ಪದ್ಯ ೨: ಸೂರ್ಯನು ಯಾವ ಯೋಚನೆಯಲ್ಲಿ ಹುಟ್ಟಿದನು?

ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರೆಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ (ಶಲ್ಯ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಷ್ಮನು ನೆಗ್ಗಿಹೋದ, ದ್ರೋಣನು ದೇವತೆಗಳೊಡನೆ ಸೇರಿದನು. ನನ್ನ ಮಗನಿಗೆ ನನ್ನ ಸಂಗತಿಯನ್ನೇ ಹೇಳಿ ದುರ್ಬಲಗೊಳಿಸಿದನು. ಇಂದಿನ ಮಹಾಸಮರದಲ್ಲಿ ಶಲ್ಯನನ್ನು ಕಳೆದುಕೊಳ್ಳುವ ರೀತಿಯನ್ನು ನೋಡುತ್ತೇನೆ ಎಂದುಕೊಂಡನೋ ಎಂಬಂತೆ, ಸೂರ್ಯನು ಹುಟ್ಟಿದನು.

ಅರ್ಥ:
ನೆಗ್ಗು: ಕುಗ್ಗು, ಕುಸಿ; ಗಾಂಗೇಯ: ಭೀಷ್ಮ; ಅಮರ: ದೇವ; ಒಗ್ಗು: ಸೇರು; ಕಲಿ: ಶೂರ; ಅಗ್ಗಳಿಕೆ: ಶ್ರೇಷ್ಠ; ಊಣೆ: ನ್ಯೂನತೆ, ಕುಂದು; ಬೆರೆಸು: ಸೇರಿಸು; ಬಿಂಬ: ಕಾಂತಿ; ಉಗ್ಗಡ: ಉತ್ಕಟತೆ, ಅತಿಶಯ; ರಣ: ಯುದ್ಧರಂಗ; ನಗ್ಗು: ಕುಗ್ಗು, ಕುಸಿ; ಎಗ್ಗು: ದಡ್ಡತನ; ನೋಡು: ವೀಕ್ಷಿಸು; ರವಿ: ಸೂರ್ಯ; ಅಡರು: ಹೊರಬಂದ, ಮೇಲಕ್ಕೇರು; ಅಂಬರ: ಆಗಸ;

ಪದವಿಂಗಡಣೆ:
ನೆಗ್ಗಿದನು +ಗಾಂಗೇಯನ್+ಅಮರರೊಳ್
ಒಗ್ಗಿದನು +ಕಲಿದ್ರೋಣನ್+ಎನ್ನವನ್
ಅಗ್ಗಳಿಕೆಗ್+ಊಣೆಯವ +ಬೆರೆಸಿದನ್+ಎನ್ನ +ಬಿಂಬದಲಿ
ಉಗ್ಗಡದ +ರಣವಿದಕೆ +ಶಲ್ಯನನ್
ಅಗ್ಗಿಸುವನ್+ಈ+ ಕೌರವೇಶ್ವರನ್
ಎಗ್ಗ +ನೋಡುವೆನ್+ಎಂಬವೊಲು +ರವಿ+ಅಡರ್ದನ್+ಅಂಬರವ

ಅಚ್ಚರಿ:
(೧) ಬೆಳಗಾಯಿತು ಎಂದು ಹೇಳಲು – ರವಿಯಡರ್ದನಂಬರವ ಪದಗುಚ್ಛದ ಬಳಕೆ

ಪದ್ಯ ೪೨: ಯಾವ ಬಗೆಯ ಅಪಶಕುನಗಳ ಕಾಣಿಸಿತು?

