ಪದ್ಯ ೨೫: ಪಟ್ಟಾಭಿಷೇಕದ ನಂತರ ಕೌರವನ ಸ್ಥಿತಿ ಹೇಗಿತ್ತು?

ಆದುದುತ್ಸವ ಕರ್ಣಮರಣದ
ಖೇದವಕ್ಕಿತು ಹಗೆಗೆ ಕಾಲ್ವೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೂಗಿಗೆ ಕದಪ ಹೊಯ್ದನು ನಿನ್ನ ಮಗನೆಂದ (ಶಲ್ಯ ಪರ್ವ, ೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಪಟ್ಟಾಭಿಷೇಕವಾಗಲು, ಕೌರವನಿಗೆ ಕರ್ಣಾವಸಾನದಿಮ್ದಾಗುವ ದುಃಖವು ಮಾಯವಾಯಿತು. ಶತ್ರುಗಳು ಬತ್ತಿಸಿ ಕಾಲುಹೊಳೆಯಾಗಿಸಿದ್ದ ವೀರರಸವು ಸಮುದ್ರವಾಯಿತು. ಹೆಮ್ಮೆ ಹಬ್ಬಿತು. ಆಶೆಯ ಬೀಜ ಮೊಳೆಯಿತು. ಮೂಗನ್ನು ಕಳೆದುಕೊಂಡಂತಾಗಿದ್ದ ನಾಚಿಕೆಯ ಕೆನ್ನೆಗೆ ಹೊಡೆದನು.

ಅರ್ಥ:
ಉತ್ಸವ: ಸಮಾರಂಭ; ಮರಣ: ಸಾವು; ಖೇದ: ದುಃಖ; ಹಗೆ: ವೈರ; ಹೊಳೆ: ನದಿ, ತೊರೆ; ವೀರ: ಶೂರ; ಅಬ್ಧಿ: ಸಾಗರ; ನೆಲೆ: ಸ್ಥಾನ; ತಪ್ಪು: ಸುಳ್ಳಾಗು; ನಿಮಿಷ: ಕ್ಷಣಮಾತ್ರ; ಬೀದಿ: ಮಾರ್ಗ; ಬಿಂಕ: ಸೊಕ್ಕು; ನನೆ: ಮೊಗ್ಗು; ಬೀಜ: ಧಾನ್ಯದ ಕಾಳು; ಲಜ್ಜೆ: ನಾಚಿಕೆ, ಸಿಗ್ಗು; ಮೂಗು: ನಾಸಿಕ; ಕದಪ: ಗಲ್ಲ; ಹೊಯ್ದು: ಹೊಡೆ; ಮಗ: ಸುತ;

ಪದವಿಂಗಡಣೆ:
ಆದುದ್+ಉತ್ಸವ +ಕರ್ಣ+ಮರಣದ
ಖೇದವಕ್ಕಿತು +ಹಗೆಗೆ +ಕಾಲ್ವೊಳೆ
ಯಾದ +ವೀರ+ರಸಾಬ್ಧಿ +ನೆಲೆ+ತಪ್ಪಿತ್ತು +ನಿಮಿಷದಲಿ
ಬೀದಿವರಿದುದು +ಬಿಂಕ +ನನೆಕೊನೆವ್
ಓದುದ್+ಆಶಾಬೀಜ +ಲಜ್ಜೆಯ
ಹೋದ +ಮೂಗಿಗೆ +ಕದಪ+ ಹೊಯ್ದನು +ನಿನ್ನ +ಮಗನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಕಾಲ್ವೊಳೆಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ

ಪದ್ಯ ೬: ಅಭಿಮನ್ಯುವಿನ ಯುದ್ಧವು ಯಾರನ್ನು ನಾಚಿಸಿತು?

ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿಪ ಕವಿ ಯಾರಿನ್ನು ಪಾರ್ಥ ಕುಮಾರನಾಹವವ (ದ್ರೋಣ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ರಥಗಳ ರಾಶಿಯನ್ನು ಕಂಡು ಮೇರುಪರ್ವತ ನಾಚಿತು, ಹಾರಿದ ತಲೆಗಳು ತುಂಬಿದುದರಿಂದ ಆಕಾಶ ನಾಚಿತು, ಹರಿದು ಕಡಲಾದ ರಕ್ತವು ಸಮುದ್ರದ ಬಿಂಕವನ್ನು ಬಿಡಿಸಿತು, ಅಬ್ಬಬ್ಬಾ ಶಿವ ಶಿವಾ ಅಭಿಮನ್ಯುವಿನ ಯುದ್ಧವನ್ನು ವರ್ಣಿಸುವ ಕರಿ ಯಾರು?

