ಪದ್ಯ ೩: ಕೌರವನ ಸ್ತ್ರೀಯರ ಪರಿಸ್ಥಿತಿ ಹೇಗಿತ್ತು?

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ (ಅರಣ್ಯ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವರ ರಾಣೀವಾಸವನ್ನು ಗಾಳಿಯೇ ಕಾಣದು, ಎಂದ ಮೇಲೆ ಸೂರ್ಯಕಿರಣಗಳ ಸೋಂಕೆಲ್ಲಿ? ಅವರು ಓಡಾಡುವ ಕಿರುಬಾಗಿಲ ಬೀಗ, ಅವರ ಅಂಗರಕ್ಷಕರು, ಕಂಚುಕಿಗಳು ಎಲ್ಲಿ? ಬೀದಿಯ ಜನಜಾಲದ ನಡುವೆ ಕೌರವರ ಅರಸಿಯರು ತಲೆಗೆದರಿಕೊಂಡು ಅಳುತ್ತಾ ಬಂದರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ರವಿ: ಭಾನು; ಕಿರಣ: ಪ್ರಕಾಶ; ಬಾಲೆ: ಹೆಂಗಸು, ಸ್ತ್ರೀ; ಗೋಚರ: ತೋರು; ದಡ್ಡಿ: ಪಂಜರ; ಅಂಗರಕ್ಷೆ: ಕಾವಲುಗಾರ; ಕಂಚುಕಿ: ಅಂತಃಪುರದ ಅಧಿಕಾರಿ; ವ್ರಜ: ಗುಂಪು; ಮೇಳ: ಗುಂಪು; ಬೀದಿ: ಕೇರಿ; ಆಳು: ಸೇವಕ; ಮಂದಿ: ಜನ; ನಡುವೆ: ಮಧ್ಯೆ; ಭೂಪಾಲ: ರಾಜ; ಅರಸಿ: ರಾಣಿ; ಅಳು: ಆಕ್ರಂದನ; ಹರಿ: ಚಲಿಸು; ಬಿಟ್ಟ: ತೊರೆ; ಮಂಡೆ: ಶಿರ;

ಪದವಿಂಗಡಣೆ:
ಗಾಳಿ+ಅರಿಯದು +ರವಿಯ +ಕಿರಣಕೆ
ಬಾಲೆಯರು +ಗೋಚರವೆ+ ದಡ್ಡಿಯ
ಮೇಲುಬೀಯಗದ್+ಅಂಗರಕ್ಷೆಯ +ಕಂಚುಕಿ +ವ್ರಜದ
ಮೇಳವವದ್+ಏನಾಯ್ತೊ +ಬೀದಿಯಗ್
ಆಳುಮಂದಿಯ+ ನಡುವೆ +ಕುರು+ಭೂ
ಪಾಲನ್+ಅರಸಿಯರ್+ಅಳುತ +ಹರಿದರು +ಬಿಟ್ಟ+ಮಂಡೆಯಲಿ

ಅಚ್ಚರಿ:
(೧) ತಲೆಗೆದರಿಕೊಂಡು ಎಂದು ಹೇಳುವ ಪರಿ – ಬಿಟ್ಟಮಂಡೆಯಲಿ
(೨) ಅಂತಃಪುರದ ರಕ್ಷಣೆಯನ್ನು ವಿವರಿಸುವ ಪರಿ – ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ

ಪದ್ಯ ೨: ಪಾಳೆಯಲ್ಲಿ ಯಾವ ಸ್ಥಿತಿ ನಿರ್ಮಾಣಗೊಂಡಿತು?

ಕುದುರೆ ಹಾಯ್ದವು ಕಂಡ ಕಡೆಯಲಿ
ಮದಗಜಾವಳಿಯೋಡಿದವು ವರ
ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ
ಕದಡಿದುದು ಜನಜಲಧಿ ಝಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ (ಅರಣ್ಯ ಪರ್ವ, ೨೧ ಸಂಧಿ, ೨ ಪದ್ಯ)

ತಾತ್ಪರ್ಯ:
ಆನೆ ಕುದುರೆಗಳೂ ದಿಕ್ಕುಗೆಟ್ಟು ಓಡಿದವು. ಸ್ತ್ರೀಯರು ತಲೆ ಕೆದರಿಕೊಂಡು ಕೂಗುತ್ತಾ ಓಡಿದರು. ಪಾಳೆಯದ ಕೇರಿಗಳಲ್ಲಿದ್ದ ಜನರು ಬೆದರಿ ಗದ್ದಲ ಮಾಡಿದರು. ಕೌರವನಿಗೆ ಏನಾಯಿತು, ರಾಜನು ಎಲ್ಲಿ ಹೋಗಿದ್ದಾನೆ, ಹೇಗಿದ್ದಾನೆ ಎಂದು ವ್ಯಾಪಾರಿಗಳು ಬೀದಿಯ ಉದ್ದಗಲದಲ್ಲಿ ಓಡಾಡಿದರು.

ಅರ್ಥ:
ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಕಂಡಕಡೆ: ತೋರಿದ ದಿಕ್ಕಿಗೆ; ಮದ: ಮತ್ತು, ಅಮಲು; ಗಜಾವಳಿ: ಆನೆಗಳ ಗುಂಪು; ಓಡು: ಧಾವಿಸು; ಸುದತಿ: ಹೆಣ್ಣು; ಹರಿ: ಸೀಳು; ಮಂಡೆ: ತಲೆ; ಕದಡು: ಕಲಕಿದ ದ್ರವ; ಜಲಧಿ: ಸಾಗರ; ಝಾಡಿಸು: ಜೋರು; ಬೆದರು: ಹೆದರು, ಅಂಜಿಕೆ; ಕೇರಿ: ಬೀದಿ; ರಾಯ: ಒಡೆಯ; ಹದ: ಸ್ಥಿತಿ; ಹರಿ: ಪ್ರವಹಿಸು; ಹರದ: ವ್ಯಾಪಾರ; ಅಗಲ: ವಿಸ್ತಾರ;

ಪದವಿಂಗಡಣೆ:
ಕುದುರೆ +ಹಾಯ್ದವು +ಕಂಡ +ಕಡೆಯಲಿ
ಮದಗಜಾವಳಿ+ಓಡಿದವು +ವರ
ಸುದತಿಯರು +ಬಾಯ್ವಿಡುತ+ ಹರಿದರು+ ಬಿಟ್ಟ+ಮಂಡೆಯಲಿ
ಕದಡಿದುದು +ಜನಜಲಧಿ+ ಝಾಡಿಸಿ
ಬೆದರಿದವು +ಕೇರಿಗಳು +ರಾಯನ
ಹದನದೇನೇನ್+ಎನುತ +ಹರಿದರು +ಹರದರ್+ಅಗಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹದನದೇನೇನೆನುತ ಹರಿದರು ಹರದರಗಲದಲಿ
(೨) ತಲೆಗೆದರಿಕೊಂಡು ಎಂದು ಹೇಳಲು – ವರ ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