ಪದ್ಯ ೭೩: ದುರ್ಯೋಧನನು ವಿದುರನನ್ನು ಹೇಗೆ ಜರೆದನು?

ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ (ಸಭಾ ಪರ್ವ, ೧೪ ಸಂಧಿ, ೭೩ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರ ಮಾತಿಗೆ ಉತ್ತರಿಸುತ್ತಾ, ವಿದುರಾ ನೀನು ದುಷ್ಟನೇ ಸರಿ, ನಿನ್ನ ಬುದ್ಧಿಗೆ ಸಮಸ್ತ ವಿದ್ಯೆ ಕಲೆಗಳು ತಿಳಿದಿವೆ, ನೀನು ವಿಶಾಲಮತಿಯೆಂದು ಕರೆಯೋಣವೆಂದರೆ ಈ ಜಗತ್ತಿನ ಎಲ್ಲಾ ದಡ್ಡರಿಗೂ ನೀನೇ ಅಧಿದೇವತೆ. ಇದು ಹಿತವೋ ಅಹಿತವೋ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ಪಾಂಡಿತ್ಯ, ಆದರೆ ನಿನ್ನನ್ನು ಇಲ್ಲಿ ಯಾರಾದರೂ ಕೇಳಿರುವವರೇ ಎಂದು ವಿದುರನನ್ನು ಜರೆದನು.

ಅರ್ಥ:
ಖೂಳ: ದುಷ್ಟ; ಸಕಲ: ಎಲ್ಲಾ; ಕಲೆ: ವಿದ್ಯೆ; ಬಾಳುಮನೆ: ತೌರುಮನೆ, ವಾಸಸ್ಥಾನ; ಗಡ: ಅಲ್ಲವೆ; ಬುದ್ಧಿ: ತಿಳಿವು, ಅರಿವು; ವಿಶಾಲ: ವಿಸ್ತಾರ; ಮತಿ: ಬುದ್ಧಿ; ಅಜ್ಞರು: ಅಜ್ಞಾನಿ, ದಡ್ಡ; ಅಧಿದೈವ: ಮುಖ್ಯವಾದ ದೇವರು; ಕೇಳು: ವಿಚಾರಿಸು; ಮೇಣ್: ಅಥವ, ಇಲ್ಲವೇ; ಹಿತ: ಒಳಿತು; ಹೇಳು: ತಿಳಿಸು; ಪಾಂಡಿತ್ಯ: ವಿದ್ವತ್ತು; ರಾಯ: ಒಡೆಯ;

ಪದವಿಂಗಡಣೆ:
ಖೂಳನೆಂಬೆನೆ +ಸಕಲ +ಕಲೆಗಳ
ಬಾಳುಮನೆ +ಗಡ +ನಿನ್ನ +ಬುದ್ಧಿ +ವಿ
ಶಾಲಮತಿ +ನೀನೆಂಬೆನೇ +ಜಗದ್+ಅಜ್ಞರ್+ಅಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ

ಅಚ್ಚರಿ:
(೧) ಖೂಳನೆಂಬೆನೆ, ನೀನೆಂಬೆನೆ – ಪ್ರಾಸ ಪದ
(೨) ವಿದುರನನ್ನು ಬಯ್ಯುವ ಪರಿ – ಜಗದಜ್ಞರಧಿದೈವ
(೩) ಪಂಡಿತರ ಬಗ್ಗೆ ಹೇಳುವ ಪರಿ – ಕೇಳಿದೊಡೆ ಮೇಣಹಿತ ಹಿತವನು ಹೇಳುವುದು ಪಾಂಡಿತ್ಯ