ಅರ್ಥ:
ಕೆಡೆ: ಬೀಳು, ಕುಸಿ; ರಥ: ಬಂಡಿ, ತೇರು; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಅಡಸು: ಬಿಗಿಯಾಗಿ ಒತ್ತು; ನಾಚಿಕೆ: ಲಜ್ಜೆ; ಅಭ್ರ: ಆಗಸ; ಇಡಿ: ಚಚ್ಚು, ಕುಟ್ಟು; ತಲೆ: ಶಿರ; ಬೀರು: ಒಗೆ, ಎಸೆ; ಭಂಗ: ಮುರಿಯುವಿಕೆ; ಅನುಪಮ: ಹೋಲಿಕೆಗೆ ಮೀರಿದ; ಅಂಬರ: ಆಗಸ; ಕಡಲು: ಸಾಗರ; ಅರುಣಾಂಬು: ಕೆಂಪಾದ ನೀರು (ರಕ್ತ); ಜಲಧಿ: ಸಾಗರ; ಬಿಡಿಸು: ತೊರೆ; ಬಿಂಕ: ಗರ್ವ, ಜಂಬ; ನುಡಿ: ಮಾತು; ಕವಿ: ಆವರಿಸು; ಕುಮಾರ: ಮಗ; ಆಹವ: ಯುದ್ಧ;

ಪದವಿಂಗಡಣೆ:
ಕೆಡೆದ +ರಥ +ಸಲೆ +ಕಾಂಚನ+ಅದ್ರಿಯನ್
ಅಡಸಿದವು +ನಾಚಿಕೆಯನ್+ಅಭ್ರದೊಳ್
ಇಡಿಯೆ +ತಲೆ +ಬೀರಿದವು +ಭಂಗವನ್+ಅನುಪಮ+ಅಂಬರಕೆ
ಕಡಲುವರಿವ್+ಅರುಣಾಂಬು +ಜಲಧಿಗೆ
ಬಿಡಿಸಿದವು+ ಬಿಂಕವನು +ಶಿವ +ಶಿವ
ನುಡಿಪ +ಕವಿ +ಯಾರಿನ್ನು +ಪಾರ್ಥ +ಕುಮಾರನ್+ಆಹವವ

ಅಚ್ಚರಿ:
(೧) ರೂಪಕದ ಪ್ರಯೋಗ – ಕೆಡೆದ ರಥ ಸಲೆ ಕಾಂಚನಾದ್ರಿಯನಡಸಿದವು; ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ; ಕಡಲುವರಿವರುಣಾಂಬು ಜಲಧಿಗೆ ಬಿಡಿಸಿದವು ಬಿಂಕವನು

ಪದ್ಯ ೨೧: ದ್ರೋಣನು ಯುದ್ಧಕ್ಕೆ ಯಾರನ್ನು ಬರಹೇಳಿದನು?

ಮೇಳವದಲೆನ್ನಾನೆಗಳ ಬರ
ಹೇಳು ಸುಭಟರೊಳಗ್ಗಳರ ಬರ
ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು
ಲೋಲುಪತೆಯವನಿಯಲಿಹರೆ ಬರ
ಹೇಳು ಯಮನಂದನನಿಂದಿನ
ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ (ದ್ರೋಣ ಪರ್ವ, ೪ ಸಂಧಿ, ೨೧ ಪದ್ಯ
)

ತಾತ್ಪರ್ಯ:
ದ್ರೋಣನು ಭಟ್ಟರನ್ನು ಕರೆದು, ನನ್ನ ಪರಾಕ್ರಮಿಳನ್ನು ಯುದ್ಧಕ್ಕೆ ಬರಲು ಹೇಳು, ವೀರರಲ್ಲಿ ಮಹಾವೀರರೆಂದು ಗರ್ವದಿಂದ ಬೀಗುವ ಭೀಮಾರ್ಜುನರನ್ನು ಯುದ್ಧಕ್ಕೆ ಬರಹೇಳು, ಭೂಮಿಯನ್ನಾಳುವ ಬಯಕೆಯಿದ್ದರೆ ಇಂದಿನ ಯುದ್ಧಕ್ಕೆ ಬಾ ಎಂದು ಧರ್ಮಜನನ್ನು ಬರಹೇಳು ಎಂದು ದ್ರೋಣನು ತಿಳಿಸಿದನು.

ಅರ್ಥ:
ಮೇಳ: ಗುಂಪು; ಆನೆ: ಗಜ, ಪರಾಕ್ರಮಿ; ಬರಹೇಳು: ಆಗಮಿಸು; ಸುಭಟ: ಪರಾಕ್ರಮಿ; ಅಗ್ಗ: ಶ್ರೇಷ್ಠ; ಬಿಂಕ: ಗರ್ವ, ಜಂಬ; ಮೆರೆ: ಹೊಳೆ, ಪ್ರಕಾಶಿಸು, ಒಪ್ಪು; ಲೋಲುಪ: ಅತಿಯಾಸೆಯುಳ್ಳವನು; ಅವನಿ: ಭೂಮಿ; ಇಹರು: ಇರುವ, ಜೀವಿಸು; ನಂದನ: ಮಗ; ಯಮ: ಕಾಲ; ಕಾಳೆಗ: ಯುದ್ಧ; ಭಟ್ಟ: ಸೈನಿಕ; ಅಟ್ಟು: ಹಿಂಬಾಲಿಸು;

