ಪದ್ಯ ೧೦: ಭೀಮನು ಕಾಡಿನ ಮಧ್ಯಭಾಗಕ್ಕೆ ಹೇಗೆ ಬಂದನು?

ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ (ಅರಣ್ಯ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಜೋರಾದ ಕೂಗಿಗೆ ಒಂದು ಯೋಜನ ವಲಯದಲ್ಲಿದ್ದ ಹುಲಿ, ಕರಡಿ, ಕಾಡಾನೆ, ಸಿಂಹ ಮುಂತಾದ ಕಾಡು ಪ್ರಾಣಿಗಳು ಹಿಂದಿರುಗಿ ನೋಡುತ್ತಾ ಓಡಿ ಹೋದವು. ಭೀಮನ ತುಳಿತಕ್ಕೆ ಕಾಡು ಕಡಿದ ಬಾಳೆಯ ತೋಟದಂತೆ ಬಯಲಾಗಿ ಕಾಣುತ್ತಿತ್ತು. ಹೀಗೆ ಮಹಾಪರಾಕ್ರಮಿಯಾದ ಭೀಮನು ಕಾಡಿನ ಮಧ್ಯಕ್ಕೆ ಬಂದನು.

ಅರ್ಥ:
ಹುಲಿ: ವ್ಯಾಘ್ರ; ಆನೆ: ಕರಿ, ಗಜ; ಕಾಡು: ಅರಣ್ಯ; ಸಿಂಹ: ಕೇಸರಿ; ಆವಳಿ: ಗುಂಪು; ದನಿ: ಧ್ವನಿ, ಶಬ್ದ; ಯೋಜನ: ಅಳತೆಯ ಪ್ರಮಾಣ; ಹಾಯು: ದಾಟು; ಓಡು: ಶೀಘ್ರವಾಗಿ ಚಲಿಸು; ನೋಡು: ವೀಕ್ಷಿಸು; ಮುರಿ: ಸೀಳು; ಹಳುವ: ಕಾಡು; ತಳಪಟ: ಅಂಗಾತವಾಗಿ ಬೀಳು, ಸೋಲು; ದಿಗ್ಗಜ: ಉದ್ದಾಮ ವ್ಯಕ್ತಿ, ಶ್ರೇಷ್ಠ; ತುಳಿ: ಮೆಟ್ಟು; ಬಾಳೆ: ಕದಳಿ; ವನ: ಕಾಡು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಕಲಿ: ಶೂರ; ಬಂದನು: ಆಗಮಿಸು; ವನ: ಕಾಡು; ಮಧ್ಯ; ನಡುಭಾಗ;

ಪದವಿಂಗಡಣೆ:
ಹುಲಿ +ಕರಡಿ +ಕಾಡಾನೆ +ಸಿಂಹಾ
ವಳಿಗಳ್+ಈತನ +ದನಿಗೆ +ಯೋಜನ
ವಳೆಯದಲಿ+ ಹಾಯ್ದ್+ಓಡಿದವು +ನೋಡುತ್ತ +ಮುರಿಮುರಿದು
ಹಳುವ +ತಳಪಟವಾಯ್ತು +ದಿಗ್ಗಜ
ತುಳಿದ +ಬಾಳೆಯ +ವನದವೊಲು +ವೆ
ಗ್ಗಳೆಯನೈ+ ಕಲಿ+ಭೀಮ +ಬಂದನು +ವನದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಳುವ ತಳಪಟವಾಯ್ತು ದಿಗ್ಗಜತುಳಿದ ಬಾಳೆಯ ವನದವೊಲು
(೨) ಕಾಡು, ಹಳುವ, ವನ – ಸಮನಾರ್ಥಕ ಪದಗಳು