ಬಾರಿಸಿತು ದೆಸೆದೆಸೆಗಳಲಿ ಹಾ
ಹಾರವಾವಿರ್ಭಾವ ತೊಳಗಿರೆ
ತಾರಕೆಗಳಿನ ಬಿಂಬವನು ಝೋಂಪಿಸಿದನಾ ರಾಹು
ತೋರಣದಲುರಿ ತಳಿತು ರಾಜ
ದ್ವಾರ ಹೊಗೆದುದು ದೆಸೆಗಳಂಬರ
ಧಾರುಣಿಯೊಳುತ್ಪಾತ ಬಿಗಿದುದು ಮೊಗೆದುದದ್ಭುತವ (ಸಭಾ ಪರ್ವ, ೧೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಾಹಾಕಾರ, ದುಃಖದ ಮೊರೆ ಎಲ್ಲಾ ದೆಸೆಗಳಿಂದಲೂ ಮೊಳಗಿತು. ಆಕಾಶದಲ್ಲಿ ನಕ್ಷತ್ರಗಳು ಹಗಲಿನಲ್ಲೇ ಕಾಣಿಸಿದವು. ರಾಹುವು ಸೂರ್ಯನ ಬಿಂಬವನ್ನು ನುಂಗಿದನು. ಕೌರವನ ಅರಮನೆಯ ಮಹಾದ್ವಾರಕ್ಕೆ ಕಟ್ಟಿದ್ದ ತೋರಣಗಳಿಗೆ ಉರಿಹತ್ತಿ ಮಹಾದ್ವಾರದೆಲ್ಲೆಲ್ಲಾ ಹೊಗೆ ಮುಸುಕಿತು. ಭೂಮಿ, ಆಕಾಶ ಎಲ್ಲಾ ದಿಕ್ಕುಗಳಲ್ಲಿಯೂ ಉತ್ಪಾತಗಳು ಉಂಟಾಗಿ ಅದ್ಭುತವಾಗಿ ಕಾಣಿಸಿತು.

ಅರ್ಥ:
ಬಾರಿಸು: ಹೊಡೆ; ದೆಸೆ: ದಿಕ್ಕು; ಹಾಹಾ: ದುಃಖದ ಕೂಗು; ರವ: ಶಬ್ದ; ಆವಿರ್ಭಾವ: ಹುಟ್ಟು, ಕಾಣಿಸಿಕೊ; ತೊಳಗು: ಕಾಂತಿ, ಪ್ರಕಾಶ; ತಾರಕೆ: ನಕ್ಷತ್ರ; ಬಿಂಬ: ಪ್ರಭಾವ ವಲಯ; ಝೋಂಪಿಸು: ಭಯಗೊಳ್ಳು, ಬೆಚ್ಚಿಬೀಳು; ತೋರಣ: ಬಾಗಿಲು, ಬೀದಿಗಳಲ್ಲಿ ಕಟ್ಟುವ ತಳಿರು; ಉರಿ: ಬೆಂಕಿ; ತಳಿತು: ಹುಟ್ಟು, ಚಿಗುರು; ದ್ವಾರ: ಬಾಗಿಲು; ಹೊಗೆ: ಧೂಮ; ಅಂಬರ: ಆಗಸ; ಧಾರುಣಿ: ಭೂಮಿ; ಉತ್ಪಾತ: ಅಪಶಕುನ; ಬಿಗಿ: ಕಟ್ಟು, ಬಂಧಿಸು; ಮೊಗೆ: ಸೆರೆಹಿಡಿ, ಬಂಧಿಸು; ಅದ್ಭುತ: ಆಶ್ಚರ್ಯ; ಇನ: ಸೂರ್ಯ;

ಪದವಿಂಗಡಣೆ:
ಬಾರಿಸಿತು +ದೆಸೆದೆಸೆಗಳಲಿ+ ಹಾಹಾ
ರವ+ಆವಿರ್ಭಾವ +ತೊಳಗಿರೆ
ತಾರಕೆಗಳ್+ಇನ +ಬಿಂಬವನು +ಝೋಂಪಿಸಿದನ್+ಆ+ ರಾಹು
ತೋರಣದಲ್+ಉರಿ+ ತಳಿತು+ ರಾಜ
ದ್ವಾರ +ಹೊಗೆದುದು +ದೆಸೆಗಳ್+ಅಂಬರ
ಧಾರುಣಿಯೊಳ್+ಉತ್ಪಾತ +ಬಿಗಿದುದು +ಮೊಗೆದುದ್+ಅದ್ಭುತವ

ಅಚ್ಚರಿ:
(೧) ಗ್ರಹಣವಾಯಿತು ಎಂದು ಹೇಳಲು – ಇನ ಬಿಂಬವನು ಝೋಂಪಿಸಿದನಾ ರಾಹು
(೨) ಅಪಶಕುನಗಳು – ತೋರಣದಲುರಿ ತಳಿತು ರಾಜದ್ವಾರ ಹೊಗೆದುದು