ಪದವಿಂಗಡಣೆ:
ಮೇಳವದಲ್+ಎನ್ನಾನೆಗಳ +ಬರ
ಹೇಳು+ ಸುಭಟರೊಳ್+ಅಗ್ಗಳರ +ಬರ
ಹೇಳು +ಬಿಂಕಕೆ +ಮೆರೆವ +ಭೀಮಾರ್ಜುನರ +ಬರಹೇಳು
ಲೋಲುಪತೆ+ಅವನಿಯಲ್+ಇಹರೆ +ಬರ
ಹೇಳು +ಯಮನಂದನನ್+ಇಂದಿನ
ಕಾಳೆಗಕ್ಕೆಂದಿತ್ತ +ಭಟ್ಟರನ್+ಅಟ್ಟಿದನು +ದ್ರೋಣ

ಅಚ್ಚರಿ:
(೧) ಸುಭಟ, ಎನ್ನಾನೆ – ಸಾಮ್ಯಾರ್ಥಪದ

ಪದ್ಯ ೫೪: ಯಾವುದರಿಂದ ಹೊರಬರಲಾಗುತ್ತಿಲ್ಲ ಎಂದು ದುರ್ಯೊಧನನು ಹೇಳಿದನು?

ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ (ಸಭಾ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಏಳಿಗೆ, ಭೀಮನ ಅಬ್ಬರ, ಅರ್ಜುನನ ಠೀವಿ, ದ್ರೌಪದಿಯ ಆಡಂಬರ, ನಕುಲ ಸಹದೇವರ ಸಂಭ್ರಮ, ಅವರ ಪರಿವಾರದವರಾದ ಧೃಷ್ಟದ್ಯುಮ್ನ, ದ್ರುಪದನೇ ಮೊದಲಾದವರ ಒಣಬಿಂಕಗಳನ್ನು ಕಂಡು ನನ್ನ ಎದೆ ಬಿರಿದು ಅಳುಕುತ್ತಿದೆ. ಅದರಿಂದ ಮೇಲೆ ಬರಲು ಆಗುತ್ತಿಲ್ಲ ಎಂದು ದುರ್ಯೋಧನನು ಕಡುನೊಂದು ಹೇಳಿದನು.

ಅರ್ಥ:
ಅರಸ: ರಾಜ; ಅಭ್ಯುದಯ: ಏಳಿಗೆ; ಧರಧುರ: ಆರ್ಭಟ; ಬಿಂಕ: ಗರ್ವ, ಜಂಬ; ಅರಸಿ: ರಾಣಿ; ಆಟೋಪ: ಆಡಂಬರ, ದರ್ಪ; ಸುತ: ಮಕ್ಕಳು; ಸಂಭ್ರಮ: ಉತ್ಸಾಹ, ಸಡಗರ; ಹೊರೆ: ಭಾರ; ಆದಿ: ಮುಂತಾದ; ವೃಥ: ಸುಮ್ಮನೆ; ಆಡಂಬರ: ತೋರಿಕೆ, ಢಂಭ; ಕಂಡು: ನೋಡಿ; ಬಿರಿ: ಸೀಳು; ಅಳುಕು: ಹಿಂಜರಿ, ಅಂಜು; ಸಂತವಿಸು: ಸಂತೋಷಿಸು; ಅರಿ: ತಿಳಿ;

ಪದವಿಂಗಡಣೆ:
ಅರಸನ್+ಅಭ್ಯುದಯವನು +ಭೀಮನ
ಧರಧುರವನ್+ಅರ್ಜುನನ +ಬಿಂಕವನ್
ಅರಸಿ+ಆಟೋಪವನು +ಮಾದ್ರೀಸುತರ+ ಸಂಭ್ರಮವ
ಹೊರೆಯ+ ಧೃಷ್ಟದ್ಯುಮ್ನ +ದ್ರುಪದಾ
ದ್ಯರ+ ವೃಥ+ಆಡಂಬರವ +ಕಂಡೆದೆ
ಬಿರಿದುದ್+ಅಳುಕಿದೆನ್+ಅಳುಕಿದೆನು+ ಸಂತವಿಸಲ್+ಅರಿದೆಂದ

ಅಚ್ಚರಿ:
(೧) ಹಿಂಜರಿಪಟ್ಟೆ ಎಂದು ಹೇಳಲು – ಅಳುಕಿದೆನ್ ೨ ಬಾರಿ ಪ್ರಯೋಗ
(೨) ಅಭ್ಯುದಯ, ಧರಧುರ, ಬಿಂಕ, ಆಟೋಪ, ಸಂಭ್ರಮ, ಆಡಂಬರ – ಪದಗಳ ಬಳಕೆ

ಪದ್ಯ ೬೮: ಶಿಶುಪಾಲನು ಹೇಗೆ ಯುದ್ಧ ಮಾಡಿದನು?

