗಿತು ತಾರು ಥಟ್ಟಿನಲಿ (ದ್ರೋಣ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪ್ರಳಯಕಾಲದಲ್ಲಿ ಸಮುದ್ರವು ಸಮುದ್ರವನ್ನು ಸೇರುವಂತೆ ಎರಡೂ ಸೈನ್ಯಗಳು ಒಂದನ್ನೊಂದನ್ನು ತಾಗಿದವು. ವೀರರು ಕೈಮಾಡಿದರು. ಪ್ರಾಣಗಳನ್ನು ಕಳೆದುಕೊಂಡರು. ಅಲ್ಪಸ್ವಲ್ಪ ಗಾಯಗಳಿಂದ ಬಲಹೀನರಾದವರು ತಲೆ ಕೊಡವಿ ಕಂಪಿಸಿದರು. ತಲೆಕೊಯ್ದು ಸತ್ತರು, ಕರುಳನ್ನು ಹೊರಹಾಕಿದರು. ಬಾಳೆಯಗಿಡದಂತೆ ಮೈಯ ಮಾಂಸ ಖಂಡಗಳು ಕೊಚ್ಚಿದಂತಾಗಲು ಗುಂಪಾಗಿ ನೆಲಕ್ಕೆ ಬಿದ್ದವು.

ಅರ್ಥ:
ಕದಡು: ಕಲಕು; ಬಲ: ಶಕ್ತಿ; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಉದಧಿ: ಸಾಗರ; ಒದೆ: ನೂಕು; ತಾಗು: ಮುಟ್ಟು; ನೀಗು: ನಿವಾರಿಸಿಕೊಳ್ಳು; ಅಸು: ಪ್ರಾಣ; ನಸೆಮಸೆ: ಕೈತೀಟೆಯ ಯುದ್ಧ; ಬಿದಿರು: ಕೆದರು, ಚೆದರು; ಕೊಯ್: ಸೀಳು; ತಲೆ: ಶಿರ; ಕಾರು: ಕೊಡವು; ಕರುಳು: ಪಚನಾಂಗ; ಕುಸುರಿ: ತುಂಡು; ಖಂಡ: ತುಂಡು, ಚೂರು; ಕದಳಿ: ಬಾಳೆಗಿಡ; ಮೈ: ತನು, ದೇಹ; ಚೂಣಿ: ಮೊದಲು; ಮಲಗು: ನಿದ್ರಿಸು; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು;

ಪದವಿಂಗಡಣೆ:
ಕದಡಿದವು +ಬಲವ್+ಎರಡು +ಕಲ್ಪದೊಳ್
ಉದಧಿ+ಉದಧಿಯನ್+ಒದೆವವೊಲು +ತಾ
ಗಿದರು +ನೀಗಿದರ್+ಅಸುವ +ನಸೆಮಸೆಗಕ್ಕುಡಿಸಿದವರು
ಬಿದಿರಿದರು +ಕೊಯ್+ತಲೆಗಳನು +ಕಾ
ರಿದರು +ಕರುಳನು +ಕುಸುರಿ +ಖಂಡದ
ಕದಳಿ +ಮೈಗಳ +ಚೂಣಿ +ಮಲಗಿತು +ತಾರು +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕದಡಿದವು ಬಲವೆರಡು ಕಲ್ಪದೊಳುದಧಿಯುದಧಿಯನೊದೆವವೊಲು

ಪದ್ಯ ೪೫: ಘಟೋತ್ಕಚನು ಧರ್ಮಜನ ಬಳಿ ಏನು ಹೇಳಿದನು?

ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ (ದ್ರೋಣ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ನನ್ನನ್ನು ಏಕೆ ಕರೆಸಿದಿರಿ? ಕೌರವ ಸೈನ್ಯವು ಇದಿರಾಯಿತೇ? ತಡಮಾಡದೆ ನನ್ನನ್ನು ಬಿಡು, ದೇವ ದಾನವರಲ್ಲಿ ನಿನ್ನ ಮಗನಿಗೆ ಸರಿಯಾದವರೇ ಇಲ್ಲವೆನ್ನುವಮ್ತೆ ನಾನು ಯುದ್ಧಮಾಡಬಲ್ಲೆ. ನೋಡು, ತಡವೇಕೆ, ಮೊದಲು ವೀಳೆಯವನ್ನು ನೀಡು ಎಂದು ತನ್ನ ಕತ್ತಿಯನ್ನು ಹೊರತೆಗೆದು ಝಳಪಿಸುತ್ತಾ, ವೀಳೆಯನ್ನು ತೆಗೆದುಕೊಳ್ಳಲು ತನ್ನ ಎಡಗೈಯನ್ನು ಒಡ್ಡಿದನು.

ಅರ್ಥ:
ಕರಸು: ಬರೆಮಾಡು; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು, ಎದುರಿಸು; ಬಿಡು: ತೊರೆ; ತಡ: ನಿಧಾನ; ವೀಳೆ: ತಾಂಬೂಲ; ಕಯ್ಯ್: ಹಸ್ತ; ಅರಳಿಚು: ಬಿರಿಯುವಂತೆ ಮಾಡು; ದಾನವ: ರಾಕ್ಷಸ; ಅಮರ: ದೇವತೆ; ಸೂನು: ಮಗ; ನಿಲಲು: ಎದುರು ನಿಲ್ಲು; ಬಲ್ಲೆ: ತಿಳಿ; ನೋಡು: ವೀಕ್ಷಿಸು; ಬಿದಿರು: ಕೊಡಹು, ಒದರು; ಖಂಡೆಯ: ಕತ್ತಿ;

ಪದವಿಂಗಡಣೆ:
ಏನು+ ಧರ್ಮಜ+ ಕರಸಿದೈ+ ಕುರು
ಸೇನೆ +ಮಲೆತುದೆ+ ಬಿಡು +ಬಿಡಾ+ ತಡ
ವೇನು +ತಾ +ವೀಳೆಯವನ್+ಎನುತ್+ಎಡಗಯ್ಯನ್+ಅರಳಿಚುತ
ದಾನವ+ಅಮರರೊಳಗೆ +ನಿನ್ನಯ
ಸೂನುವಿಗೆ +ಸರಿಯಿಲ್ಲೆನಿಸಿ+ ನಿಲಲ್
ಆನು +ಬಲ್ಲೆನು +ನೋಡೆನುತ +ಬಿದಿರಿದನು +ಖಂಡೆಯವ

ಅಚ್ಚರಿ:
(೧) ಘಟೋತ್ಕಚನ ಧೈರ್ಯದ ನುಡಿ – ದಾನವಾಮರರೊಳಗೆ ನಿನ್ನಯಸೂನುವಿಗೆ ಸರಿಯಿಲ್ಲೆನಿಸಿ ನಿಲಲಾನು ಬಲ್ಲೆನು