ಪದ್ಯ ೪೮: ಅಭಿಮನ್ಯುವು ದುಶ್ಯಾಸನನ ಬಗ್ಗೆ ಏನು ಯೋಚಿಸಿದನು?

ತಾಯ ತುರುಬಿಗೆ ಹಾಯ್ದ ಪಾತಕಿ
ನಾಯ ಕೊಂಡಾಡುವರೆ ಕೊಬ್ಬಿದ
ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ
ತಾಯ ಕರಸುವೆನೆನುತ ಕಮಳ ದ
ಳಾಯತಾಂಬಕನಳಿಯನನುಪಮ
ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ (ದ್ರೋಣ ಪರ್ವ, ೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ತನ್ನ ತಾಯಿಯ ಮುಡಿಗೆ ಕೈಯಿಟ್ಟು ಈ ಪಾಪಿ ನಾಯಿಯನ್ನು ಉಳಿಸಿ ಅವನೊಡನೆ ಆಟವಾಡುವುದೇ? ಇವನ ದೇಹವನ್ನು ಕುಕ್ಕಿ ರಕ್ತವನ್ನು ಬಾಚಿ ತಾಯಿಯನ್ನು ಕರೆಸುತ್ತೇನೆಂದು ದ್ರೌಪದಿಯ ಕಮಲದಂತ ಕಣ್ಣುಗಳನ್ನು ನೋಡಿ ಯೋಚಿಸಿ ಅಭಿಮನ್ಯುವು ಒಂದು ದಿವ್ಯ ಬಾಣವನ್ನು ಬಿಲ್ಲಿನಲ್ಲಿ ಹೂಡಿದ ನಂತರ ಮನಸ್ಸಿನಲ್ಲಿ ಹೀಗೆ ಯೋಚಿಸಿದನು.

ಅರ್ಥ:
ತಾಯ: ಮಾತೆ; ತುರುಬು: ಕೂದಲಿನ ಗಂಟು, ಮುಡಿ; ಹಾಯ್ದು: ಚಾಚು; ಪಾತಕಿ: ಪಾಪಿ; ನಾಯ: ಕುನ್ನಿ, ಶ್ವಾನ; ಕೊಂಡಾಡು: ಆಟವಾಡು; ಕೊಬ್ಬು: ಅಹಂಕಾರ, ಸೊಕ್ಕು; ಕಾಯ: ದೇಹ; ಕದುಕು: ಕಡಿ; ಇರಿ: ಚುಚ್ಚು; ನೆತ್ತರು: ರಕ್ತ; ನೊರೆ: ಬುರುಗು; ಬಾಸಣಿಸು: ಮುಚ್ಚು; ಕರಸು: ಬರೆಮಾಡು; ಕಮಳ: ತಾವರೆ; ಆಯತ: ವಿಶಾಲವಾದ; ಅಂಬಕ: ಕಣ್ಣು; ಅನುಪಮ: ಹೋಲಿಕೆಗೆ ಮೀರಿದ; ಸಾಯಕ: ಬಾಣ, ಶರ; ಹೂಡು: ಅಣಿಯಾಗು; ನೋಡು: ವೀಕ್ಷಿಸು; ಚಿತ್ತ: ಮನಸ್ಸು;

ಪದವಿಂಗಡಣೆ:
ತಾಯ +ತುರುಬಿಗೆ +ಹಾಯ್ದ +ಪಾತಕಿ
ನಾಯ +ಕೊಂಡಾಡುವರೆ +ಕೊಬ್ಬಿದ
ಕಾಯವನು +ಕದುಕಿರಿದು +ನೆತ್ತರ +ನೊರೆಯ +ಬಾಸಣಿಸಿ
ತಾಯ +ಕರಸುವೆನೆನುತ +ಕಮಳ +ದ
ಳಾಯತಾಂಬಕನ್+ಅಳಿಯನ್+ಅನುಪಮ
ಸಾಯಕವ +ಹೂಡಿದನು +ನೋಡಿದನೊಂದು +ಚಿತ್ತದಲಿ

ಅಚ್ಚರಿ:
(೧) ತಾಯ, ನಾಯ, ಕಾಯ – ಪ್ರಾಸ ಪದಗಳು
(೨) ದುಶ್ಯಾಸನನ್ನು ಬಯ್ಯುವ ಪರಿ – ತಾಯ ತುರುಬಿಗೆ ಹಾಯ್ದ ಪಾತಕಿ ನಾಯ ಕೊಂಡಾಡುವರೆ

ಪದ್ಯ ೩: ಭೀಮನನ್ನು ಹುಡುಕಲು ಯಾರು ಬಂದರು?

ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಿಕ ಕಮಲ ಪರಿಮಳ
ಬಾಸಣಿಸಿತೀ ಜನಮನೊವಿ
ನ್ಯಾಸವನು ಇದೆ ಬಂದನನಿಲಜನೆಂದುದಖಿಳ ಜನ (ಅರಣ್ಯ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ಪರಿವಾರ, ರಾಣೀವಾಸದ ಜನರು ಮತ್ತು ಕಾಡುಜನರ ಜೊತೆ ಭೀಮನು ಹೋದ ದಾರಿಯಲ್ಲಿ ಬರುತ್ತಿರಲು, ಸೌಗಂಧಿಕ ಕಮಲದ ಪರಿಮಳವು ಜನರ ಮನಸ್ಸನ್ನು ಆಹ್ಲಾದಗೊಳಿಸಿತು, ಇದೋ ಭೀಮ ಬಂದನು ಎಂದು ಎಲ್ಲರೂ ಹೇಳಿದರು.

ಅರ್ಥ:
ಸಕಲ: ಎಲ್ಲಾ; ಪರಿವಾರ: ಬಂಧುಜನ; ರಾಣಿ: ಅರಸಿ; ಸಹಿತ: ಜೊತೆ; ಅರಣ್ಯ: ಕಾಡು; ಭವನ: ಆಲಯ; ಅಭ್ಯಾಸಿ: ಕಲಿಯಲು ಶ್ರಮಿಸುವವ; ಬಂದು: ಆಗಮಿಸು; ಗಮನ: ನಡೆಯುವುದು, ನಡಗೆ; ಪಥ: ಮಾರ್ಗ; ಕಮಲ: ತಾವರೆ; ಪರಿಮಳ: ಸುಗಂಧ; ಬಾಸಣಿಸು: ಮುಚ್ಚು; ವಿನ್ಯಾಸ: ರಚನೆ; ಅನಿಲಜ: ವಾಯುಪುತ್ರ;

ಪದವಿಂಗಡಣೆ:
ಆ +ಸಕಲ+ ಪರಿವಾರ+ ರಾಣೀ
ವಾಸ +ಸಹಿತ+ಅರಣ್ಯ +ಭವನ
ಅಭ್ಯಾಸಿ +ಬಂದನು +ಭೀಮಸೇನನ +ಗಮನ +ಪಥವಿಡಿದು
ಆ +ಸುಗಂಧಿಕ+ ಕಮಲ+ ಪರಿಮಳ
ಬಾಸಣಿಸಿತೀ +ಜನಮನೊ+ವಿ
ನ್ಯಾಸವನು +ಇದೆ +ಬಂದನ್+ಅನಿಲಜನ್+ಎಂದುದ್+ಅಖಿಳ +ಜನ