ಬಿಡುವ ತೊಡಚುವ ಸಂಧಿಸುವ ಜೇ
ವಡೆವ ಹೂಡುವ ತಾಗಿಸುವ ಹಿಳು
ಕಿಡುವ ಹರಿಸುವ ಬೆಸುವ ಭೇದಿಸುವ ಸಮಕೌಶಲವ
ನುಡಿವ ಕವಿ ಯಾರೈ ಬರಿಯ ಬಾ
ಯ್ಬಡಿಕನೇ ಶಿಶುಪಾಲನೀಪರಿ
ನಡೆಸುತಿರ್ದನು ಹರಿಯೊಡನೆ ಸಮಬೆಸನ ಬಿಂಕದಲಿ (ಸಭಾ ಪರ್ವ, ೧೧ ಸಂಧಿ, ೬೮ ಪದ್ಯ)

ತಾತ್ಪರ್ಯ:
ಬಿಲ್ಲಿಗೆ ಹೆದೆಯನ್ನು ಕಟ್ಟಿ ಅದರ ಧ್ವನಿಯನ್ನು ಮಾಡುತ್ತಾ, ಬಾಣವನ್ನಿಟ್ಟು ಗುರಿಯಿಡುವ, ಎದುರಾಳಿಯ ಬಾಣಗಳನ್ನು ನಿಲ್ಲಿಸುವ, ಬಾಣವನ್ನು ಬಿಡುವ ರೀತಿ, ಗುರಿಯನ್ನು ಭೇದಿಸುವ ನೈಪುಣ್ಯ, ಇವೆಲ್ಲವನ್ನು ವರ್ಣಿಸುವ ಕವಿಯಾದರೂ ಯಾರು? ಶಿಶುಪಾಲನು ಕೇವಲ ಬಾಯಿಬಡುಕನಲ್ಲ. ಶ್ರೀಕೃಷ್ಣನಿಗೆ ಸರಿಸಮಾನನಾಗಿ ಠೀವಿಯಿಂದ ಯುದ್ಧಮಾಡುತ್ತಿದ್ದನು.

ಅರ್ಥ:
ಬಿಡು: ತೊರೆ; ತೊಡಚು: ಕಟ್ಟು, ಬಂಧಿಸು; ಸಂಧಿಸು: ಕೂಡು, ಸೇರು; ಜೇವಡೆ:ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಹೂಡು: ತೊಡು; ತಾಗಿಸು: ಮುಟ್ಟು; ಹಿಳುಕು: ಬಾಣದ ಹಿಂಭಾಗ; ಹರಿಸು: ಕೀಳು, ಕಿತ್ತುಹಾಕು, ಚಲಿಸು; ಬೆಸು: ಕೂಡಿಸು, ಹೊಂದಿಸು; ಭೇದಿಸು: ಮುರಿಯುವುದು, ಒಡೆ; ಅಸಮ: ಅಸಮಾನ್ಯ; ಕೌಶಲ: ನೈಪುಣ್ಯತೆ; ನುಡಿ: ಮಾತು; ಕವಿ: ವಿದ್ವಾಂಸ; ಬರಿ: ಕೇವಲ; ಬಾಯ್ಬಡಿಕ: ಕೇವಲ ಮಾತಾಡುವ; ಪರಿ: ರೀತಿ; ನಡೆಸು: ನಿರ್ವಹಿಸು; ಸಮ: ಸಮಾನವಾದ; ಬೆಸನ: ಕೆಲಸ, ಕಾರ್ಯ; ಬಿಂಕ: ಠೀವಿ;

ಪದವಿಂಗಡಣೆ:
ಬಿಡುವ +ತೊಡಚುವ +ಸಂಧಿಸುವ +ಜೇ
ವಡೆವ +ಹೂಡುವ +ತಾಗಿಸುವ +ಹಿಳು
ಕಿಡುವ +ಹರಿಸುವ +ಬೆಸುವ +ಭೇದಿಸುವ +ಸಮಕೌಶಲವ
ನುಡಿವ +ಕವಿ +ಯಾರೈ +ಬರಿಯ +ಬಾ
ಯ್ಬಡಿಕನೇ +ಶಿಶುಪಾಲನ್+ಈ+ಪರಿ
ನಡೆಸುತಿರ್ದನು +ಹರಿಯೊಡನೆ +ಸಮಬೆಸನ +ಬಿಂಕದಲಿ

ಅಚ್ಚರಿ:
(೧) ೧-೩ ಸಾಲಿನ ಎಲ್ಲಾ ಪದಗಳು ವ ಕಾರದಲ್ಲಿ ಅಂತ್ಯವಾಗಿರುವುದು

ಪದ್ಯ ೩೨: ಆಗ್ನೇಯಾಸ್ತ್ರಕ್ಕೆ ಪ್ರತಿಯಾಗಿ ಅರ್ಜುನನು ಯಾವ ಬಾಣವನ್ನು ಬಿಟ್ಟನು?

ಆಹಹ ಬೆಂದುದು ಲೋಕವಿನ್ನಾ
ರಹಿಮುಖವ ಚುಂಬಿಸುವರೋ ವಿ
ಗ್ರಹದ ಫಲನಿಗ್ರಹವಲಾ ಶಿವ ಎನುತ ಸುರರುಲಿಯೆ
ವಹಿಲ ಮಿಗೆ ವರುಣಾಸ್ತ್ರದಲಿ ಹುತ
ವಹನ ಬಿಂಕವ ಬಿಡಿಸಿದನು ಜಯ
ವಹುದೆ ಪರರಿಗೆ ಪಾರ್ಥನಿರೆ ಜನನಾಥ ಕೇಳೆಂದ (ಕರ್ಣ ಪರ್ವ, ೨೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಓಹೋ ಲೋಕವು ಕರ್ಣನ ಆಗ್ನೇಯಾಸ್ತ್ರಕ್ಕೆ ಬೆಂದುಹೋಗುತ್ತದೆ ಕಾಳಸರ್ಪದ ಮುಖವನ್ನು ಚುಂಬಿಸುವವರಾರು? ಯುದ್ಧದ ಫಲವು ವಿನಾಶವಲ್ಲವೇ ಎಂದು ದೇವತೆಗಳು ಮಾತನಾಡುತ್ತಿರಲು, ಅರ್ಜುನನು ಅತಿವೇಗದಿಂದ ವರುಣಾಸ್ತ್ರವನ್ನು ಬಿಟ್ಟು ಅಗ್ನಿಯ ಆರ್ಭಟ, ಗರ್ವವನ್ನು ಮೊಟಕುಗೊಳಿಸಿದನು. ರಾಜ ಧೃತರಾಷ್ಟ್ರ ಅರ್ಜುನನಿರಲು ಎದುರಾಳಿಗೆ ಜಯವು ಲಭಿಸುವುದೇ ಎಂದು ಸಂಜಯನು ಹೇಳಿದನು.

ಅರ್ಥ:
ಅಹಹ: ಓಹೋ, ಅಬ್ಬ; ಬೆಂದು: ಸುಡು; ಲೋಕ: ಜಗತ್ತು; ಅಹಿ: ಹಾವು; ಮುಖ: ಆನನ; ಚುಂಬಿಸು: ಮುತ್ತಿಡು; ವಿಗ್ರಹ: ಯುದ್ಧ; ಫಲ: ಫಲಿತಾಂಶ, ಪರಿಣಾಮ; ನಿಗ್ರಹ: ಅಂಕೆ, ಹತೋಟಿ; ಶಿವ: ಮಹಾದೇವ; ಸುರ: ದೇವತೆ; ಉಲಿ: ಮಾತನಾಡು; ವಹಿಲ: ಬೇಗ, ತ್ವರೆ; ಮಿಗೆ: ಮತ್ತು; ವರುಣ: ನೀರಿನ ಅಧಿದೇವತೆ; ಅಸ್ತ್ರ: ಆಯುಧ; ಹುತ: ಹವಿಸ್ಸು; ಹುತವಹ: ಅಗ್ನಿ; ಬಿಂಕ: ಗರ್ವ, ಜಂಬ; ಬಿಡಿಸು: ಹೋಗಲಾಡಿಸು; ಜಯ: ಗೆಲುವು; ಪರರು: ಇತರರು; ಜನನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಹಹ +ಬೆಂದುದು +ಲೋಕವ್+ಇನ್ನಾರ್
ಅಹಿ+ಮುಖವ+ ಚುಂಬಿಸುವರೋ+ ವಿ
ಗ್ರಹದ+ ಫಲ+ನಿಗ್ರಹವಲಾ +ಶಿವ+ ಎನುತ +ಸುರರ್+ಉಲಿಯೆ
ವಹಿಲ +ಮಿಗೆ +ವರುಣಾಸ್ತ್ರದಲಿ +ಹುತ
ವಹನ+ ಬಿಂಕವ +ಬಿಡಿಸಿದನು+ ಜಯವ್
ಅಹುದೆ+ ಪರರಿಗೆ+ ಪಾರ್ಥನಿರೆ +ಜನನಾಥ +ಕೇಳೆಂದ

ಅಚ್ಚರಿ:
(೧) ಬೆಂಕಿಯನ್ನು ನಂದಿಸುವರಾರು ಎಂದು ಹೇಳಲು – ಚುಂಬಿಸು, ಮುತ್ತಿಡು ಪದದ ಬಳಕೆ – ಲೋಕವಿನ್ನಾರಹಿಮುಖವ ಚುಂಬಿಸುವರೋ
(೨) ಬೆಂಕಿಯನ್ನು ನಂದಿಸಿದನು ಎಂದು ಹೇಳಲು – ಬಿಂಕ ಪದದ ಬಳಕಿ – ವರುಣಾಸ್ತ್ರದಲಿ ಹುತವಹನ ಬಿಂಕವ ಬಿಡಿಸಿದನು

ಪದ್ಯ ೯೬: ಭೀಮನು ಏನು ಹೇಳಿ ಗರ್ಜಿಸಿದನು?

ಎನುತ ಬಿಟ್ಟನು ರಥವ ದುರಿಯೋ
ಧನನ ಮೋಹರಕಾಗಿ ಬಂಡಿಯ
ಬಿನುಗುಗಳು ಕೈದೋರಿರೈ ಪುನ್ನಾಮನಾರಿಯರು
ಅನುಜರಾವೆಡೆ ಕರಸು ಕೌರವ
ಜನಪ ಕರ್ಣಾದಿಗಳ ಬಿಂಕವ
ನೆನಗೆ ತೋರಾಯೆನುತ ಮೊಳಗಿದನರಸನಿದಿರಿನಲಿ (ಕರ್ಣ ಪರ್ವ, ೧೯ ಸಂಧಿ, ೯೬ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ಭೀಮನು ದುರ್ಯೋಧನನ ಸೈನ್ಯದತ್ತ ರಥವನ್ನು ಬಿಟ್ಟು, ಗಂಡಸರೆಮ್ಬ ಹೆಸರಿನ ಹೆಣ್ಣಾಳುಗಳೇ, ರಥಿಕರೆಂಬ ಅಲ್ಪರೇ, ನಿಮ್ಮ ಕೈಬಲವನ್ನು ತೋರಿಸಿರಿ. ದುರ್ಯೋಧನ, ನಿನ್ನ ತಮ್ಮಂದಿರೆಲ್ಲಿ? ಅವರನ್ನು ಕರೆಸಿ ತೋರಿಸು, ನೋಡುತ್ತೇನೆ, ಕರ್ಣ ಮೊದಲಾದವರ ಬಿಂಕವೆಲ್ಲಿ? ನನಗೆ ತೋರಿಸು ಎಂದು ಗರ್ಜಿಸಿದನು.

ಅರ್ಥ:
ಬಿಟ್ಟನು: ತೆರಳಿದನು; ರಥ: ಬಂಡಿ; ಮೋಹರ: ಕಾಳಗ; ಬಂಡಿ: ರಥ; ಬಿನುಗು: ಕ್ಷುದ್ರವ್ಯಕ್ತಿ; ಕೈ: ಹಸ್ತ; ತೋರು ಪ್ರದರ್ಶಿಸು; ಪುನ್ನಾಮನಾರಿ: ಗಂಡನಂತಿರುವ ಹೆಣ್ಣು; ಅನುಜ: ಸಹೋದರ, ತಮ್ಮ; ಎಡೆ: ಎಲ್ಲಿ; ಕರಸು: ಬರೆಮಾಡು; ಬಿಂಕ: ಸೊಕ್ಕು, ಗರ್ವ, ಜಂಬ; ಜನಪ: ರಾಜ; ಆದಿ: ಮುಂತಾದ; ಮೊಳಗು: ಧ್ವನಿ, ಸದ್ದು; ಅರಸ: ರಾಜ; ಇದಿರು: ಎದುರು;

ಪದವಿಂಗಡಣೆ:
ಎನುತ +ಬಿಟ್ಟನು +ರಥವ +ದುರಿಯೋ
ಧನನ +ಮೋಹರಕಾಗಿ +ಬಂಡಿಯ
ಬಿನುಗುಗಳು +ಕೈದೋರಿರೈ +ಪುನ್ನಾಮನಾರಿಯರು
ಅನುಜರ್+ಆವೆಡೆ+ ಕರಸು+ ಕೌರವ
ಜನಪ+ ಕರ್ಣಾದಿಗಳ +ಬಿಂಕವನ್
ಎನಗೆ+ ತೋರಾಯೆನುತ+ ಮೊಳಗಿದನ್+ಅರಸನ್+ಇದಿರಿನಲಿ

ಅಚ್ಚರಿ:
(೧) ಕೌರವರನ್ನು ಕೆಣಕುವ ಪರಿ – ಕೈದೋರಿರೈ ಪುನ್ನಾಮನಾರಿಯರು

ಪದ್ಯ ೪೪: ದುಶ್ಯಾಸನನು ಭೀಮನಿಗೆ ಏನು ಹೇಳಿದ?

ಎಲವೋ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲವೋ ಭೀಮ, ಕರ್ಣನ ಮಗನನ್ನು ಕೊಂದೆನೆಂಬ ದೊಡ್ಡಸ್ತಿಕೆಯಿಂದ ಸಂತಸಗೊಳ್ಳಬೇಡ. ನಿನ್ನಿಂದ ಏನು ಆಗುವುದಿಲ್ಲ, ಕರೆಸು ಕೃಷ್ಣಾರ್ಜುನರನ್ನು ನಿನ್ನ ಬೆಂಬಲಕೆ, ನಿನ್ನ ಹೆಮ್ಮೆಯು ನಿನ್ನ ತಲೆಗೆ ಮುಳುವಾದೀತು ಎನ್ನುತ್ತಾ ದುಶ್ಯಾಸನನು ಭೀಮನನ್ನು ತನ್ನ ಸೈನ್ಯದಿಂದ ಮುತ್ತಿದನು ಎಂದು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದನು.

ಅರ್ಥ:
ಆತ್ಮಜ: ಪುತ್ರ; ಹೊಯ್ದು: ಹೊಡೆದು; ಅಗ್ಗಳಿಕೆ: ದೊಡ್ಡಸ್ತಿಕೆ, ಶ್ರೇಷ್ಠತೆ; ಹೊರೆ: ಭಾರ, ರಕ್ಷಣೆ; ಏರು: ಮೇಲೆ ಹತ್ತು; ಪಡಿಬಲ: ಎದುರುಪಡೆ, ಶತ್ರುಸೈನ್ಯ; ಕರಸು: ಬರೆಮಾಡು; ಬಳಿ: ಸಮೀಪ, ಕೇವಲ; ಬಿಗುಹು:ಬಿಗಿ; ಬಿಂಕ: ಗರ್ವ, ಜಂಬ; ತಲೆ: ಶಿರ; ಬಹುದು: ಬಂದಿಹುದು; ಅರಿ: ತಿಳಿ; ಅತಿ: ಬಹಳ; ನಂದನ: ಮಗ; ಅರಸ: ರಾಜ; ಕೇಳು: ಆಲಿಸು; ಎಚ್ಚು: ಬಾಣ ಬಿಡು, ಏಟು;

ಪದವಿಂಗಡಣೆ:
ಎಲವೋ+ ಕರ್ಣ+ಆತ್ಮಜನ +ಹೊಯ್ದ್
ಅಗ್ಗಳಿಕೆಯಲಿ +ಹೊರೆ+ಏರದಿರು+ ಪಡಿ
ಬಲಕೆ +ಕರಸ್+ಆ+ ಕೃಷ್ಣ +ಪಾರ್ಥರ +ನಿನ್ನಲ್+ಏನಹುದು
ಬಳಿಯ +ಬಿಗುಹಿನ +ಬಿಂಕ +ನಿನ್ನಯ
ತಲೆಗೆ +ಬಹುದಾವರಿಯೆವ್+ಎನುತ್+ಅತಿ
ಬಳನನ್+ಎಚ್ಚನು +ನಿನ್ನ +ನಂದನನ್+ಅರಸ +ಕೇಳೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಳಿಯ ಬಿಗುಹಿನ ಬಿಂಕ

ಪದ್ಯ ೪೯: ಮಂದರ ಪರ್ವತದ ಮೇಲೆ ಅರ್ಜುನನ ಆಕ್ರಮಣ ಹೇಗಿತ್ತು?

ಇದುವೆ ಕಡೆಗೋಲಾಯ್ತು ಕಡೆವಂ
ದುದಧಿಯನು ತಾನಿದು ಮಹಾಗಿರಿ
ಯಿದರ ಬಿಂಕವ ಸೋಡಬೇಕೆಂದರ್ಜುನನ ಸೇನೆ
ಒದಗಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟಂಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ (ಸಭಾ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಂದರ ಪರ್ವತವನ್ನು ನೋಡಲು ಅರ್ಜುನನು ಹೀಗೆ ಯೋಚಿಸಿದನು, “ಈ ಪರ್ವತವಲ್ಲವೇ ಸಮುದ್ರಮಥನದಲ್ಲಿ ಕಡೆಗೋಲಾಗಿದ್ದು, ಇದರ ಸೊಬಗನ್ನು ನೋಡಲೇಬೇಕು”, ಎಂದು ಯೋಚಿಸಿ ಸೈನ್ಯಕ್ಕೆ ಆದೇಶವಿಟ್ಟು ಅವರ ಜೊತೆ ಅವನು ಹತ್ತಿದನು. ಅಲ್ಲಿ ಕೋಟೆಗಳಲ್ಲೂ, ಚಿಕ್ಕ ಬೆಟ್ಟಗಳಲ್ಲೂ ರಾಜರಿದ್ದು, ಅವರೊಂದಿಗೆ ಅರ್ಜುನನು ಯುದ್ಧಮಾಡಿದನು.

ಅರ್ಥ:
ಕಡೆಗೋಲು: ಮಂತು; ಕಡೆ: ಅಲ್ಲಾಡಿಸು, ಮಥಿಸು; ಉದಧಿ: ಸಮುದ್ರ; ಮಹಾ: ಶ್ರೇಷ್ಠ; ಗಿರಿ: ಬೆಟ್ಟ; ಬಿಂಕ: ಜಂಬ; ನೋಡು: ವೀಕ್ಷಿಸು; ಸೇನೆ: ಸೈನ್ಯ; ಒದಗು: ಉಂಟಾಗು, ದೊರಕು; ಹತ್ತು: ಏರು; ನಡು: ಮಧ್ಯೆ; ದುರ್ಗ: ಕೋಟೆ; ಬೆಟ್ಟ: ಗಿರಿ; ನೃಪ: ರಾಜ; ಆಹವ: ಯುದ್ಧ; ಚೂಣಿ: ಮೊದಲು;

ಪದವಿಂಗಡಣೆ:
ಇದುವೆ +ಕಡೆಗೋಲಾಯ್ತು+ ಕಡೆವಂದ್
ಉದಧಿಯನು+ ತಾನಿದು +ಮಹಾ+ಗಿರಿ
ಯಿದರ+ ಬಿಂಕವ +ಸೋಡಬೇಕೆಂದ್+ಅರ್ಜುನನ+ ಸೇನೆ
ಒದಗಿ +ಹತ್ತಿತು +ನಡುವಣರೆ +ದು
ರ್ಗದಲಿ +ಬೆಟ್ಟಂಗಳಲಿ+ ನೃಪರ್+
ಇದ್ದುದು +ಮಹ+ಆಹವವ್ +ಆಯ್ತು +ಪಾರ್ಥನ +ಚೂಣಿ +ಅವರೊಡನೆ

ಅಚ್ಚರಿ:
(೧) ಮಹಾಗಿರಿ, ಮಹಾಹವ – ಮಹಾ ಪದದ ಬಳಕೆ
(೨) ಪರ್ವತಕ್ಕು ಜಂಬವಿರುತ್ತದೆ ಎಂದು ‘ಬಿಂಕ’ ಪದದ ಬಳಕೆ

ಪದ್ಯ ೭: ಸ್ವಯಂವರದಲ್ಲಿದ್ದ ರಾಜರು ಏತಕ್ಕೆ ಕಾತುರಗೊಂಡರು?

ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳೆಂದ (ಆದಿ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜರ ದರ್ಪ, ವೈಭವ, ಅಲಂಕೃತರಾದ ಅವರ ಸೊಬಗು ಏನೆಂದು ಹೇಳಲಿ, ಇದೊಂದು ಸ್ಪರ್ಧೆ, ಈ ಯುದ್ಧದಲ್ಲಿ ಜಯವು ನನಗೆ ಇರಲಿ ಎಂದು ಎಲ್ಲರು ಸಿದ್ಧರಾಗಿದ್ದರು, ಮನ್ಮಥನ ಯುದ್ಧವು ಹತ್ತಿರವಾಗುತ್ತಿದ್ದಂತೆ, ಕಾತರಗೊಂಡ ರಾಜರು ಮನದ ಬಾಣಗಳಿಂದ ಆರ್ತರಾಗಿ ಕುಳಿತಿದ್ದರು, ಇವರ ವಿವರವನ್ನು ಹೇಳುತ್ತೇನೆ, ಕೇಳು ಜನಮೇಜಯ…

ಅರ್ಥ:
ಅಂಕೆ: ದರ್ಪ, ಠೀವಿ, ಗುರುತು; ಪಾರ್ಥಿವ: ರಾಜ; ವಿಭವ: ಸಿರಿ, ಸಂಪತ್ತು, ಹಿರಿಮೆ; ಅಲಂಕೃತ: ಸಿಂಗರಿಸಲ್ಪಟ್ಟ; ಅಂಕ: ಬಿರುದು, ಹೆಸರು, ಸ್ಪರ್ಧೆ; ಕಳ:ಕಳೆ,ಕಾಂತಿ; ಆಹವ: ಯುದ್ಧ, ಕಾಳಗ; ಎನಗೆ: ನನಗೆ; ಶಂಕರ: ಈಶ್ವರ; ಅರಿ: ವೈರಿ; ಶಂಕರಾರಿ: ಮದನ, ಮನ್ಮಥ, ರತೀಶ; ಮಸೆ: ದ್ವೇಷಿಸು, ಹರಿತವಾದ; ಮಾರ: ಕಾಮ, ಮನ್ಮಥ; ಬಿಂಕ: ಜಂಬ, ಠೀವಿ; ಜಂಕೆ: ಗರ್ಜನೆ, ಕೂಗು; ವಿಸ್ತರ: ವಿವರವಾಗಿ; ನರ: ಮನುಷ್ಯ; ನರನಾಥ: ರಾಜ (ಜನಮೇಜಯ);

ಪದವಿಂಗಡಣೆ:
ಅಂಕೆ+ಯಿದು +ಪಾರ್ಥಿವರ +ವಿಭವ
ಅಲಂಕೃತಿಯನದನ್+ಏನ+ಹೇಳುವೆನ್
ಅಂಕ+ವಿದು+ ಕಳನೇರಿತ್+ಆಹವವ್+ಎನಗೆ+ ತನಗೆನುತ
ಶಂಕರಾರಿಯ+ ಮಸೆದಲಗು +ಮಾ
ರಂಕದ್+ಉಬ್ಬಿನ +ಜಂಕೆ+ಯಂಕೆಯ
ಬಿಂಕವನು+ ವಿಸ್ತರಿಸುವೆನು +ನರನಾಥ+ ಕೇಳೆಂದ

ಅಚ್ಚರಿ:
(೧) ಅಂಕೆ, ಅಂಕ – ೪ ಬಾರಿ ಪ್ರಯೋಗ – ಅಂಕೆಯಿದು, ಅಂಕವಿದು, ಯಂಕೆಯ; ಅಂಕದುಬ್ಬಿನ
(೨) ರಾಜನಿಗೆ – ನರನಾಥ; ಮನ್ಮಥನಿಗೆ – ಶಂಕರಾರಿ, ಮಾರ – ಪದಗಳ ಬಳಕೆ
(೩) ಅಂಕೆ, ಬಿಂಕ – ಸಮಾನಾರ್ಥಕ ಪದಗಳು
(೪) ಅಂಕೆ, ಅಲಂಕೃತ, ಶಂಕರ, ಮಾರಂಕ, ಬಿಂಕ, ಅಂಕ – ಅನುಸ್ವಾರದ ಜೊತೆಗೆ “ಕ” ಕಾರದ ಪದಗಳು